top of page

ಸಿದ್ಧಿ ಪ್ರಸಿದ್ಧಿ

ಸಿದ್ಧಿ ಮತ್ತು ಪ್ರಸಿದ್ಧಿ ಎಂಬ ಎರಡು ಶಬ್ದಗಳನ್ನು ಜೋಡುಪದಗಳಾಗಿ ಆಗಾಗ ಕೇಳುತ್ತಿರುತ್ತೇವೆ. ಮೇಲ್ನೋಟಕ್ಕೆ ಅವೆರಡು ಒಂದೇ ಎಂಬಂತೆ ಕಾಣುತ್ತದೆ. ಆದರೆ ಅವುಗಳೊಳಗೆ ತುಂಬ ಅರ್ಥ ವ್ಯತ್ಯಾಸ ಇದೆ.

’ಸಿದ್ಧಿ’ ಎಂದರೆ ಒಂದು ವಿಷಯದಲ್ಲಿ ಪಾರಂಗತನಾದವನು; ತಜ್ಞ. ಪರಿಣತ, expert ಆದವನು ಎಂದರ್ಥ. ಇಂಗ್ಲಿಷಿನಲ್ಲಿ ಇದನ್ನು enlightenment ಎಂದು ಕರೆಯಬಹುದು. ಎಂದರೆ ಆ ವಿಷಯದಲ್ಲಿ ತಲಸ್ಪರ್ಶಿಯಾದ ಜ್ಞಾನ ಸಂಪಾದಿಸಿಕೊಂಡವನು ಎಂದು ಅರ್ಥೈಸಿಕೊಳ್ಳಬಹುದು. ’ಪ್ರಸಿದ್ಧಿ’ ಎಂದರೆ ಪ್ರಚಾರ (popularity). ಪ್ರಸಿದ್ಧಿ ಗಳಿಸಿದವನು ಸಿದ್ಧಿ ಗಳಿಸಿರಬೇಕೆಂದೇನಿಲ್ಲ. ಅದೇ ರೀತಿ ಸಿದ್ಧಿ ಪಡೆದುಕೊಂಡಿರುವವನಿಗೆ ಪ್ರಸಿದ್ಧಿ ದೊರೆತಿರುತ್ತದೆ ಎಂದೂ ಇಲ್ಲ. ಅಪರೂಪಕ್ಕೊಮ್ಮೆ ಎರಡೂ ಒಟ್ಟಾಗುವುದುಂಟು.

ಸಿದ್ಧಿ ಪಡೆದವನಿಗೆ ಪ್ರಸಿದ್ಧಿ ಬೇಕಾಗುವುದಿಲ್ಲ, ಅದು ಆತನಿಗೆ ಕ್ಷುಲ್ಲಕವಾಗಿ ಕಾಣಿಸುವುದು ಮತ್ತು ಅವನಿಗೆ ಪ್ರಸಿದ್ದಿ ಸಿಗುವುದು ಒಂದು ರೀತಿಯಲ್ಲಿ ಆತಂಕದ ವಿಷಯವೂ ಹೌದು.. ಅವನ ಏಕಾಂತಕ್ಕೆ, ವ್ರತಕ್ಕೆ ಮತ್ತು ಸಾಧನೆಯ ಪಥಕ್ಕೆ ಅದು ತೊಡಕಾಗಿ ಪರಿಣಮಿಸಬಹುದು. ಹಾಗಾಗಿ ಸಿದ್ಧಿಪುರುಷರು ಪ್ರಸಿದ್ಧಿ ಬಂದರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಿದ್ಧಿ ದೊರೆತವರಿಗೆ ಪ್ರಸಿದ್ಧಿ ಸಿಕ್ಕಿದರೆ ವೈಯಕ್ತಿಕವಾಗಿ ಅವರಿಗೆ ತೊಂದರೆ ಅನಿಸಿದರೂ ಲೋಕಕ್ಕೆ ಅನುಕೂಲ.

’ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋಭವ’ ಎಂದಂತೆ, ಪ್ರಸಿದ್ಧಿಯನ್ನು ಯಾವುದೇ ರೂಪದಲ್ಲಿ ಗಳಿಸಬಹುದು. ಪ್ರಸಿದ್ಧಿಯು ಗುಣಮಟ್ಟದ ಅಳತೆಗೋಲಾಗಿರುವುದಿಲ್ಲ, ಬದಲಾಗಿ ಅನುಮಾನದ ಹುತ್ತವನ್ನು ಕಟ್ಟಿಕೊಳ್ಳುತ್ತದೆ. ಪ್ರಸಿದ್ಧಿ ಗಳಿಸಿದವರನ್ನು ಎಷ್ಟೋ ಸಂದರ್ಭಗಳಲ್ಲಿ ಜನ ಅನುಮಾನದಿಂದ ನೋಡುವುದು ಯಾಕೆಂದರೆ ಅವರಿಗೆ ವಿಷಯದ ಆಳ ಪರಿಜ್ಞಾನವೇ ಇರುವುದಿಲ್ಲ. ಪ್ರಚಾರದ ಬುದ್ಬುದದ ಮೇಲೆ ಅವರು ನಿಂತಿರುತ್ತಾರೆ
ಸಿದ್ಧ ಪುರುಷರೆಂದರೆ ಯಾವುದೋ ಗುಹೆಗಳಲ್ಲಿ ವಾಸಿಸುವ ವನಚರ ಸಾಧಕರೆಂದು ಭಾವಿಸಬೇಕಾಗಿಲ್ಲ. ಅವರು ಯಾವುದಾದರೊಂದು ಕ್ಷೇತ್ರದಲ್ಲಿ ತಲಸ್ಪರ್ಶಿಯಾದ ಜ್ಞಾನ ಪಡೆದುಕೊಂಡು ಸಮಚಿತ್ತರಾಗಿ ನಮ್ಮ ನಡುವೆಯೇ ವಾಸಿಸುವವರಾಗಿದ್ದಾರೆ. ಅವರು ತಮ್ಮ ಜ್ಞಾನವನ್ನು ತೋರಿಸಿಕೊಳ್ಳುವುದಿಲ್ಲ. ತಿಳಿವಳಿಕೆಯನ್ನು ಅಪೇಕ್ಷಿಸಿ ಹತ್ತಿರ ಬಂದು ವಿಜ್ಞಾಪಿಸಿಕೊಂಡವರಿಗಷ್ಟೆ ಅವರು ಅದನ್ನು ನೀಡುತ್ತಾರೆ. ವಿಧೇಯತೆಯ ಶಿಷ್ಯವೃತ್ತಿ  ಇಲ್ಲಿ ತೀರ ಅವಶ್ಯ.

ಪ್ರಸಿದ್ಧ ಪುರುಷರು ತಮ್ಮಲ್ಲಿರುವ ಅಲ್ಪಸ್ವಲ್ಪವನ್ನು ತೋರಿಸಿಕೊಳ್ಳಲು ಹೆಣಗುತ್ತಿರುತ್ತಾರೆ. ಬಹುಸಂಖ್ಯಾಕ ಜನ ಇಂಥವರ ಹಿಂದೆ ಹೋಗುತ್ತಾರೆ. ವಿಷಯದ ಮೇಲ್ಮೈಯನ್ನಷ್ಟೇ ಸ್ಪರ್ಶಿಸುವ ಜನರಿಗೆ ಅಷ್ಟು ಸಾಕು. 

ಒಂದು ನೀರ ಮೇಲಿನ ಅಲೆ; ಇನ್ನೊಂದು ಹರಿವಿನ ತಳದಲ್ಲಿರುವ ಪ್ರವಾಹ (under current). ಅಲೆ ನಮ್ಮನ್ನು ಹಿತವಾಗಿ ಸ್ಪರ್ಶಿಸುತ್ತ ಇರುತ್ತದೆ; ಆದರೆ ಮಹತ್ತ್ವವಾದುದನ್ನು ಕೊಡಲು ಅದಕ್ಕೆ ಸಾಧ್ಯವಾಗುವುದಿಲ್ಲ. ಇನ್ನೊಂದು ನಮ್ಮ ಅಜ್ಞಾನವನ್ನು ಕಳೆದು ತನ್ನ ಜ್ಞಾನಪ್ರವಾಹದಲ್ಲಿ ಮುಳುಗಿಸಿಬಿಡುತ್ತದೆ.

