top of page

ಯಂತ್ರದ ರಕ್ಕಸ 

ಯಂತ್ರದ  ರಕ್ಕಸ ತಂತ್ರವ ತೊಟ್ಟು 
ರೈತನ ಮೆಟ್ಟಿ  ಥಯ್ ಥಯ್ ಕುಣಿದ
ಚಿನ್ನವ ಬಿತ್ತಿ ಚಿನ್ನವ ಬೆಳೆದ
ಚಿನ್ನವ ಹಿಡಿದು ಅನ್ನಾ ಎಂದ
ಅನ್ನದ ದೇವರು ಕಾಣಲೆಯಿಲ್ಲ.

ಮಾಳಿಗೆ ಮನೆಯಿದೆ ಮಲಗಲು ಮಂಚ
 ಮೆತ್ತನೆ ಹಾಸಿಗೆ ಬಳಿಯಿದೆ ದಿಂಬು
ಚಿನ್ನದ ಕಣಜ ಕೋಣೆಯ ತುಂಬಿದೆ
ಕ್ಯಾಬರೆ ಕುಣಿತ ಚೌಕಿಯ ಒಳಗೆ
ಹಸಿವಿನ ಕಿಚ್ಚಿಗೆ ಅನ್ನವೆಯಿಲ್ಲ

 ಯಂತ್ರದ ರಕ್ಕಸ ಜುಟ್ಟಿಗೆ ಜೋತಿವೆ
ಮುತ್ತಿನ ಮಾಣಿಕ ವಜ್ರದ ಹರಳು
ಕಾಲಿಗೆ ಕಟ್ಟಿವೆ ಕನಕದ ಗೆಜ್ಜೆ
ತುಳಿತಕೆ ಸಿಕ್ಕಿದೆ ರೈತನ ಬಿತ್ತು
ಯಾರಿಗು ಉಣ್ಣಲು ಅನ್ನವೆಯಿಲ್ಲ.

ಹಸಿವೆಯ ತಾಳದೆ ರಕ್ಕಸ ಯಂತ್ರ
ನೆಲ್ಲನು ಹುಡುಕುತ ನೆಲವನೆ ಕಚ್ಚಿದ ಅಲ್ಲೇನುಳಿದಿದೆ ಯಂತ್ರವೆ ಹೇತ
ಹೊನ್ನಿನ ಹೇಲು ರೈತನ ರಗತ
ಹಸಿವನು ಹಿಂಗಿಸು ಅನ್ನವೆಯಿಲ್ಲ.

