top of page

ಸತ್ವಪೂರ್ಣ ಬರೆಹಗಾರ್ತಿ ಡಾ. ಅನುಪಮಾ ನಿರಂಜನ

ಮರೆಯಲಾಗದ ಮಹಾನುಭಾವರು-೩೫ ಕನ್ನಡದ ಲೇಖಕಿಯರಲ್ಲಿ ಡಾ. ಅನುಪಮಾ ನಿರಂಜನ ಅವರದೇ ಒಂದು‌ ಪ್ರತ್ಯೇಕ ದಾರಿ. ಅವರು ವೈದ್ಯಲೇಖಕಿ. ಕನ್ನಡಕ್ಕೆ ಅಪರೂಪದ ಸಾಹಿತ್ಯವನ್ನು ನೀಡಿ ಹೆಸರು ಪಡೆದವರು. ಅವರ ಪತಿ ನಿರಂಜನ ( ಕುಳಕುಂದ ಶಿವರಾಯ) ಕನ್ನಡದ ಖ್ಯಾತ ಕಾದಂಬರಿಕಾರರಲ್ಲೊಬ್ಬರು. ಕಟ್ಟಾ ಕಮ್ಯುನಿಸ್ಟ್ ನಿಲುವಿನ ಬರೆಹಗಾರರು. ಇವರದು ಅಂತರ್ಜಾತೀಯ ವಿವಾಹ. ತೀರ್ಥಹಳ್ಳಿಯ ವೆಂಕಟಲಕ್ಷ್ಮಿ ಅಂದರೆ ಅನುಪಮಾ ಜನಿಸಿದ್ದು ೧೯೩೪ ರ ಮೇ ೧೭ ರಂದು. ಪ್ರಗತಿಶೀಲ ಬಂಡಾಯ ಮನೋಧರ್ಮದ ಅವರು ತಮ್ಮ ಜಾತಿಯವರಲ್ಲದ ನಿರಂಜನರನ್ನು ಮದುವೆಯಾಗಿ ಆ ಕಾಲದಲ್ಲಿ ಸಮಾಜದ ವಿರೋಧವನ್ನೂ ಎದುರಿಸಿದವರು. ಮನೋವೈಜ್ಞಾನಿಕ ವಿಶ್ಲೇಷಣೆಯ ಬರೆಹಗಳತ್ತ ಆಸಕ್ತರಾದ ಅವರು ೨೫ ಕಾದಂಬರಿಗಳನ್ನು, ೯ ಕಥಾ ಸಂಕಲನಗಳನ್ನು, ೧೩ ಆರೋಗ್ಯವಿಜ್ಞಾನ ಪುಸ್ತಕಗಳನ್ನು, ಅಲ್ಲದೇ ಪ್ರವಾಸ ಕಥನ, ನಾಟಕ, ಅನುವಾದ ಕೃತಿಗಳನ್ನು ನೀಡಿದರು. ‌‌ ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಮಕ್ಕಳಿಗೆ ಅವರು ನೀಡಿದ ಕೊಡುಗೆ ಬಹಳ ದೊಡ್ಡದು. ದಿನಕ್ಕೊಂದು ಕಥೆ ಎಂಬ ತಲೆಬರೆಹದಡಿ ಒಂದು ವರ್ಷ ಅಂದರೆ ೩೬೫ ಕಥಗಳನ್ನು ಮಕ್ಕಳಿಗಾಗಿ ಬರೆದರು. ಅವು ೧೨ ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಪುರಾಣಕಥೆಗಳು, ಜಾನಪದ ಕಥೆಗಳು, ವಿದೇಶಿ‌ಕಥೆಗಳು ಎಲ್ಲವೂ ಅವುಗಳಲ್ಲಿದ್ದು ಮಕ್ಕಳಿಗೆ ಮಾರ್ಗದರ್ಶಕವಾಗಿವೆ. ಅನಂತಗೀತ, ಶ್ವೇತಾಂಬರಿ, ಹಿಮದ ಹೂ, ಆಳ, ದಿಟ್ಟೆ, ಆಕಾಶಗಂಗೆ, ಘೋಷ, ಹೃದಯವಲ್ಲಭ, ನಟಿ, ಕಣಿವೆಗೆ ಬಂತು‌ಬೇಸಿಗೆ, ಋಣಮುಕ್ತಳು ಮೊದಲಾದ ಕಾದಂಬರಿಗಳು, ದಾಂಪತ್ಯ ದೀಪಿಕೆ, ವಧುವಿಗೆ ಕಿವಿಮಾತು, ಕೇಳು ಕಿಶೋರಿ, ತಾಯಿ ಮಗು, ಆಹಾರದಿಂದ ಆರೋಗ್ಯ ಇತ್ಯಾದಿ ಆರೋಗ್ಯ ಸಂಬಂಧಿತ ಪುಸ್ತಕಗಳು , ಮಾಧವಿ ಎಂಬ ಪೌರಾಣಿಕ ಕಾದಂಬರಿ , ಅಂಗೈಯಲ್ಲಿ ಯುರೋಅಮೇರಿಕ, ಆತ್ಮಕಥೆ ನೆನಪು ಸಿಹಿಕಹಿ ಮೊದಲಾದವು ಅವರ ಕೃತಿಗಳು. ‌ ಅವರ ಸಾಹಿತ್ಯ ಸೇವೆಗಾಗಿ ಸೋವಿಯೆತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳು ದೊರಕಿದ್ದು, ಮುಂಬಯಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕಾಸರಗೋಡು ಮಹಿಳಾ ಸಮ್ಮೇಳನದ ಅಧ್ಯಕ್ಷತೆ ಗೌರವಗಳು ದೊರಕಿವೆ. ೧೯೯೧ ಫೆಬ್ರವರಿ ೧೫ ರಂದು ಅವರು ನಿಧನ ಹೊಂದಿದರು. ತೇಜಸ್ವಿನಿ, ಸೀಮಂತಿನಿ ಅವರ ಇಬ್ಬರು ಮಕ್ಕಳು. ಕನ್ನಡಕ್ಕೆ ಅವರ ಕೊಡುಗೆ ಅವಿಸ್ಮರಣೀಯ. - ಎಲ್. ಎಸ್. ಶಾಸ್ತ್ರಿ

ಸತ್ವಪೂರ್ಣ ಬರೆಹಗಾರ್ತಿ ಡಾ. ಅನುಪಮಾ ನಿರಂಜನ
bottom of page