top of page

ಮರೆಯದಿರಿ ಪ್ರಾಥಮಿಕ ಸಂವಹನ

ಮನುಷ್ಯನ ಸಂರಚನೆ (constitution) ಪ್ರಾಥಮಿಕ ಸಂವಹನಕ್ಕಾಗಿ (primary communication) ಸಿದ್ಧಗೊಂಡುದಾಗಿದೆ. ಅವನ ಸಂಜ್ಞೆಗಳಿರಲಿ, ದೇಹಭಾಷೆ ಇರಲಿ, ನಗುವಿರಲಿ, ಮಾತುಕತೆ ಇರಲಿ – ಎಲ್ಲವೂ ಪ್ರಾಥಮಿಕ ಸಂವಹನವನ್ನು ಉದ್ದೇಶಿಸಿರತಕ್ಕವು. ತನ್ನ ಮುಂದೆ ಇರುವ ವ್ಯಕ್ತಿಯೊಂದಿಗೆ ಅಥವಾ ಗುಂಪಿನೊಂದಿಗೆ ಆತ ಪರಿಣಾಮಕಾರಿಯಾಗಿ ಸಂವಹನ ಮಾಡಬಲ್ಲ. ಮನುಷ್ಯ ಸಂಘಜೀವಿ ಅನ್ನಿಸಿಕೊಳ್ಳಲು ಈ ಪ್ರಾಥಮಿಕ ಸಂವಹನ ಅಗತ್ಯ.  ದೇಶ, ಕಾಲ, ದೂರ ಮತ್ತು ಸಂಖ್ಯೆಯ ಮಿತಿಯನ್ನು ಮೀರಿ ಸಂವಹನ ಮಾಡಬೇಕೆಂಬ ಮನುಷ್ಯನ ಮಹತ್ತ್ವಾಕಾಂಕ್ಷೆಯಿಂದಾಗಿ ಚಿತ್ರಗಳು, ಅಕ್ಷರಗಳು ಹುಟ್ಟಿಕೊಂಡವು. ಬರವಣಿಗೆ ಆರಂಭವಾಯಿತು. ಅನುವಾದ ಆರಂಭವಾಯಿತು ಮತ್ತು ಸಂವಹನ ಮಾಧ್ಯಮಗಳು ಹುಟ್ಟಿಕೊಂಡವು. ಈಗಿನ ಡಿಜಿಟಲ್ ತಂತ್ರಜ್ಞಾನದಲ್ಲಿ ನಾವು ದೇಶ ಕಾಲ ದೂರ ಮತ್ತು ಸಂಖ್ಯೆಯ ಮಿತಿಯನ್ನು ದಾಟಿ ಸಂವಹನ ಮಾಡಬಲ್ಲೆವು; ಅದ್ಭುತವಾದುದನ್ನು ಸಾಧಿಸಿದ್ದೇವೆ, ನಿಜ. ಆದರೆ ಜೀವಂತವಾದ ನೇರ ’ಪ್ರಾಥಮಿಕ ಸಂವಹನ’ವನ್ನು ಯಾವುದೂ ಸರಿಗಟ್ಟಲಾರದು. ಯಾಕೆಂದರೆ ನೇರ ಮಾತುಕತೆಯಲ್ಲಿ ದ್ವಿಮುಖ ಸಂವಹನ (two way communication) ಇರುತ್ತದೆ ಮತ್ತು ಪರಸ್ಪರರ ಮಾತಿನೊಂದಿಗೆ ಭಾವನೆಗಳು ಸೇರಿಕೊಂಡು ಅರ್ಥಗಳು ಅಲ್ಲಲ್ಲೇ ವಿನಿಮಯಗೊಳ್ಳುತ್ತಿರುತ್ತದೆ. 
