top of page

ರಂಗ ಸಂಗೀತದ ದ್ರಷ್ಟಾರ, ಬಿ.ವಿ.ಕಾರಂತರನ್ನು ನೆನೆಯುತ್ತಾ .....

ರಂಗ ಸಂಗೀತದ ಕುರಿತಾದ ಒಂದಿಷ್ಟು ತೀರಾ ಸಾಮಾನ್ಯ ವಿಚಾರಗಳು . ಸಂಗೀತ ಎನ್ನುವುದು ..... ಬಹಳ ದೊಡ್ಡ ಸಂಗತಿ. ಸಂಗೀತ ಎಂದರೆ ಮನಸ್ಸನ್ನು ತೋಡಿಕೊಳ್ಳುವುದು. ಶಾಸ್ರೀಯ ಸಂಗೀತ, ಚಿತ್ರಗೀತೆ, ರಂಗ ಗೀತೆ, ಭಾವಗೀತೆ, ಜನಪದ ಗೀತೆ, ಯಕ್ಷಗಾನದ ಹಾಡು, ಪಾಶ್ಚಾತ್ಯ ಸಂಗೀತ .... ಹೀಗೆ..... ಸಂಗೀತದ ಅನೇಕ ಪ್ರಕಾರಗಳಲ್ಲಿ ಕನಿಷ್ಟ ಯಾವುದಾದರೂ ಒಂದನ್ನಾದರೂ ಇಷ್ಟ ಪಡದವರು ಇರಲಾರರು. ಯಾವುದೋ ಒಂದು ಶ್ರೇಷ್ಟ, ಇನ್ನೊಂದು ಕನಿಷ್ಟ ಎಂದು ಹೇಳುವಂತೆಯೇ ಇಲ್ಲ. ಎಲ್ಲಾ ಪ್ರಕಾರಗಳಲ್ಲಿಯೂ ಮನಸ್ಸಿನೊಂದಿಗಿರುವ ಸಂಬಂಧವೇ ಮುಖ್ಯವಾಗುತ್ತದೆ. ಪ್ರತಿಯೊಂದಕ್ಕೂ ಒಂದು ಉದ್ದೇಶ ಇರುತ್ತದೆ. ಆ ಉದ್ದೇಶ ಸಾರ್ಥಕವಾಗಬೇಕಾದರೆ ಮನಸ್ಸು ಅದರಲ್ಲೇ ಲೀನವಾಗಬೇಕಾಗುತ್ತದೆ. ಚಿತ್ರಗೀತೆಯಲ್ಲಿ “ಬಿ.ಜಿ.ಎಮ್”... ಅಂದರೆ ಎರಡು ಚರಣಗಳ ನಡುವಿನ ಕಾಲೀ ಜಾಗದ .... ಅಥವಾ ಹಾಡಿನ ಹಿಂದೆ ಮುಂದೆ ಇರುವ ಸಂಗೀತ....... ಅಂದರೆ .... ಸಾಮಾನ್ಯವಾಗಿ ಹೇಳುವ ಗ್ಯಾಪ್ ಮ್ಯೂಸಿಕ್ ಹುಟ್ಟಿಕೊಂಡದ್ದು ಯಾಕೆ ಅಂದರೆ ... ಆ ಕಾಲೀ ಜಾಗದ ಸಂದರ್ಭದಲ್ಲೂ ದೃಶ್ಯ ಇದ್ದೇ ಇರುವುದರಿಂದ. ಆದರೆ ಅದನ್ನೇ ಭಾವ ಗೀತೆಗಳಲ್ಲಿ ಬಳಸುವುದು ಎಷ್ಟು ಸರಿ!!. ಯಕ್ಷಗಾನ ಆಟದಲ್ಲಿ ಹಾಡಿದಂತೆ...... ತಾಳಮದ್ದಳೆ ಕೂಟದಲ್ಲಿ ಭಾಗವತರು ಹಾಡುವುದು ಸರಿಯಾದೀತೇ... ರಾಷ್ಟ್ರ ಗೀತೆ, ನಾಡಗೀತೆಗಳಿಗೆ ಬಿ.