ಸ್ವಾತಂತ್ರ್ಯ ಸ್ವೇಚ್ಛೆಯಾದಾಗ
. 'ಮೇರಾ ಭಾರತ್ ಮಹಾನ್: ನನ್ನೆಲ್ಲಾ ದೇಶವಾಸಿಗಳಿಗೆ ಎಪ್ಪತೇಳನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಇದೀಗ ತಾನೇ ಧ್ವಜಾರೋಹಣ ಮಾಡಿ , ದೇಶಭಕ್ತಿ ಗೀತೆ ಹಾಡಿ ದೇಶಭಕ್ತಿಯ ಭಾಷಣ ಕೇಳಿ ದೇಶಭಕ್ತಿ ಜಾಗೃತವಾಗಿರುವ ಸಕಾಲ. ಕಳೆದ ವರ್ಷವಷ್ಟೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ , ಮನೆ, ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರ ಪ್ರೇಮವನ್ನು ಮೆರೆದಿದ್ದೇನೋ ನಿಜ . ಆದರೆ ಕಳೆದೊಂದು ವರ್ಷದಲ್ಲಿ ದೇಶಾದ್ಯಂತ ನಡೆದ ಅಹಿತಕಾರಿ ಘಟನೆಗಳ ಅಂಕಿ ಅಂಶಗಳನ್ನು ಅವಲೋಕಿಸಿದಾಗ ಸ್ವಾತಂತ್ರ್ಯದ ನಿಜವಾದ ಅರ್ಥ ಸ್ವೇಚ್ಛಾಚಾರದಂತೆ ಬದಲಾಗುತ್ತಿರುವುದು ವಿಷಾದನೀಯ . ಸ್ವಾತಂತ್ರ್ಯ ಇಲ್ಲದಾಗ ಪರಿತಪಿಸುತ್ತಿದ್ದ ಭಾರತೀಯರು ಸ್ವಾತಂತ್ರ್ಯ ಸಿಕ್ಕ ಒಂದೇ ವರ್ಷದಲ್ಲಿ ಈ ನೆಲದ ಈ ದೇಶದ ಮಹಾತ್ಮನೆನಿಸಿಕೊಂಡ ಬಾಪೂಜಿಯನ್ನೇ ಕೊಂದು ಸ್ವಾತಂತ್ರ್ಯದ ಹೆಸರಿಗೆ ಕಳಂಕ ತಂದಿಟ್ಟರು; ಇಡೀ ಜಗತ್ತು ಮಮ್ಮಲ ಮರುಗುವಂತೆ ಮಾಡಿದರು. ಅಂದಿನಿಂದ ಇಂದಿನವರೆಗೂ ಪ್ರಜಾಪ್ರಭುತ್ವದಲ್ಲಿ ನೀಡಿರುವ ಸ್ವಾತಂತ್ರ್ಯ ಅತಿ ಎಂಬಷ್ಟು ಸ್ವಚ್ಛಾಚಾರದ ನಡೆಗಳು ನಡೆಯುತ್ತಿವೆ. ಮಹಿಳೆಯರ ಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅತ್ಯಾಚಾರ ಲೈಂಗಿಕ ದೌರ್ಜನ್ಯ ಪ್ರಕರಣಗಳು ,ಆಡಳಿತ ವ್ಯವಸ್ಥೆಯಲ್ಲಿ ಸರ್ವೇ ಸಾಮಾನ್ಯವಾಗಿರುವ ಭ್ರಷ್ಟಾಚಾರ ಈ ದೇಶದ ಸಾಕ್ಷಿ ಪ್ರಜ್ಞೆಯನ್ನು ಕೊಂದು ಹಾಕುತ್ತಿವೆ.. ಇದು ಆಗಸ್ಟ್ ತಿಂಗಳು; ದೇಶಭಕ್ತಿಯ ಹಾಡುಗಳು, ಭಾಷಣಗಳು ವೇದಿಕೆಯ ಮೇಲೆ ಜೋರಾಗಿ ಸದ್ದು ಮಾಡುತ್ತವೆ. ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಎಂದರೆ ಮಕ್ಕಳ ಪಾಲಿಗೆ ಏನೋ ಒಂದು ರೀತಿಯ ಸಂಭ್ರಮ! ಅಂದು ಬೆಳಿಗ್ಗೆ ಬೇಗನೆ ಎಚ್ಚರಾಗುವುದು; ಹೊಸ ಸಮವಸ್ತ್ರ ತೊಟ್ಟು ದ್ವಜಾರೋಹಣಕ್ಕೆ ಸಿದ್ಧರಾಗಿ ಬರುವ ಪುಟಾಣಿ ಮಕ್ಕಳ ಕಣ್ಣುಗಳಲ್ಲಿ ಏನೋ ಒಂದು ಹೊಸ ಭರವಸೆ ಕಾಣುವುದು. ಆದರೆ ಇದು ಎಲ್ಲಿಯವರೆಗೆ?? ಪ್ರೌಢಶಾಲೆ ಮುಗಿಯುತ್ತಿದ್ದಂತೆ ಮಕ್ಕಳಿಗೆ ಸ್ವಾತಂತ್ರ್ಯ ಬಂದುಬಿಟ್ಟಿದೆ! ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಡ್ಡಾಯವಿಲ್ಲ; ಧ್ವಜಾರೋಹಣ, ರಾಷ್ಟ್ರಗೀತೆ ಬಗ್ಗೆ ಅಭಿಮಾನವಿಲ್ಲ; ಕಾಲೇಜು ಮೆಟ್ಟಿಲು ಹತ್ತುತ್ತಿರುವಂತೆ ರಾಷ್ಟ್ರೀಯ ಕಾರ್ಯಕ್ರಮಗಳೆಲ್ಲ ನಗಣ್ಯವಾಗಿ ಸಿಗುವ ಒಂದು ದಿನ ರಜೆ ಮೋಜು ಮಸ್ತಿಯ ನೆಪದಲ್ಲಿ ಕಳೆದು ಹೋಗುತ್ತದೆ. ಬಹುಶಃ ಇಲ್ಲಿಯೇ ಒಂದು ದೊಡ್ಡ ಕಂದಕ ಸೃಷ್ಟಿಯಾಗುತ್ತಿದೆ. ಕಾಲೇಜಿನಲ್ಲಿ ಯಾಕೆ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಮಕ್ಕಳಿಗೆ ಕಡ್ಡಾಯವಿಲ್ಲ? ರಾಷ್ಟ್ರಪ್ರಜ್ಞೆ ಜಾಗೃತವಾಗಬೇಕಾದ ಯುವ ಮನಸ್ಸುಗಳಿಗೆ .ಹಿರಿಯರ ಮಾತು, ದೇಶಭಕ್ತಿಯ ಭಾಷಣ ಇವೆಲ್ಲ ಬೇಡದ ಕಾಡು ಹರಟೆಯಂತೆ ಕಾಣಲಾರಂಬಿಸುವುದು. ದೇಶದ ಕುರಿತಾಗಿ, ಸಮಾಜದ ಕುರಿತಾಗಿ ಚಿಂತಿಸಬೇಕಾದ ಸಕಾಲವದು.ಇಲ್ಲಿಯೆ ಮೊಳಕೆಯೊಡೆಯುವ ಚಿಗುರುಗಳಿಗೆ ತುಸು ಕಡಿವಾಣ , ಯೋಗ್ಯ ಮಾರ್ಗದರ್ಶನ ಎರಡೂ ಬೇಕು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅತ್ಯಾಚಾರ ,ದೌರ್ಜನ್ಯದ ಪ್ರಕರಣಗಳು ಅತ್ಯಂತ ನಾಚಿಕೆಗೇಡಿನ, ಇಡೀ ದೇಶ ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸಬೇಕಾದಂತಹ ವಿಚಾರ. ಕಾನೂನು ಕಟ್ಟಳೆಗಳು ಎಷ್ಟೇ ಕಠಿಣವಾಗಿದ್ದರೂ ಸಾಕ್ಷಿ ಮುಂದೆ ಅವು ಮೂಕವಾಗುತ್ತವೆ. ಎಲ್ಲದಕ್ಕೂ ಸಾಕ್ಷಿಯೇ ಪ್ರಧಾನವಾಗಿರುವಾಗ ಅದೆಷ್ಟೋ ಪ್ರಕರಣಗಳು ಸಾಕ್ಷಿ ಇಲ್ಲದೆ ಬಿದ್ದು ಹೋಗುತ್ತವೆ. ಅಪರಾಧಿಗಳು ಮತ್ತೆ ತಲೆ ಎತ್ತಿ ಮೆರೆಯುತ್ತಾ ಮತ್ತೆ ಮತ್ತೆ ಅಪರಾಧಿ ಕೃತ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಸಂತ್ರಸ್ತರು ಮಾತ್ರ ಎಲ್ಲೋ ಮೋರಿ ಬದಿಯಲ್ಲಿ ಹೆಣವಾಗಿ ಬೆತ್ತಲಾಗಿ, ಹೆತ್ತವರ ಕಂಗಳಲ್ಲಿ ದಿನವೂ ಹರಿವ ನೀರಾಗಿ ಕಾಡುತ್ತಿರುತ್ತಾರೆ. ೧೧ ವರ್ಷಗಳ ಹಿಂದೆ ಇಡೀ ರಾಜ್ಯದ್ಯಂತ ಸದ್ದು ಮಾಡಿದ ಸೌಜನ್ಯ ಪ್ರಕರಣ ಸುಧೀರ್ಘ ವಿಚಾರಣೆಯ ಬಳಿಕ ಅಪರಾಧಿ ಎಂದು