ಹಾಲ ಕೆನೆ ಬದುಕು
ಹುಟ್ಟುತ್ತಾರೆ ನಿತ್ಯ ಸಾಯುತ್ತಾರೆ ಲೆಕ್ಕಕ್ಕೆ ಸಿಗದ ಜನ ನಡುವಿನ ಬದುಕಿನುದ್ದಕ್ಕೂ ಇವರೆಲ್ಲ ಬದುಕಿದ್ದು ಯಾರ ಖಬರಿಗೂ ಬರುವುದೇ ಇಲ್ಲ * ಅಂಥ ಬದುಕಲ್ಲ ನಮ್ಮಪುರಾಣಿಕರದು ಪುರಾಣದ ಕೃಷ್ಣನ ಹಾಗೆ ಎಲ್ಲರಿಗೂ ಬೇಕಾದ "ಹಾಲು ಕೆನೆ" ಬದುಕು! * ನಾಡಿನ ಮನೆಮನೆಯ ಹೊಕ್ಕು ಹೆಮ್ಮಕ್ಕಳ ಸುಖದು:ಖದ ಕತೆ ಕೇಳಿ ನಕ್ಕಾಗ ನಕ್ಕು, ಅತ್ತಾಗ ಅತ್ತು ಹೃದಯಕ್ಕೆ ಹೃದಯ ಸ್ಪಂದಿಸಿದ ಮಮತೆಯ ಜೇನು- ಸಿಹಿ ಬದುಕು! * ನಾ ನೋಡಿದಾಗ ಇವರ ತಲೆ ನರೆತು ಮೈ ಮುಪ್ಪಾಗಿತ್ತು ಮನಸ್ಸು ಮಾತ್ರ ಹರೆಯದ ಹೊಸ ನಗು ನಗುತ್ತಿತ್ತು ಮಕ್ಕಳಂತೆ ಮುಗ್ಧವಾಗಿ ಥಳಥಳಿಸುತ್ತಿತ್ತು ತಿಳಿನಗೆಯ ಸೂಸಿ ಕುಳ್ಳಿರಿಸಿ ಮಾತನಾಡುವ ಆ ಬದುಕಿಗೆ " ಬೆವರಿನ ಬೆಲೆ" ತಿಳಿದಿತ್ತು. * ಗೋಕಾಕದ ಘಟಪ್ರಭೆ ಸೊರಗೀತು ಪುರಾಣಿಕರು ಹರಿಬಿಟ್ಟ ಸಾಹಿತ್ಯದ ತಿಳಿಗಂಗೆ ಬತ್ತಲಾರದು ಈ ನೆಲದಲ್ಲಿ ಸಾಹಿತ್ಯವೆಂಬ ಶಬ್ದ ಇರುವವರೆಗೂ ದೇಹ ಬೂದಿಯಾದರೇನು ಈ ನಾಡಿನ ಮಣ್ಣಿನಲ್ಲಿ ಬೆಳೆವ ಚೈತನ್ಯದ ಸಸಿಗಳಿಗೆಲ್ಲ ಅದೇ ಗೊಬ್ಬರವಲ್ಲವೇ? - ಎಲ್. ಎಸ್. ಶಾಸ್ತ್ರಿ ಕೃಷ್ಣಮೂರ್ತಿ ಪುರಾಣಿಕರನ್ನು ನಮ್ಮ ಜಿಲ್ಲೆಗೆ ಪರಿಚಯಿಸಿದವರು ಎಲ್.ಎಸ್.ಶಾಸ್ತ್ರಿಯವರು.ಪುರಾಣಿಕರು ಬರೆದ 'ಸೈರಂಧ್ರಿ ಹಾಗು ಮಗನ ಗೆಲುವು' ನಮಗೆ ಪಿಯುಸಿಯಲ್ಲಿ ಪಠ್ಯವಾಗಿತ್ತು. ಸರಳ ರಗಳೆಯಲ್ಲಿ ಬರೆದ ಆ ನಾಟಕ ನಮ್ಮ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸಿತ್ತು. ಕುಟುಂಬ ವತ್ಸಲರಾದ ಅವರ ಕಾದಂಬರಿಗಳು ಕೌಟುಂಬಿಕ ಚಿತ್ರಣಗಳಿಂದ ಸಂಪನ್ನವಾಗಿರುವುದು ವಿಶೇಷ. ಹಾಲಿನ ಕೆನೆಯಂತೆ ಬದುಕಿದ ಪುರಾಣಿಕರ ಬಗ್ಗೆ ಕವಿ ಎಲ್ ಎಸ್ ಎಸ್ ಬರೆದ ಭಾವಪೂರ್ಣ ಕವನ ನಿಮ್ಮ ಓದಿಗಾಗಿ. ಸಂಪಾದಕ.