top of page

ಸಾಹಿತ್ಯ ಕ್ಷೇತ್ರದ ನನ್ನ ಆರು ದಶಕಗಳು ಭಾಗ-೧

ಸಾಹಿತ್ಯಾಭಿರುಚಿಯ ಗಂಗೋತ್ರಿ ********** * ನಾನು ಮೊದಲ ಕವನ ಬರೆದದ್ದು ೧೯೫೮ ರಲ್ಲಿ. ( ವಿಹಗ ವೇದನೆ - ಅನುವಾದ ಕವನ). ನನ್ನ ಚೊಚ್ಚಿಲ ಕವನ ಸಂಕಲನ ಹೊರಬಂದದ್ದು ೧೯೬೭ರಲ್ಲಿ. ( ಸ್ಮೃತಿ ). * ಈವರೆಗೆ ನಾನು ಬರೆದ ಬಿಡಿಬರೆಹಗಳ ಸಂಖ್ಯೆ ೪೦ ಸಾವಿರಕ್ಕೂ ಹೆಚ್ಚು. * ಈವರೆಗೆ ನನ್ನ ಪ್ರಕಟಿತ ಪುಸ್ತಕಗಳ ಸಂಖ್ಯೆ ( ಸಂಪಾದಿತ ಗ್ರಂಥಗಳೂ ಸೇರಿದಂತೆ) ೧೨೫ ರಷ್ಟು. ಈ ಎಲ್ಲ ನನ್ನ ಬರವಣಿಗೆಗೆ ಕಾರಣವಾದದ್ದು ನನ್ನ ಬಾಲ್ಯದಲ್ಲಿ ನನಗೆ ಮನೆಯಲ್ಲೇ ದೊರಕಿದ ವಾತಾವರಣ. ನನ್ನ ಸಾಹಿತ್ಯಾಭಿರುಚಿಯ ಮೂಲ ಗಂಗೋತ್ರಿ ನನ್ನ ಮನೆಯೇ. ನನ್ನ ಮನೆ ಒಂದು ಸಾಂಸ್ಕೃತಿಕ ಕೇಂದ್ರದಂತಿತ್ತು. ನನ್ನ ತಂದೆ ಸಂಸ್ಕೃತ ಕನ್ನಡ ವಿದ್ವಾಂಸರು. ನನ್ನ ಹಿರಿಯ ಅಣ್ಣ ಬರೆಹಗಾರ. ತಾಯಿ, ಅಕ್ಕಂದಿರು ಸಹ ಪುಸ್ತಕಗಳ ಓದಿನ ಆಸಕ್ತಿ ಉಳ್ಳವರು. ಮನೆಯಲ್ಲಿ ಸಂಸ್ಕೃತ, ಕನ್ನಡ, ಹಿಂದಿ, ಮರಾಠಿ ಪುಸ್ತಕ ಪತ್ರಿಕೆಗಳೇ ಆಗ ನಮ್ಮ ಸಂಗಾತಿಗಳು. ಅದಂತೂ ಕಾದಂಬರಿಯುಗ. ಓದುವದು ಮತ್ತು ಬರೆಯುವದೇ ಆಗ ನಮ್ಮಂಥವರ ಮುಖ್ಯ ಹವ್ಯಾಸ. ಸಂಗಡ ನನ್ನ ಮನೆಗೆ ಅಂದಿನ ಎಲ್ಲ ಖ್ಯಾತ ಸಾಹಿತಿಗಳು , ಕಲಾವಿದರು , ವಿದ್ವಾಂಸರು ಬರುತ್ತಿದ್ದರು. ಅಂದು ನನಗೆ ದೊರಕಿದ ಪರಿಸರವೇ ನನ್ನ ವ್ಯಕ್ತಿತ್ವವನ್ನು ರೂಪಿಸಿದ್ದು. ಸಾಹಿತ್ಯ, ಪತ್ರಿಕೆ, ಯಕ್ಷಗಾನ, ನಾಟಕ, ಸಂಗೀತ, ನೃತ್ಯ, ಗಮಕ ಇತ್ಯಾದಿ‌ ಹಲವು