top of page

ಮೊದಲು ಮಾನವನಾಗು....

ಮಾನವೀಯತೆ ಎಂಬುದು ಕೇವಲ ಒಂದು ಪದವಲ್ಲ.ಅದೊಂದು ಭಾವ,ಅದೊಂದು ಅನುಭವ. ಮಾನವನನ್ನು ಇತರ ಪ್ರಾಣಿಗಳಿಂದ  ಭಿನ್ನವಾಗಿಸಿದ ಅಪೂರ್ವ ಸಂಗತಿ. ಒಬ್ಬ ಮನುಷ್ಯ ಇತರರೆಡೆಗೆ  ತೋರುವ ನಿಷ್ಕಲ್ಮಶ ಪ್ರೀತಿಗಿರುವ ಹೆಸರೇ ಮಾನವೀಯತೆ. ಯಾರದೋ ಹೇರಿಕೆಯಿಂದ ಕೃತಕವಾಗಿ ಬರದೇ ಹೃದಯದೊಳಗಿಂದ ಉದಯಿಸುವ ನೈಸರ್ಗಿಕ ಅನುಕಂಪ. ಪ್ರತಿಯೋರ್ವ ಮನುಜನಲ್ಲಿರುವ ,ಇರಬೇಕಾದ ಮೂಲಭೂತ ಅಂಶ.  ಸ್ನೇಹಿತರೆ ಮಾನವೀಯತೆ ಇಂದು ಮರೆಯಾಗುತ್ತಿದೆ. ನಮ್ಮ ಜೀವನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದ್ದ ಸಜೀವ ಕಾಯವೊಂದು ಹೇಳ ಹೆಸರಿಲ್ಲದೆ ಕಣ್ಮರೆಯಾಗುತ್ತಿದೆ.  ಕಳೆದೆರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತವೇ ಇದಕ್ಕೆ ಹಿಡಿದ ಕೈಗನ್ನಡಿ. ಆತ ಸಾಯುತ್ತಿರಬೇಕಾದರೂ ವಿಡಿಯೋ ಮಾಡುವಷ್ಟು ಅತಿಮಾನುಷ ನಡತೆಯನ್ನು ಪ್ರದರ್ಶಿಸುತ್ತಾರೆಂದ ಮೇಲೆ ಎಲ್ಲಿಗೆ ಬಂದಿದೆ ಸಮಾಜದ ಮನಸ್ಥಿತಿ ಎಂಬುದೇ ಚಿಂತಿಸಬೇಕಾದ ಸಂಗತಿ.  ಹಿಂದೊಮ್ಮೆ ಮಹಾತ್ಮ ಗಾಂಧಿಯವರ ಸಾವಿಗಾಗಿ ವಿಶ್ವಸಂಸ್ಥೆಯ ಎಲ್ಲ ರಾಷ್ಟ್ರಗಳ ಧ್ವಜಗಳನ್ನೂ ಇಳಿಸಲಾಗಿತ್ತು. ಇಂತಹ  ಗೌರವ ಜಗತ್ತಿನ ಇತಿಹಾಸದಲ್ಲಿ ಮತ್ತೊಬ್ಬರಿಗೆ ದೊರಕಿಲ್ಲ. ಇದು ಮಹಾತ್ಮಾ ಗಾಂಧಿಯವರಿಗೆ ಸಿಕ್ಕ ಮರ್ಯಾದೆ ಎನ್ನುವುದಕ್ಕಿಂತಲೂ ಮಾನವೀಯತೆಗೆ ಸಂದ ಗೌರವ ಎಂದರೆ ಖಂಡಿತ ಅತಿಶಯೋಕ್ತಿ ಅಲ್ಲ. ಅಂದು ಮಾನವೀಯತೆಯ ಅಂತ್ಯವಾಯ್ತು ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರೇ ಸಮರ್ಥಿಸಿದ್ದರು. ಆದರೆ ಇಂದಿನ ಪರಿಸ್ಥಿತಿಗೆ ಹೋಲಿಸಿದರೆ ಅದು ಸುಳ್ಳಲ್ಲ ಎಂಬುದು ಖಾತ್ರಿಯಾಗುತ್ತದೆ. ಇತ್ತೀಚಿಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಹರಿದುಬಂದ ನೀರಿಗಿಂತ ನೆರವಿನ ಹರಿವೆ ಜಾಸ್ತಿ. ಆದರೆ ಅಲ್ಲೂ ತೆರೆಯ ಹಿಂದಿನ ಕಥೆ ಬೇರೆಯೇ ಇದೆ. ಟಿ.ವಿ ಯಲ್ಲಿ ನೋಡಿದ ಬಹಳಷ್ಟು ಜನ ,ಸಂತ್ರಸ್ತರಿಗಾಗಿ ಸಹಾಯಹಸ್ತ ಚಾಚಿದ್ದು ಅನುಕಂಪದಿಂದಲ್ಲ. ತಮ್ಮ ಹಳೆಯ ಬಟ್ಟೆಗಳ ದಾಸ್ತಾನನ್ನು ಖಾಲಿಮಾಡಿಕೊಳ್ಳಲು. ಆಶ್ಚರ್ಯವಾಗಬಹುದಲ್ಲವೇ?. ಹೌದು, ಆದರೂ ಇದು ಸತ್ಯ. ಬೆಂಗಳೂರಿನ ಕೆಲವರಂತೂ ತಮ್ಮ ಹರಿದ ಒಳಉಡುಪುಗಳನ್ನೂ ದಾನ ಮಾಡಿದ್ದು ನೋಡಿದರೆ,ಆಹಾ ಅವರ ಹೃದಯ ವೈಶಾಲ್ಯತೆಗೆ ಏನೆನ್ನಬೇಕೋ ನಾನರಿಯೆ.! ಆದರೂ ಇದೆಲ್ಲದರ ನಡುವೆ ಮಾನವೀಯತೆಯ ಕೊನೆಯ ಕೊಂಡಿಯೊಂದು ಮುಂದಿನ ಪೀಳಿಗೆಗಾಗಿ ಉಳಿದುಕೊಂಡಿದೆ ಎಂದರೆ ಅದೊಂದು ಆಶಾಭಾವವೇ. ಆಸ್ಟ್ರೇಲಿಯಾದಲ್ಲಿ  ತಮ್ಮ ಜೀವದ ಹಂಗನ್ನು ತೊರೆದು ಪ್ರಾಣಿರಕ್ಷಣೆಗೆ ನಿಂತ ಸ್ವಯಂ ಸೇವಕರೇ ಇದಕ್ಕೆಲ್ಲ ಜೀವಂತ ಸಾಕ್ಷಿ.ಬಹುಶಃ ಈ ದೃಷ್ಟಾಂತಕ್ಕಿಂತ ಮತ್ತೊಂದು ದೃಷ್ಟಾಂತ ಖಂಡಿತಾ ಸಿಗಲಿಕ್ಕಿಲ್ಲ. ಫೋಟೋಗಳಲ್ಲಿ ನೋಡಿದವರಿಗೇ ಹೃದಯ ಕಲುಕಿ ಬಂದಿದೆ ಎಂದಾದರೆ ನೈಜವಾಗಿ ಕಂಡವರಿಗೆ ಕರುಳು ಚುರುಕ್ ಎನ್ನದಿರಲು ಸಾಧ್ಯವಿಲ್ಲ. ಅಲ್ಲಿ ಮಾನವೀಯತೆ ತನ್ನ ತಾಕತ್ತನ್ನು ಹೊರಗೆಳೆದಿದ್ದು ಹೌದಾದರೆ ನಾವು ಮುಂದಿನವರಿಗಾಗಿ ಮಾನವೀಯತೆಯನ್ನು ಬಳುವಳಿ ಕೊಟ್ಟಂತಾಯಿತು. ಅವರೂ ಈ ಮಹಾಪಾಠವನ್ನು ಸ್ಮರಿಸಲಿಲ ಎಂದಾದರೆ ಮತ್ತೆ ಮಾನವೀಯತೆ ಹುಟ್ಟಿ ಬರಲಾರದು.        