top of page

೬೦ ವರ್ಷಗಳ ನನ್ನ ಪತ್ರಿಕಾಪಯಣ ಭಾಗ-೪

ನನ್ನ ಎರಡನೆಯ ಪತ್ರಿಕೆ ಕಾರವಾರದಲ್ಲಿ ೪೫ ನೇ ಕನ್ನಡ ಸಾಹಿತ್ಯ ಸಮ್ಮೇಳನ. ಕಡೆಂಗೋಡ್ಲು ಶಂಕರ ಭಟ್ಟರ ಅಧ್ಯಕ್ಷತೆ. ಹಿರಿಯ ಸಾಹಿತಿ ಗೋಪಾಲಕೃಷ್ಣ ಪಿ. ನಾಯಕರು ಮತ್ತು ನಾನು ಆಗ ಕಸಾಪ ಜಿಲ್ಲಾ ಘಟಕದ ಗೌ. ಕಾರ್ಯದರ್ಶಿಗಳು. ಸಮ್ಮೇಳನ ಜೋರಾಗಿಯೇ ನಡೆಯಿತು. ( ಆಗ ಸಮ್ಮೇಳನಗಳಲ್ಲಿ ಸಾಹಿತ್ಯ‌ ಇರುತ್ತಿತ್ತು. ಈಗ ಭವ್ಯ ಮಂಟಪ, ಭರ್ಜರಿ ಊಟ, ಇತ್ಯಾದಿಗಳು ಸಾಹಿತ್ಯದ ಸ್ಥಾನ ಆಕ್ರಮಿಸಿಕೊಂಡಿವೆ. ಹತ್ತು ಹದಿನೈದು ಕೋಟಿ ಖರ್ಚು ಹಾಕಬೇಕಲ್ಲ. ಬಹಳ ದೊಡ್ಡ ಆದಾಯದ ಪ್ರಶ್ನೆ. )ಆಗ ನಾನು ಹೊನ್ನಾವರದಿಂದ ಸಮ್ಮೇಳನದ ವೇದಿಕೆ ಪೆಂಡಾಲು , ಲೈಟು ಮೈಕು ಇತ್ಯಾದಿಗಳನ್ನು ೧೮ ಸಾವಿರಕ್ಕೆ ಗೊತ್ತುಪಡಿಸಿದ್ದು ನೆನಪಿದೆ. ಈಗ ಅದಕ್ಕೇ ಕೋಟಿಗಟ್ಟಲೆ ಬೇಕು. ಅದೆಲ್ಲ ಇರಲಿ, ಡಾ. ಜಿ. ಎಸ್. ಶಿವರುದ್ರಪ್ಪ, ಪರ್ವತವಾಣಿ, ಅಕಬರ ಅಲಿ ಮೊದಲಾದ ಖ್ಯಾತನಾಮರೆಲ್ಲ ಭಾಗವಹಿಸಿದ್ದರು. ಜಿಲ್ಲೆಯವರೇ ಆದ ಸಚಿವ ರಾಮಕೃಷ್ಣ ಹೆಗಡೆಯವರೂ ಅತಿಥಿಯಾಗಿ ಬಂದಿದ್ದರು. ಅವರು ವೇದಿಕೆಯ ಮೇಲೇ ಸಿಗರೇಟು ಸೇದಿದರು. ಹಿರಿಯ ಕವಿ ಪತ್ರಕರ್ತ ಗಣಪತರಾವ್ ಪಾಂಡೇಶ್ವರ ಅವರು ಅದನ್ನು ತಮ್ಮ ಸಂಪಾದಕತ್ವದ ಜನತಾ ವಾರಪತ್ರಿಕೆಯಲ್ಲಿ ಟೀಕಿಸಿ ವೇದಿಕೆಯ ಪಾವಿತ್ರ್ಯ ಕಾಪಾಡಿಕೊಳ್ಳಬೇಕಿತ್ತೆಂದು ಬರೆದರು. ಆ ಪತ್ರಿಕೆಯ ಮಾಲಕರು ಹೊನ್ನಾವರದ ಅಂದಿನ ಶಾಸಕ ಆರ್. ಎಸ್. ಹೆಗಡೆಯವರಾಗಿದ್ದರು. ಅವರಿಗೂ ರಾಮಕೃಷ್ಣ ಹೆಗಡೆಯವರಿಗೂ ನಿಕಟ ಒಡನಾಟ. ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಪಾಂಡೇಶ್ವರರು ಮಹಾ ಸ್ವಾಭಿಮಾನಿ. ಸಂಪಾದಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಿದ್ದರು. ( ಹಾಗೆ ಅವರು ಹಿಂದೆಯೂ ಒಳ್ಳೆಯ ಕೆಲಸ ಬಿಟ್ಟುಬಂದವರು. ) ಆ ಸಂದರ್ಭದಲ್ಲಿ ಆರ್. ಎಸ್. ಹೆಗಡೆಯವರು ನನಗೆ ಸಂಪಾದಕರಾಗುವಂತೆ ಕೇಳಿದರು. ನಾನು ನನ್ನ ಗುರುಗಳಾದ ಪಾಂಡೇಶ್ವರರನ್ನೇ ಕೇಳಿದೆ. " ಅದಕ್ಕೇನಂತೆ , ಹೋಗೋ, ಅನುಭವ ಸಿಗುತ್ತದೆ" ಅಂದು ಬೆನ್ನು ಚಪ್ಪರಿಸಿದರು. ಹೀಗೆ ನಾನು ಸಂಪಾದಕನಾದ ಎರಡನೆಯ ಪತ್ರಿಕೆ ಜನತಾ. ಅದಾಗಲೇ ನಾನು ಪಾಂಡೇಶ್ವರರ ಕೈಕೆಳಗೆ ವಾರಪತ್ರಿಕೆ ರೂಪಿಸುವ ಕೆಲಸ ಅರಿತುಕೊಂಡಿದ್ದೆ. ಆದ್ದರಿಂದ ಸಮಸ್ಯೆಯೇನಿರಲಿಲ್ಲ. ೧೯೫೮ ರಿಂದಲೇ ನಾನು ಸಾಹಿತ್ಯರಚನೆ ಮಾಡಲಾರಂಭಿಸಿದ್ದೆ. ಸಾಹಿತ್ಯಿಕ ಬಳಗವೂ ನನಗೆ ಪರಿಚಿತವಿತ್ತು. ಆಕರ್ಷಕವಾಗಿ ಪತ್ರಿಕೆ ಹೊರತರುವದು ಸಾಧ್ಯವಾಯಿತು. ಪತ್ರಿಕಾ ರಂಗಕ್ಕೆ ಒಮ್ಮೆ ಕಾಲಿಟ್ಟ ಮೇಲೆ ಅದರ ಸೆಳೆತದಿಂದ ಹೊರಬರುವದು ಕಷ್ಟ. ನನಗೆ ಬೇರೆ ದೊಡ್ಡ ಪತ್ರಿಕೆಯಲ್ಲಿ ಕೆಲಸ ಮಾಡಿ ಹೆಚ್ಚಿನ ಅನುಭವ ಪಡೆಯುವ ಆಸೆ ಹುಟ್ಟಿಕೊಂಡಿತು. ಅಷ್ಟರಲ್ಲೇ ಮೊದಲ ಸಲ ರಾಜ್ಯದ ಮುಖ್ಯಮಂತ್ರಿಯಾದ ವೀರೇಂದ್ರ ಪಾಟೀಲರು ತಮ್ಮ ಹೈದರಾಬಾದ್ ಕರ್ನಾಟಕ ‌ಪ್ರದೇಶದಲ್ಲಿ ( ಅವರು ಅಲ್ಲಿಯೇ ಚಿಂಚೋಳಿಯವರು) ಒಂದು ಒಳ್ಳೆಯ ‌ಪತ್ರಿಕೆ ಹೊರತರುವ ಉದ್ದೇಶದಿಂದ ಬೇರೊಬ್ಬ ಫರ್ಸ್ಟ ಗ್ರೇಡ್ ಕಂಟ್ರಾಕ್ಟರರಿಂದ ಬಂಡವಳು ತೊಡಗಿಸಿ ಕಲಬುರ್ಗಿಯಿಂದ " ನವಕಲ್ಯಾಣ" ಎಂಬ ಟ್ಯಾಬ್ಲಾಯ್ಡ್ ‌ಆಕಾರದ ೨೪ ಪುಟಗಳ ಪತ್ರಿಕೆಗಾಗಿ ಉಪಸಂಪಾದಕರಾಗಬಯಸುವವರಿಂದ ಅರ್ಜಿ ಆಹ್ವಾನಿಸಿದ್ದು ಗೊತ್ತಾಯಿತು. ಅರ್ಜಿ ಹಾಕಿಯೇಬಿಟ್ಟೆ‌ . ಬೆಂಗಳೂರಿಂದ ಸಂದರ್ಶನಕ್ಕೂ ಕರೆ ಬಂತು. ಹೋದೆ. ಸ್ಟಾರ್ ಹೊಟೆಲೊಂದರಲ್ಲಿ ವೈದ್ಯ ಎಂಬವರು ಸಂದರ್ಶನ ಪಡೆದರು, ಅಷ್ಟೇ ಅಲ್ಲ, ಆಯ್ಕೆಯನ್ನೂ ಮಾಡಿ ಅಲ್ಲಿಂದಲೇ ಕಲಬುರ್ಗಿಗೆ ರೈಲು ಹತ್ತಿಸಿಬಿಟ್ಟರು. ನಾನು ಯಾವ ಸಿದ್ಧತೆಯೂ ಇಲ್ಲದೇ ಹೋಗಿದ್ದೆ. ಆದರೆ ಅವರು ಬಿಡುವು ಕೊಡಲು ಸಿದ್ಧರಿರಲಿಲ್ಲ. ಸಂಬಳ ಫಿಕ್ಸ್ ಮಾಡಿ ಒಂದಿಷ್ಟು ಮುಂಗಡವನ್ನೂ ಕೊಟ್ಟು "ಹೋಗಿ ಪತ್ರಿಕೆ ತಯಾರಿ ಆರಂಭಿಸಿ. ಉಳಿದವರೂ ನಿಮ್ಮನ್ನು ಕೂಡಿಕೊಳ್ಳುತ್ತಾರೆ" ಎಂದುಬಿಟ್ಟರು. ಮತ್ತೇನು ಮಾಡಲು ಸಾಧ್ಯ? ಮೊದಲ ಸಲ ಮನೆ ಬಿಟ್ಟು ದೂರದ ಅಪರಿಚಿತ ಪ್ರದೇಶಕ್ಕೆ ಹೊರಟಿದ್ದೆ. ಕೈಯಲ್ಲೊಂದು ಟ್ರಂಕು! ಅದು ೧೯೬೬-೬೭. ಅಲ್ಲಿಂದ ನನ್ನ ಪತ್ರಿಕೋದ್ಯಮದ ನಿಜವಾದ ಪ್ರಯಾಣ ಆರಂಭವಾದಂತೆ ಎನ್ನಬಹುದು. ಸ್ವಲ್ಪ‌ವಿಶಾಲವಾದ ಪ್ರಪಂಚಕ್ಕೆ ಕಾಲಿಟ್ಟಿದ್ದೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ, ಮಹ್ಮದ ಅಲಿ, ಇನ್ನೂ ಹಲವು ರಾಜಕೀಯ ನಾಯಕರ ಸಂಪರ್ಕ ಬಂದದ್ದು ಅಲ್ಲಿಯೇ. ಹಲವು ವಿಶಿಷ್ಟ ಅನುಭವಗಳನ್ನು ನೀಡಿದ ಬಿಸಿಲನಾಡಿನ ಬದುಕಿನ ಬಗ್ಗೆ ನಾಳೆ ಹೇಳುತ್ತೇನೆ. - ಎಲ್. ಎಸ್. ಶಾಸ್ತ್ರಿ

೬೦ ವರ್ಷಗಳ ನನ್ನ ಪತ್ರಿಕಾಪಯಣ ಭಾಗ-೪
bottom of page