ಯುದ್ಧದ ದುರಂತಗಳು ಕಾಡುವದು ಅಸಹಾಯಕರನ್ನು
"(ನೀವೀಗ ನೋಡಿದ ಭೀಕರ ಚಿತ್ರಣ ಬಹುತೇಕ ಸಾಧ್ಯ; ಒಂದು ವೇಳೆ ನಿಜವಾದ ಪರಮಾಣು ಬಾಂಬ್ ಸ್ಫೋಟ ನಡೆದರೆ ಉಂಟಾಗುವ ಭೀಕರತೆಯ ಭಾಗಶಃ ಚಿತ್ರಣವಿದು ಎನ್ನಬಹುದು. ಅಂಥದೊಂದು ದುರಂತ ದಿನವನ್ನು ತಡೆಗಟ್ಟಲು ಎಲ್ಲ ದೇಶಗಳೂ ಮನಸ್ಸು ಮಾಡಲು ಈ ಚಿತ್ರ ಪ್ರೇರಣೆಯಾಗಲಿ") ರಷ್ಯಾ ಮತ್ತು ಯುಕ್ರೇನ್ ಯುದ್ಧವನ್ನು ಟೆಲಿವಿಷನ್ ಗಳಲ್ಲಿ ನೋಡುತ್ತಿರುವಂತೆಯೇ ಮನಸ್ಸು ಭಾರವಾಗುತ್ತಿದೆ. ಜಗತ್ತಿನ ಯಾವ ಭಾಗದಲ್ಲಿಯೇ ಯುದ್ಧವಾದರೂ ಭಾರತಕ್ಕೆ ಅದರ ಬಿಸಿ ತಟ್ಟುವದು ಇದೇನೂ ಹೊಸತಲ್ಲ. ಗಲ್ಫಿನಲ್ಲಿ, ಪಿಜಿಯಲ್ಲಿ, ಉಗಾಂಡಾದಲ್ಲಿ ಹೀಗೆ ಎಲ್ಲ ಕಡೆ ನಡೆದಾಗ ಭಾರತೀಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ದೀಪಾವಳಿಯ ಪಟಾಕಿಯ ಸದ್ದನ್ನುಮೀರಿ ಒಂದೊಂದಕ್ಕೆ ಮಿಲಿಯನ್ ಗಟ್ಟಲೆ ವೆಚ್ಚವಿರುವ ಬೆಂಕಿಯುಂಡೆಗಳ ಸುರಿಮಳೆಆಗುವದನ್ನು ನೋಡುವಾಗ ಅದೇ ಯುದ್ಧದಿಂದ ತಮ್ಮ ಮನೆಮಾರು ಕಳೆದುಕೊಂಡು ಏಕದಂ ಬೀದಿಗೆ ಬಿದ್ದವರು ಅತ್ತೂ ಅತ್ತೂ ಕಣ್ಣೀರು ಸಹ ಬತ್ತಿಹೋಗಿ ಕುಡಿಯುವ ನೀರಿಗೆ ಹಿಮವನ್ನೇ ಕರಗಿಸಿ ಕುಡಿಯಲು ಪ್ರಯತ್ನಿಸುವ ದೃಶ್ಯವನ್ನು ನೋಡುತ್ತಿದ್ದೇವೆ. ಉಕ್ರೇನಿಗರಾಗಿ ಜನಿಸಿರುವದೊಂದೇ ಅವರ ತಪ್ಪಾಗಿರಬಹುದು. ಈ ನಡುವೆ ರಷ್ಯಾ ಪರಮಾಣು ಅಸ್ತ್ರವನ್ನು ಬಳಸಲು ಹಿಂದೆಮುಂದೆ ನೋಡುವದಿಲ್ಲ ಎನ್ನುವ ಬೆದರಿಕೆಯನ್ನು ಹಾಕಿದೆ. ಇದು ಕೇವಲ ಯುದ್ಧಸ್ಯ ಕಥಾ ರಮ್ಯಃ ಎಂದು ಅಂದುಕೊಳ್ಳದೇ ಜಗತ್ತು ಈ ಬೆದರಿಕೆಯನ್ನು ಗಂಭೀರವಾಗಿ ಮತ್ತೊಮ್ಮೆ ಚಿಂತಿಸುವ ಕಾಲ ಹತ್ತಿರ ಬಂದಿದೆ. ಈ ಕಲಘಟ್ಟದಲ್ಲಿ ನೆನಪಾಗಿರುವದು ಎರಡು ಪ್ರಮುಖ ಕಲಾಕೃತಿಗಳು. ಮೊದಲನೆಯದು 1982ರಲ್ಲಿ ಬಿಡುಗಡೆಯಾದ ಅಮೇರಿಕಾದ ಪ್ರಸಿದ್ಧ ಚಲನಚಿತ್ರ ನಿರ್ದೇಶಕ Nicholas Meyerನ “The Day After” ಎನ್ನುವ ಚಲನಚಿತ್ರ. ಈ ಚಲನ ಚಿತ್ರದ ಕೊನೆಯಲ್ಲಿ ನಿಕೋಲಸ್ ಇಡೀ ಜಗತ್ತಿಗೆ ಈ ಮೇಲಿನ ಸಂದೇಶವನ್ನು ನೀಡಿದ್ದಾನೆ. ಚನಚಿತ್ರವನ್ನು ನೋಡಿ ಇಪ್ಪತ್ತೆಂಟು ವರ್ಷಗಳ ನಂತರವೂ ನಿಕೋಲಸ್ ಕೊಟ್ಟ ಎಚ್ಚೆರಿಕೆ ಆಗಾಗ ಕಾಡುತ್ತಲೇ ಇರುತ್ತಿದೆ. ಅದು ಅಮೇರಿಕಾ ಮತ್ತು ಸೋವಿಯತ್ ಒಕ್ಕೂಟಗಳ ನಡುವಿನ ಶೀತಲ ಸಮರ ತೀವ್ರಗೊಂಡ ಕಾಲ. ಜರ್ಮನಿ ಪೂರ್ವ ಮತ್ತು ಪಶ್ಚಿಮಗಳಾಗಿ ನಡುವೆ ಬರ್ಲಿನ್ ಗೋಡೆ ಇತ್ತು. ಈ ಗೋಡೆಯ ಕಾರಣದಿಂದಲೇ ಅಮೇರಿಕಾನೇತ್ರತ್ವದ NATO ಮತ್ತು ಸೋವಿಯತ್ ಒಕ್ಕೋಟದ ನಡುವಿನ WARSAW ಪಡೆಗಳ ನಡುವ ಹೆಲ್ಮ್ ಸ್ಟೆಡ್-ಮರಿನ್ ಬಾರ್ನ್ ಗಡಿಯಲ್ಲಿ ಪ್ರಾರಂಭವಾದ ಯುದ್ಧ ನಿಧಾನವಾಗಿ ಜಗತ್ತನ್ನು ಆವರಿಸಿಕೊಳ್ಳುತ್ತದೆ. ಯುರೋಪಿನಿಂದ ದೂರವಿರುವ ಅಮೇರಿಕಾದ ಕಾನ್ಸಾಸ್ ನಗರದಲ್ಲಿ ಜನಗಳು ಇದಕ್ಕೆಲ್ಲ ತಲೆಬಿಸಿಮಾಡಿಕೊಳ್ಳದೇ ಶಾಂತಯುತ ಜೀವನವನ್ನು ನಡೆಸುತ್ತಿದಾರೆ. ಈ ಕಾನ್ಸಾಸ್ ಸಿಟಿಯ ಹತ್ತಿರವೇ ಸ್ವೀಟ್‌ಸೇಜ್‌ನಲ್ಲಿರುವ ಮಿನಿಟ್‌ಮ್ಯಾನ್ ಎನ್ನುವ ಖಂಡಾಂತರ ಮಿಸ್ಸೈಲ್ ಉಡಾವಣಕೇಂದ್ರವಿದೆ. ಅಲ್ಲಿನ ಪುಟ್ಟ ಮಕ್ಕಳು ಟೆಲಿವಿಷನ್ನಿನಲ್ಲಿ ಕಾರ್ಟೂನ್ ನೋಡುತ್ತಿದ್ದಾರೆ. ಯಾರದೋ ಮದುವೆಸಿದ್ದತೆ, ಇನ್ಯಾರದೋ ಮತ್ತೇನೋ ವ್ಯವಹಾರ ಹೀಗೆ ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿ ಉದ್ವಿಗ್ನವಾಗಿರುವ ಜಗತ್ತಿನ ಎರಡು ಶಕ್ತಿಗಳ ಕುರಿತು ತಲೆಕೆಡಿಸಿಕೊಳ್ಳುತಿಲ್ಲ. ಇದ್ದಕ್ಕಿದ್ದಂತೆ ಪರ್ಸಿಯನ್ ಕೂಲ್ಲಿಯಲ್ಲಿ ನ್ಯಾಟೊ ಪಡೆಗಳಿಂದ ನೌಕೆಗಳ ವಿರೋಧಿ ನೌಕೆಗಳಮೇಲೆ ದಾಳಿ ನಡೆಸಲಾಗುತ್ತದೆ. ಆ ಕ್ಷಣದಿಂದ ಯುದ್ಧ ಗಂಭೀರರೂಪ ಪಡೆದುಕೊಳ್ಳುತ್ತದೆ. ಟೀವಿಚಾನೆಲ್ಲಿನಲ್ಲಿ ಎಲ್ಲಾ ಮನರಂಜನೆಗಳು ಮಾಯವಾಗಿ ಅಣುಯುದ್ಧದ ಅಪಾಯದ ವರದಿ ಬಿತ್ತರಿಸತೊಡಗುತ್ತದೆ. ಸೈರನ್ ಎಚ್ಚರಿಕೆಯನ್ನು ನೀಡುತ್ತದೆ. ನಾಗರಿಕರಲ್ಲಿ ಆತಂಕ ಸುರುವಾಗಿ ಎಲ್ಲಾಕಡೆ ಗೊಂದಲದ ವಾತಾವರಣ. ಯುದ್ಧಕಾಲದ ಮುನ್ನೆಚ್ಚಿರೆಕೆಗಾಗಿ ತಮಗೆ ಬೇಕೋ ಬೇಡವೋ ಎಲ್ಲರೂ ಸಾಮಾನುಸರಂಜಾಮುಗಳ ಸಂಗ್ರಹಕ್ಕೆ ಮುಂದಾಗುತ್ತಾರೆ. ಎಲ್ಲೆಡೆಯೂ ಸ್ವಾರ್ಥ ಮತ್ತು ತನಗೊಬ್ಬನಿಗೆ ಮಾತ್ರ ಹೇಗಾದರೂ ಸುರಕ್ಷಿತ ತಾಣಗಳನ್ನು ಕಂಡುಕೊಳ್ಳಬೇಕೆನ್ನುವ ಧಾವಂತವಿದೆ. ಹೈವೇಗಳಲ್ಲಿ ಕಾರಿನಲ್ಲಿ ಜನಜಂಗುಳಿ ಮತ್ತು ಟ್ರಾಫಿಕ್ ಜಾಮ್ ಕಂಡುಬರುತ್ತದೆ. ಇಂತಹ ಹೊತ್ತಿನಲ್ಲಿ ನೀಲಬಾನಿನಲ್ಲಿ ಎರಡು ರಾಕೆಟ್ ಚಿಮ್ಮುತ್ತವೆ. ಎಚ್ಚರಿಕೆಯನ್ನು ಮೊಳಗಿಸುತ್ತಿರುವ ಸೈರನ್ ಒಮ್ಮೆಲೆ ಸ್ತಬ್ಧವಾಗಿಬಿಡುತ್ತದೆ. ಮಾರ್ಗದಲ್ಲಿ ಓಡಾಡುತ್ತಿರುವ ವಾಹನಗಳ ಎಂಜಿನ್ ಜಾಮ್ ಆಗುತ್ತವೆ. ಮರುಕ್ಷಣದಲ್ಲಿ ದೊಡ್ಡ ಸ್ಪೋಟದ ಶಬ್ಧಕೇಳಿಬರುತ್ತದೆ. ಇದ್ದಕ್ಕಿದ್ದಂತೆ ನಾಯಿಕೊಡೆಯಾಕಾರದಲ್ಲಿ ಮುಗಿಲೆತ್ತರಕ್ಕೆ ಬೆಂಕಿಯಗೋಲವೊಂದು ಎದ್ದೇಳುತ್ತದೆ. ಮುಂದಿನದು ಮಾತ್ರ ಬಾರೀ ಅನಾಹುತ. ಮದುವೆಯ ಸಂಬ್ರಮದಲ್ಲಿರುವ ಜೋಡಿ, ವಾಹನಗಳ ಸಾಲು, ಕಟ್ಟಡಗಳು ಪರಿಸರವೆಲ್ಲ ಒಮ್ಮೆಲೇ ಬೆಂಕಿಯುಂಡೆಯಾಗಿ ಜನಗಳ ಅಸ್ಥಿಪಂಜರ ಕಂಡು ಅವರೆಲ್ಲರೂ ಕ್ಷಣಮಾತ್ರದಲ್ಲಿ ಆವಿಯಾಗಿ ಹೋಗುತ್ತಾರೆ. ಪರಮಾಣು ಯುದ್ಧದ ಭೀಕರ ದೃಶ್ಯವನ್ನು ನೋಡುತ್ತಿರುವಂತೆ ನಾವೂ ಹೆದರಿಕೆಯಿಂದ ಎಲ್ಲಿಯಾದರೂ ಅವಿತಿರುವ ಎಂದು ಕೊಳ್ಳುತ್ತೇವೆ. ಸೋವಿಯತ್ ಯೂನಿಯನ್ ಕೂಡಾ ಇದಕ್ಕಿಂತ ಭಿನ್ನವಾದ ಪರಿಸ್ಥಿತಿಯನ್ನು ಎದುರಿಸುವದಿಲ್ಲ. ಅಲ್ಲೂ ಸಹ ಸರ್ವನಾಶವಾಗಿದೆ ಎನ್ನುವದನ್ನು ನಿರ್ದೇಶಕ ಪರೋಕ್ಷವಾಗಿ ಹೇಳುತ್ತಾನೆ. ಎಲ್ಲ ಮುಗಿದ ಮೇಲೆ ಉಳಿದವರು