ಸಿದ್ಧಕ್ಕೆ ಒಂದು ನಿರ್ದಿಷ್ಟ ಗುಣಧರ್ಮವಿದೆ. ಎಂತಹ ಪರಿಸ್ಥಿತಿಯಲ್ಲಿಯೂ ಅದು ತನ್ನತನವನ್ನು ಬಿಟ್ಟುಕೊಡುವುದಿಲ್ಲ. ಆದರೆ ಪ್ರಸಿದ್ಧವು ಪರಿಸ್ಥಿತಿಯೊಂದಿಗೆ ಸದಾ ರಾಜಿ ಮಾಡಿಕೊಳ್ಳುತ್ತಿರುತ್ತದೆ.

ಪ್ರಸಿದ್ಧಿಯು ಸಿದ್ಧಿಯನ್ನು ಆಶ್ರಯಿಸಿರುತ್ತದೆ. ಆದರೆ ಸಿದ್ಧಿಯು ಪ್ರಸಿದ್ಧಿಯನ್ನು ಆಶ್ರಯಿಸುವುದಿಲ್ಲ. ಸಿದ್ಧಿಗೆ ಯಾರ ಆಲಂಬನೆಯೂ ಆಶ್ರಯವೂ ಬೇಕಾಗುವುದಿಲ್ಲ. ಆದರೆ ಪ್ರಸಿದ್ಧಕ್ಕೆ ಸದಾ ಒಂದು ಆಶ್ರಯ-ನೆರವು ಬೇಕಾಗುತ್ತದೆ.

ಸಿದ್ಧವು ಆಳ; ಪ್ರಸಿದ್ಧವು ವಿಸ್ತಾರ. ಇವತ್ತು ವಿಸ್ತಾರ ಹೆಚ್ಚಿದೆಯೇ ಹೊರತು ಆಳ ಕಡಿಮೆಯಾಗಿದೆ ಮತ್ತು ಅದು ಇವತ್ತಿನ ಯುಗಧರ್ಮವಾಗಿದೆ. ದೇಶದೇಶಗಳು ಹತ್ತಿರಾಗಿ ಇಡೀ ಪ್ರಪಂಚ ಗ್ರಾಮದ ಹಂತಕ್ಕೆ ಕುಗ್ಗಿರುವುದು ಇದಕ್ಕೆ ಕಾರಣವಾಗಿರಬಹುದು. ಒಂದೆಡೆ ಕುಳಿತು ತಪಸ್ಸು/ಸಾಧನೆ ಮಾಡಲು ಯಾರಿಗೂ ಪುರುಸೊತ್ತಿಲ್ಲ. 

ಸಮಾಜದಲ್ಲಿ ಪ್ರಸಿದ್ಧವೂ ಸಿದ್ಧವೂ ಜೊತೆಜೊತೆಯಾಗಿ ಇರುತ್ತದೆ. ಒಂದು ತೊಗಟೆ ಇನ್ನೊಂದು ತಿರುಳು. ತಿರುಳನ್ನು ತೊಗಟೆಯು ಸದಾ ಆವರಿಸಿಕೊಂಡಿರುತ್ತದೆ. ತನ್ನನ್ನು ದಾಟಿಯೇ ಮುಂದಕ್ಕೆ ಹೋಗಬೇಕೆಂದು ಸಿದ್ಧವನ್ನು (ತಿರುಳು) ಪ್ರಸಿದ್ಧವು (ತೊಗಟೆ) ಸದಾ ಮರೆಮಾಡಿರುತ್ತದೆ.

ಲೋಕವು ಪ್ರಸಿದ್ಧರ ಹಿಂದೆ ಹೋಗುತ್ತದೆ. ತಿಳಿದವರು ಸಿದ್ಧರ ಹಿಂದೆ ಹೋಗುತ್ತಾರೆ. ಪ್ರಸಿದ್ಧವು ರುಚಿಯಾಗಿಯೂ ಸುಂದರವಾಗಿಯೂ ಇರುವುದು. ಸಿದ್ಧವು ಕಠಿಣವಾಗಿಯೂ ಅರುಚಿಯಾಗಿಯೂ ಇರುವುದು. ಪ್ರಸಿದ್ಧಿಗೆ ಸಿದ್ಧಿಯ ಮುಂದೆ ನಿಲ್ಲಲಾಗುವುದಿಲ್ಲ. ಸಿದ್ಧವು ಪ್ರಸಿದ್ಧವನ್ನು ಕೊಚ್ಚಿಕೊಂಡು ಹೋಗುತ್ತದೆ.

