ಹೀಗೊಂದು ಪ್ರೇಮಕಥೆ
(ಕವನ ಓದುವ ಮುನ್ನ,ಓದುಗರಲ್ಲಿ ಒಂದು ಸಣ್ಣ ಕೋರಿಕೆ. ಈ ಕವನದ ವಸ್ತು, ಮಾಮೂಲು ಕಥೆಯಾದರೂ ಬಹಳ ವರ್ಷಗಳಿಂದ ನನ್ನ ಸ್ಮ್ರತಿ ಪಠಲದಲ್ಲಿ ಅಳಿಯದೇ ಉಳಿದು ಕಾಡಿದ್ದಂತೂ ಸತ್ಯ. ಅದಕ್ಕೆ ಕಾರಣ ಇದೊಂದು ಕಿವಿಯಾರೆ ಕೇಳಿದ ಸತ್ಯ ಘಟನೆ. ಕವನರೂಪದಲ್ಲಿ ಬರೆಯುವಾಗ ಭಾವ ತೀವ್ರತೆಯಲ್ಲಿ ಶಬ್ದ ಸೋತಿರಬಹುದು. ಹಾಗಾದಲ್ಲಿ ಅದು ನನ್ನ ಸೋಲೆಂದು ಒಪ್ಪಿಕೊಳ್ಳುತ್ತೇನೆ. ದಯವಿಟ್ಟು ಓದಿ ಅಬಿಪ್ರಾಯ ತಿಳಿಸಿ...ಅಬ್ಳಿ ಹೆಗಡೆ ದಿನದ ಆರಂಭದಲಿ,ಇರುವ ಶಾಂತಿಯಕದಡಿ,ದೂರ ದೇಗುಲದಲ್ಲಿ ಗಂಟೆದನಿಯು. ಕೈಮಾಡಿಕರೆದಂತೆ,ಪ್ರಾಃತ ಸಮಯದಪೂಜೆ,ನಡೆಯುತಿದೆ ಭಕ್ತಜನ ಮೈಮರೆಯಲು.
ದೇವರದೆಪ್ರತಿರೂಪ ಅರ್ಚಕರ ಬಾಯಿಂದ ವೇದಮಂತ್ರದ ಘೋಷ ಮೊಳಗುತಿರಲು. ಜಗ,ಜಗಿಪ ಬೆಳಕಿನಲಿ ಪಂಚಾಮ್ರತದಭಿಷೇಕ ನಡೆಯುತಿದೆ ಭಕ್ತಜನ ಮೈಮರೆಯಲು. ರಾಶಿಹೂಗಳಮಧ್ಯೆ ಕಳೆದುಹೋದನುದೇವ, ಬಗೆ,ಬಗೆಯ ಮ್ರಷ್ಟಾನ್ನ ಎದುರಿಗಿರಲು. ಬಣ್ಣ,ಬಣ್ಣದವೇಷ, ಭಕ್ತಿಭಾವದ ಆಟ, ನಡೆದಿಹುದು ಬಾಯ್ತುಂಬ ನೀರ್ ಸುರಿಯಲು. ದೇವಳದ ಅಂಗಳದಿ, ಬಿರುಬಿಸಿಲುಏರುತಿದೆ, ದೊಡ್ಡ ಆಲವು ನೆರಳ ಛತ್ರಿ ಇಟ್ಟು. ಕಾದಿರಲು ಬಂದಳದೊ ಸೋತನಡಿಗೆಯತಾಯಿ, ಬಗಲಜೋಳಿಗೆಯಲ್ಲಿ, ಪುಟ್ಟ ಮಗುವನಿಟ್ಟು. ಅನ್ನಕಾಣದತಾಯಿ, ಹಾಲಕಾಣದ ಹಸುಳೆ, ನಿತ್ರಾಣಗೊಂಡಿಹಳು ಊರತಿರುಗಿ. ಕೊನೆಗೆಬಂದಳುಇಲ್ಲಿ ದೇವನಿರುವೆಡೆಯಲ್ಲಿ, ಕರುಳಕುಡಿಯನು ನೆನೆದು ಮನದಿ ಮರುಗಿ. ಅಳುವಮಗು ಸಂತೈಸೆ ಹರಿದಸೆರಗನು ಮುಚ್ಚಿ, ತೆರೆಯಲಾಗದ ಕಣ್ಣ, ಮುಚ್ಚಿ ಕುಳಿತಾಗ- ಚಿತ್ತಭಿತ್ತಿಯ ಮೇಲೆ ಕಳೆದ ಬದುಕಿನ ಚಿತ್ರ, ಒಂದರಾ ಹಿಂದೊಂದು ಮೂಡಿದಾಗ. ಹುಟ್ಟು,ಸುಂದರಸ್ವರ್ಗ, ಹಸಿರಹೊದ್ದಿಹ ಊರು, ಹ್ರದಯಸಿರಿತನವಿರುವ ಅಪ್ಪ,ಅಮ್ಮ. ಮನೆಗೆ ಒಬ್ಬಳೆಮಗಳು, "ಅರಳೆ"ಕಾದಿಹ ಮುಗುಳು, ಮುಂಬಾಳ ಕನಸನ್ನು ಕಸಿದ "ಬೊಮ್ಮ". ಸ್ವಛ್ಛಂದ ಸಿಹಿಬಾಲ್ಯ, ಅಪ್ಪ,ಅಮ್ಮನ ಮಮತೆ ಸಾರ ಸರ್ವಸ್ವವನು ಹೀರಿ ಬೆಳೆದು. ಊರಕಣ್ಣಿಗೆ ಹಬ್ಬ, ಕಣ್ಣು ಮಿಂಚಿನ "ಕಬ್ಬ", ದೇಹದಲಿ ಹದಿಹರಯ ಚಿಮ್ಮಿ,ಪುಟಿದು. ಹದಿನೆಂಟು ಬಂದಾಗ, ಪ್ರೀತಿಪ್ರೇಮದ ನಂಟು, ಕಂಡ ಕನಸಿನ ಗೆಳೆಯ ಬಂದನೊಡನೆ. ಅಪ್ಪ,ಅಮ್ಮನ ಮಮತೆ ಬೇಡವಾಯಿತು ಆಗ, ಯೌವ್ವನದ ಹೊಳೆಯಲ್ಲಿ, ತೇಲಿದೊಡನೆ.. .
ಸುಂದರಾಂಗನು ಬಂದ, ರೂಪ ಕಣ್ತುಂಬುತಿರೆ, ಮಕರಂದ ಹೀರುವಾ ದುಂಬಿಯಾದ. ತುಟಿಗೆ ತುಟಿಸೇರುತಿರೆ, ಮೈ,ಮನದಿ ಹೂಅರಳೆ, "ಬಾನಲ್ಲೆ,ನನ್ನೊಡನೆ" ಎಂದು ಕರೆದ. ಪ್ರೇಮದಲಿ ಬಿಗಿದಪ್ಪಿ, ಲಲ್ಲೆಗರೆಯುತ ನುಡಿದ, "ನನ್ನೂರು ಸ್ವರ್ಗಸಮ ದೂರದಲ್ಲಿ. ನಗರ ಸೌಖ್ಯದ ತಾಣ, ಮೋಜುಮಸ್ತಿಯ ಯಾನ, ನಿತ್ಯ ಬಣ್ಣದ ಜಾತ್ರೆ ನಡೆವುದಲ್ಲಿ. ಬಸ್ಸು,ರೈಲು,ವಿಮಾನ, ಕಾರಿನಲೆ ಓಡಾಟ, ರುಚಿ,ರಚಿಯ ಭೋಜನವು ನಿತ್ಯವಲ್ಲಿ. ನಲ್ಲೆ ತೋರುವೆ ನಿನಗೆ, ಇಂದ್ರನಮರಾವತಿಯ ಕಣ್ಣಕೋರೈಸುವಾ ಬೆಳಕಿನಲ್ಲಿ". ಇನಿಯನಾ ಸವಿಮಾತು, ಮರುಳುಮಾಡಿತು ನನ್ನ, ವಿಧಿಯು ಹೆಣೆದಾಬಲೆಯು ಬಿದ್ದು ಬಿಟ್ಟೆ. ಅವಸರದಿ ಒಂದಿರುಳು ಆತನಾ ಕೈಹಿಡಿದು, ಕರುಳಬಳ್ಳಿಯ ಕೊಯ್ದು ನಡೆದುಬಿಟ್ಟೆ.
