ಶಿಕ್ಷಕ ವೃತ್ತಿಯ ಗರಿಮೆ
ಬದುಕು ಸಾರ್ಥಕವೆಂದೆನಿಸುವ ಶಿಕ್ಷಕ ವೃತ್ತಿ ಜಗತ್ತಿನಲ್ಲಿ ರಾಷ್ಟ್ರಪತಿಗೆ ಎಂದು ಒಂದು ದಿನವಿಲ್ಲ ;ಪ್ರಧಾನ ಮಂತ್ರಿಗಳ ದಿನವೆಂದಿಲ್ಲ; ರೈತರ ದಿನವೆಂದಿಲ್ಲ; ಬೇರೆ ಯಾವುದೇ ವೃತ್ತಿಯನ್ನು ಅವಲಂಬಿಸಿರುವವರಿಗೆ ಅವರದೇ ದಿನವೆಂದಿಲ್ಲ; ಇದ್ದರೂ ಇಡೀ ಸಮಾಜ ಅದನ್ನು ಆನಂದಿಸುವುದಿಲ್ಲ, ಅನುಭವಿಸುವುದಿಲ್ಲ.ಆದರೆ ಇಡೀ ದೇಶಾದ್ಯಂತ ಪ್ರತಿಯೊಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಕಲಿಸಿದ ಗುರುವನ್ನು ಸ್ಮರಿಸುವ ಶಿಕ್ಷಕರ ದಿನಾಚರಣೆ ಎಂಬುದೊಂದು ಹೃದಯಸ್ಪರ್ಶಿ ಆಚರಣೆಯಾಗಿದೆ . ಅದರಲ್ಲೂ ಶಿಕ್ಷಕರೆಂದರೆ ಉಪನ್ಯಾಸಕರು ಪ್ರಾಧ್ಯಾಪಕರು ಇವರೆಲ್ಲ ಅಷ್ಟಾಗಿ ಪರಿಗಣಿಸಲ್ಪಡುವುದಿಲ್ಲ. ಹೆಚ್ಚಾಗಿ ಶಿಕ್ಷಕರು ಎಂದರೆ ಪ್ರಾಥಮಿಕ ಶಾಲಾ ಶಿಕ್ಷಕರು ಎಂಬ ಭಾವ ಭಕ್ತಿ ! ಮಕ್ಕಳ ಬಾಲ್ಯದೊಡನೆ ನಿಕಟ ಒಡನಾಟವನ್ನು ಹೊಂದಿರುವ ವೃತ್ತಿಯದು; ಮಕ್ಕಳ ಬಾಲ ಲೀಲೆಗಳನ್ನು ನೋಡಿ ತಣಿಯುವ , ಕೀಟಲೆ ಕಿತಾಪತಿಗಳನ್ನು ಕಂಡು ಮುನಿಸುವ, ಕೆಟ್ಟ ನಡೆ-ನುಡಿಗಳನ್ನು ಬಾಲ್ಯದಲ್ಲಿಯೇ ಚಿವುಟಿ ಹಾಕುವ ಒಂದು ಪವಿತ್ರವಾದ, ಸುಧೀರ್ಘವಾದ ತಾಯಿ ಮಕ್ಕಳ ನಡುವಿನ ಬಾಂಧವ್ಯವದು. ಹಾಗಾಗಿ ಬಹುತೇಕರಿಗೆ ಶಿಕ್ಷಕರೆಂದರೆ ಕಣ್ಣ ಮುಂದೆ ಬರುವವರು ಪ್ರಾಥಮಿಕ ಶಾಲಾ ಶಿಕ್ಷಕರೆ... ಕಿಶೋರಾವಸ್ಥೆಗೆ ಬಂದ ನಂತರ ಪ್ರೌಢ ಶಿಕ್ಷಣ , ಕಾಲೇಜು ಶಿಕ್ಷಣ ಪಡೆಯುತ್ತೇವೆ ನಿಜ. ಅಲ್ಲಿಯೂ ಬೋಧಕರಿರುತ್ತಾರೆ ಆದರೆ ವೈಯಕ್ತಿಕವಾಗಿ ಅಷ್ಟೊಂದು ಕಾಳಜಿ ವಹಿಸಲಾಗುವುದಿಲ್ಲ ಅಥವಾ ಕಾಳಜಿ ವಹಿಸಿದರೂ ಕೇಳುವ ವಯಸ್ಸು ಅದಲ್ಲ. ಆದರೆ ಈ ಬಾಲ್ಯಾವಸ್ಥೆ ಇದೆಯಲ್ಲಾ ಒಂದು ರೀತಿಯ ಖಾಲಿ ಪುಟ ಇದ್ದಂತೆ; ಇದರಲ್ಲಿ ಸುಂದರವಾದದನ್ನು, ಒಳ್ಳೆಯದನ್ನು ಬೇಕಾದ ಹಾಗೆ ಬರೆದು ಅಚ್ಚು ಹಾಕಿ ಮುದ್ರಿಸಬಹುದು. ಅದೇ ಮುಂದಿನ ಭವಿಷ್ಯಕ್ಕೆ ಭದ್ರ ಅಡಿಪಾಯ... ಅದಕ್ಕೆಂದೆ ಡಾಕ್ಟರ್ ಎಸ್ ರಾಧಾಕೃಷ್ಣನ್ ಈ ದೇಶದ ಅತ್ಯುನ್ನತ ಸ್ಥಾನಮಾನ, ಪದವಿಯನ್ನು ಅಲಂಕರಿಸಿದರೂ ತನ್ನ ಜನ್ಮದಿನವನ್ನು ಶಿಕ್ಷಕರ ದಿನವೆಂದು ಆಚರಿಸಲು ಕರೆಕೊಟ್ಟರು. ಪಾಶ್ಚಾತ್ಯ ದೇಶಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವೃತ್ತಿ ಅತ್ಯಂತ ಘನತೆ ಗೌರವದಿಂದ ಕೂಡಿದ್ದು, ಶಿಕ್ಷಕರಾಗಲು ಅಷ್ಟೇ ಕಠಿಣವಾದ ತರಬೇತಿ, ಮಾನದಂಡಗಳು ಇವೆ ಜೊತೆಗೆ ಉನ್ನತ ಸೌಲಭ್ಯ ಸಂಬಳವೂ ಇದೆ. ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮೊದಲ ಸ್ಥಾನವಿದೆ. ಒಂದು ಕಾಲವಿತ್ತು ಸಮಾಜದಲ್ಲಿಯೂ ಕೂಡ ಪ್ರಾಥಮಿಕ ಶಾಲಾ ಶಿಕ್ಷಕರೆಂದರೆ ಅತಿ ಗೌರವ ಅಭಿಮಾನದಿಂದ ನೋಡುವ ಕಾಲ .ಬದಲಾದ ಕಾಲಘಟ್ಟದಲ್ಲಿ ಶಿಕ್ಷಕರ ಸಂಖ್ಯೆ, ಶಾಲೆಗಳ ಸಂಖ್ಯೆ ಹೆಚ್ಚಾಗಿ ಕಂಡಲ್ಲೆಲ್ಲ ಶಿಕ್ಷಕರು ಸಾಮಾನ್ಯರ ಕಣ್ಣಿಗೆ ಬೀಳುವಂತಾಗಿದೆ ಅಷ್ಟೇ ಅಲ್ಲ ಇಂದು ಶಿಕ್ಷಕರಿಗೆ ಬೋಧನೆಯ ಹೊರತಾಗಿ ಹತ್ತಾರು ಬಗೆಯ ಇತರೆ ಕೆಲಸಗಳ ಒತ್ತಡ ಹೆಚ್ಚಾಗಿದೆ. ಹಾಗಾಗಿ ಶಾಲೆಯ ಹೊರತಾಗಿಯೂ ಅನ್ಯ ಬಗೆಯ ಕಾರ್ಯದ ಒತ್ತಡದಲ್ಲಿ ಪೂರ್ಣ ಪ್ರಮಾಣದಲ್ಲಿ ಮಕ್ಕಳೊಂದಿಗೆ ತೊಡಗಿಸಿಕೊಳ್ಳಲಾಗುತ್ತಿಲ್ಲ ಅಥವಾ ಇದನ್ನೇ ನೆಪ ಮಾಡಿಕೊಂಡು ಅಪರೂಪಕ್ಕೆ ಶಾಲೆಗೆ ಬರುವ ಶಿಕ್ಷಕರು ಅಲ್ಲಲ್ಲಿ ಇಲ್ಲವೆಂದಲ್ಲ .ಶಿಕ್ಷಕರಿಗೆ ನೀಡುವ ಸಂಬಳವೂ ಕಡಿಮೆ ಏನಿಲ್ಲ .