ಸಾಹಿತ್ಯಲೋಕದ ಅಸಡ್ಡೆ ಪ್ರವೃತ್ತಿಅರ್ಹರಿಗೆ ಅನ್ಯಾಯ
ನಮ್ಮ ವಿಮರ್ಶಾಲೋಕ ಯಾವತ್ತೂ ಸರಿಯಾಗಿಲ್ಲ. ಅದು ಅರ್ಹರನ್ನು ಕಡೆಗಣಿಸುತ್ತಲೇ ಬಂದಿದೆ. ಸೋಗಲಾಡಿಗಳೊಂದಿಷ್ಟು ಜನ ತಮ್ಮದೇ ಗುಂಪು ಕಟ್ಟಿಕೊಂಡು , ತಮ್ಮದೇ ವಿಮರ್ಶಕರ ಬಳಗ ನಿರ್ಮಿಸಿಕೊಂಡು , ತಮಗೆ ಬೇಕಾದವರನ್ನು ವಾಚಾಮಗೋಚರವಾಗಿ ಹೊಗಳುತ್ತ , ಬೇಡವಾದವರನ್ನು ತುಳಿಯುತ್ತಬಂದಿದ್ದಾರೆ. ಇದರಿಂದ ನಿಜವಾದ ಯೋಗ್ಯತಾವಂತರಿಗೆ ಸಾಕಷ್ಟು ಅನ್ಯಾಯವಾಗಿದೆ. ಈಗ ಪ್ರೊ. ಬಿ. ಎಚ್. ಶ್ರೀಧರ ಅವರನ್ನೇ ಉದಾಹರಣೆಗೆ ತೆಗೆದುಕೊಳ್ಳೋಣ. ಕನ್ನಡ ಸಾಹಿತ್ಯದಲ್ಲಿ ಅವರಂತಹ ಯೋಗ್ಯತಾವಂತರು ಬೆರಳೆಣಿಕೆಯಲ್ಲೂ ಸಿಗಲಿಕ್ಕಿಲ್ಲ. ಕನ್ನಡ, ಸಂಸ್ಕೃತ, ಇಂಗ್ಲಿಷ ಭಾಷೆಗಳಲ್ಲಿ ಅದ್ಭುತ ಪಾಂಡಿತ್ಯ ಪಡೆದ ಅವರು ಸುಮಾರು ೫೬ ಕೃತಿಗಳನ್ನು ರಚಿಸಿದ್ದಾರೆ. ಅವರ ಕಾವ್ಯಸೂತ್ರ, ಜ್ಞಾನ ಸೂತ್ರ, ರಾಷ್ಟ್ರಸೂತ್ರ, ಮೂರ್ತಿಶಿಲ್ಪಶಾಸ್ತ್ರ, ಮೊದಲಾದ ಗ್ರಂಥಗಳನ್ನೆಲ್ಲ ರಚಿಸಲು ನಮ್ಮ ಮಹಾನ್ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಇನ್ನೂ ಹತ್ತು ಜನ್ಮ ಎತ್ತಿಬರಬೇಕು. ಆದರೆ ಅಂತಹ ಪ್ರಗಲ್ಭ ಪಾಂಡಿತ್ಯದ ಶ್ರೀಧರರನ್ನು ಕನ್ನಡ ಸಾಹಿತ್ಯಲೋಕ ಯಾವ ಲೆಕ್ಕಕ್ಕೂ ತೆಗೆದುಕೊಳ್ಳಲೇಇಲ್ಲ. ಅದಕ್ಕೆ ಮುಖ್ಯ ಕಾರಣ ಅವರಂತೆ ಬರೆಯುವದಿರಲಿ, ಅದನ್ನು ಓದಿ ಅರ್ಥ ಮಾಡಿಕೊಳ್ಳುವ ಶಕ್ತಿಯಿದ್ದವರೂ ವಿರಳ. ಚಿಂತಕ ಗೌರೀಶ ಕಾಯ್ಕಿಣಿಯವರು ಒಂದೆಡೆ ಸ್ಪಷ್ಟವಾಗಿ ಬರೆದಿದ್ದಾರೆ-" ಮಹಾ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರ ನಡೆದು ಬಂದ ದಾರಿಯಲ್ಲಿ ಶ್ರೀಧರರಿಗೆ ಒಂದು ಪುಟದಷ್ಟು ಸ್ಥಾನವೂ ದೊರಕಿಲ್ಲ" ಅದು ಹೋಗಲಿ, ಪ್ರೊ. ಎಲ್. ಎಸ್. ಶೇಷಗಿರಿರಾಯರ " ಹೊಸಗನ್ನಡ ಸಾಹಿತ್ಯ ಚರಿತ್ರೆ"ಯಲ್ಲಿ ಬಿ. ಎಚ್. ಶ್ರೀಧರರ ಬಗ್ಗೆ ಇದ್ದುದು ಒಂದೇಒಂದು ವಾಕ್ಯ. ಅಂದರೆ ಯಾವ ರೀತಿ ನಮ್ಮ ಸಾಹಿತ್ಯಲೋಕ ಅವರನ್ನು "ನಿಗ್ಲೆಕ್ಟ್" ಮಾಡಿದೆ ಎನ್ನುವದನ್ನು