ಸಮಾಜವನ್ನು ಬೆಸೆಯುವ ಕೆಲಸ ಅಗತ್ಯ.
ಸಮಾಜವನ್ನು ಬೆಸೆಯುವ ಕೆಲಸ ಆಗಬೇಕು ಹೊರತು ಒಡೆಯುವ ಕೆಲಸ ಅಲ್ಲ ನಮ್ಮ ನಮ್ಮ ನಂಬಿಕೆಗಳು ನಮಗೆ. ಆದರೆ ಬೇರೆಯವರ ನಂಬಿಕೆಗಳನ್ನು ಹಾಳು ಮಾಡುವ ಯಾವ ಅಧಿಕಾರವೂ ನಮಗಿಲ್ಲ ಮತ್ತು ನಾವು ನಮ್ಮ ನಂಬಿಕೆಗಳ ಮೇಲೆ ಶ್ರದ್ಧೆ ವಿಶ್ವಾಸ ಇಟ್ಟುಕೊಂಡೇ ಇತರರ ನಂಬಿಕೆಗಳನ್ನೂ ಗೌರವಿಸಬೇಕು. ಗೌರವಿಸಲು ಸಾಧ್ಯವಾಗದೇ ಇದ್ದರೆ ಕನಿಷ್ಠ ಪಕ್ಷ ನಮ್ಮಷ್ಟಕ್ಕೆ ನಾವಿರಬೇಕು. ನಾವು ಕ್ರಾಂತಿಕಾರಿ ವಿಚಾರಧಾರೆಯವರೆಂದು ಜಗತ್ತಿಗೆ ತಿಳಿಸುವುದಕ್ಕಾಗಿ ಅಥವಾ ನಾವು ಪ್ರಗತಿಪರರೆಂದು ಬಿಂಬಿಸಿಕೊಳ್ಳುವುದಕ್ಕಾಗಿ ಬೇರೆಯವರ ಮನಸ್ಸು ನೋಯಿಸುವ ಮಾತುಗಳನ್ನಾಡುವುದು ಮನುಷ್ಯತ್ವದ ಲಕ್ಷಣ ಅಲ್ಲ. ಬೇರೆಯವರು ನಮ್ಮ ಬಗ್ಗೆ ಮಾತಾಡಿದರೆ ನಮಗೆ ನೋವಾಗುವಂತೆ , ನಾವು ಬೇರೆಯವರ ಬಗ್ಗೆ ಮಾತಾಡಿದಾಗಲೂ ಅವರಿಗೆ ನೋವುಂಟಾಗುತ್ತದೆಂಬ ಸಾಮಾನ್ಯ ತಿಳಿವಳಿಕೆಯೂ ಇಲ್ಲದವರು ಪ್ರಗತಿಪರರೂ ಅಲ್ಲ, ಕ್ರಾಂತಿಕಾರಿಗಳೂ ಅಲ್ಲ. ಅವರದು ಬರೀ ಭ್ರಾಂತಿವಾದ. ಅವರ ಮಾತು ವಾಂತಿಗೆ ಸಮಾನ. ಸಮಾಜದಲ್ಲಿ ಸಾವಿರ ಜನರಿದ್ದರೆ ಸಾವಿರ ಬಗೆಯ ನಂಬಿಕೆಗಳಿರುತ್ತವೆ. ನಂಬಿಕೆಗಳ ಜಗತ್ತು ಬಹಳ ವ್ಯಾಪಕವಾದದ್ದು. ಅದು ಬರೀ ದೇವರು ಧರ್ಮಕ್ಕೆ ಸಂಬಂಧಿಸಿರುತ್ತದೆ ಎಂದೇನಲ್ಲ. ನಮ್ಮ ಪ್ರತಿಯೊಂದು ಆಚಾರವಿಚಾರ, ನಡೆನುಡಿ, ರೂಢಿರಿವಾಜು, ಪದ್ಧತಿಪರಂಪರೆ ಮೊದಲಾದವುಗಳೆಲ್ಲವೂ ಮನುಷ್ಯರ ನಂಬಿಕೆ, ವಿಶ್ವಾಸಗಳ ಆಧಾರದ ಮೇಲೆಯೇ ನಡೆಯುತ್ತಿರುತ್ತವೆ . ಅಜ್ಞಾನದಿಂದ ಮೂಢ ನಂಬಿಕೆಗಳನ್ನು ಅನುಸರಿಸುವವರೂ ಸಮಾಜದಲ್ಲಿರುತ್ತಾರೆ. ಅವರನ್ನು ತಿದ್ದಿ ತೀಡಿ ಅವರ ತಿಳಿವಳಿಕೆಯನ್ನು ಬದಲಾಯಿಸುವುದು ನಿಜವಾದ ಸಮಾಜ ಸುಧಾರಣೆಯ ಕೆಲಸ. ಅದನ್ನು