ಮಾತಿನ ಅತ್ಯಂತ ಪುಷ್ಟವಾದ ಭಾಗವೆಂದರೆ ಭಾವನೆ. ಭಾವನೆ ಇಲ್ಲದ ಮಾತಿನಲ್ಲಿ ರಕ್ತ ಮಾಂಸ ಇಲ್ಲ. ಅದು ವಿಷಯಕ್ಕೆ ಸಂಬಂಧಿಸಿದ ಮಾತಿನ ಕೇವಲ ಒಣ ವಿನಿಮಯ ಮಾತ್ರ. ಹಾಗಾಗಿ ಪ್ರಾಥಮಿಕ ಸಂವಹನವ ಬಹು ಮುಖ್ಯವಾದುದು. ಅದು ಸಂವಹನದ ಜೀವ; ಅದೇ ಜೀವನ. ಮನೆಯ ಸದಸ್ಯರೊಂದಿಗೆ ಇರುವಾಗ, ನೆಂಟರಿಷ್ಟರು ಬಂದಾಗ ಮನೆಯಲ್ಲಿ ಜೋರಾಗಿ ಟಿ. ವಿ. ಹಾಕಿರುತ್ತೇವೆ. ನಿಜವಾಗಿ ಅದು ಆತ್ಮೀಯವಾಗಿ ಮಾತಾಡುವ ಹೊತ್ತು! ಆಗಲೇ ಒಂದು ದೂರವಾಣಿ ಕರೆ ಬಂದು ತುಂಬ ಹೊತ್ತು ಯಾರೊಂದಿಗೋ ಮಾತಾಡುತ್ತೇವೆ. ಕಂಪ್ಯೂಟರ್ ಮುಂದೆ ಕೂತು ಬಿಡುತ್ತೇವೆ ಅಥವಾ ಮೊಬೈಲ್ ನಲ್ಲಿ ಸಂದೇಶ ರವಾನಿಸುತ್ತಿರುತ್ತೇವೆ. ಇದು ನಮ್ಮ ವರ್ತನೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಒಂದು ದೋಷ. ಜೊತೆಯಲ್ಲೇ ಇರುವ ಸಂಬಂಧಿಕರೊಂದಿಗೆ ಪ್ರಾಥಮಿಕ ಸಂವಹನ ಮಾಡುವುದು ಬಿಟ್ಟು ದೂರದಲ್ಲಿರುವ ಇತರರೊಂದಿಗೆ ಚಾಟ್ ಮಾಡುವ ’ದ್ವಿತೀಯ ಸಂವಹನ’ದಲ್ಲಿ (secondary communication) ತೊಡಗುತ್ತೇವೆ. ಬಂದವರಿಗೆ ಹೇಗಾಗಬೇಡ! ಅಂತಹ ಸಂದರ್ಭಗಳಲ್ಲಿ ಅಮುಖ್ಯವಾದ ದೂರವಾಣಿ ಕರೆ ಬಂದರೆ ಅಗತ್ಯದ ಒಂದೆರಡು ಮಾತಾಡಿ ’ಆಮೇಲೆ ಮಾತಾಡುವೆ’ ಅನ್ನಬಹುದು; ಮೊಬೈಲ್ ಚಾಟ್ ನಿಂದ ದೂರ ಇರಬಹುದು. ನಮಗಿಲ್ಲಿ ಮಾನವೀಯ ಸಂಬಂಧ ಮತ್ತು ಪ್ರಾಥಮಿಕ ಸಂವಹನ ಅತಿಮುಖ್ಯ. ಅರ್ಥ ಮತ್ತು ಭಾವನೆಗಳು ಸರಿಯಾಗಿ ರವಾನೆಯಾಗದಿರುವ ’ದ್ವಿತೀಯ ಸಂವಹನ’ವನ್ನು  ಅತಿಯಾಗಿ ಆಶ್ರಯಿಸಿರುವುದರಿಂದ ಇವತ್ತು ಭಿನ್ನಾಭಿಪ್ರಾಯ ಮತ್ತು ಕ್ಷುಲ್ಲಕ ಜಗಳಗಳು ಹೆಚ್ಚಾಗಿವೆ ಅನ್ನಿಸುತ್ತದೆ. ಸಾಕಷ್ಟು ಸಮಯ ಇದ್ದಾಗ, ಬಿಡುವಾಗಿದ್ದಾಗ, ಒಬ್ಬರೇ ಇದ್ದಾಗ ದೂರದಲ್ಲಿರುವವರೊಂದಿಗೆ ಹರಟೆ ಹೊಡೆದರೆ ತಪ್ಪಿಲ್ಲ. ಆದರೆ ನಮ್ಮ ಮುಂದೆ ಜೀವಂತ ಇರುವವರನ್ನು, ಅಕ್ಕಪಕ್ಕ ಇರುವವರನ್ನು ಅಲಕ್ಷಿಸಿ ದೂರದಲ್ಲೆಲ್ಲೋ ಇರುವವರೊಂದಿಗೆ ಮಾತಾಡಿ ಸಮಯ ಕಳೆಯುವುದು ಎಷ್ಟು ಸರಿ?. ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಭಾವ ನಮ್ಮ ಜೊತೆಗಿರುವವರಿಗೆ ಬಾರದಂತೆ ನೋಡಿಕೊಳ್ಳುವುದು ಒಳ್ಳೆಯದು.
ಸಂವಹನದ ಮೊದಲ ಆದ್ಯತೆ ನಮ್ಮ ಜೊತೆಗೆ ಇರುವವರೊಂದಿಗೆ; ಮಿಕ್ಕ ಸಮಯ ಮಾತ್ರ, ಅದೂ ಅಗತ್ಯವಿದ್ದರೆ ದೂರದಲ್ಲಿರುವ ಇತರರೊಂದಿಗೆ ಸಂವಹನ ಎಂಬ ತತ್ತ್ವವನ್ನು ಪಾಲಿಸಬೇಕು. ಪ್ರಾಥಮಿಕ ಸಂವಹನವನ್ನು ಬಿಟ್ಟು, ದ್ವಿತೀಯ ಸಂವಹನವಾದ ಯಾಂತ್ರಿಕ ಮಾಧ್ಯಮಗಳಿಗೆ ಗುಲಾಮರಾದರೆ – ನಿಜವಾದ ಮನುಷ್ಯರು ಗೊಂಬೆಗಳು ಮುಖಾಮುಖಿಯಾದಂತೆ, ನಿರ್ಭಾವುಕವಾಗಿ ಮುಖ ಮುಖ ನೋಡಿಕೊಳ್ಳುತ್ತ ಒಂದೇ ಮನೆಯಲ್ಲಿ ಅಪರಿಚಿತರಂತೆ ಜೀವಿಸುವ ಪರಿಸ್ಥಿತಿ ಬಂದೀತು!