ಕ್ಷೇತ್ರಗಳ ಸಂಪರ್ಕ ದೊರಕಿತು. ಎಲ್ಲದರಲ್ಲೂ ನನ್ನ ಆಸಕ್ತಿ ಬೆಳೆಸಿಕೊಂಡೆ. ತಿಳಿದುಕೊಂಡೆ. ಅಲ್ಪಸ್ವಲ್ಪ ಕೆಲಸವನ್ನೂ ಮಾಡಿದೆ. ಮನೆಯಲ್ಲಿ ತಂದೆಯವರ ಸಂಸ್ಕೃತ ಗ್ರಂಥಗಳಿದ್ದವು. ಗೋರಖಪುರದ ಗೀತಾ ಪ್ರೆಸ್ಸಿನ ಹಿಂದಿ ಪುಸ್ತಕಗಳು , ಆಗಿನ ಪ್ರಸಿದ್ಧ ಹಿಂದಿ ಪತ್ರಿಕೆ ಧರ್ಮಯುಗ, ಟಿಳಕರ ಕೇಸರಿ ಮರಾಠಿ ಪತ್ರಿಕೆ ಮೊದಲಾದವು ಬರುತ್ತಿದ್ದವು. ಓದುತ್ತ ಓದುತ್ತ ಬರೆಯುವ ಅಭ್ಯಾಸವೂ ಬೆಳೆಯಿತು. ಹೈಸ್ಕೂಲ್ ನಲ್ಲಿರುವಾಗಲೇ ಪ್ರೇಮಚಂದ್, ಶರಶ್ಚಂದ್ರ ಮೊದಲಾದವರ ಹಿಂದೀ ಕತೆಗಳನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದೆ. ಪಾಂಡೇಶ್ವರರು ಸಂಪಾದಕರಾಗಿದ್ದ ಜನತಾ ವಾರಪತ್ರಿಕೆ, ಮತ್ತೆ ಕೆಲ ಬೇರೆ ಪತ್ರಿಕೆಗಳಲ್ಲಿ ಅವು ಪ್ರಕಟಗೊಳ್ಳುತ್ತಿದ್ದವು. ಕನ್ನಡದೊಡನೆ ಸಂಸ್ಕೃತ ಹಿಂದಿ ಭಾಷಾಜ್ಞಾನವೂ ಆಯಿತು. ಭಾಷೆಗೆ ಭದ್ರ ತಳಹದಿ ಬಿದ್ದಂತಾಯಿತು. ಮಹಾಭಾರತ, ರಾಮಾಯಣಗಳಲ್ಲದೆ ಕಾಳಿದಾಸ, ಭವಭೂತಿ, ಮಾಘ, ಭಾಸ, ದಂಡಿ ಮೊದಲಾದವರ ಮೂಲ ಸಂಸ್ಕೃತ ಕಾವ್ಯ ನಾಟಕಗಳನ್ನು ಓದಲು ಸಾಧ್ಯವಾಯಿತು. ಕುಮಾರವ್ಯಾಸ ಭಾರತ, ಜೈಮಿನಿ ಭಾರತಗಳೆಲ್ಲ ನನ್ನ ತಾಯಿಗೆ ಕಂಠಪಾಠ. ಸುಶ್ರಾವ್ಯವಾಗಿ ಹಾಡುತ್ತಿದ್ದರು. ಗಮಕದಲ್ಲಿ ನನಗೆ ಅಭಿರುಚಿ ಹುಟ್ಟಿದ್ದು ಆ ಮೂಲಕವೆ. ಅದರಿಂದ ಎಲ್ಲ ಹಳಗನ್ನಡ ಕಾವ್ಯಗಳನ್ನು ಓದಿ ಗಮಕ ವಾಚನ ಮಾಡುವ ಅಭ್ಯಾಸ ಬೆಳೆಯಿತು. ಧಾರವಾಡ ಬಾನುಲಿಯಲ್ಲಿ ಮತ್ತು ಸಾರ್ವಜನಿಕವಾಗಿ ಗಮಕ ಕಾರ್ಯಕ್ರಮಗಳನ್ನು ಸಾಕಷ್ಟು ನೀಡಲು ಸಾಧ್ಯವಾಯಿತು. ಆ ರೀತಿ ಇಪ್ಪತ್ತಕ್ಕೂ ಹೆಚ್ಚು ಬೇರೆ ಬೇರೆ ಕಾವ್ಯಗಳ ಗಮಕ ವಾಚನ ಮಾಡಿದ್ದುಂಟು. ( ಹರಿಶ್ಚಂದ್ರ ಕಾವ್ಯ, ಭರತೇಶ ವೈಭವ, ಈಶ್ವರ ಕವಿಯ ಕವಿಜಿಹ್ವಾ ಬಂಧನ, ಆಂಡಯ್ಯನ ಕಬ್ಬಿಗರ ಕಾವಂ, ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ರನ್ನನ ಗದಾಯುದ್ದ, ಪಂಪನ ವಿಕ್ರಮಾರ್ಜುನ ವಿಜಯ ಇತ್ಯಾದಿ). ಸಂಸ್ಕೃತ ಮತ್ತು ಹಳೆಗನ್ನಡ ಕಾವ್ಯಗಳ ಓದಿನಿಂದ ನಮ್ಮ ಭಾಷೆ ಗಟ್ಟಿಯಾಗುತ್ತದೆ. ಅಂದು ಸಾಮಾನ್ಯವಾಗಿ ನಮ್ಮ ಪೀಳಿಗೆಯ ಬರೆಹಗಾರರೆಲ್ಲ ಕನ್ನಡದ ಶಾಸ್ತ್ರ ಗ್ರಂಥಗಳನ್ನೂ ಓದುತ್ತಿದ್ದರು. ತೀನಂಶ್ರೀ ಯವರ ಕಾವ್ಯಮೀಮಾಂಸೆ, ಧಾರವಾಡಕರರ ಭಾಷಾಶಾಸ್ತ್ರ, ಕರ್ಕಿಯವರ ಛಂದೋವಿಕಾಸ ಮೊದಲಾದವು. ಕಾವ್ಯಲಕ್ಷಣಗಳನ್ನು ತಿಳಿದುಕೊಳ್ಳಲು ಅವು ನೆರವಾಗುತ್ತವೆ. ಏನನ್ನೂ ಓದದೆ, ಎಲ್ಲದರ ಕುರಿತೂ ಬರೆಯುವ ಇಂದಿನ ಬಹಳಷ್ಟು ಬರೆಹಗಾರರ ಧೈರ್ಯದ ಕುರಿತು ನನಗೆ ಅಚ್ಚರಿಯಿದೆ. ಸಾಹಿತ್ಯ ಮತ್ತು ಪತ್ರಿಕೆ ಈ ಎರಡು ಕ್ಷೇತ್ರಗಳಲ್ಲೂ ಇರುವದರಿಂದ ನನಗೆ ಅನುಕೂಲವಾಗಿದೆ. ಅವು ಒಂದಕ್ಕೊಂದು ಪೂರಕ ಅಂಶಗಳು. ಸಾಹಿತಿಯಾಗಿ ನಾನು ಯಾವಾಗಲಾದರೂ ಮೂಡ್ ಬಂದಾಗ ಬರೆಯಬಹುದು. ಆದರೆ ಪತ್ರಕರ್ತನಾಗಿ ನಾನು ದಿನನಿತ್ಯ ಬರೆಯಲೇಬೇಕು. ಸಾಹಿತ್ಯದ ಓದು ನನ್ನ ಬರವಣಿಗೆಗೆ ಶಕ್ತಿ ತುಂಬಬಲ್ಲುದು. ಪತ್ರಕರ್ತನಾಗಿ ಜಗತ್ತಿನ ವೈವಿಧ್ಯಮಯ ವಿಷಯಗಳನ್ನು ಅರಿತು ಬರೆಯಲು‌ ಅವಕಾಶವಾಗಿದೆ. ಇದರಿಂದಾಗಿ ನಾನು ದಿನಕ್ಕೆ ಕನಿಷ್ಠ ಎರಡು‌ಮೂರು ಲೇಖನಗಳನ್ನು ಸರಾಸರಿಯಾಗಿ ಬರೆಯುತ್ತ ಬಂದಿರುವದರಿಂದ ಒಟ್ಟಾರೆ ಆ ಸಂಖ್ಯೆ ಬಹಳ ದೊಡ್ಡದಾಗಿದೆ. ದಿನಪತ್ರಿಕೆಗೆಗಾಗಿ ನಾನು ಬರೆದ ಸಂಪಾದಕೀಯಗಳೇ ಹತ್ತು ಸಾವಿರ ದಾಟಿವೆ. ಒಂದು ದಿನಪತ್ರಿಕೆಗೆ ಪ್ರತಿವಾರ " ಹರಟೆ ಹೊಡೆಯೋಣ ಬನ್ನಿ" ಎಂಬ ಶೀರ್ಷಿಕೆಯಡಿ ಅನೇಕ ವರ್ಷಗಳ ಕಾಲ ಬರೆದಿದ್ದೇನೆ. ಸಾವಿರಾರು, ಹರಟೆ, ಚೌಪದಿಗಳು, ಕತೆ, ಕವನ, ಹರಟೆ, ಅನುವಾದ, ಸಾಂದರ್ಭಿಕ ಲೇಖನಗಳು, ಕಲೆ, ಕ್ರೀಡೆ , ಪುಸ್ತಕ ವಿಮರ್ಶೆಗಳು, ಅಂಕಣ ಬರೆಹಗಳು, ಕಲಾವಿದರ ಸಾಹಿತಿಗಳ ಪರಿಚಯ, ಸಂದರ್ಶನ, ಹೀಗೆ ವೈವಿಧ್ಯಮಯ ಬರೆಹಗಳನ್ನು ಬರೆಯಲು ಪತ್ರಿಕೆ ಅವಕಾಶ ಮಾಡಿಕೊಟ್ಟಿದೆ. ಮೂರು ನಾಲ್ಕು ದಶಕಗಳಿಂದ ಸಾಪ್ತಾಹಿಕ ಪುರವಣಿ ಮತ್ತು ದೀಪಾವಳಿ ವಿಶೇಷಾಂಕ ಮೊದಲಾದವುಗಳನ್ನು ನಾನೇ ಹೆಚ್ಚಾಗಿ ನಿರ್ವಹಿಸುತ್ತ ಬಂದುದರಿಂದ ನನ್ನೊಂದಿಗೆ ಇತರ ನೂರಾರು ಬರೆಹಗಾರರಿಗೆ ಅವಕಾಶ ನೀಡಿ ಪ್ರೋತ್ಸಾಹಿಸುವದು ನನಗೆ ಸಾಧ್ಯವಾಗಿದೆ. ಬರೆಯುವದೇ ನನ್ನ ಆಸಕ್ತಿ ಮತ್ತು ಉದ್ಯೋಗ ಎರಡೂ ಆಗಿರುವದರಿಂದ ನಾನು ಬಹಳ ದೊಡ್ಡ ಸಂಖ್ಯೆಯಲ್ಲಿ ಬರೆದದ್ದರಲ್ಲಿ ಅಚ್ಚರಿಯೇನಿಲ್ಲ. ಬರೆಹ ನನಗೆ ತುಂಬ ಖುಷಿಯ ಮತ್ತು ಪ್ರೀತಿಯ ಕೆಲಸವೂ ಹೌದು. ಅರವತ್ತು ವರ್ಷಗಳಿಂದ ಬರೆಯುತ್ತಿದ್ದೇನೆ. ಕೈ ಗಟ್ಟಿಯಿರುವತನಕ ಬರೆಯುತ್ತಲೇ ಇರಬೇಕೆಂಬುದೇ ನನ್ನ ಆಸೆ. ‌‌‌ - ಎಲ್. ಎಸ್. ಶಾಸ್ತ್ರಿ

ಸಾಹಿತ್ಯ ಕ್ಷೇತ್ರದ ನನ್ನ ಆರು ದಶಕಗಳು ಭಾಗ-೧
bottom of page