top of page

ಮಾಧ್ಯಮಗಳು

ಮಾಧ್ಯಮಗಳು ಇಂದು ಜನರನ್ನು ದಿಕ್ಕು ತಪ್ಪಿಸುವ,ಓದುಗರನ್ನು ಖಿನ್ನತೆಗೆ ಒಳಪಡಿಸುವ ದಿನಮಾನದಲ್ಲಿ,ಪತ್ರಿಕೆಯೊಂದು ಓದುಗರನ್ನು ಆಪ್ತ ಸಖ-ಸಖಿಯಂತೆ ಕೈಹಿಡಿದು ಸನ್ಮಾರ್ಗದಲ್ಲಿ ನಡೆಸುವುದು ಇಂದಿನ ತುರ್ತು ಅಗತ್ಯವಾಗಿದೆ.ಆ ಕೆಲಸವನ್ನು "ಆಲೋಚನೆ ಪತ್ರಿಕೆ"ಅತ್ಯಂತ ಸಮರ್ಥವಾಗಿ ಮಾಡುತ್ತ ಬಂದಿದೆ.ಸಾಮಾಜಿಕ ಸಾಕ್ಷಿಪ್ರಜ್ಞೆ ಇಲ್ಲದ ಮಾಧ್ಯಮಗಳ ಮದ್ಯದಲ್ಲಿಯೂ ಇಂದು "ಆಲೋಚನೆ" ಒಂದು ವರ್ಷದ ಹಸುಗೂಸಾಗಿ,ಹಾಲುಗಲ್ಲದ ಹಸುಳೆಯಾಗಿ ಓದುಗರ ಉಡಿಯಲ್ಲಿ ವಿಶ್ವಾಸಾರ್ಹ ನಗೆ ಬೀರುತ್ತಲಿದೆ.ಇದನ್ನು ಮಾತೃವಾತ್ಸಲ್ಯದಿಂದ ಹೊತ್ತು-ಹೆತ್ತು ಬೆಳೆಸುತ್ತಿರುವ ಸಂಪಾದಕ ಮಂಡಳಿಗೆ ಸಾವಿರದ ಶರಣು. ಅಗ್ಗದ ಪ್ರಚಾರ,ಜನಪ್ರಿಯತೆಯ ಬೆನ್ನು ಹತ್ತಿದ ಇಂದಿನ ಪತ್ರಿಕಾ ಮಾಧ್ಯಮಗಳ ನಡುವೆ ಆಲೋಚನೆ ದೇಶಿ ಸಂಸ್ಕೃತಿಯನ್ನೇ ಉಸಿರಾಡಿಸುತ್ತ ಅಂಬೆಗಾಲಿನಿಂದ ನಡೆಯುತ್ತಲಿದೆ.ಇಂದು ಅದು ಹೊರಟಿರುವ ಕಾಲುದಾರಿ ಮುಂದೊಂದು ದಿನ "ರಾಜಮಾರ್ಗವಾಗಿ","ಆನೆ ನಡೆದುದೆ ಮಾರ್ಗ"ಆಗುವುದರಲ್ಲಿ ಸಂದೇಹವಿಲ್ಲ. 'ಆಲೋಚನೆ' ಕರ್ನಾಟಕದ, ಅದರಲ್ಲೂ ಉತ್ತರ ಕನ್ನಡದ ಗ್ರಾಮೀಣ ಸಂಸ್ಕೃತಿಯ ಫಲವತ್ತಾದ ಮಣ್ಣಿನಲ್ಲಿ ಸಂಸ್ಕಾರಗೊಂಡ ಮುಗ್ಧ ಮಾನವೀಯ ಬದುಕನ್ನು ಅಪ್ಪಟ ಮೂಲ ಸ್ವರೂಪದಲ್ಲಿ ಪ್ರತಿನಿಧಿಸುತ್ತಿದೆ. ಪತ್ರಿಕೆಯ ಬೆಳವಣಿಗೆಯಲ್ಲಿ ಸಂಪಾದಕರ ಅಂತಃಕರಣದ ಔದಾರ್ಯ ಬಲು ದೊಡ್ಡದು.ಡಾ.ಶ್ರೀಪಾದ ಶೆಟ್ಟಿ ಹಾಗೂ ಶ್ರೀಪಾದ ಹೆಗಡೆ ಅವರ ಸರಳ,ನಿರಾಡಂಬರ,ನೆರವೂ,ಸ್ಪಷ್ಟವೂ,ಪಾರದರ್ಶಕ ವ್ಯಕ್ತಿತ್ವ ಈ ಪತ್ರಿಕೆಯ ಬೆಳವಣಿಗೆಗೆ ಬಹುದೊಡ್ಡ ಶಕ್ತಿಯಾಗಿದೆ ಎಂದರೆ ಸಾಲದು,ಮೈಯೆಲ್ಲ ಹೃದಯವಾಗಿಸಿಕೊಂಡು ಓದುಗರ ವಾತ್ಸಲ್ಯವೂ ಕಾರಣವಾಗಿದೆ. ನನ್ನ ಈ ಎಲ್ಲ ಮಾತುಗಳಿಗೆ ಆಲೋಚನೆ ಪತ್ರಿಕೆಯ ನಿರಂತರ ಓದುಗರಾದ ತಾವು ಪ್ರತ್ಯಕ್ಷ ಸಾಕ್ಷಿಯಾಗಿದ್ದೀರಿ ಎಂಬ ಭಾವನೆ ನನ್ನದು. ವಂದನೆಗಳು. ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಮಾಧ್ಯಮಗಳು
bottom of page