ಸಿದ್ಧಿ ಇಲ್ಲದ ಪ್ರಸಿದ್ಧಿಗೆ ಯಾವ ಬೆಲೆಯೂ ಇಲ್ಲ. ಅದು ಲೊಳಲೊಟ್ಟೆಯಾಗಿ ಗಾಳಿಗುಳ್ಳೆಯಾಗಿ ನಿಮಿಷಾರ್ಧದಲ್ಲಿ ಒಡೆದು ಹೋಗುತ್ತದೆ. ಕೆಲಸ ಮಾಡದೆ ಹೇಗೆ ಕೂಲಿ ಪಡೆದುಕೊಳ್ಳಬಾರದೋ ಹಾಗೆಯೇ ಸಾಧನೆ ಮಾಡದ ಪ್ರಸಿದ್ಧಿ/ಪ್ರಚಾರ ಹುಂಬತನದಿಂದ ಕೂಡಿರುತ್ತದೆ. ಸಿದ್ಧಿಗೆ ಯಾವ ಪ್ರಚಾರವೂ ಬೇಕಾಗುವುದಿಲ್ಲ ಮತ್ತು ಅದು ತನ್ನ ಕಾಂತತ್ವದಿಂದಲೇ ಎಲ್ಲವನ್ನೂ ಆಗುಮಾಡಿಕೊಳ್ಳುತ್ತದೆ. -ಡಾ. ವಸಂತಕುಮಾರ ಪೆರ್ಲ. ಕನ್ನಡ ಸಾಹಿತ್ಯದಲ್ಲಿ ಎಂ.ಎ., ಪಿಹೆಚ್. ಡಿ ಪದವಿ ಪಡೆದು, ಪತ್ರಿಕೋದ್ಯಮ ಡಿಪ್ಲೊಮಾದಲ್ಲಿ ಮೊದಲ ಸ್ಥಾನ ಗಳಿಸಿ, ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ 45 ಕ್ಕಿಂತ ಹೆಚ್ಚು ಕೃತಿರಚನೆ ಮಾಡಿರುವ ಡಾ. ವಸಂತಕುಮಾರ ಪೆರ್ಲ ಅವರು ಮುಖ್ಯವಾಗಿ ಕವಿಯೆಂದೇ ಗುರುತಿಸಲ್ಪಟ್ಟವರು. ಮಾತಿನಾಚೆಯ ಮೌನ, ಹುತ್ತದೊಳಗಿನ ಹಾವು, ಕೋಟಿಲಿಂಗ, ರಂಗಸ್ಥಳ, ಒಡ್ಡೋಲಗ ಮೊದಲಾದವು ಡಾ. ಪೆರ್ಲರ ಕವನ ಸಂಕಲನಗಳು. ಇಂಗ್ಲಿಷ್, ಹಿಂದಿ, ಪಂಜಾಬಿ, ತಮಿಳು, ತೆಲುಗು, ಮಲಯಾಳಮ್, ಕೊಂಕಣಿ ಹಾಗೂ ತುಳು ಭಾಷೆಗೆ ಅವರ ಕವನಗಳು ಅನುವಾದವಾಗಿವೆ. ರಾಷ್ಟ್ರಮಟ್ಟದ ಕಾವ್ಯಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ವ್ಯಾಕರಣ, ಮೀಮಾಂಸೆ ಕ್ಷೇತ್ರಗಳಲ್ಲಿ ಒಳ್ಳೆಯ ಪಾಂಡಿತ್ಯ ಗಳಿಸಿರುವ ಶ್ರೀಯುತರು ಮಂಗಳೂರು ಆಕಾಶವಾಣಿ ಕೇಂದ್ರದ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಸಾಹಿತ್ಯದೊಂದಿಗೆ ಮಾಧ್ಯಮ, ರಂಗಭೂಮಿ, ಸಿನಿಮಾ, ಸಂಘಟನೆ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ವ್ಯಸ್ತರಾಗಿದ್ದಾರೆ. ಒಳ್ಳೆಯ ವಾಗ್ಮಿ ಮತ್ತು ವಿದ್ವಾಂಸರೆಂದು ಮಾನ್ಯರಾಗಿದ್ದಾರೆ.

ಸಿದ್ಧಿ ಪ್ರಸಿದ್ಧಿ

©Alochane.com 

bottom of page