top of page

ಭಾಷಾ ಪ್ರೌಢಿಮೆ ಮೆರೆಯುವ 'ಶೃಂಖಲಾ'

ಇದು ನಮ್ಮ ಹುಬ್ಬಳ್ಳಿಯ ಲೇಖಕಿ ರೂಪಾ ಜೋಶಿಯವರ ನಾಲ್ಕನೇ ಕಾದಂಬರಿ. ಈ ಹಿಂದೆ ಅವರು ಅಜ್ಞಾತೆ, ಕಾನು ಮನೆ ಮತ್ತು ಒಂದು ಸಾವಿನ ಸುತ್ತ ಎಂಬ ಮೂರು ಪುಟ್ಟ ಗಾತ್ರದ ಕಾದಂಬರಿಗಳನ್ನು ಹೊರತಂದಿದ್ದರು. ಅದಕ್ಕಿಂತ ಮೊದಲು ’ಸಾಗುತ ದೂರ ದೂ’ ಎಂಬ ಒಂದು ಸಂವೇದನಾಶೀಲ ಕತೆಗಳ ಸಂಕಲನವೂ ಹೊರಬಂದಿತ್ತು. ರೂಪಾ ಮೂಲತಃ ಕವಿಯಾಗಿದ್ದರೂ ಗದ್ಯವನ್ನು ಗಂಭೀರವಾಗಿ ತೆಗೆದುಕೊಂಡಿರುವಕ್ಕೆ ಅವರ ಈ ಸಾಲು ಸಾಲು ಪುಸ್ತಕಗಳೇ ಸಾಕ್ಷಿ. ವೈನೋದಿಕ ಪ್ರಬಂಧಗಳನ್ನೂ ಬರೆಯುವಲ್ಲಿ ಇವರು ಸಿದ್ದ ಹಸ್ತರು. ರಂಗನಟಿಯಾಗಿ ಕೂಡ ರೂಪಾ ಅಷ್ಟೇ ಖ್ಯಾತಿಯನ್ನ ಗಳಿಸಿದಂಥವರು. ಇವರು ಬರವಣಿಗೆ ಆರಂಭಿಸಿದ್ದು ನನಗೆ ಗೊತ್ತಿರುವಂತೆ ತೀರ ತಡವಾಗಿ, ಹಲವು ಕೌಟುಂಬಿಕ ಸಮಸ್ಯೆಗಳಲ್ಲಿ ತನ್ನನ್ನು ತಾನು ಸವೆಸಿಕೊಳ್ಳುತ್ತಲೇ ಅಷ್ಟೇ ಶೃದ್ಧೆಯಿಂದ ಗಂಧದಂತೆ ಪರಿಮಳವನ್ನು ಹೆಚ್ಚಿಸಿಕೊಂಡ ರೂಪಾ ಅವರದು ಒಂದು ರೀತಿಯ ಹೋರಾಟದ ಬದುಕು. ಈ ಎಲ್ಲ ಹಿನ್ನೆಲೆಯಿಂದ ನೋಡಿದರೆ, ಈ ಬರೆವಣಿಗೆ ರೂಪಾ ಅವರ ಬದುಕಿಗೆ ನೀಡುವ ಒಂದು ಚೈತನ್ಯದಾಯಕ ಆಸರೆಯೂ ಆಗಿದೆ ಅಂತ ಹೇಳಬೇಕು. ’ಶೃಂಖಲ” ಇದು ಗದಗ ಹಾವೇರಿ ಭಾಗದ ಹೊನ್ನತ್ತಿ ಬಿಂದುಗೋಳದೆಂತಹ ಗ್ರಾಮೀಣ ಪ್ರಾದೇಶಿಕತೆಯುಳ್ಳ ದೇಸಾಯಿ ಮತ್ತು ನಾಡಗೌಡ ವಾಡೆಗಳ ಕೌಟುಂಬಿಕ ಚೌಕಟ್ಟಿನಲ್ಲಿ ಸಿಲುಕಿಕೊಂಡ ಸ್ತ್ರೀಹೋರಾಟದ ದೀರ್ಘ ಕಥನ ಮತ್ತು ಇದೊಂದು ಹೆಣ್ಣಿಗೆ ಒದಗುವ ಸಮಸ್ಯೆಗಳ ವಿವಿಧ ವಿನ್ಯಾಸಗಳನ್ನು ಇಡಿಯಾಗಿ ತೆರೆದಿಡುವ ಮಹಿಳಾ ಪ್ರಧಾನವಾದ ಕಾದಂಬರಿ. ಇಲ್ಲಿಯ ಭಾಗೀರಥಮ್ಮನ ಕಳವಳ ತುಂಬಿದ ಸಾಂಪ್ರದಾಯಿಕ ಮನಸ್ಸು