ಪರಿಗಣಿಸಲ್ಪಟ್ಟ ವ್ಯಕ್ತಿ ವ್ಯರ್ಥವಾಗಿ ಜೈಲು ಹಿಂದೆ ಕಂಬಿ ಎಣಿಸಿ ನಿರಪರಾಧಿಯಾಗಿ ಹೊರಗೆ ಬಂದ; ಹಾಗಾದರೆ ಅಪರಾಧಿ ಯಾರು? ಇಷ್ಟು ವರ್ಷಗಳ ಕಾಲ ನಿರಪರಾಧಿಗೆ ನೀಡಿದ ಶಿಕ್ಷೆ ಅನ್ಯಾಯವಲ್ಲವೇ? ಮಣಿಪುರದಲ್ಲಿ ಕಳೆದ ಮೂರು ನಾಲ್ಕು ತಿಂಗಳಿಂದ ನಡೆಯುತ್ತಿರುವ ಹಿಂಸಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆ ಸುಲಿಗೆಗಳು ಅತ್ಯಂತ ಅಮಾನುಷವಾದವು. ಇಷ್ಟೊಂದು ದೊಡ್ಡ ಪ್ರಮಾಣದ ಸೈನಿಕ ಪಡೆ, ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶವೊಂದಕ್ಕೆ ಇಂಥ ಗಂಭೀರ ವಿಷಯವನ್ನು ಮಟ್ಟ ಹಾಕಲಾಗಲಿಲ್ಲವೆಂದರೆ ನಾವೆಷ್ಟು ದುರ್ಬಲ ಎಂದು ಯೋಚಿಸಬೇಕಾಗಿದೆ. ಯುದ್ಧ, ಹಿಂಸಾಚಾರ, ನೆರೆ ,ಬರ ಇನ್ನಿತರ ಯಾವುದೇ ಬಗೆಯ ಪ್ರಕ್ಷುಬ್ಧ ವಾತಾವರಣವಿದ್ದರೂ ಕೊನೆಗಳಿಗೆಯಲ್ಲಿ ಎಲ್ಲರ ಕೈಗೂ ಅಸ್ತ್ರವಾಗಿ ಸಿಗುವವರು , ಬಲಿಪಶುಗಳಾಗುವವರು ಹೆಣ್ಣು ಮಕ್ಕಳೇ!. ಇಂದು ಕೊಲೆ ಮಾಡುವುದು ,ಕತ್ತರಿಸಿ ಬಿಸಾಕುವುದು ಇವೆಲ್ಲಾ ಅತ್ಯಂತ ಸಾಮಾನ್ಯ ವಿಷಯವಾಗಿವೆ . ಸಣ್ಣ ಸಣ್ಣ ವಿಷಯ, ಕಾರಣಕ್ಕೂ ಕೊಲೆ, ಹಿಂಸೆ ಹೆಚ್ಚುತ್ತಿವೆ. ಜೀವಕ್ಕೆ ಭರವಸೆಯೇ ಇಲ್ಲದಂತಾಗಿದೆ;ಭಾವನೆಗಳು ಸತ್ತು ಹೋದಂತಿವೆ.ಅಪರಾಧಿಗಳಿಗೆ ಶಿಕ್ಷೆಯ ಭಯವೂ ಇಲ್ಲದಂತಾಗಿದೆ. ಜೈಲಿಗೆ ಹೋಗುವುದು, ಜಾಮೀನಿನ ಮೇಲೆ ಹೊರಬಂದು ರಾಜಾರೋಷವಾಗಿ ಗರ್ಜಿಸುವುದು ಆತಂಕಕಾರಿ ಸಂಗತಿಯಾಗಿದೆ. ಈ ಎಲ್ಲ ಬಗೆಯ ಅಮಾನುಷ ಕೃತ್ಯಗಳನ್ನು ನೋಡುವಾಗ ಎಲ್ಲೋ ನಾವು ಭಾವನಾತ್ಮಕವಾಗಿ ಸೋಲುತ್ತಿದ್ದೇವೇನೊ, ನಾವು ನೀಡುವ ಶಿಕ್ಷಣ, ಮನೆಯಲ್ಲಿ ನೀಡುವ ಸಂಸ್ಕಾರ ನಮ್ಮನ್ನೇ ಪ್ರಶ್ನೆ ಮಾಡುವಂತಿವೆ!! ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಪ್ರತಿಯೊಬ್ಬರ ಸ್ವಾತಂತ್ರ್ಯಕ್ಕೆ ಭರವಸೆ, ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕುವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ದಿಶೆಯಲ್ಲಿ ಸರ್ಕಾರ, ನ್ಯಾಯಾಲಯಗಳು ಕಾನೂನು ರೂಪಿಸುವಂತಾಗಲಿ.. ಸುಧಾ ಹಡಿನಬಾಳ