ಗಣಪತಿ ಕೊಂಡದಕುಳಿಯವರ ಮುಕ್ತಕವೊಂದು ಹೇಳುವಂತೆ ಮೆದುಳಿನಲಿ ಬದುಕುವರು ಎಲ್ಲೆಲ್ಲೂ ತುಂಬಿಹರು ಹೃದಯದಲಿ ಬದುಕುವುದು ಸರಳವದು ವಿರಳ ಜಗದ ಕ್ರೌರ್ಯಗಳೆಲ್ಲ ಮೆದುಳಿನುತ್ಪನ್ನಗಳೋ ಹೃದಯ ಕರುಣೆಯ ಗೂಡೊ-ಮರುಳ ಮನುಜ... ಇದು ಇಂದಿನ ಸಮಾಜದ ಪರಿಸ್ಥಿತಿಗೆ 100 ಕ್ಕೆ 100ರಷ್ಟು ಒಪ್ಪುವಂತಹ ಮಾತು...ಎಲ್ಲರೂ ಮೆದುಳಿನಲ್ಲಿಯೇ ಬದುಕುವವರಾಗಿದ್ದಾರೆ.ಯಾರಿಗೂ ಕರುಣೆ,ಅನುಕಂಪ, ಮಾನವೀಯತೆಯ ಪರಿಜ್ಞಾನವೇ ಇದ್ದಂತಿಲ್ಲ. ಬಹುಶಃ ಇದಕ್ಕೆ ಪ್ರತ್ಯಕ್ಷ  ಹಾಗೂ ಪರೋಕ್ಷ ಕಾರಣ ಇಂದಿನ ಶಿಕ್ಷಣವೇ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಓದುವವರಿಗಂತೂ ಸಹಾಯ ಎಂಬ ಪದದ ಪರಿಕಲ್ಪನೆಯೂ ಇರುವುದಿಲ್ಲ.ಇನ್ನು ಮಾನವೀಯತೆ ಎಂಬ ಮಹಾಪಾಠ ಎಲ್ಲಿಂದ ಸಿದ್ಧಿಸೀತು?. ಇನ್ನು ಕೋವಿಡ್-19 (ಕೊರೊನಾ)ದಂತಹ ಆರೋಗ್ಯ ತುರ್ತು ಪರಿಸ್ಥಿತಿಯ, ಲಾಕ್ಡೌನ್ ನಂತಹ ಸಂದಿಗ್ಧ ಸಮಯದಲ್ಲಿ ಮಾನವೀಯತೆ ಬಹಳವಲ್ಲದಿದ್ದರೂ ಅಲ್ಪಮಟ್ಟಿಗಾದರೂ ಕೆಲಸ ಮಾಡಿದೆ. ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲದವರಿಗೆ ನಮ್ಮ ಮೂರುಹೊತ್ತಿನ ಊಟದಲ್ಲಿ ಒಂದು ಪಾಲು ಕೊಟ್ಟವರೂ ಇದ್ದಾರೆ. ಮನುಜ ಮನುಜನಿಗೆ ಆಗಿ ಬರದೇ ಇನ್ನಾರಿಗೆ  ನೆರವಾದಾನು??....ಸದಾ ಕಾಲೆಳೆಯುವವರ, ಹಂಗಿಸುವವರ,ಟೀಕಿಸುವವರ ಮಧ್ಯೆ ಮಾನವ ಸಹಜ ಪೃಕೃತಿಯಾದ ಮಾನವೀಯತೆಯನ್ನು ಮೇಲಕ್ಕೆತ್ತಿ ಬದುಕಿಸಲೇ ಬೇಕಾದ ಅನಿವಾರ್ಯತೆಯೂ ಇದೆ. ಪರೋಪಕಾರಾರ್ಥಮ್ ಇದಂ ಶರೀರಮ್ ಎಂದು ಬೆಳೆದುಬಂದ ಸಂಪ್ರದಾಯ ನಮ್ಮದು.ಇಂದು ನಾವು ನಾಲ್ವರಿಗೆ ನೆರವಾದರೆ ನಾಳೆ ನಮಗೆ ಒಬ್ಬರಾದರೂ ನೆರವಿಗೆ ಬಂದಾರು.