ನಾವು ಅರಿಯಬಹುದು. ಬಹುಶಃ ಕನ್ನಡದಲ್ಲಿ ಬೇಂದ್ರೆಯವರಿಗೆ ಸರಿಸಮನಾಗಿ ನಿಲ್ಲಬಲ್ಲ ಯೋಗ್ಯತೆಯನ್ನು ಹೊಂದಿದ್ದ ಒಬ್ಬ ಸಾಹಿತಿಯಿದ್ದರೆ ಅದು ಬಿ. ಎಚ್. ಶ್ರೀ ಅವರೆ. ಬೇಂದ್ರೆಯವರೇ ಅವರನ್ನು ಪ್ರಚಂಡ ಸಾಹಿತಿ ಎಂದು ಬಣ್ಣಿಸಿದ್ದಾರೆ. ಶ್ರೀಧರರ ಹಲವು ಕೃತಿಗಳಿಗೆ ಬೇಂದ್ರೆಯವರ ಮುನ್ನುಡಿಯೇ ಇದೆ. ಅದರೆ ನಮ್ಮ ಯಾವ ವಿಮರ್ಶಕರಿಗೂ ಅವರನ್ನು ಓದಿ ಅರ್ಥ ಮಾಡಿಕೊಳ್ಳಬಲ್ಲ ಶಕ್ತಿಯೇ ಇರಲಿಲ್ಲ. ಇದ್ದರೂ ಉದ್ದೇಶಪೂರ್ವಕವಾಗಿ ಅವರನ್ನು ಬದಿಗೆ ಸರಿಸಲಾಗಿದೆ. ಜಾತಿಕಾರಣವೂ ಇರಬಹುದು. ನಾನು ಶ್ರೀಧರರ ಕೆಲವು ಕೃತಿಗಳನ್ನು ಓದಿದ್ದು ನನ್ನ ಓದಿನ ಆರಂಭದ ಕಾಲದಲ್ಲಿ. ಅವರ ಹತ್ತಿರದ ಒಡನಾಟವಿತ್ತಲ್ಲದೆ ಅವರ ಕಂಟಕಾರಿ ಮಹಾಕಾವ್ಯವನ್ನು ಮೊದಲು ಪ್ರಕಟಿಸಿದ್ದು ನಮ್ಮ ಶೃಂಗಾರ ಪತ್ರಿಕೆಯಲ್ಲೇ. ನಂತರ ನಾನು ಕಲಬುರ್ಗಿಯಲ್ಲಿ ವೀರೇಂದ್ರ ಪಾಟೀಲರ ನವಕಲ್ಯಾಣ ಪತ್ರಿಕೆಯಲ್ಲಿದ್ದಾಗ ಶ್ರೀಧರರ ಹತ್ತು ಲೇಖನಗಳನ್ನು ತರಿಸಿಕೊಂಡು ಪ್ರಕಟಿಸಿದ್ದೆ. ಈಚೆಗೆ ಮತ್ತೆ ಅವರ ಎಲ್ಲ ಕೃತಿಗಳನ್ನು ಮತ್ತೆ ಓದುವ ಹಾಗೂ ಅವುಗಳ ಬಗ್ಗೆ ಬರೆಯುವ ಅವಕಾಶ ಬಂತು. ಅದು ನನ್ನ ಭಾಗ್ಯ. ಬಿ. ಎಚ್. ಶ್ರೀ. ಬೇಂದ್ರೆ, ಕಾರಂತ, ಅಡಿಗ ಮೊದಲಾದವರ ಒಡನಾಡಿ. ಆದರೆ ಸಾಹಿತ್ಯದಲ್ಲಿ ತಮ್ಮದೇ ಆದ ಬೇರೆ ಹೆದ್ದಾರಿ ನಿರ್ಮಿಸಿಕೊಂಡವರು. ಅವರ ಬರೆಹಗಳು ಬಹಳ ಗಡಚು. ಸಂಸ್ಕೃತಾಂಗ್ಲ ಭಾಷಾ ಭೂಯಿಷ್ಟ ವಿಶಿಷ್ಟ ಶೈಲಿ. ವಿಡಂಬನೆ ಮತ್ತು ಗಂಭೀರ ಸಾಹಿತ್ಯ ಎರಡರಲ್ಕೂ ಎತ್ತಿದ ಕೈ. ಬಿಗಿಯಾದ ನಿರೂಪಣೆ. ಕನ್ನಡಕ್ಕೆ ಸೂತ್ರ ಸ್ವರೂಪದ ಮೂರು ಕೃತಿ ನೀಡಿದರು. ಪೌರಾತ್ಯ ಮತ್ತು ಪಾಶ್ಚಿಮಾತ್ಯ ಸಾಹಿತ್ಯವೆರಡರಲ್ಲೂ ಆಳವಾದ ಅಧ್ಯಯನ. ರಾಜ್ಯಶಾಸ್ತ್ರ, ಶಿಲ್ಪಶಾಸ್ತ್ರ, ಮನ:ಶಾಸ್ತ್ರ, ಭಾಷಾಶಾಸ್ತ್ರ ಒಂದೇ ಎರಡೇ ಎಲ್ಲದರಲ್ಲೂ ಪರಿಣಿತರು. ಶ್ರೀಧರರನ್ನು ಅಲಕ್ಷಿಸುವದೆಂದರೆ ಕನ್ನಡದ ವಿದ್ವತ್ಪ್ರಪಂಚವನ್ನೇ ಕಡೆಗಣಿಸಿದಂತೆ. - ಎಲ್. ಎಸ್. ಶಾಸ್ತ್ರಿ