top of page

ಸದಾ ಕಾಡುವ ಪಂಜಾಜೆ..

ಈ ಪಂಜಾಜೆ ಯಾಕೆ ಹೀಗೆ ಕಾಡ್ತಾ ಇದ್ದಾನೆ....!! ಆತ ನನ್ನ ಹತ್ತಿರದ ಬಂಧುವೂ ಅಲ್ಲ, ಬಾಲ್ಯಕಾಲ ಒಡನಾಡಿಯೂ ಅಲ್ಲ. ಪ್ರಾಯಷಃ ಅದಕ್ಕಿಂತ ಹೆಚ್ಚಿನದ್ದು ಏನೋ ಇರಬೇಕು. ಅವ್ಯಕ್ತವಾದ ಒಂದು ಬಂಧ ಸುತ್ತಿಕೊಂಡಿರಬೇಕು. "ಪಂಜಾಜೆ ಇನ್ನೂ ಇದ್ದಾನೆ... ನನ್ನೊಳಗೆ... ನಮ್ಮೊಳಗೆ ಜೀವಂತವಾಗಿದ್ದಾನೆ... " ಹೀಗೆ ಎಷ್ಟೇ ಸಮಾಧಾನ ಪಟ್ಟುಕೊಂಡರೂ .... ಮತ್ತೂ ಏನೋ ಕಸಿವಿಸಿ.   ಸೂರ್ಯನಾರಾಯಣ ಪಂಜಾಜೆ ಎನ್ನುವ ಈ ವ್ಯಕ್ತಿಯನ್ನು ಮೊದಲು ನೋಡಿದ್ದು ಎಡನೀರು ಮಠದಲ್ಲಿ. ಯಕ್ಷಗಾನ ರಂಗಸ್ಥಳದಲ್ಲಿ. ಉಳಿದ ಪಾತ್ರಗಳ ಏಕತಾನತೆಯ ನಡುವೆ ಪಂಜಾಜೆಯ ಪಾತ್ರ ಗಮನಸೆಳೆದಿತ್ತು. ಪಾತ್ರ ಯಾವುದೆಂದು ನೆನಪಿಲ್ಲ. ಯಾವುದೋ ರಾಕ್ಷಸ ಖಳ ಪಾತ್ರ. " ತೊಂದ್ರೆ ಇಲ್ಲ ಈ ಮಾಣಿ ಹುಶಾರಿದ್ದಾನೆ... ಸರಿಯಾಗಿ ಅದ್ಯಯನ, ಅಭ್ಯಾಸ ಮಾಡಿದ್ರೆ.... ಒಳ್ಳೆ ವೇಷಧಾರಿ ಆದಾನು..." ಅಂತ ಅಪ್ಪಯ್ಯ ಹೇಳಿದ್ದರು. ದೇರಾಜೆ ಮಾವನ ಈ ಸರ್ಟಿಫಿಕೆಟು ಪಂಜಾಜೆಗೆ ತುಂಬಾ ಖುಶಿಯಾಯ್ತು.    ಮರುದಿನ ಆತ ನಮ್ಮ ಬ್ಯಾಂಕಿನ ಹಿರಿಯ ಕಾನೂನು ಅಧಿಕಾರಿ ಹರಿಯಪ್ಪ ಭಟ್ಟರ ಅಳಿಯ ಎನ್ನುವುದು ಗೊತ್ತಾಯ್ತು. ಈ ಹರಿಯಪ್ಪಣ್ಣನ ಅಳಿಯ ಹೆಚ್ಚು ಇಷ್ಟ ಆದ.   ಮತ್ತೆ ಮಠದಲ್ಲಿ ಆಗಾಗ ಕಾಣಲು ಸಿಗುತ್ತಿದ್ದ ಈ ಪಂಜಾಜೆ ಸೂರ್ಯನಾರಾಯಣ, ಹಗಲು ಹೊತ್ತಿನ ಲೊಟ್ಟೆಪಟ್ಟಾಂಗಕ್ಕೆ ಒಳ್ಳೆಯ ಜೊತೆಯಾದ. ಸಲಿಗೆಯೂ ಬೆಳೆಯಿತು. ಆದರೆ ಬಹಳ ವರ್ಷಗಳ ವರೆಗೆ "ಹರಿಯಪ್ಪಣ್ಣನ ಅಳಿಯ" ಎಂದೇ ನೆನಪಲ್ಲಿ ಉಳಿದದ್ದು.   