ಜಿ.ಎಮ್. ಸೇರಿಸುವುದಂತೂ... ಶಿಖರಾಪರಾದ ಅಂತ ಹಿಂದೊಮ್ಮೆ ಸಾಹಿತಿ ಜಯಂತ ಕಾಯ್ಕಿಣಿ ಪ್ರಜಾವಾಣಿಯಲ್ಲಿ ಬರೆದಿದ್ರು. ಹೀಗೆ ಯಾವುದೇ ಪ್ರಾಕಾರದ ಸಂಗೀತದ ಉದ್ದೇಶ ಮೊದಲು ಅರ್ಥವಾದರೆ ... ಆ ಸಂಗೀತವನ್ನು ಅನುಭವಿಸುವುದಕ್ಕೂ ವಿಶ್ಲೇಷಿಸುವುದಕ್ಕೂ ಸಾದ್ಯವಾಗುತ್ತದೆ. ಅಂದರೆ..... ಹಿಂದೆ ಮುಂದೆ ಗೊತ್ತಿಲ್ಲದೇ ... ಹೊಗಳುವುದು ... ತೆಗಳುವುದು ಎರಡೂ ಅಪಕ್ವವಾದ ಮನಸ್ತಿತಿ. ನಾಟಕದ ಹಾಡುಗಳು ಅಂದರೆ ರಂಗ ಗೀತೆಗಳು ಬಹಳ ಹಿಂದಿನಿಂದಲೂ ರಸಿಕರ ಮನ ಸೂರೆಗೊಂಡವುಗಳೇ. ಹಿಂದೆಲ್ಲಾ ನಾಟಕ ಅಂದರೆ..... ಹಾಡು ಅನಿವಾರ್ಯವೇ ಆಗಿತ್ತಂತೆ. ನಟರಿಗೆ ಹಾಡಲು ತಿಳಿದಿರಬೇಕಾದ್ದು ಕಡ್ಡಾಯವಾಗಿತ್ತಂತೆ. ಎಷ್ಟೋ ಸಾರಿ ದೊಡ್ಡ ದೊಡ್ಡ ಗಾಯಕರು ನಟರಾದ ಸಂದರ್ಭದಲ್ಲಿ ......... ಪ್ರೇಕ್ಷಕರು ಹೆಚ್ಚು ಹೆಚ್ಚು ಹಾಡನ್ನೇ ಬಯಸಲು ಸುರು ಮಾಡಿ ..... ಕೆಲವೊಮ್ಮೆ ದೃಶ್ಯವೊಂದು ಸಂಗೀತ ಕಛೇರಿಯೇ ಆದ ಉದಾಹರಣೆಗಳಿವೆಯಂತೆ. ಖಳ ಪಾತ್ರವೊಂದು ಕರುಣಾಜನಕವಾಗಿ ಹಾಡುತ್ತಾ ಸಾಯುವ ದೃಶ್ಯವು .... ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಕಾರಣವಾಗಿ, ಒನ್ಸ್ ಮೋರ್ ನೊಂದಿಗೆ ಚಪ್ಪಾಳೆಯ ಸುರಿಮಳೆಯಾಗಿ ..... ಪಾತ್ರ ಎದ್ದು ನಿಂತು .... ಮತ್ತೊಮ್ಮೆ ಹಾಡಿ ..... ಪುನ ಸಾಯುವ ದೃಶ್ಯ .... !! ಇಂದು ಆಭಾಸ ವೆನಿಸಿದರೂ ಆ ಕಾಲದಲ್ಲಿ ಅದನ್ನು ಯಾರೂ ಪ್ರಶ್ನೆ ಮಾಡದೇ ಒಪ್ಪಿಕೊಂಡಿದ್ದರೇನೋ.....!! ಇಂತಾದ್ದನ್ನೆಲ್ಲಾ ಟಿ.