ಹುಟ್ಟಿದೂರನು ಬಿಟ್ಟು, ಆತನೂರಿಗೆ ನಡೆದೆ, ಕಂಡಬಣ್ಣದ ಕನಸು ಕಮರಿಹೋಯ್ತು. ಆತನನು ಹೆತ್ತವರ, ಕೋಪ,ತಾಪವುಹೆಚ್ಚಿ ಭಾಷೆ,ಧರ್ಮದ ಗೋಡೆ ಅಡ್ಡಲಾಯ್ತು.
ಅವನಮನೆ ಆಳಾದೆ, ಹಸಿಪ್ರೇಮ ಹುಸಿಯಾಟ, ಹಸಿದ ದೇಹದ ಊಟ ನಡೆಯಿತಲ್ಲಿ. ನಿತ್ಯ ರೌರವ ನರಕ, ಕರಗಿ,ಬಯಸಿದ ನಾಕ, ತುಂಬಿ,ದುಂಬಿಯ ಹಿಂಡು ಹೂವಿನಲ್ಲಿ. ಹೆಣ್ಣು,ಮಾರುವ"ಸರಕು", ಕೆಂಪುದೀಪದ ಪೇಟೆ, ನನ್ನವನು ವ್ಯಾಪಾರಿ ಎಂದರಿತೆನು. ಯೌವ್ವನವು ಕಳೆದಿಂತು, ಹೆಣ್ಣು ನಾ"ಹೆಣ"ವಾದೆ, ಕಂಬನಿಯಕಡಲಲ್ಲಿ ಮೀನಾದೆನು. ದುಃಖದಲು ಸುಕದಸೆಲೆ ಹೊಟ್ಟೆಯೊಳು ಗುಟ್ಟಾಗಿ, ಬೆಳೆ,ಬೆಳೆದು ಶಿಶುವಾಗಿ ಮೈತಳೆಯಿತು. ಕೌಮಾರ್ಯ ಕಳೆದಿತ್ತು, ತಾಯ್ತನವು ಮೊಳೆದಿತ್ತು, ಮನದನೋವಿನ ಗೆರೆಯು ಮಾಯವಾಯ್ತು.
ಯಾತನೆಯ ನವಮಾಸ, ಕ್ರಶದೇಹ,ಕ್ರಶ ಮನಸು, ಹಡೆಯಲಾಗದೆ ಮಗುವ ಹಡೆದುಬಿಟ್ಟೆ. ಕಠಿಣ ಶಿಲೆಯಲಿ, ಮಮತೆಯಾ ಸೆಲೆ ಜಿನುಗಿ, "ಲಿಂಗ"ಯಾವುದೊಎನೊ ಮರೆತುಬಿಟ್ಟೆ.