ಆ ಮೇಲೆ ನಾನು ಬ್ಯಾಂಕಿಗೆ ಸೇರಿದೆ. ಪಂಜಾಜೆಯೂ ಎಡನೀರಿಗೆ ಬರುವುದು ಕಡಿಮೆಯಾಯ್ತು. ನಾವು ಪರಸ್ಪರ ಭೇಟಿಯಾಗಲೇ ಇಲ್ಲ. ಪಂಜಾಜೆ ಹೊಟ್ಟೆಪಾಡಿಗಾಗಿ ಎಲ್ಲೆಲ್ಲೋ ಅಲೆದಾಡ್ತಾ ಇದ್ದನಂತೆ. ಇನ್ಶೂರೆನ್ಸ್ ಏಜೆಂಟ್ ಆಗಿ, ಅಂಗಡಿ ನಡೆಸಿ, ಹೋಟೆಲು ನಡೆಸಿ ಬದುಕು ಸಾಗಿಸ್ತಾ ಇದ್ದನಂತೆ. ಘಟ್ಟದ ಮೇಲೆ ಬಾರ್ ಎಂಡ್ ರೆಸ್ಟೋರೆಂಟ್ ಕೂಡಾ ನಡೆಸಿದ್ದ. ಗಣಹೋಮ ಮಾಡಿಸಲು ಹೋದ ನಮ್ಮ ಪುರೋಹಿತರು ಹೇಳಿ ನನಗೆ ಗೊತ್ತಾದದ್ದು. ಅವರು ಸಂಪ್ರದಾಯಸ್ತ ಸಜ್ಜನ ಪುರೋಹಿತರು. ಪಂಜಾಜೆಯದ್ದು ಅವರಿಗೆ ರಾಜೋಪಚಾರವಂತೆ. ಉತ್ತಮ ಸಂಭಾವನೆಯನ್ನು ನೀಡಿ, ಬ್ರಾಹ್ಮಣರ ಮನೆಯೊಂದರಲ್ಲಿ ಊಟದ ವ್ಯವಸ್ಥೆಯನ್ನೂ ಮಾಡಿಸಿ,  ಬಸ್ ಚಾರ್ಜಿನ ಎರಡು ಪಾಲು ಮೊತ್ತವನ್ನೂ ಕಿಸೆಗೆ ಹಾಕಿ ಕಳಿಸಿಕೊಟ್ಟಿದ್ದನಂತೆ.   ಈ ಸೂರ್ಯನಿಗೂ "ಕುಡಿಯುವ " ಅಭ್ಯಾಸ ಉಂಟೇನೋ ಅಂತ ಸಂದೇಹ ಬಂದು, ನೇರ ಅವನಲ್ಲೇ ಕೇಳಿದ್ದರಂತೆ ಈ ಮುಗ್ಧ, ಸಜ್ಜನ ಪುರೋಹಿತರು. ಅದಕ್ಕೆ ಪಂಜಾಜೆ .....  " ಆನು ಕುಡಿವಲೆ ಸುರು ಮಾಡಿದರೆ ವ್ಯಾಪಾರ ಅಪ್ಪದು ಹೇಂಗೆ ಭಟ್ಟ ಮಾವಾ,  ಆನು ಎರಡೇ ದಿನಲ್ಲಿ ಬಾಗಿಲು ಹಾಕೆಕ್ಕಷ್ಟೆ .." ಎಂದಿದ್ದನಂತೆ. ಪಂಜಾಜೆ ನೇರ ಮನುಷ್ಯ,  ಅಡಗಿಸಿಡುವ ಸ್ವಭಾವದವ ಅಲ್ಲ ಎಂದು ಪುರೋಹಿತರಿಗೆ ಗೊತ್ತಿತ್ತು.   