ಯಂತ್ರಾಧಾರಿತ ಸಂವಹನಗಳು ಎಷ್ಟೆಂದರೂ ಕೃತಕ. ಅವು ಜೀವಂತ ಸಂವಹನಕ್ಕೆ ಪರ್ಯಾಯ ಅಲ್ಲ ಮತ್ತು ಆ ಸಂವಹನ ಇರುವುದು ವ್ಯಾವಹಾರಿಕ ಉದ್ದೇಶಗಳಿಗಾಗಿ ಮಾತ್ರ. ಆ ಹದವನ್ನು ಮೀರಿ, ಅಗತ್ಯಕ್ಕಿಂತ ಹೆಚ್ಚು ಅವಲಂಬಿಸಿ, ಬದುಕಿನ ರುಚಿ ಕೆಡಿಸಿಕೊಂಡರೆ ಸರಿಪಡಿಸಿಕೊಳ್ಳುವುದು ಕಷ್ಟ. ಅಭ್ಯಾಸಗಳು - ಜೀವನಶೈಲಿ ಹಾಳಾಗಿ ಹೋದರೆ ಸಮಾಜ ಜೀವನದ ಅಡಿಪಾಯ ತಪ್ಪುತ್ತದೆ. ಪ್ರಾಥಮಿಕ ಸಂವಹನದ ಮೂಲಕ ರೂಪುಗೊಳ್ಳುವ ನಮ್ಮ ವೈಯಕ್ತಿಕ ಸಂಬಂಧಗಳು ಮತ್ತು ಸಾಮಾಜಿಕ ಸಂಬಂಧಗಳು ಅತಿ ಮುಖ್ಯ.       -ಡಾ. ವಸಂತಕುಮಾರ ಪೆರ್ಲ. ಕನ್ನಡ ಸಾಹಿತ್ಯದಲ್ಲಿ ಎಂ.ಎ., ಪಿಹೆಚ್. ಡಿ ಪದವಿ ಪಡೆದು, ಪತ್ರಿಕೋದ್ಯಮ ಡಿಪ್ಲೊಮಾದಲ್ಲಿ ಮೊದಲ ಸ್ಥಾನ ಗಳಿಸಿ, ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ 45 ಕ್ಕಿಂತ ಹೆಚ್ಚು ಕೃತಿರಚನೆ ಮಾಡಿರುವ ಡಾ. ವಸಂತಕುಮಾರ ಪೆರ್ಲ ಅವರು ಮುಖ್ಯವಾಗಿ ಕವಿಯೆಂದೇ ಗುರುತಿಸಲ್ಪಟ್ಟವರು. ಮಾತಿನಾಚೆಯ ಮೌನ, ಹುತ್ತದೊಳಗಿನ ಹಾವು, ಕೋಟಿಲಿಂಗ, ರಂಗಸ್ಥಳ, ಒಡ್ಡೋಲಗ ಮೊದಲಾದವು ಡಾ. ಪೆರ್ಲರ ಕವನ ಸಂಕಲನಗಳು. ಇಂಗ್ಲಿಷ್, ಹಿಂದಿ, ಪಂಜಾಬಿ, ತಮಿಳು, ತೆಲುಗು, ಮಲಯಾಳಮ್, ಕೊಂಕಣಿ ಹಾಗೂ ತುಳು ಭಾಷೆಗೆ ಅವರ ಕವನಗಳು ಅನುವಾದವಾಗಿವೆ. ರಾಷ್ಟ್ರಮಟ್ಟದ ಕಾವ್ಯಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ವ್ಯಾಕರಣ, ಮೀಮಾಂಸೆ ಕ್ಷೇತ್ರಗಳಲ್ಲಿ ಒಳ್ಳೆಯ ಪಾಂಡಿತ್ಯ ಗಳಿಸಿರುವ ಶ್ರೀಯುತರು ಮಂಗಳೂರು ಆಕಾಶವಾಣಿ ಕೇಂದ್ರದ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಸಾಹಿತ್ಯದೊಂದಿಗೆ ಮಾಧ್ಯಮ, ರಂಗಭೂಮಿ, ಸಿನಿಮಾ, ಸಂಘಟನೆ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ವ್ಯಸ್ತರಾಗಿದ್ದಾರೆ. ಒಳ್ಳೆಯ ವಾಗ್ಮಿ ಮತ್ತು ವಿದ್ವಾಂಸರೆಂದು ಮಾನ್ಯರಾಗಿದ್ದಾರೆ.

ಮರೆಯದಿರಿ ಪ್ರಾಥಮಿಕ ಸಂವಹನ
bottom of page