ಈ ಎಲ್ಲ ಕಾರಣಗಳಿಗಾಗಿ ಸಾರ್ವಜನಿಕರಿಗೆ ಸುಲಭವಾಗಿ ಸಿಗುವವರು ಪ್ರಾಥಮಿಕ ಶಾಲಾ ಶಿಕ್ಷಕರೇ ! ಪ್ರೌಢ, ಕಾಲೇಜು ಅಧ್ಯಾಪಕರು ನಿಯಮಿತ ಸಂಖ್ಯೆಯಲ್ಲಿದ್ದು ಓಡಾಟ, ಉಪಸ್ಥಿತಿ ಸಾರ್ವಜನಿಕ ಸ್ಥಳಗಳಲ್ಲಿ ಅಷ್ಟಾಗಿ ಕಂಡು ಬರುವುದಿಲ್ಲ ಹೀಗಾಗಿ ಸಾರ್ವಜನಿಕರು ಅವರ ತಂಟೆಗೆ ಹೋಗುವುದಿಲ್ಲ. ಅಷ್ಟೇ ಅಲ್ಲ ಕಾಲೇಜು ,ಪ್ರೌಢಶಾಲೆಗಳಲ್ಲಿ ಬೋಧನೆ ಮಾಡುವ ಹಲವರಿಗೆ , ಸಮಾಜದಲ್ಲಿ ಅನೇಕರಿಗೆ ಪ್ರಾಥಮಿಕ ಶಾಲಾ ಶಿಕ್ಷಕರು ಎಂದರೆ ಸದರ ಭಾವ. ಈ ಎಲ್ಲದರ ನಡುವೆಯೂ ತಮ್ಮತನವನ್ನು ಕಳೆದುಕೊಳ್ಳದೆ ಸರಕಾರ ನೀಡಿದ ಯಾವುದೇ ಬಗೆಯ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನಿಸಿಕೊಳ್ಳುವ ಪ್ರಾಥಮಿಕ ಶಾಲಾ ಶಿಕ್ಷಕರ ವೃತ್ತಿ ಅತ್ಯಂತ ಘನತೆಯಿಂದ ಕೂಡಿದ್ದು, ಎಂಥದೇ ಒತ್ತಡದಲ್ಲಿಯೂ ಮತ್ತೆ ಮಕ್ಕಳ ಒಡನಾಟದಲ್ಲಿ ಹೊಸತಾಗುವ, ಕಳೆದುಹೋಗುವ, ಮಕ್ಕಳಂತಾಗಿಬಿಡುವ ಪರಿ ರಿಯಲಿ ಗ್ರೇಟ್ !! ಇಂದು ಈ ವೃತ್ತಿಯನ್ನು ನಿಭಾಯಿಸುವುದು ಸುಲಭ ಸಾಧ್ಯವಾದದಲ್ಲ! ' ಜಾಕ್ ಒಪ್ ಆಲ್ ಮಾಸ್ಟರ್ ಆಫ್ ನನ್' ರೀತಿಯಲ್ಲಿ ಆಟ ,ಪಾಠ ,ನೃತ್ಯ, ಕವಾಯಿತು ಎಲ್ಲಾ ಎಂದರೆ ಎಲ್ಲವನ್ನು ನಿಭಾಯಿಸುವ, ಜನ ಗಣತಿ, ಚುನಾವಣೆ ಮುಂತಾದ ಗುರುತರವಾದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿಕೊಡುವ ಶಿಕ್ಷಕರ ಮನಸ್ಥಿತಿ, ವೃತ್ತಿಗೆ ದೊಡ್ಡ ಸಲಾಂ! ಇಂತಹ ಪ್ರಾಮಾಣಿಕವಾದ ಪ್ರಯತ್ನಕ್ಕೆ, ಕರ್ತವ್ಯ ನಿಷ್ಠೆಗೆ ಪುಟ್ಟ ಮಕ್ಕಳ ಹೃದಯದಲ್ಲಿ ಸಿಗುವ ಬೆಚ್ಚನೆಯ ಪ್ರೀತಿ ತಾಯಿ ಮಡಿಲಿನ ಲಾಲಿ ಹಾಡಿನಂತೆ... ಮತ್ತೆ ಮತ್ತೆ ನಮ್ಮ ಚೈತನ್ಯವನ್ನು ಬಡಿದು ಎಬ್ಬಿಸುವಂತಿರುತ್ತದೆ ಸೆಪ್ಟೆಂಬರ್ ಐದು ಶಿಕ್ಷಕರ ದಿನಾಚರಣೆ ಎಂದರೆ ಶಿಕ್ಷಕರ ಪಾಲಿಗೆ ಒಂದು ಬಗೆಯ ಸಡಗರ ಸಂಭ್ರಮ. ಸರ್ಕಾರ ಗುರುತಿಸಿ ಪ್ರಶಸ್ತಿ ನೀಡುತ್ತದೆ ಎಂದಲ್ಲ. ಯಾವ ಬಗೆಯ ಪ್ರಶಸ್ತಿಯೂ ಇವರಿಗೆ ಬೇಕಾಗಿಲ್ಲ. ಆದರೆ ತಾವು ಕಲಿಸಿದ ವಿದ್ಯಾರ್ಥಿಗಳು, ಹತ್ತಾರು ವರ್ಷಗಳು ಕಳೆದರೂ ದೂರ ದೂರದೂರುಗಳಲ್ಲಿ ಬದುಕು ಕಟ್ಟಿಕೊಂಡಿರುವವರು ಒಮ್ಮೆ ಶಿಕ್ಷಕರನ್ನು ಸ್ಮರಿಸಿ ಕರೆ ಮಾಡುತ್ತಾರಲ್ಲ ಅಥವಾ ಸಂದೇಶ ರವಾನಿಸುತ್ತಾರಲ್ಲ ಅದರಲ್ಲಿ ಅಡಗಿರುವ ಪ್ರೀತಿ ಜೇನಿನಷ್ಟು ಸಿಹಿಯಾದದು! ಅವರು ತಂದು ಕೊಡುವ ಒಂದು ಗುಲಾಬಿ ಹೂವು ಇಲಾಖೆ ನೀಡುವ ಪ್ರಶಸ್ತಿಗಿಂತ ಕಡಿಮೆ ಏನಲ್ಲ ಇಷ್ಟಾಗಿಯೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ, ನಿಷ್ಠಾವಂತ, ಪ್ರತಿಭಾವಂತ ಶಿಕ್ಷಕರನ್ನು ಗುರುತಿಸಿ ಗೌರವಿಸುವುದು, ಪ್ರಶಸ್ತಿ ನೀಡುವುದು ಔಚಿತ್ಯಪೂರ್ಣವಾದದ್ದು. ಇಂತವರ ಸಂಖ್ಯೆ ಕೂಡ ದೊಡ್ಡದಿದೆ. ಇಂದು ಜಿಲ್ಲೆ ರಾಜ್ಯಮಟ್ಟದಲ್ಲಿ ನೀಡುವ ಪ್ರಶಸ್ತಿಗಳಿಗೆ ಯಾವ ಮಾನದಂಡವೂ ಇರುವುದಿಲ್ಲ. ನಮಗೆ ನಾವೇ ಅರ್ಜಿ ಸಲ್ಲಿಸಿ ನಮ್ಮನ್ನು ನಾವೇ ಶಿಫಾರಸು ಮಾಡಿ ಪ್ರಶಸ್ತಿ ಪಡೆದುಕೊಳ್ಳುವ ಪರಿ ಮುಜುಗರವನ್ನುಂಟು ಮಾಡುತ್ತದೆ. ಹೀಗಾಗಿ ಯೋಗ್ಯತೆಯುಳ್ಳ ಅದೆಷ್ಟೋ ಜನ ಪ್ರತಿಭಾವಂತ ಶಿಕ್ಷಕರು ಪ್ರಶಸ್ತಿಯಿಂದ ದೂರವೇ ಉಳಿಯುತ್ತಾರೆ.. ಇದರಿಂದ ಕೆಲವೊಮ್ಮೆ ಪ್ರಶಸ್ತಿ ಎನ್ನುವುದು ತನ್ನ ಮೌಲ್ಯ ಕಳೆದುಕೊಂಡು ಯಾರು ಯಾರಿಗೋ ಸಲ್ಲುವಂತಾಗಿದೆ. ಮುಂದಿನ ದಿನಗಳಲ್ಲಿ ಈ ಒಂದು ಪ್ರವೃತ್ತಿ ಬದಲಾಗಿ ಯೋಗ್ಯತೆಯುಳ್ಳವರಿಗೆ ಇಲಾಖೆ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವಂತಾಗಲಿ.... . ಸುಧಾ ಹಡಿನಬಾಳ