ಯಾರು ಎನ್ನುವದೇ ಪ್ರಶ್ನೆ. ಬದುಕುಳಿದವರು ವಿಕಿರಣಗಳಿಂದ ಸಾಯುತ್ತಲೇ ಇರುತ್ತಾರೆ. ಈ ಹೊತ್ತಿನಲ್ಲಿ ಅಮೇರಿಕಾದ ಅಧ್ಯಕ್ಷ ಎರಡೂ ದೇಶಗಳ ನಡುವೆ ಶಾಂತಿ ಒಪ್ಪಂದ ಮಾಡಿಕೊಂಡಿರುವದರ ಕುರಿತು ಘೋಷಿಸಿದರೆ ಅದನ್ನು ಕೇಳಲು ಜನಗಳೇ ಇಲ್ಲ. ದುರಂತಗಳ ನಡುವೆ ಬದುಕಿದ ಜಿಮ್ ಡಾಲ್ಬರ್ಗ ಎನ್ನುವಾತ ವಿಕಿರಣಗಳ ನಡುವೆಯೇ ತನ್ನ ಜಮೀನಿನಲ್ಲಿ ಬೆಳೆತೆಗೆಯಲು ಹೋದರೆ ಅಲ್ಲಿ ಅದಾಗಲೇ ಅತಿಕ್ರಮಿಸಿಕೊಂಡಿರುವವರು ದಯೆಯಿಲ್ಲದೇ ಡಾಲ್ಬರ್ಗನನ್ನು ಗುಂಡುಹಾರಿಸಿ ಕೊಲ್ಲುತ್ತಾರೆ. ಈ ಮದ್ಯೆ ಡಾ. ಓಕ್ ಎನ್ನುವ ವೈದ್ಯ ಆಸ್ಪತ್ರೆಗೆ ದಾಖಲಾಗಿರುವರಿಗೆ ಚಿಕೆತ್ಸೆಮಾಡುತ್ತಲೇ ತಾನೂ ವಿಕಿರಣಗಳ ದುಷ್ಪರಿಣಾಮಕ್ಕೆ ಗುರಿಯಾಗುತ್ತಾನೆ. ತನ್ನ ಮನೆಯನ್ನು ನೋಡಿಯಾದರೂ ಸಾಯಬೇಕೆಂದು ಬಂದರೆ ಅಲ್ಲಿರುವದು ಎಲ್ಲ ಸರ್ವನಾಶವಾಗಿರುವ ಪರಿಸರ. ಹಸಿವು ನೀರಡಿಕೆಗಳಿಂದ ಬಳಲಿರುವ ಈತ ತನ್ನ ಮನೆಯಿರುವ ಜಾಗಕ್ಕೆ ಬಂದರೆ ಅಲ್ಲಿ ಓರ್ವ ವಿಕಿರಣಪೀಡಿತ ವ್ಯಕ್ತಿ ಬದುಕುಳಿದಿರುವ ತನ್ನ ಮನೆಯವರೊಂದಿಗೆ ಅತಿಕ್ರಮಿಸಿಕೊಂಡು ಅಡುಗೆಯನ್ನು ಬೇಯಿಸುತ್ತಿರುತ್ತಾನೆ. ಹಸಿವು ನೀರಡಿಕೆಗಳಿಂದ ಬಳಲಿದ ಡಾ. ಓಕ್ಸ್ ನಡುಗುವ ದನಿಯಲ್ಲಿ ಗದರಿಸುತ್ತಾ This is my house ಎಂದು ಹೇಳಿ ಓಡಿಸಲು ನೋಡಿದರೆ ಅವನೇ ಡಾ. ಓಕ್ ರಿಗೆ ಮೌನವಾಗಿ ಆಹಾರವನ್ನು ನೀಡಿತ್ತಾನೆ. ಮಾನವೀಯತೆಯೇ ಇಲ್ಲದ ಪರಿಸರದಲ್ಲಿ ಮೂಡುವ ಈ ದೃಶ್ಯ ನಮ್ಮನ್ನು ಮೂಕರನ್ನಾಗಿಸುತ್ತದೆ. ಡಾ. ಓಕ್ ಈ ದೃಶ್ಯವನ್ನು ನೋಡಿ ತಡೆದುಕೊಳ್ಳಲಾರದೇ ಕುಸಿದು ಬಿಕ್ಕುತ್ತಾನೆ. ಅದೇ ವ್ಯಕ್ತಿ ಇವನನ್ನು ತಬ್ಬಿಕೊಂಡು ಮೌನವಾಗಿ ಸಮಾಧಾನ ಮಾಡುತ್ತಾ ತಾನೂ ಅಳುತ್ತಾನೆ. ಸಾವಿನಲ್ಲಿ ಶಾಂತಿಯನ್ನು ಕಾಣುವ ದೃಶ್ಯ ಇದು. ಎಲ್ಲ ಕಡೆ ಬರ್ಬರ, ನೀರವ ರುದ್ರತಾಂಡವ. ಲಾರೆನ್ಸ್ ವಿಜ್ಞಾನ ವಿಭಾಗದ ಮುಖ್ಯಸ್ಥ ಜೋ ಹಕ್ಸ್‌ಲಿಯು ಇತರ ಬದುಕುಳಿದವರನ್ನು ಶಾರ್ಟ್‌ವೇವ್ ರೇಡಿಯೊದೊಂದಿಗೆ ಸಂಪರ್ಕಿಸಲು ಪದೇ ಪದೇ ಪ್ರಯತ್ನಿಸುತ್ತಾ Hello Anybody there... No.... ಎನ್ನುವ ಉದ್ಘಾರದೊಂದಿಗೆ ಸಿನೇಮಾ ಮುಗಿಯುತ್ತದೆ. ಇಡೀ ಸಿನೇಮಾ ಮುಗಿಯುತ್ತಿದ್ದಂತೆ ನಮ್ಮನ್ನು ಕಾಡುವ ನೀರವ ವ್ಯಾಕುಲತೆಯ ನಡುವೆ ನಾವು ಸಹ ಜಗತ್ತಿನ ಪ್ರಭುಸತ್ತೆಯ ಅಮಲುಹಿಡಿದವರಿಗೆ ನಿರ್ದೇಶಕ ಕೂಗಿ ಕೂಗಿ ಹೇಳುವ ಸಂಭವನೀಯ ಅಪಾಯಗಳು ಕೇಳಿಸಲಿ ಎಂದು ಬಿಕ್ಕಳಿಸುತ್ತೇವೆ. ಇತಿಹಾಸದಲ್ಲಿ ಇನ್ನೊಂದು ಇಂತಹ ಮನಕಲುಕುವ ಘಟನೆಗಳು ನೆನಪಾಗುವದು ಸ್ಪೇನಿನ ಚಿತ್ರಕಾರ ಪ್ರಾನ್ಸಿಸ್ಕೋ ಗೋಯಾ ಎನ್ನುವ ಚಿತ್ರಕಾರ ರಚಿಸಿದ “Disasters of war” ಎನ್ನುವ ಕಪ್ಪುವರ್ಣದ(Black Paintings) ಸರಣಿ ಕಲಾಕೃತಿಗಳು. Francisco Goyo ಸುಮಾರು 1810 ರಿಂದ 1822ರ ನಡುವೆ ತನ್ನ ಮನೆಯಲ್ಲಿ ಅಜ್ಞಾತನಾಗಿ ಬದುಕಿದ್ದಾಗ ಮನೆಯ ಗೋಡೆಗಳ (Mural Paintings) ರಚಿಸಿದ ಚಿತ್ರಗಳು ಇವು. ಈತ 1790ರಲ್ಲಿ ಸ್ಪೇನಿನ ರಾಜಾಸ್ಥಾನದ ಚಿತ್ರಕಾರನಾಗಿದ್ದ. ತನ್ನ ಕುಂಚದಿಂದ ಪ್ರಣಯ ಮತ್ತು ರಾಜರುಗಳ ವರ್ಣಚಿತ್ರಗಳನ್ನು ಬೀಡಿಸಿ ಸಮಾಜದಲ್ಲಿ ಘನವೇತ್ತ ವ್ಯಕ್ತಿಯಾಗಿದ್ದ. ಫ಼್ರಾನ್ಸ್ ಮತ್ತು ಸ್ಪೇನ್ ಎರಡೂ ಕಡೆಯೂ ಬೆಳೆದಿರುವದರಿಂದ ಈತನಿಗೆ ಈ ಎರಡೂ ದೇಶದ ಕುರಿತು ಸಮಾನ ಪ್ರೀತಿಯಿತ್ತು. ಊಳಿಗಮಾನ್ಯ ಪದ್ಧತಿಯಿಂದ ಫ಼ೆಂಚ್ ಬಿಡುಗಡೆಯಾಗುತ್ತದೆ, ಅಲ್ಲಿ ಪ್ರಜಾಸತಾತ್ಮಕ ಅಧಿಕಾರ ದೊರೆಯುತ್ತದೆ ಎಂದು ಈತ ಫ಼್ರ್ಂಚ್ ಕ್ರಾಂತಿಯನ್ನು ಬೆಂಬಲಿಸಿದ್ದ. ಸ್ಪೇನಿನ ದೊರೆ ನಾಲ್ಕನೆಯ ಚಾರ್ಲ್ಸ್ ಮತ್ತು ಆತನ ಮಗ ಫ಼ರ್ಡಿನ್ಯಾಂಡ್ ಇವರಿಬ್ಬರಿಗೂ ಈತ ಮೆಚ್ಚುಗೆಯ ಕಲಾವಿದನಾಗಿದ್ದ. ಶಾಂತಿಯಿಂದಿರುವ ಸ್ಪೇನನ್ನು ನೆಪೋಲಿಯನ್ ಬೋನಾಪಾರ್ಟ್ ಪೆನುನ್ಸಾಲರ್ ಯುದ್ಧದಲ್ಲಿ ಆಕ್ರಮಿಸಿಕೊಂಡ ಬಳಿಕ ಸ್ಪೇನಿನಲ್ಲಿ ಆತನ ಸೈನಿಕರು ಹಿಂಸಾತ್ಮಕ ಕೃತ್ಯಕ್ಕೆ ತೊಡಗುತ್ತಾರೆ. ಈ ದುರಂತಗಳನ್ನು ಕಣ್ಣಾರೆ ಕಂಡವನಿಗೆ ಯುದ್ಧ ಆಘಾತವನ್ನುಂಟುಮಾಡುತ್ತದೆ. ಯಾವ ಕ್ರಾಂತಿಯನ್ನು ಬೆಂಬಲಿಸಿದ್ದನೋ ಅದೇ ಕ್ರಾಂತಿಯ ನಂತರ ಉದ್ಭವಿಸಿದ ನೆಪೋಲಿಯನ್ ಮತ್ತೋರ್ವ ಸರ್ವಾಧಿಕಾರಿಯಾಗಿ ಬದಲಾಗಿದ್ದಾನೆ. ರಾಜ್ಯವಿಸ್ತರಣಾಗಿ ಮತ್ತಿತರ ದೇಶಗಳನ್ನು ಯುದ್ಧದಕೂಪಕ್ಕೆ ತಳ್ಳುವಾಗ ಆತನ ಸೈನಿಕರು ಜನಸಾಮಾನ್ಯ ಮೇಲೆ ಕ್ರೌರ್ಯವನ್ನು ಮೆರೆಯುತ್ತಾರೆ. ಇದನ್ನು ನೋಡಿ ಗೋಯಾನಿಗೆ ಜಿಗುಪ್ಸೆಯಾಯಿತು. ಅಸಹನೆಯಿಂದ ಚಡಪಡಿಸುತ್ತಿದ್ದ. ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದ. ಈ ಮಾನಸಿಕ ಒತ್ತಡವೋ ಏನೋ ತನ್ನ 62ನೆಯ ವರ್ಷಕ್ಕೇ ಈತ ಕಿವುಡನಾಗಬೇಕಾಯಿತು. ರಾಜಾಸ್ಥಾನವನ್ನು ಬಿಟ್ಟು ತನ್ನಮನೆಯಲ್ಲಿ ಏಕಾಂತದಲ್ಲಿ ಇರತೊಡಗಿದೆ. ಆತನ ಕುರಿತು ಹೊರಜಗತ್ತಿಗೆ ಮಾಹಿತಿ ಸಿಗದಂತೆ ಇರತೊಡಗಿದ. ಯುದ್ಧವೆನ್ನುವದರ ಆಂತರ್ಯದಲ್ಲಿ ದೇಶಾಭಿಮಾನಕ್ಕಿಂತಲೂ ದರ್ಪ, ದೌಲತ್ತುಗಳನ್ನು ಮೆರೆಯುವ ಸಾಧನ ಎನ್ನುವದು ಆತನಿಗೆ ಅರಿವಾಯಿತು. ಈ ಕ್ರೌರ್ಯಕ್ಕೆ ಪ್ರಜೆಗಳಿಗೆ ತಾನು ಏನನ್ನೂ ಮಾಡಲಾಗದ ಅಸಹಾಯಕತೆ ಈತನನ್ನು ಕಾಡತೊಡಗಿತು. ಈ ನೋವನ್ನು ಮರೆಯಲು ಮನೆಯ ಗೋಡೆಯನ್ನೇ ಕಾನ್ವಾಸ ಮಾಡಿ 82 ಸರಣಿ ಚಿತ್ರಗಳನ್ನು ಚಿತ್ರಿಸಿದ. ಅವೇ ಇತಿಹಾಸ ಪ್ರಸಿದ್ಧವಾದ Disasters of War ಎನ್ನುವ ಕಪ್ಪುವರ್ಣಚಿತ್ರಗಳ ಸರಣೀ. ಈತ ತೀರಿಕೊಂಡ ಸುಮಾರು ಇಪ್ಪತ್ತೆರಡು ವರ್ಷಗಳ ನಂತರ ಈ ಕಲಾಕೃತಿಗಳು ಬೆಳಕಿಗೆ ಬಂದವು. ಇಲ್ಲಿನ ಒಂದೊಂದು