ಪಿ.ಕೈಲಾಸಂ ಅವರು ತನ್ನ ನಾಟಕಗಳಲ್ಲಿ ಲೇವಡಿ ಮಾಡಿದರೂ ..... ರಂಗ ಸಂಗೀತದ ಹೊಸ ದಾರಿ ಹುಡುಕಲು ಪ್ರಾಯಷಃ ಅವರಿಂದ ಸಾದ್ಯವಾದಂತೆ ಕಂಡುಬರುವುದಿಲ್ಲ..... ಪ್ರಾಯಷಃ ಅದಕ್ಕೆ ಬಿ.ವಿ.ಕಾರಂತರೇ ಬರಬೇಕಾಯ್ತು. ನಾಟಕ, ಸಂಗೀತ ಗಳಿಂದಲೇ ಅನುಭವ ಪಡೆದ ಬಿ.ವಿ.ಕಾರಂತರು .... ರಂಗಗೀತೆಗಳಿಗೆ, ರಂಗ ಸಂಗೀತಕ್ಕೆ ಹೊಸ ಬಾಷ್ಯವನ್ನೇ ಬರೆದರು. ಬಿ.ವಿ.ಕಾರಂತರು ಸಂಯೋಜಿಸಿದ ರಂಗ ಗೀತೆಗಳನ್ನು ಕೇಳಿದ ಮೇಲೆಯೇ..... ಪ್ರಾಯಷಃ ವಿಚಾರವಂತರಿಗೂ ...... ಇಷ್ಟರವರೆಗೆ ತಪ್ಪಿದ್ದೆಲ್ಲಿ ಎನ್ನುವ ಅರಿವಾಯ್ತೋ ಏನೋ....!! ಕಾರಂತರು ಹೇಳ್ತಾರೆ ....ರಂಗಗೀತೆಗೆ ಪ್ರತ್ಯೇಕ ಅಸ್ತಿತ್ವ ಇಲ್ಲ ಅಂತ. ಅಂದರೆ ಆಯಾ ದೃಶ್ಯಗಳ ಜೊತೆಗೆ ಮಾತ್ರ .... ಹಾಡಿಗೊಂದು ಸಂಬಂಧ. ರಂಗ ಗೀತೆ ಅಂದರೆ ಅದು ಬರೇ ಮಾಧುರ್ಯಕ್ಕಾಗಿ ಅಲ್ಲ ...... “ರಂಗ ಗೀತೆ ಅದು ಮಾತಾಗ್ಬೇಕು”... ಅಂತ. ಆಧುನಿಕ ನಾಟಕಗಳ ಸಂದರ್ಭದಲ್ಲಿ ... ಯಾಕೋ “ಸಂಗೀತ” ಅಂದರೆ ನಾಟಕದ ಹಾಡುಗಳಿಗೆ ಮಾತ್ರ ಅನ್ವಯಿಸಿ ಹೇಳುವ ಕ್ರಮವೇ ಹೆಚ್ಚು ಚಾಲ್ತಿಯಲ್ಲಿದೆ. ಆದರೆ ..... ನಾಟಕ ಪ್ರದರ್ಶನಕ್ಕೆ ಸಂಬಂದ ಪಟ್ಟಂತೆ......” ಸಂಗೀತ” ಎಂದರೆ ....... ಹಾಡುಗಳು ಮಾತ್ರ ಅಲ್ಲ. ದ್ವನಿಗಳೂ ಸಂಗೀತವೆ. ನಿಶ್ಶಬ್ಧವೂ ಸಂಗೀತವೆ. ವಾದ್ಯಗಳು ಮಾತ್ರವಲ್ಲ, ಅವಾದ್ಯಗಳೂ ಸಂಗೀತವೆ. ನಾಟಕದ ಸಂಗೀತಕ್ಕೆ ಸಂಬಂಧ ಪಟ್ಟಂತೆ ..... ನಾಟಕ ನಿರ್ದೇಶಕನಿಗೆ ಲಯ-ಶೃತಿಗಳ ಅರಿವು ಸ್ವಲ್ಪವಾದರೂ ಇರಲೇ ಬೇಕಾಗುತ್ತದೆ. ಆತನಿಗೆ ತನ್ನ ನಾಟಕಕ್ಕೆ ಏನು ಬೇಕು ಏನು ಬೇಡ ಎನ್ನುವ ತಿಳುವಳಿಕೆ ಇರಬೇಕಾದ್ದು ಅನಿವಾರ್ಯ. ನಟರ ಚಲನೆಯಲ್ಲಿ, ಸಂಭಾಷಣೆಯಲ್ಲಿ ಲಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಗಿದ್ದರೆ ಮಾತ್ರ...... ಬೇಕಾದಲ್ಲಿಬಾಹ್ಯಸಂಗೀತವನ್ನು ಸೇರಿಸಿಕೊಳ್ಳಲು ಸಾದ್ಯ. ಇಲ್ಲವಾದರೆ ಸಂಗೀತವು ನಾಟಕಕ್ಕಿಂತ ಬೇರೆ ಉಳಿದು ಬಿಡುತ್ತದೆ. ಸಂಗೀತ ಹೀಗೆಯೇ ಇರಬೇಕೆಂದು ಹೇಳುವುದು ಕಷ್ಟ. ರಂಗ ಸಂಗೀತ ರೆಡಿಮೇಡ್ ಅಲ್ಲವೇ ಅಲ್ಲ ..... ರಂಗದಲ್ಲೇ ಹುಟ್ಟಿಕೊಳ್ಳುವಂತಾದ್ದು. ನಾಟಕದಲ್ಲಿ- ಸಂಗೀತ, ಅಂದರೆ ... ಈ ಹಾಡು ಇತ್ಯಾದಿ ಬಾಹ್ಯ ಸಂಗೀತ ಇರಲೇಬೇಕೆಂಬ ಹಠ ಬೇಕಾಗಿಲ್ಲ. ಇದ್ದರೂ ಶೃತಿ-ಲಯ ಗಳನ್ನು ನಿರ್ಲಕ್ಷಿಸಬಾರದು..... ಹಾಗೆಂದು ...” ಶೃತಿ, ರಾಗ, ಲಯ, ತಾಳ “ ... ಎನ್ನುತ್ತಾ, ಶಾಸ್ತ್ರೀಯ ಚೌಕಟ್ಟಿನಿಂದ ಹೊರಬರಲಾರದವರು ಹಾಡುವುದೂ, ಸಂಗೀತ ವಿನ್ಯಾಸ ಮಾಡುವುದು ..... ಸ್ವಲ್ಪ ಕಿರಿಕಿರಿ ...... ಮತ್ತು ಅಪಾಯ ಕೂಡಾ. “ಮಕ್ಕಳ ನಾಟಕಕ್ಕೆ ಮಕ್ಕಳಿಂದಲೇ ಸಂಗೀತ ಮಾಡಿಸಬೇಕು” ಎನ್ನುವ ಹಠ ಇದ್ದರೆ ..... ನಾಟಕ ಒಂದು ’ಸಂತೆ’ಯಾಗದಂತೆ, ಕಲೆಯ ಚೌಕಟ್ಟನ್ನು ಮೀರದಂತೆ ನೋಡಿಕೊಳ್ಳಲೇ ಬೇಕು. ಇಲ್ಲವಾದಲ್ಲಿ ಪ್ರೇಕ್ಷಕರಿಗೆ ದೊಡ್ಡ ಹಿಂಸೆಯೇ ಸರಿ. ನಾಟಕ ಅಭ್ಯಾಸದ ಸಂದರ್ಭದಲ್ಲಿ ...... ಮಕ್ಕಳೇ, ತಮ್ಮ ಕೈಗೆ ಸಿಕ್ಕಿದ ಅವಾದ್ಯಗಳಿಂದ.... ಸಂಗೀತ ನೀಡುವಂತೆ ಪ್ರೇರೇಪಿಸಬಹುದು. ಮತ್ತು ಅದು ಒಳ್ಳೆಯದು ಕೂಡಾ. ಮಕ್ಕಳಿಗೆ ....... “ಓ .. ತಾನೂ ಸಂಗೀತ ನೀಡಬಲ್ಲೆ... “ ಎನ್ನುವ ವಿಶ್ವಾಸ ಮೂಡುತ್ತದೆ ಎನ್ನುತ್ತಾರೆ ಬಿ.ವಿ.ಕಾರಂತರು. ನಾಟಕದ ನಿರ್ದೇಶಕರಿಗೆ, ಸಂಗೀತ ವಿನ್ಯಾಸಕಾರರಿಗೆ ದ್ವನಿ ವರ್ಧಕವನ್ನು ಬಳಸಿಕೊಳ್ಳುವ ಕುಶಲತೆ ಇರಲೇ ಬೇಕು. ಇಲ್ಲಾವಾದರೆ ಕೋಮಲವಾಗಿರಬೇಕಾದ ಸಂಗೀತ ರೌದ್ರವಾಗುವ ಅಪಾಯ ಇದೆ. ನಾಟಕ ಸ್ವಲ್ಪ ಕಳಪೆಯಾದರೆ, ಸಂಗೀತದ ಮೂಲಕ ಮೇಲೆತ್ತಬಹುದು ಎನ್ನುವುದು ತಪ್ಪು ಕಲ್ಪನೆ. ನಾಟಕ ಮತ್ತು ರಂಗಸಂಗೀತವನ್ನು ಕೇವಲ ಒಂದು ವಾರ್ಶಿಕೋತ್ಸವ ದ ಮಟ್ಟದಲ್ಲಿಟ್ಟು ನೋಡಿದ್ದರಿಂದಲೇ ಇಂತಹ ಅಭಿಪ್ರಾಯ ಬೆಳೆದು ಬಂದಿರಬಹುದು. “....... ಬಿ.ವಿ.ಕಾರಂತರು ಸಂಗೀತದ ಮೂಲಕ ನಾಟಕವನ್ನು ಎತ್ತರಿಸಿದರು ....” ಅಂದರೆ..... ಅಲ್ಲಿ ಸಂಗೀತ ನಾಟಕಕ್ಕಿಂತ ಬೇರೆಯಾಗಿ ಉಳಿಯದೇ ನಾಟಕದ ಭಾಗವೇ ಆಗಿರ್ತಾ ಇತ್ತು. ಯಾಕೆಂದರೆ ಬಿ.ವಿ.ಕಾರಂತರಿಗೆ ನಾಟಕವೂ ಸಂಗೀತವೂ ಒಂದೇ. ರಂಗಸಂಗೀತದಲ್ಲಿ ಎಲ್ಲರೂ ಕಾರಂತರನ್ನೇ ಅನುಕರಿಸಬೇಕೆಂದು ಅರ್ಥವಲ್ಲ. ಆದರೆ ...... ಆ ಮಟ್ಟದ ಕಲಾಕೃತಿಯನ್ನು ಸಾಧಿಸ ಬೇಕಿದ್ದರೆ, ಬಿ.ವಿ.ಕಾರಂತರನ್ನು ಮತ್ತು ಬಿ.ವಿ.ಕಾರಂತರಂತೆ ದ್ಯಾನಿಸಬೇಕಾದ ಅನಿವಾರ್ಯತೆ ಇದೆ. ************ ಮೂರ್ತಿ ದೇರಾಜೆ – 9448239519 moorthyderaje@gmail.com

ರಂಗ ಸಂಗೀತದ ದ್ರಷ್ಟಾರ, ಬಿ.ವಿ.ಕಾರಂತರನ್ನು ನೆನೆಯುತ್ತಾ .....
bottom of page