ಒಂದೊಂದೆದಿನವುರುಳಿ ಮ್ರತ್ಯುಕೂಪದ ಮಧ್ಯೆ, ತಾನುಳಿದು,ಮಗುವುಳಿಸೆ . ಶಪಥ ಮಾಡಿ. ಕರೆತಂದ ಕಟುಕನು, ಕಾಲ್ಹಿಡಿದು ಬೇಡಿದೆನು, "ಹುಟ್ಟಿದೂರಿಗೆ ಕಳಿಸು" ಮನಸುಮಾಡಿ. ಕೇಳಿಧೈನ್ಯದ ಮಾತು, ಕೊಂಚ ಹಣ ಕೈಲಿಟ್ಟು, ಕರೆದೊಯ್ದು "ಕೂರಿಸಿದ", ರೈಲಿನಲ್ಲಿ. ಕಣ್ಣೀರ ಕಡಲಲ್ಲಿ, ದಿಕ್ಕುತಪ್ಪಿದ ದೋಣಿ, ಕೊನೆಯೆ ತಿಳಿಯದ ದಡವ ಸೇರಿತಲ್ಲಿ. ಕೈಲಿಟ್ಟ ತುಸು"ಕಾಸು", ಕೆಲವೆದಿನ ಬದುಕಲಿಕೆ, ಮುಂದೆ ಬದುಕುವದಾರಿ ಬಿಕೆ಼ಬೇಡಿ. ಅಗಿದಗಿದು ರಸಹೀರಿ, ಬಿಸುಡಿದಾ ಕಬ್ಬಾದೆ, ಸಾಯದೇ ಬದುಕಿಹೆನು ಮಗುವನೋಡಿ. ಬಸ್ಸು ನಿಲ್ದಾಣವೇ ಬಾಳಿಗಾಸರೆಯಾಯ್ತು, ಬಾಷೆಬಾರದ ನನಗೆ ದಿಕ್ಕು ದೆಸೆಯೆಲ್ಲಿ. ಜನರ ಕರುಣೆಯ ಕೂಳು ಸಿಕ್ಕದಿರೆ ಬರಿ ಹೊಟ್ಟೆ, ದಿನದ ಅಂತ್ಯವು ಮಗುವಿನಳುವಿನಲ್ಲಿ.",,,,,,,,,, ಹಸುಗೂಸು ಮಿಸುಕಾಡಿ, ಹಸಿವಿನಿಂದಳುವಾಗ, ಹಳೆಯ ನೆನಪಿನ ತಂತು ಕಡಿದು ಬಿತ್ತು. ನಿತ್ರಾಣ ಕೈಯ್ಯಿಂದ, ಹಸುಗೂಸ ನೇವರಿಸಿ, ಒಣಗಿದಾತುಟಿಯಿಂದ ಮುತ್ತನಿತ್ತು......... ! ಮುಂದಿನದು ಬರಿಶೂನ್ಯ,,,, ಬದುಕಿನಂತಿಮ ಘಟ್ಟ, "ಸಾವು ಸಹಜವು" ದೇಹ ನೆಲಕೊರಗಿತು. "ಸತ್ತ"ದೇಹದ ಸುತ್ತ, ಜನರ ಕಂಬನಿ ಮಿಡಿತ, ಹಸಿದ ಮಗು"ಬರಡು" ಮೊಲೆ ಚೀಪುತಿತ್ತು. --ಅಬ್ಳಿಹೆಗಡೆ. ಸುಬ್ರಹ್ಮಣ್ಯ ಹೆಗಡೆ ಇವರು ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದ ಅಬ್ಳಿಮನೆಯವರು.ಕೃಷಿಕರಾಗಿರುವ ಶ್ರೀಯುತರು ಬಾಲ್ಯದಿಂದಲೂ ಓದುಮತ್ತು ಬರವಣಿಗೆಯಲ್ಲಿಅಪಾರ ಆಸಕ್ತರು.ಮುಖಪುಸ್ತಕ ಮತ್ತು ವಾಟ್ಸಪ್ನಲ್ಲಿ ಅವರ ಬಹಳಷ್ಟು ಕವಿತೆ, ಕತೆ, ಬರಹ ಮತ್ತು ಪ್ರತಿಕ್ರಿಯೆಗಳು ದಿನಂಪ್ರತಿ ಕಾಣಸಿಗುತ್ತವೆ.ಅವರು ಬರೆದ ಎರಡು ಕಾಂಬರಿಗಳು ಪ್ರಕಟಣೆಗೆ ಸಿದ್ಧವಾಗಿವೆ.ಸಾಹಿತ್ಯ ಕೃಷಿಯಲ್ಲೂ ಪರಿಣತರಾಗಿರುವ ಗುಣಪಕ್ಷಪಾತಿ ಸುಬ್ರಹ್ಮಣ್ಯ ಹೆಗಡೆಯವರು ಅಬ್ಳಿಹೆಗ್ಡೆ ಎಂಬ ಹೆಸರಿನಿಂದ ಓದುಗರವಲಯದಲ್ಲಿ ಪರಿಚಿತರು. - ಸಂಪಾದಕ.