ರಟ್ಟೆಯು ಸುಟ್ಟ ರೈತನ ಮಗನು
ಬ್ವೊನವ ನೋಡುತ ಕಣ್ಣೀರ್ಬಿಟ್ಟ
ಯಂತ್ರದ ರಕ್ಕಸ ಹಸಿವೆಯ ತಾಳದೆ
ಹಿಡಿ ಮಣ್ ಮುಕ್ಕಿ ಹಸಿವಲಿ ಸತ್ತ
ಎಂದಿಗೆ ಹರಿವಳೊ ಜಾನ್ಹವಿಯಿತ್ತ?
      - ಡಾ.ಎನ್.ಆರ್.ನಾಯಕ. ಜಾನಪದ ಮತ್ತು ಶಿಷ್ಟ ಸಾಹಿತ್ಯದಲ್ಲಿ ನಿರಂತರ ಕೃಷಿ ಮಾಡುತ್ತಾ ಹದಿ ಹರೆಯದವರನ್ನು ಮೀರಿಸುವ ಉತ್ಸಾಹ,ಕ್ರಿಯಾ,ಇಚ್ಚಾ ಶಕ್ತಿ ಮುಪ್ಪುರಿಗೊಂಡ ವ್ಯಕ್ತಿತ್ವ ಡಾ.ಎನ್.ಆರ್.ನಾಯಕ ಅವರದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾವಿಕೇರಿಯ ಸಣ್ಣ ಅಲಗೇರಿ ಗ್ರಾಮದವರು. ಹೊನ್ನವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ,ಪ್ರಾಚಾರ್ಯರಾಗಿ,ಪಿಎಚ್,ಡಿ. ಮಾರ್ಗದರಶಕರಾಗಿ,ಎನ್.ಎಸ್.ಎಸ್ ಅಧಿಕಾರಿಯಾಗಿ,ಕ.ವಿ.ವಿ.ಧಾರವಾಡದ ವಿವಿಧ ಸಮಿತಿಗಳ ಸದಸ್ಯರಾಗಿ,ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ,ಅ.ಭಾ.ಸಾಹಿತ್ಯ ಸಮ್ಮೇಳನ ವಿವಿಧ ಗೋಷ್ಠಿಗಳ ಅಧ್ಯಕ್ಷರಾಗಿ,ಪ್ರಬಂಧ ಮಂಡನಕಾರರಾಗಿ,ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ,ಜಾನಪದ ಪ್ರಕಾಶನದ ಚಾಲಕ ಶಕ್ತಿಯಾಗಿ,ಜಾನಪದ ದೀಪಾರಾಧನೆ ಎಂಬ ವಿಶಿಷ್ಠ ಕಾರ್ಯಕ್ರಮದ ಮೂಲಕ ಜಾನಪದ ಕಲಾವಿದರನ್ನು, ವಿದ್ವಾಂಸರನ್ನು ಸನ್ಮಾನ ಮಾಡಿ ಸೇವಾ ನಿವೃತ್ತಿಯ ನಂತರವು ಸಾರಸ್ವತ ಲೋಕಕ್ಕೆ ತಮ್ಮ ಕೃತಿಗಳನ್ನು ನೀಡುತ್ತಿರುವ ಡಾ.ನಾಯಕರ ೮೧ ಗ್ರಂಥಗಳು ಈಗಾಗಲೆ ಪ್ರಕಟಗೊಂಡಿವೆ.ನಾಟಕ,ಕಾವ್ಯ,ಜಾನಪದ,ಸಂಶೋಧನೆಯ ಕ್ಷೇತ್ರವನ್ನು ಅವರು ಆಯ್ದುಕೊಂಡು ಸಾರ್ಥಕ ಸೇವೆಯನ್ನು ಸಲ್ಲಿಸುತ್ತಲೆ ಇದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಅಕಾಡೆಮಿಯ ಜಾನಪದ ತಜ಼್ ಪ್ರಶಸ್ತಿ,,ಗೊ.ರು.ಚ.ಪ್ರಶಸ್ತಿ, ವಿ.ಸೀ.ಸನ್ಮಾನ ಹೀಗೆ ಇನ್ನೂ ಅನೇಕ ಪ್ರಶಸ್ತಿ ಮತ್ತು ಸನ್ಮಾನಗಳು ಸಂದಾಯವಾಗಿವೆ.ಅವರ ಸಾಹಿತ್ಯ ಮತ್ತು ಜಾನಪದ ಅಧ್ಯಯನ ನೆಲೆಗಳ ಕುರಿತು ಡಾ.ಜ್ಯೋತಿ ನಾಯಕ ಮಹಾ ಪ್ರಬಂಧ ಮಂಡಿಸಿದ್ದಾರೆ.ಅವರ ಬಗ್ಗೆ ಹಲವು ಅಭಿನಂದನಾ ಗ್ರಂಥಗಳು ಪ್ರಕಟವಾಗಿವೆ. ೮೬ ರ ಹರೆಯದ ಉತ್ಸಾಹಿ ಕವಿ ಡಾ .ಎನ್.ಆರ್.ನಾಯಕ ಅವರ ಕವನ ನಿಮ್ಮ ಓದಿಗಾಗಿ. ಸಂಪಾದಕ.

ಯಂತ್ರದ ರಕ್ಕಸ 

©Alochane.com 

bottom of page