ಮತ್ತೆ ಯಾವುದೋ ಒಂದು ಸಿನೇಮದಲ್ಲಿ ಪಂಜಾಜೆ ಪಾತ್ರವಹಿಸಿದ ಫೊಟೊ ಒಂದು ಪತ್ರಿಕೆಯಲ್ಲಿ ಬಂತು. ಯಾವುದೋ ನಾಟಕದ ಜಾಹೀರಾತಿನಲ್ಲಿ ಪಂಜಾಜೆಯ ಹೆಸರು ಕಂಡಿತು. ಯಾವುದೋ ಕೇಸಿನಲ್ಲಿ ಜೈಲಿಗೂ ಹೋದ ಎನ್ನುವ ಸುದ್ದಿಯನ್ನೂ ಕೇಳಿದೆ. ದಿಗ್ಭ್ರಾಂತನಾಗಿದ್ದೆ. ಪಂಜಾಜೆ ಖಂಡಿತಾ ತಪ್ಪು ಮಾಡಿರಲಾರ ಎಂದು ನನ್ನ ಮನಸ್ಸು ಹೇಳುತ್ತಿತ್ತು. ಆದರೆ ನಮ್ಮ ಭೇಟಿ ಆಗಿರಲೇ ಇಲ್ಲ.   ವರ್ಷದ ನಂತರ ದೆಹಲಿಯಲ್ಲಿ ಅನಿರೀಕ್ಷಿತವಾಗಿ ಪಂಜಾಜೆ ಸಿಕ್ಕಿದ್ದ. ನನ್ನ ಮನಸ್ಸನ್ನು ಕೊರೆಯುತ್ತಿದ್ದ ವಿಚಾರವನ್ನು ನೇರ ಅವನಲ್ಲೇ ಕೇಳಿದೆ.  "ಎಂತ ಮಾಡುದು ...!! ಎನ್ನ ಗ್ರಾಚಾರ ಅಷ್ಟೆ. ಆರಿಂದೋ ಕಿತಾಪತಿ. ಜೈಲಿಗೆ ಹೋದ್ದು ಆನು. ಆರು ಹೇಳಿ ಗೊಂತಿದ್ದು. ಆದರೆ ಎನ್ನತ್ತರೆ ಪ್ರೂಫ್ ಇಲ್ಲೆ...." ಅಂತ ಹೇಳಿದ. " ಯಾರು...?" ಅಂತ ಕೇಳಿದೆ. " ಆರಾದರೆ ಎಂತ...!! ಎನ್ನ ಹತ್ತರಾಣವ್ವೇ... ಈಗ ಆನು ಹೇಳಿದರೆ ಆರು ನಂಬುತ್ತಾ....!! ಹೇಂಗಾದರೂ ಮುಗುದ ಕತೆ ಅದು, ಕೇಸು ನಿಂದಿದಿಲ್ಲೆ ... ಅವ್ವು ಚಂದಕ್ಕೆ ಇರಲಿ..." ಅಂತ ಹೇಳಿದ.   ಆ ಮೇಲೆ ಪಂಜಾಜೆ ಬೆಂಗಳೂರಿನಲ್ಲಿ ಹೋಗಿ ನೆಲೆಸಿದ. ಯಕ್ಷಗಾನವನ್ನು ಬಿಡಲಿಲ್ಲ. ಅಲ್ಲೇ ಒಂದು ಸಮಾನಾಸಕ್ತರ ತಂಡ ಮಾಡಿಕೊಂಡ. ಆಸಕ್ತರಿಗೆ ಯಕ್ಷಗಾನ ತರಬೇತಿಗಳನ್ನು ವ್ಯವಸ್ತೆ ಮಾಡಿದ. ಊರಿನಿಂದ ಕಲಾವಿದರನ್ನು ಕರೆಸಿ ಟೌನ್ ಹಾಲ್, ಕಲಾಕ್ಷೇತ್ರಗಳಲ್ಲಿ ಪ್ರದರ್ಶನ ವ್ಯವಸ್ತೆ ಮಾಡಿದ.   ಹೊಟ್ಟೆಪಾಡಿಗೆ ಕ್ಯಾಂಟೀನ್, ಕೇಟರಿಂಗ್, ಇನ್ಶೂರೆನ್ಸ್ ಜೊತೆಗೆ ದೂರದರ್ಶನಕ್ಕೆ ಕಾರ್ಯಕ್ರಮ ಒದಗಿಸಿಕೊಡುವುದು. ಅದಕ್ಕೆ ಇವನಿಗೆ ಕಮಿಷನ್ ಸಿಗುತ್ತಿತ್ತು. ನಮ್ಮ ದಕ್ಷಿಣ ಕನ್ನಡದ ಅನೇಕ ಕಲಾವಿದ,ಸಾಹಿತಿಗಳ ಸಂದರ್ಶನವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಿಸಿದ. ಕೆಲವರು "ಟಿವಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಚಪಲ ಇದ್ದವರು ತಾವೇ ಕಮಿಷನ್ ಕೊಡುತ್ತಿದ್ದರಂತೆ.   ಬೆಂಗಳೂರಿನ ಸಾಂಸ್ಕೃತಿಕ ಲೋಕದೊಳಗೇ ಇದ್ದುದರಿಂದ ಕಲಾವಿದರ, ಸಾಹಿತಿಗಳ, ಅಧಿಕಾರಿಗಳ ಪರಿಚಯ ಆಯ್ತು. ಅನೇಕ ಯಕ್ಷಗಾನ ಕಲಾವಿದರಂತೂ ಅವರಾಗಿ ಪಂಜಾಜೆಯ ಪರಿಚಯ ಮಾಡಿಕೊಂಡರು. ಪಂಜಾಜೆ ಎಲ್ಲರಿಗೂ ತನ್ನಿಂದಾದ ಉಪಕಾರವನ್ನು ಮಾಡಿದ. ಬೆಂಗಳೂರಿನಲ್ಲೇ ನೆಲೆಯಾದ.   ನಮ್ಮ ಒಂದು ಮಕ್ಕಳ ನಾಟಕವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲು ಒತ್ತಾಯದಿಂದ  ನನ್ನನ್ನು ಒಪ್ಪಿಸಿ, ಅಳಿಕೆ ಶಾಲೆಯ ಮಕ್ಕಳ ತಂಡವನ್ನು ಕರೆಸಿ, ಒಂದು ನಾಟಕವನ್ನು ಪ್ರಸಾರ ಮಾಡಿಸಿದ.   ನನ್ನ ಒಂದು ಸಂದರ್ಶನವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಿಸಿದ. ನನ್ನ ಟಿ.ಎ., ಡಿ.ಎ. ... ದೂರದರ್ಶನದಿಂದ ಪಾವತಿಯಾಗಿದ್ದರೂ,  ಬೆಂಗಳೂರಿನಲ್ಲಿ ತನ್ನ ಮನೆಯಲ್ಲೇ ಉಳಿಸಿಕೊಂಡು, ನನ್ನ ಆತಿಥ್ಯವನ್ನು ಅವನೇ ನೋಡಿಕೊಂಡ. "ಎನಗೆ ಎಲ್ಲಾ ದೂರದರ್ಶನ ಕೊಡ್ತನ್ನೇ..  ಆನು ಹೋಟೇಲಿಲೇ ನಿಲ್ತೆ... ನೀನೆಂತಕೆ ಖರ್ಚು ಮಾಡುದು..." ಎಂದಾಗ "ಆನು ಎನ್ನ ಜೋಸ್ತಿಗೆ ಖರ್ಚು ಮಾಡುದೋಂ... ಊರಿಂಗೆ ಬಂದಿಪ್ಪಾಗ ಎನ್ನ ಖರ್ಚೆಲ್ಲಾ ನಿನ್ನದೇ..." ಎಂದಿದ್ದ.   "ಕುಬಣೂರು ಬಾಲಕೃಷ್ಣ ರಾಯರ ಶತಮಾನೋತ್ಸವ" ವನ್ನು ಬೇರೆ ಬೇರೆ ಕಡೆ ಆಯೋಜಿಸಿದ್ದ. ಹಾಗೆ ಬೇರೆ ಬೇರೆಯವರ ಸಂಸ್ಮರಣಾ ಕಾರ್ಯಕ್ರಮ ಏರ್ಪಡಿಸಿದ್ದ.   ನನ್ನ ಅಪ್ಪಯ್ಯ ದೇರಾಜೆಯವರ ಜನ್ಮ ಶತಮಾನೋತ್ಸವವನ್ನು ಆಚರಿಸಲು ಮುಖ್ಯ ಕಾರಣ ಪಂಜಾಜೆ. ಅವನೇ ಅದರ ನೇತೃತ್ವ ವಹಿಸಿ ನಾಡಿನಾದ್ಯಂತ ಅಭಿಮಾನಿಗಳನ್ನು ಸಂಪರ್ಕಿಸಿ, ಬೇರೆ ಬೇರೆ ಕಡೆ ಕಾರ್ಯಕ್ರಮಗಳನ್ನು ಆಯೋಜಿಸಿ, ಒಟ್ಟು ಮೂವತ್ತು ಕಾರ್ಯಕ್ರಮಗಳನ್ನು ಒಂದು ವರ್ಷದಲ್ಲಿ ಏರ್ಪಡಿಸಿ, ಅದ್ಧೂರಿಯಾಗಿ ಬೆಂಗಳೂರಿನಲ್ಲೇ ಸಮಾರೋಪವನ್ನು ನಡೆಸಿದ.   ಒಂದು ಅಕಾಡೆಮಿ ಮಾಡಬೇಕಾದ ಕೆಲಸವನ್ನು ತಾನೊಬ್ಬನೇ ಮಾಡಿದವನು ಪಂಜಾಜೆ. ವರ್ಷಕ್ಕೊಂದರಂತೆ ಹದಿನಾಲ್ಕು "ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನ"ಗಳನ್ನು ತನ್ನ "ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ(ರಿ) ಬೆಂಗಳೂರು" ಸಂಸ್ಥೆಯ ಮೂಲಕ ರಾಜ್ಯದ ವಿವಿದೆಡೆಗಳಲ್ಲಿ ಏರ್ಪಡಿಸಿದ. ಅನಾಮದೇಯರಾಗಿ ಮೂಲೆಯಲ್ಲಿ ಎಲ್ಲೋ ಇದ್ದ ದೊಡ್ಡಾಟ,ಸಣ್ಣಾಟ, ಘಟ್ಟದಕೋರೆ, ಪಾರಿಜಾತ ಮುಂತಾದ ಯಕ್ಷಗಾನದ ವಿವಿದ ಪ್ರಕಾರಗಳ ಕಲಾವಿದರನ್ನು ಕರೆಸಿ ಪ್ರೋತ್ಸಾಹಿಸಿದ. ಅವಕಾಶವೇ ಸಿಗದ ಆ ಕಲಾವಿದರ ಪಾಲಿಗೆ  ಪಂಜಾಜೆ ದೇವರೇ ಆದ. ಶಾಲೆಯ ಮೆಟ್ಟಲನ್ನು ಹತ್ತದ ಆ ಕಲಾವಿದರು ಪಂಜಾಜೆಯ ಕಾಲುಮುಟ್ಟಿ ನಮಸ್ಕರಿಸಿದ್ದು ಕಂಡು ಮನಸ್ಸು ತುಂಬಿಬಂದಿತ್ತು.   "ದೇರಾಜೆಯವರ ಮಕ್ಕಳು... ಯಕ್ಷಗಾನದ ನೆರಳಿನಲ್ಲೇ ಬೆಳೆದು ಬಂದವರು.." ಎನ್ನುವ ಕಾರಣದಿಂದ ನನ್ನನ್ನೂ, ನನ್ನ ತಂಗಿ,ಇಂದಿರಾ ಜಾನಕಿಯನ್ನೂ  ಸಮ್ಮೇಳನದಲ್ಲಿ ಪ್ರಬಂಧ ಮಂಡನೆ ಮಾಡುವಂತೆ ಮೊದಲಿಂದಲೂ ಒತ್ತಾಯಿಸುತ್ತಾ ಇದ್ದ. "ದೇರಾಜೆಯವರ ಮರ್ಯಾದೆ ಹೋದೀತು..." ಎಂದು ಹೇಳಿ ತಪ್ಪಿಸಿಕೊಳ್ಳುತ್ತಾ ಇದ್ದೆವು.   ಸಾಣೆಹಳ್ಳಿಯಲ್ಲಿ ಸಮ್ಮೇಳನ ನಡೆದಾಗ "ಅದು ನಾಟಕದ ಕ್ಷೇತ್ರ, ನಾಟಕ - ಯಕ್ಷಗಾನದ ಸಂಬಂದಲ್ಲಿ ಮೂರ್ತಿ ಮಾತಾಡುಗು..." ಅಂತ ನನ್ನಲ್ಲಿ ಹೇಳದೇ ಕರಪತ್ರದಲ್ಲಿ ನನ್ನ ಹೆಸರು ಹಾಕಿದ. ಈ ಸರ್ತಿ ನೀನು ಬಾರದ್ದರೆ ದೇರಾಜೆ ಮಾತ್ರ ಅಲ್ಲ ದೇರಾಜೆಯ ಮಗಂದೂ ಮರ್ಯಾದೆ ಹೋಕು..." ಅಂತ ಹೇಳಿದ್ದ. ಹಾಗೆ ಹೆದರಿ ಹೆದರಿ ಪ್ರಬಂಧ ಮಂಡನೆ ಮಾಡಿದವ ನಾನು. ಅಲ್ಲಿ ಯಕ್ಷಗಾನದವರಿಗೂ, ನಾಟಕದವರಿಗೂ ಆ ಪ್ರಬಂಧ ಇಷ್ಟವಾದದ್ದು ಕಂಡು ನನಗೂ ಖುಶಿ ಆಯ್ತು. ಇದಕ್ಕೆ ಕಾರಣನಾದ ಪಂಜಾಜೆಗೆ ಕೇವಲ ಒಂದು ಧನ್ಯವಾದ ಹೇಳಿ ಮುಗಿಸಲು ಸಾದ್ಯವೇ..?       "ಹದಿನೈದನೇ ಸಮ್ಮೇಳನ ಧರ್ಮಸ್ಥಳಲ್ಲಿ. ಅಲ್ಲಿ ಇಂದಿರಾಜಾನಕಿಯ ಹೆಸರು ಕರಪತ್ರಲ್ಲಿ ಹಾಕುಲಿದ್ದು. "ದೇರಾಜೆಯ ಮಗಳು" ಹೇಳಿ ಗೊಂತಾಯೆಕ್ಕು..." ಅಂತ ಹೇಳಿದ್ದ.   ಅವನ ಅಪೇಕ್ಷೆಯ ಅ ಹದಿನೈದನೇ ಸಮ್ಮೇಳನ ನಡೆಯಲೇ ಇಲ್ಲ. ಕನಿಷ್ಟ ಅದಾದರೂ ನೆರವೇರಬೇಕಿತ್ತು ಎನ್ನುವುದು ಅವನ ದೊಡ್ಡ ಬಳಗವಾದ ನಮ್ಮೆಲ್ಲರ ಮನಸ್ಸಿನಲ್ಲಿ ಕಾಣ್ತಾ ಇರುವುದು. ಆದರೆ ಪಂಜಾಜೆಗೆ  ಅಂತಹ ಬಹು ದೊಡ್ಡ ಆಸೆಗಳೇನೂ ಇದ್ದಿರಲಾರದು. ಯಾಕೆಂದರೆ ಅವನ ಸ್ವಭಾವವೇ ಹಾಗೆ. ಯಾವುದನ್ನೂ ಅಂಟಿಸಿಕೊಳ್ಳುವ ಜನವೇ ಅಲ್ಲ. ಹೇಗಾಯ್ತೋ ಹಾಗೆ ಎಂದು ಸದಾ ವರ್ತಮಾನದಲ್ಲೇ ಬದುಕಿದವನು. ಕಳೆದು ಹೋದದ್ದರ ಬಗ್ಗೆ ಚಿಂತೆ ಮಾಡಿದವನೂ ಅಲ್ಲ, ಭವಿಷ್ಯದ ಬಗ್ಗೆ ಆಸೆ ಇಟ್ಟುಕೊಂಡವನೂ ಅಲ್ಲ.   