ಚಿತ್ರವೂ ಯುದ್ಧದ ಭೀಕರತೆ ಮತ್ತು ದುರಂತವನ್ನು ಸಾರುತ್ತದೆ. ಪಾಶ್ಚಾತ್ಯರಲ್ಲಿ ಕಪ್ಪು ಬಣ್ಣ ಸೂತಕದ ಸಂಕೇತ. ಕ್ರೌರ್ಯ ಮತ್ತು ದುರಂತದ ರಕ್ತಸಿಕ್ತ ದೃಶ್ಯಗಳನ್ನು ಹಸಿಹಸಿಯಾಗಿ ನೋಡಿದವನಿಗೆ ಈ ಯುದ್ಧವೆನ್ನುವದು ಯಾರ ಒಳಿತಿಗಾಗಿಯಲ್ಲ ಎಂದೆನಿಸಿತು. ದೇಶಾಭಿಮಾನ ಎನ್ನುವದೆಲ್ಲ ಆತನಿಗೆ ಲೋಳಾಲೊಟ್ಟೆಯಾಗಿ ಕಂಡು ಇದರ ಹಿಂದಿರುವ ಅಧಿಕಾರದ ಮತ್ತು ಶೋಷಣೆ ಯಾವ ಕ್ರಾಂತಿಯಿಂದಲೂ ಹೋಗಲಾಡಿಸಲು ಸಾಧ್ಯವಿಲ್ಲವೆನ್ನುವ ಸತ್ಯವನ್ನು ಆತ ಕಂಡುಕೊಂಡ. ಈ ಕಾರಣಕ್ಕಾಗಿ ಮೊದಲು ಆತ ಫ಼್ರ್ಂಚರನ್ನು ವಿರೋಧಿಸಿದರೂ ನಂತರ ಸ್ಪೇನಿನ ಅರಸೊತ್ತಿಗೆಯೂ ಸಹ ಈತನಿಗೆ ಮಾನವೀಯತೆಯ ವಿರೋಧಿಯಾಗಿ ಕಂಡಿತು. ಆಸ್ಥಾನಿಕರು ಯಾರು ಅಧಿಕಾರಕ್ಕೆ ಬಂದರೂ ಅವರ ಹೊಗಳುಭಟರಾಗಿ ಬದಲಾಗುತ್ತಾರೆ. ಜನಸಾಮಾನ್ಯರು ಮಾತ್ರ ಹಿಂಸಾರತಿಯ ವಿಷವ್ಯೂಹಕ್ಕೆ ಬಲಿಯಾಗುತ್ತಾರೆ. ಗೋಯಾನಿಗೆ ತಾನೂ ಈ ವ್ಯವಸ್ಥೆಯ ಭಾಗವಾಗಿರುವದರಿಂದ ಪಶ್ಚಾತಾಪ ಪಡುತ್ತಾನೆ. ಆ ಪಾಪಕ್ಕೆ ಪ್ರಾಯಶ್ಚಿತ್ತವೆಂದು ಯುದ್ಧದ ದುರಂತಗಳೆನ್ನಲ್ಲ ಈತನ ಚಿತ್ರಗಳ ಸರಣಿಯಲ್ಲಿ ವ್ಯಕ್ತವಾಗಿವೆ. ಈ ಚಿತ್ರಗಳು ನಮ್ಮನ್ನು ಮೌನಕ್ಕೆ ಜಾರಿಸಿಬಿಡುತ್ತದೆ. ಯುದ್ಧವೆನ್ನುವ ಹಿಂಸಾರತಿಗೆ ಸಿಕ್ಕ ಸಾಮಾನ್ಯರ ಬವಣೆಗಳನ್ನು ನಮ್ಮ ರಕ್ತ ಹೆಪ್ಪುಗಟ್ಟುವ ರೀತಿಯಲ್ಲಿ ವಿವರಿಸುತ್ತವೆ. ಕೆಲವಕ್ಕೆ ಈತ ಶೀರ್ಷಿಕೆಗಳನ್ನು ಬರೆದಿದ್ದಾನೆ. ಇನ್ನು ಕೆಲವಕ್ಕೆ ಬರೆದಿಲ್ಲ. ಶೀರ್ಷಿಕೆಗಳನ್ನು ಓದುವ ಮೊದಲೇ ನೋಡುಗನ ಕಣ್ಣು ಮಂಜಾಗಿಬಿಡುವದರಿಂದ ಅದರ ಅಗತ್ಯಗಳು ಇರುವದಿಲ್ಲ. ಒಂದು (Plate No. 2) ಚಿತ್ರದಲ್ಲಿ ಸೈನಿಕರು ನಿರಾಯುಧರಾದ ಪ್ರಜೆಗಳನ್ನು ಬಾನೆಟ್ಟಿನಿಂದ ತಿವಿಯುತ್ತಿದ್ದಾರೆ. ಅವರ ಮುಖ ಕಾಣುವದಿಲ್ಲ. ನೋವಿನಿಂದ ಕಿವಿಚಿಕೊಂಡ ವ್ಯಕ್ತಿಗಳಿಗೆ ಕೂಗುವದಕ್ಕೂ ಆಗದ ಭಯವ್ಯಕ್ತವಾಗುತ್ತಿದೆ. ಈ ಚಿತ್ರಕ್ಕೆ ಆತ ಕೊಟ್ಟ ಶೀರ್ಷಿಕೆ With or without reason. ಸ್ಪೇನಿನ ಎಲ್ಲಾ ಪ್ರಜೆಗಳು ವಯಸ್ಸು ಪ್ರಾಯವೆನ್ನದೇ ಯುದ್ಧಕ್ಕೆ ಸೇರಿ ಶತ್ರುಗಳೊಂದಿಗೆ ಹೋರಾಡಬೇಕೆನ್ನುವ ಆದೇಶ ಹೊರಡಿಸಿದ್ದಾರೆ. ಈ ಕಾರಣಕ್ಕೆ ಓರ್ವ ಮಹಿಳೆ ತನ್ನ ಹಸಿ ಕಂದಮ್ಮನನ್ನು ಕೈಯಲ್ಲಿ ಎತ್ತಿಕೊಂಡೇ ಶತ್ರುಸೈನಿಕನನ್ನು ಯಾವುದೋ ಆಯುಧದಿಂದ ತಿವಿಯುತ್ತಾಳೆ. ಅದಕ್ಕೆ ಆತ ಕೊಟ್ಟಿರುವ ಶೀರ್ಷಿಕೆ "ಅವು ಉರಿಯುತ್ತಿವೆ (And They are fiers). ಒಂಬತ್ತನೇ ಚಿತ್ರದಲ್ಲಿ ಓರ್ವ ಹಣ್ಣು ಮುದುಕಿ ಕೈಯಲ್ಲಿ ಚಿಕ್ಕ ಚಾಕುವನ್ನು ಹಿಡೀದುಕೊಂಡು ಓರ್ವ ತರುಣಿಯನ್ನು ಸೈನಿಕನೋರ್ವ ಅತ್ಯಾಚಾರವೆಸಗುವದನ್ನು ತಪ್ಪಿಸುವ ಪ್ರಯತ್ನ ಮಾಡುತ್ತಾಳೆ. 59ನೆಯ ಚಿತ್ರದಲ್ಲಿ ಯುದ್ಧದ ಘೋರ ಪರಿಣಾಮಕ್ಕೆ ಸಿಕ್ಕ ಮೂವರು ಹಸಿದು ಕಂಗಾಲಾಗಿರುವ ಹೆಣ್ಣುಮಕ್ಕಳಲ್ಲಿ ಇಬ್ಬರು ನೆಲದಲ್ಲಿ ಮಲಗಿದ್ದಾರೆ. ಅವರಲ್ಲೊಬ್ಬಳು ಸಾಯುವ ಸ್ಥಿತಿಯಲ್ಲಿದ್ದಾಳೆ. ಮೂರನೆಯವಳು ಒಂದು ಖಾಲಿ ಕಪ್ಪನ್ನು ಕಯಲ್ಲಿ ಹಿಡಿದುಕೊಂಡಿದ್ದಾಳೆ. ಗೋಯಾ ಈ ಚಿತ್ರಕ್ಕೆ "What good is a cup"?ಎನ್ನುವ ಶೀರ್ಷಿಕೆ ಕೊಟ್ಟಿದ್ದಾನೆ. ಮಹಿಳೆ ಮತ್ತು ಅಸಾಹಾಯಕರಾದ ವ್ಯಕ್ತಿಗಳ ನೋವು ಕಷ್ಟಗಳೆಲ್ಲ ರಾಜಾಜ್ಞೆಗಳ ನಡುವೆ ನಲುಗಿಹೋಗುವದನ್ನು ಕಾಣಬಹುದು. ಗೋಯಾನ ಕಪ್ಪುಚಿತ್ರಗಳು ನಮ್ಮ ರಕ್ತವನ್ನು ತಣ್ಣಗಾಗಿಸುತ್ತವೆ. ಎಲ್ಲಾ ಎಂಬತ್ತೆರಡನ್ನೂ ಸರಾಗವಗಿ ನೋಡಲು ಸಾಧ್ಯವಾಗುವದಿಲ್ಲ. ಮಾನವೀಯತೆ ಮುರಿದ ಮನೆಯ ಬಾಗಿಲು ಬಡಿದು ನಿಮ್ಮಕೇಳುತ್ತಿದೆ.... ಶಾಂತಿ ಬೇಕಿತ್ತು.... ಉಕ್ರೇನ್ ಮತ್ತು ಜಗತ್ತು ಪುನಃ ಶಾಂತಿಗೆ ಮರಳಲಿ. ನಾರಾಯಣ ಯಾಜಿ ಸಾಲೆ ಬೈಲು