ಸತ್ತರೂ ಬದುಕಿದರೆ ಜಗಕೆ ಉಪಕಾರ..!!
ಕಬೀರ ಕಂಡಂತೆ... ೨೦ ಜಬ ಆಯಾ ತೂ ಜಗತ ಮೆ, ಲೋಗ ಹಸೇ ತೂ ರೋಯೆ/ ಐಸಿ ಕರನಿ ನಾ ಕರೊ, ಪೀಛೆ ಹಸೇ ಸಬ ಕೋಯ// ಜಗದಿ ಕಾಲಿಟ್ಟಾಗ, ಎಲ್ಲ ನಕ್ಕರು ನೀನು ಅತ್ತೆಯಲ್ಲ/ ಕುಕರ್ಮ ಮಾಡದಿರು, ಜನ ಬೆನ್ನ ಹಿಂದೆ ನಗಬಾರದಲ್ಲ// ಹೊಸ ಜೀವವೊಂದು ಹುಟ್ಟಿ ಬರುವಾಗ ಮನೆ ಮಂದಿಯ ಕಾತರ ಅಷ್ಟಿಷ್ಟಲ್ಲ. ಮಗು ಭೂಮಿಗೆ ಬಂದು ಅದರ ಅಳು ಕೇಳಿದೊಡನೆ ಮನೆ ಜನರು ಸಂತಸ, ಸಂಭ್ರಮದಲ್ಲಿ ಓಲಾಡುತ್ತಾರೆ. ಹೆರಿಗೆ ಬೇನೆ ತಿಂದು ಬಸವಳಿದ ತಾಯಿಯ ಮುಖದಲ್ಲಿ ಸಹ ಮಗುವಿನ ಅಳು, ಸಂತಸ, ಸಾರ್ಥಕತೆಯ ನಗು ಮೂಡಿಸುತ್ತದೆ. ಮಗು ಬೆಳೆದು ದೊಡ್ಡದಾಗಿ ಜೀವಯಾನದ ಕೊನೆಗೆ ಉಸಿರು ನಿಂತಾಗ ಹತ್ತಿರದ ಸಂಬಂಧಿಗಳು ಕೆಲವು ದಿನ ಕಣ್ಣೀರು ಹಾಕುತ್ತಾರೆ. ಇದು ಜಗದ ನಿಯಮ. ಆದರೆ ಅನೇಕ ಸಲ ವ್ಯಕ್ತಿಯ ಮೃತ್ಯುವಿನ ನಂತರ ಆತನ ಬಗ್ಗೆ, ಆತನ ಬದುಕಿನ ರೀತಿಯ ಬಗ್ಗೆ ವ್ಯಂಗ್ಯವಾಡುವದನ್ನು ನೋಡುತ್ತೇವೆ. ಅವನ ಬಗ್ಗೆ ಅಪಹಾಸ್ಯ ಮಾಡುವದಷ್ಟೇ ಅಲ್ಲ, "ಅವನು ಸತ್ತ, ಭೂಭಾರ ಕಳೆಯಿತು" ಎಂಬ ಕಟೂಕ್ತಿಯನ್ನು ಎಸೆಯುತ್ತಾರೆ. ಹೀಗೇಕೆ? ಎಂದು ಪ್ರಶ್ನಿಸಿದಾಗ, ಆ ವ್ಯಕ್ತಿ ಬದುಕಿದ್ದಾಗ ಜನರಿಗೆ ಉಪಕಾರ ಮಾಡುವ ಬದಲು ಉಪದ್ರವ ನೀಡಿದ್ದು ತಿಳಿಯುತ್ತದೆ. ಇನ್ನು ಕೆಲವರು ಬದುಕಿದ್ದಾಗ ಸಾಮಾಜಿಕ ಚೌಕಟ್ಟನ್ನು ಮೀರಿತಮ್ಮ ಸ್ವೇಚ್ಛಾಚಾರದ ವರ್ತನೆಯಿಂದ ಜನ ಕಂಟಕರಾಗಿರುತ್ತಾರೆ. ಇಂಥ ಬದುಕಿಗೆ ಏನಿದೆ ಅರ್ಥ..!? ಈ ಹಿನ್ನೆಲೆಯಲ್ಲಿ ಸಂತ ಕಬೀರರು, 'ಬದುಕಿದ್ದಾಗ ವ್ಯಕ್ತಿ ಸಮಾಜಮುಖಿಯಾಗಿದ್ದರೆ, ಆತ ಸತ್ತ ನಂತರವೂ ಜನರು ನೆನೆಯುತ್ತಾರೆ' ಎಂಬ ಅದ್ಭುತ ಸಂದೇಶ ನೀಡಿದ್ದಾರೆ. ನಮ್ಮ ಅಗಲುವಿಕೆ -ಯಿಂದ ಕೆಲವರ ಹೃದಯದಲ್ಲಾದರೂ ನೋವಿನ ಅಲೆಗಳು ಎದ್ದರೆ, ಅವರ ಕಣ್ಣುಗಳು ತುಂಬಿ ಬಂದರೆ ಅಂಥ ಜನ ಸಾರ್ಥಕ. ಕಣ್ಣೊರೆಸಲು ಯಾರಾದರೂ ಇದ್ದರೆ ಕಣ್ಣು ತುಂಬಿ ಬರುವದಕ್ಕಿದೆ ಅರ್ಥ/ ಯಾರ ಕಣ್ಣೂ ತುಂಬಿ ಬರದಿದ್ದರೆ ಆಗ ಮರಣ ಕೂಡಾ ವ್ಯರ್ಥ..!// ವ್ಯಕ್ತಿಯ ಬದುಕಿನ ರೀತಿ ಅವನ ಜೀವನ ಯೋಗ್ಯತೆಯನ್ನು ಪ್ರತಿಬಿಂಬಿಸುತ್ತದೆ. ಹುಟ್ಟಿದಾಗ ಎಷ್ಟು ಜನ ಇದ್ದರು ಅನ್ನುವದಕ್ಕಿಂತ ಸತ್ತಾಗ ಎಷ್ಟು ಜನರಿದ್ದರು ಎಂಬುದು ಹೆಚ್ಚು ಮಹತ್ವದ್ದು. ವ್ಯಕ್ತಿಯ ಅಗಲಿಕೆಯಿಂದ ಜನರು ನಿಜವಾಗಿ ನೊಂದರೆ, ಕಣ್ಣೀರು ಸುರಿಸಿದರೆ ಅದಲ್ಲವೆ ಸಾರ್ಥಕ ಬದುಕು..? ಸೃಷ್ಟಿ-ಲಯಗಳು ಒಂದೇ ಶಕ್ತಿಯ ಎರಡು ಭಿನ್ನ ಮುಖಗಳು. ಹುಟ್ಟು-ಸಾವಿನ ಮಧ್ಯೆ ತೆರೆದಿದೆ ಬದುಕಿನ ಪಯಣ. ನಾವು ಹುಟ್ಟಿದ್ದೇವೆ ಅಂದ ಮೇಲೆ ಬದುಕುವದು ನಮ್ಮ ಕರ್ತವ್ಯ. ನಮ್ಮ ದೇಹದ ಸೃಷ್ಟಿಯಿಂದ ಅದರ ವಿನಾಶ ಅಂದರೆ ಮರಣದ ವರೆಗೆ ಬದುಕು ಅರ್ಥಪೂರ್ಣ ಆಗಬೇಕಾದರೆ ಮಾನವೀಯ ಮೌಲ್ಯ ಹಾಗೂ ಮಾನವೀಯ ಧರ್ಮಗಳು ನಮ್ಮ ಉಸಿರಾಗಬೇಕು. ಹುಟ್ಟು-ಸಾವಿನ ಮಧ್ಯೆ ಬದುಕು ತೆರೆದಿದೆಯಿಲ್ಲಿ ಹುಟ್ಟಿದ್ದು ಬದುಕಲು ಎಂಬುದು ಅರಿವಿರಲಿ/ ಸತ್ತಂತೆ ಬದುಕಿದೊಡೆ ದೈವಸೃಷ್ಟಿಗೆ ಅಪಚಾರ ಸತ್ತರೂ ಬದುಕು - ಶ್ರೀವೆಂಕಟ // ಶ್ರೀರಂಗ ಕಟ್ಟಿ ಯಲ್ಲಾಪುರ