ಸತ್ತ ಮೇಲೂ ನಮ್ಮ ಹೆಸರು ಕೆಲವರ ಬಾಯಿಯಲ್ಲಾದರೂ ಹೊರಳೀತು. ನಾಳೆಯಿದೆ ಎಂಬ ಭರವಸೆಯಲ್ಲಿ, ನಾವೆಲ್ಲ ಇಂದು ಕೈಜೋಡಿಸಬೇಕಾಗಿದೆ. ಭವಿಷ್ಯತ್ತಿನ ಸುಂದರ ಬದುಕಿಗಾಗಿ ಮಾನವೀಯತೆಯ ಮೊದಲ ಪಾಠ ಮರುಆರಂಭ ಗೊಳ್ಳಬೇಕಿದೆ. ಭಾವನೆಗಳೇ ಇಲ್ಲದ ಬರಡು ಬದುಕಿನಲ್ಲಿ, ಬೇಸತ್ತ ದಿನಗಳ ಬದಿಯಲ್ಲಿ ಬದಲಾವಣೆಯ ಬಿರುಗಾಳಿಯೊಂದು ಬೀಸಲೇಬೇಕಿದೆ. ಮನುಷ್ಯ ತನ್ನ ಅತಿಮಾನುಷ ನಡತೆಗಳನ್ನು ಜೈಲಿಗಟ್ಟಿ ಮೊದಲು ಮಾನವನಾಗಬೇಕಿದೆ. ಬುದ್ಧನ ಅನುಕಂಪ , ವಿವೇಕಾನಂದರ ಪ್ರೇಮದ ಹರಿವು ,ಸೋದರಿ ನಿವೇದಿತಾಳ ಅಕ್ಕರೆ,ಮದರ್ ತೆರೇಸಾರ ಮಮತೆ,ಗಾಂಧಿ,ಮಂಡೇಲಾರ ಅತೀವ ವಾತ್ಸಲ್ಯ ಇವೆಲ್ಲವೂ ಪ್ರತ್ಯಕ್ಷವಾಗಿ ಇಲ್ಲ ಪರೋಕ್ಷವಾಗಿ ಭಾರತದಲ್ಲೇ ಜನಿಸಿದೆ. ಆದರೆ ಭಾರತೀಯರಾದ ನಾವೇ ಮನುಷ್ಯರಿಗಿಂತ ಹೆಚ್ಚಾಗಿ ವಸ್ತುಗಳನ್ನು ಪ್ರೀತಿಸುತ್ತಿದ್ದೇವೆ. ನಾಗರೀಕತೆ ಬೆಳೆಯುತ್ತಿದೆ,ಮಾನವೀಯತೆ ಕೊಳೆಯುತ್ತಿದೆ. ಅದನ್ನು ಮುಚ್ಸಿದ ಗುಂಡಿಯಿಂದ, ಗುಂಡಿಗೆಯಿಂದ ಹೊರತೆಗೆದು ಜಗತ್ತನ್ನು ಪ್ರೀತಿಸಬೇಕಾದ ಅವಶ್ಯಕತೆ,ಅನಿವಾರ್ಯತೆ ನೂರು ಪ್ರತಿಶತದಷ್ಟಿದೆ. ಹಾಗಾಗಿ ಬನ್ನಿ ಬದಲಾಗೋಣ ಬದಲಾಯಿಸೋಣ -ಹರ್ಷ ಹೆಗಡೆ ಕೊಂಡದಕುಳಿ ಹೊನ್ನಾವರದ ಕೊಂಡದಕುಳಿಯ ಹರ್ಷ ಬೆಂಗಳೂರಿನ ಕೆ‌. ಎಲ್‌. ಇ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಯಕ್ಷಗಾನ ಕಲಾವಿದನಾಗಿಯೂ ಗುರುತಿಸಿಕೊಂಡಿದ್ದಾನೆ.ನುಡಿಜೇನು ದಿನಪತ್ರಿಕೆಯಲ್ಲಿ "ಕೈಗನ್ನಡಿ" ಎನ್ನುವ ಅಂಕಣ ಬರೆಯುತ್ತಿದ್ದಾರೆ. ಭಾಷಣ, ಬರವಣಿಗೆ ಹಾಗೂ ಫೋಟೋಗ್ರಾಫಿ ಇವರ ಹವ್ಯಾಸ. - ಸಂಪಾದಕ

ಮೊದಲು ಮಾನವನಾಗು....

©Alochane.com 

bottom of page