top of page

ಯುದ್ಧ ಸೈನಿಕರು

ರಾಜಕೀಯ ಹೋರಾಟಗಳಲ್ಲಿ ಮುಳುಗಿದ್ದಾರೆ
ನಮ್ಮ ಕವಿಗಳು
ಖಡ್ಗ ಕಠಾರಿ ಈಟಿ ಭರ್ಚಿಗಳ  ಝಳಪಿಸುತ್ತ
ರುಂಡ ಮುಂಡಾಡುತ್ತ ಚಕ್ರವ್ಯೂಹಗಳ ಭೇದಿಸುತ್ತ ಸಾಗಿದ್ದಾರೆ
ಶತ್ರುಗಳು ಯಾರೆಂಬುದು ಗೊತ್ತಿಲ್ಲ
ಯಾರ ತಲೆ ಉರುಳಿಸುತ್ತಿದ್ದಾರೆ ಗೊತ್ತಿಲ್ಲ
ಘೋಷಣೆಗಳ ಕೂಗುತ್ತ ಕಿರಿಚುತ್ತ
ಸಾಗಿದ್ದಾರೆ ಮುಂದೆ ಮುಂದೆ
ಜಾತಿ ಸಂಘಗಳು ಹಿಂದೆ ಹಿಂದೆ

ಬತ್ತಳಿಕೆ ತುಂಬ ಮಂತ್ರಾಸ್ತ್ರಗಳು
ಕೈಯಲ್ಲಿ ಬಿಲ್ಲು ಬಾಣ ತ್ರಿಶೂಲ ಭಂಗಿಗಳು
ಶಿರಸ್ತ್ರಾಣ ಭುಜಕೀರ್ತಿ
ಒಡ್ಯಾಣ ತೋಳಬಂದಿ
ಮೊಣಕಾಲಿಗೂ ಕಿಂಕಾಪು
ಉತ್ತರನಂತೆ ಹೂಂಕರಿಸುತ್ತ
ತೆರಳಿದ್ದಾರೆ ಸೇನಾಪತಿ ದಳಪತಿಗಳ ಹಿಂದೆ

ಇವರಿಗೂ ಪಾಲು ಇದೆಯಂತೆ ಗೆದ್ದುದರಲ್ಲಿ
ಪೆಟ್ಟಿಗೆ ಪೆಠಾರಿ ಹೊನ್ನು ಮಣ್ಣು
ಕೊಡುತ್ತಾರಂತೆ ಬೇರೆ ಬೇರೆ ಪದವಿ ಪ್ರತಿಷ್ಠಾನ
ಕ್ಕಧಿಪತಿ ಮಾಡುತ್ತಾರಂತೆ ಆಮೇಲೆ
ಮೊದಲು ಯುದ್ಧ ಗೆದ್ದು ಕೊಡಬೇಕಂತೆ!

ಪೆನ್ನು ಪುಸ್ತಕ ಹಾಳೆಗಳನ್ನೆಲ್ಲ ಮಡಚಿಟ್ಟಿದ್ದಾರೆ
ಯಾರಿಗೆ ಬೇಕು ಬರೆಯುವ ಕಷ್ಟ
ಈಗ ಈ ಕ್ಷಣಕ್ಕೆ ಯುದ್ಧದಿಂದ ಸಿಗುವ ಲಾಭವೇ
ಪರಮ ಗಂತವ್ಯ ನಮಗೆ!
ಎಣ್ಣೆಯೋ ಬಾಡೂಟವೋ ಅಥವಾ
ಕನಿಷ್ಠ ಐದೋ ಹತ್ತೋ ಸಾವಿರ ಸಿಕ್ಕರೆ ಸಾಕು
ಇನ್ನೆರಡು ದಿನಕ್ಕೆ
ಸಮವಸ್ತ್ರ ತೊಟ್ಟೇ ಹೊಡೆಯುವೆವು ನಿದ್ದೆ.

ಇದು ಯುದ್ಧಭೂಮಿ ಬರಬೇಡಿ ಹತ್ತಿರ
ದೊಡ್ಡಪ್ಪನೆಂಬ ಅಖಲೂ ಇಲ್ಲದೆ ಚುಚ್ಚಿಯೇ ಬಿಡುವೆವು
ಏನಾದರಾಗಲಿ,
ನಾವೀಗ ಸಂತ್ರಸ್ತ ಯುದ್ಧ ಸೈನಿಕರು!

-   ಡಾ. ವಸಂತಕುಮಾರ ಪೆರ್ಲ ಕನ್ನಡ ಸಾಹಿತ್ಯದಲ್ಲಿ ಎಂ.ಎ., ಪಿಹೆಚ್. ಡಿ ಪದವಿ ಪಡೆದು, ಪತ್ರಿಕೋದ್ಯಮ ಡಿಪ್ಲೊಮಾದಲ್ಲಿ ಮೊದಲ ಸ್ಥಾನ ಗಳಿಸಿ, ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ 45 ಕ್ಕಿಂತ ಹೆಚ್ಚು ಕೃತಿರಚನೆ ಮಾಡಿರುವ ಡಾ. ವಸಂತಕುಮಾರ ಪೆರ್ಲ ಅವರು ಮುಖ್ಯವಾಗಿ ಕವಿಯೆಂದೇ ಗುರುತಿಸಲ್ಪಟ್ಟವರು. ಮಾತಿನಾಚೆಯ ಮೌನ, ಹುತ್ತದೊಳಗಿನ ಹಾವು, ಕೋಟಿಲಿಂಗ, ರಂಗಸ್ಥಳ, ಒಡ್ಡೋಲಗ ಮೊದಲಾದವು ಡಾ. ಪೆರ್ಲರ ಕವನ ಸಂಕಲನಗಳು. ಇಂಗ್ಲಿಷ್, ಹಿಂದಿ, ಪಂಜಾಬಿ, ತಮಿಳು, ತೆಲುಗು, ಮಲಯಾಳಮ್, ಕೊಂಕಣಿ ಹಾಗೂ ತುಳು ಭಾಷೆಗೆ ಅವರ ಕವನಗಳು ಅನುವಾದವಾಗಿವೆ. ರಾಷ್ಟ್ರಮಟ್ಟದ ಕಾವ್ಯಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ವ್ಯಾಕರಣ, ಮೀಮಾಂಸೆ ಕ್ಷೇತ್ರಗಳಲ್ಲಿ ಒಳ್ಳೆಯ ಪಾಂಡಿತ್ಯ ಗಳಿಸಿರುವ ಶ್ರೀಯುತರು ಮಂಗಳೂರು ಆಕಾಶವಾಣಿ ಕೇಂದ್ರದ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಸಾಹಿತ್ಯದೊಂದಿಗೆ ಮಾಧ್ಯಮ, ರಂಗಭೂಮಿ, ಸಿನಿಮಾ, ಸಂಘಟನೆ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ವ್ಯಸ್ತರಾಗಿದ್ದಾರೆ. ಒಳ್ಳೆಯ ವಾಗ್ಮಿ ಮತ್ತು ವಿದ್ವಾಂಸರೆಂದು ಮಾನ್ಯರಾಗಿದ್ದಾರೆ.

ಯುದ್ಧ ಸೈನಿಕರು

©Alochane.com 

bottom of page