ಮಾಡಬೇಕು ಹೊರತು ಅಸಂಬದ್ಧ ಮಾತುಗಳನ್ನಾಡುತ್ತ ಪರರ ನಂಬಿಕೆಗಳ ಮೇಲೆ ದಾಳಿ ಮಾಡಿ ಅವರ ಮನಸ್ಸಿಗೆ ನೋವು ಉಂಟುಮಾಡುವುದು ಅವಿವೇಕಿಗಳ ಕೆಲಸ. ಅವರು ಕಾವಿ ತೊಟ್ಟರೂ ಒಂದೇ, ಖಾದಿ, ಖಾಕಿ ತೊಟ್ಟರೂ ಒಂದೇ. ಆ ಬಟ್ಟೆಯ ಪಾವಿತ್ರ್ಯ ನಾಶವಾಗುತ್ತದೆ. ಸಮಾಜವನ್ನು, ಜನರ ಮನಸ್ಸನ್ನು ಆದಷ್ಟು ಹೆಚ್ಚು ಬೆಸೆಯುವ ಕೆಲಸಕ್ಕೆ ನಿಜವಾದ ಸಮಾಜ ಹಿತೈಷಿಗಳು ಪ್ರಯತ್ನಿಸಬೇಕೇ ಹೊರತು ಒಡೆಯುವ ಕೆಲಸವನ್ನಲ್ಲ. ನಮ್ಮ ಒಂದೇ ಒಂದು ಮಾತಿನಿಂದ ಆಗುವ ಪರಿಣಾಮವೇನು ಎಂದು ನಾವು ಯೋಚಿಸಬೇಕು. ಸಾಮಾಜಿಕ ಶಾಂತಿ ನೆಮ್ಮದಿಗಳನ್ನು ಕದಡುವಂತೆ ಮಾಡುವುದು ಸಮಾಜದ್ರೋಹಿಗಳು ಮಾಡುವ ಕೆಲಸ. ರಾಜಕಾರಣಿಗಳಿಗೆ ಪ್ರಚಾರದ ಹುಚ್ಚು ಇರುವುದು ಸಹಜ. ಆದರೆ ಮಠಪೀಠಾಧಿಪತಿಗಳೆಲ್ಲ ಅಗ್ಗದ ಪ್ರಚಾರಕ್ಕೆ ಹಪಹಪಿಸಬಾರದು. ಸಾಧುಸಂತರ ಮಠಪೀಠಗಳ ಕೆಲಸ ಏನು ಎನ್ನುವುದನ್ನು ನಮ್ಮ ಹಿಂದಿನ ಪೀಠಾಧಿಪತಿಗಳೆಲ್ಲ ತೋರಿಸಿಕೊಟ್ಟಿದ್ದಾರೆ. ಅವರಂತೆ ಇಂದು ಭಕ್ತಿ ಗೌರವ ಉಳಿಸಿಕೊಂಡಿರುವವರು ಎಷ್ಟು ಜನ ಸಿಕ್ಕಾರು? ಸಮಾಜವನ್ನು ಒಂದುಗೂಡಿಸಿ ಭಕ್ತಿ ಶ್ರದ್ಧೆ ನೀತಿಗಳ ಸನ್ಮಾರ್ಗ ತೋರಿಸುವವರಾದರೂ ಯಾರು? ಭ್ರಷ್ಟ ರಾಜಕಾರಣಿಗಳ ಜತೆಗೆ ಕಾಣಿಸಿಕೊಳ್ಳುವುದು, ರಾಜಕಾರಣಿಗಳ ಮನೆಗೆ ಹೋಗುವುದು, ಜಾತಿರಾಜಕಾರಣ ಮಾಡುವುದು ಇವೆಲ್ಲ ಸ್ವಾಮಿಗಳೆಂದು ಹೇಳಿಕೊಳ್ಳುವವರಿಗೆ ಗೌರವ ತರುವ ಕೆಲಸವೆ? ಇದೆಲ್ಲ ಹೇಳುವವರೆ ಇಂದು ಕೆಟ್ಟವರೆನಿಸಿಕೊಳ್ಳುತ್ತಾರೆ. ಸತ್ಯ ಕಹಿಯಾಗಿಯೆ ಇರುತ್ತದೆ. ಅದನ್ನು ಇಷ್ಟ ಪಡುವವರು ಕಡಿಮೆ. ಅಂದ ಮಾತ್ರಕ್ಕೆ ಸತ್ಯ ಸುಳ್ಳಾಗಲಾರದು. ಸತ್ಯ ಯಾವತ್ತಿದ್ದರೂ ಸತ್ಯವೇ. ನನಗೆ ಹೇಳಬೇಕೆನಿಸಿದ್ದನ್ನು ನಾನು ಹೇಳದೇ ಇರಲಾರೆ. ಎಲ್.ಎಸ್.ಶಾಸ್ತ್ರಿ