ಕೈಯಲ್ಲಿ ದುಡ್ಡಿದ್ದರೆ ಆತ ಒಬ್ಬ ರಾಜನೆ.  ಕೇಳಿದವರಿಗೆ ಕೇಳಿದಷ್ಟೂ ಕೊಟ್ಟಾನು.  ಕೈಯಲ್ಲಿ ಇಲ್ಲವಾದರೆ ಏನಾದರೂ ವ್ಯವಸ್ತೆ ಮಾಡಿಕೊಂಡು ಯಾರಿಗೂ ತಿಳಿಯದಂತೆ ಇದ್ದಾನು. ಕೊಡಬೇಕಾದ ಹಣವನ್ನು ಕೊಡುವಾಗ ತುಂಬಾ ತಡವಾದದ್ದೂ ಇದೆ. ಆದರೆ ಕೊಡದೇ ಮೋಸ ಮಾಡುವ ಸ್ವಭಾವ ಅವನದಲ್ಲ.   ಪಂಜಾಜೆ ತನ್ನ ಬದುಕಿನಲ್ಲಿ ಬಹಳ ಕಷ್ಟ ನಷ್ಟಗಳನ್ನು ಅನುಭವಿಸಿದ್ದಾನೆ ನಿಜ. ಆದರೆ ಪಂಜಾಜೆ ಅದನ್ನೆಲ್ಲ ಹಚ್ಚಿಕೊಂಡವನೇ ಅಲ್ಲ.   ಅವನಿಂದ ಪ್ರಯೋಜನ ಪಡೆದವರೇ ಹಿಂದಿನಿಂದ  ಪಂಜಾಜೆ ಹಾಗೆ..ಹೀಗೆ... ಅಂತ ಆಡಿಕೊಂಡವರು ಅನೇಕರಿದ್ದಾರೆ.  ಆ ವಿಷಯ ಗೊತ್ತಾದಾಗ ಪಂಜಾಜೆ ಮುಕ್ತವಾಗಿ ಒಂದು ನಗು ನಕ್ಕು.... ತೊಂದರೆ ಇಲ್ಲೆ ... ಅವ್ವು ಚಂದಕ್ಕೆ ಇರಲಿ" ಎನ್ನುತ್ತಿದ್ದ. ಅಂತವರಿಗೂ ಮತ್ತೆ ಮತ್ತೆ ಸಹಾಯ ಮಾಡುತ್ತಿದ್ದ. ವಿಷವಿಲ್ಲದ ಪ್ರೀತಿಯನ್ನು ಎಲ್ಲರಿಗೂ ಹಂಚಿದ.   ಇತ್ತೀಚೆಗೆ ಯಾವುದೋ ಔತಣಕೂಟದ ಬಫೆ ಊಟಕ್ಕೆ ಸರದಿಯಲ್ಲಿ ನಿಂತಾಗ, ಹಿಂದೆ ಇದ್ದ ನನ್ನನ್ನು ತನ್ನ ಮುಂದೆ ನಿಲ್ಲಿಸಿ,   "ನೀನು ಎನ್ನಂದ ಹಿರಿಯ..... ಹಾಂಗಾಗಿ ಮೊದಲು ನೀನು...ಮತ್ತೆ ಆನು..." ಎಂದು ನಗಾಡಿದ್ದ. ಆದರೆ ಅದನ್ನು ಪಂಜಾಜೆ ಯಾಕೆ ಮರೆತ ...?   ಮೂರ್ತಿ ದೇರಾಜೆ ೧ ಜೂನ್ ೨೦೨೩

ಸದಾ ಕಾಡುವ ಪಂಜಾಜೆ..

©Alochane.com 

bottom of page