ಪರಂಪರೆಯ ದಡಗಳಿಗೆ ಕೈಚಾಚುತ್ತಲೇ ಸಾಗಿದರೆ, ನಂತರದ ಪೀಳಿಗೆಯ ಹೆಣ್ಣುಮಕ್ಕಳು ತಂತಮ್ಮ ಖಾಸಗೀತನವನ್ನು ಕಾಯ್ದುಕೊಳ್ಳಲು ಕೌಟುಂಬಿಕ ವಿಘಟನೆಗೆ ಕಾರಣರಾಗೋದನ್ನು ನಾವು ಕಾಣ್ತೇವೆ, ಆದರೆ ಅದೇ ಭಾಗೀರಥಮ್ಮನ ಮಗಳಾದ ಕಥಾನಾಯಕಿ ರೇಣುಕೆ, ಭೌತಿಕ ಬದುಕಿನ ಸುಖಕ್ಕಾಗಿ ಅಶಿಸ್ತಿನಿಂದ ಅಲೆಯುವ ಬಂಢುವಿನಂಥ ವ್ಯಕ್ತಿಯ ವಂಚನೆಯ ಸಂಚಿನಾಚೆಯೂ ಆ ಕಲ್ಲುಮುಳ್ಳಿನ ಹಾದಿಯನ್ನು ತನ್ನ ಛಲ ಹಾಗೂ ಆತ್ಮಸ್ಥೈರ್ಯದಿಂದಲೇ ದಾಟುತ್ತ ಬೆಳಕಿನ ಕಿರಣಗಳನ್ನು ಅರಸುವ ಬಗೆಯಲ್ಲಿ ಈ ಕಥನವನ್ನು ಹೆಣೆದ ರೀತಿಯೇ ಒಂದು ವಿಶೇಷ ಅನುಭವ ಕೊಡುವಂಥದ್ದು. ಉತ್ತರಕರ್ನಟಕದ ನೆಲದ ವಾಡೆಗಳಲ್ಲಿರುವ ಕೂಡು ಕುಟುಂಬಗಳು, ಅಲ್ಲಿ ಬರುವ ಮನುಷ್ಯ ಸಂಬಂಧಗಳ ಒಳನೋಟಗಳು, ಪರಿಸ್ಥಿತಿಯ ಒತ್ತಡದಿಂದ ಬರಿಯ ಸಂಕಷ್ಟಗಳನ್ನು ಅನುಭವಿಸಿ ನರಳುವ ಹೆಣ್ಣುಮಕ್ಕಳು, ಸ್ವಾರ್ಥದಿಂದ ಹುಟ್ಟಿಕೊಳ್ಳುವಂತಹ ಅವರ ಅಂತರಂಗದ ಕಿಚ್ಚುಗಳು, ಜಡ್ಡು ಜಾಪತ್ರೆಗಳು, ಹಲವು ಬಗೆಯ ತರತಮಗಳು, ವಾಡೆಯಿಂದ ವಾಡೆಗೆ ಗಂಡುಹೆಣ್ಣಿನ ಕೊಡು-ತೊಗೊಳ್ಳುವಿಕೆ, ಮನೆಯಲ್ಲೊಬ್ಬ ಉಂಡಾಡಿಗುಂಡ ಗಂಡ, ಒಳ ಜಗಳಗಳು, ಆಸ್ತಿ ಮನೆ ಹೊಲಗದ್ದೆ ಉಳುಮೆ ವಿಚಾರಕ್ಕೆ ಹುಟ್ಟಿಕೊಳ್ಳುವ ಧಾವೆಗಳು, ಬೇಜವಾಬ್ದಾರಿತನದಿಂದ ಮಾಡಿಕೊಂಡ ಸಾಲಗಳು, ಮನೆ ಛಿದ್ರಗೊಳ್ಳುವ ಬಗೆ, ಹಿರಿಯರ ಒಂದೊಂದೇ ಸಾವುಗಳು, ಕಡೆಗೂ ಕುಟುಂಬ ಉಳಿಸಿಕೊಳ್ಳುವದಕ್ಕಾಗಿ ಮುಖ್ಯ ಹೆಣ್ಣಿನ ಹೋರಾಟಗಳು.. ಇವುಗಳ ಮೂಲಕವೇ ವಿಸ್ತಾರಗೊಳ್ಳುವ ಜಮೀನ್ದಾರೀ ಮನೆಗಳ ವಸ್ತುಸ್ಥಿತಿಗಳು ಕೃತಿಯ ಗತಿಬಿಂಬಗಳಾಗಿ ಮೂಡಿನಿಂತಿವೆ. ಎಲ್ಲೂ ಕೊಂಡಿ ಕಳಚದ ಸರಪಳಿಯಂತೆ, ಅಲ್ಲಲ್ಲಿ ಹಿಂದೆ ಸರಿದ ಪಾತ್ರ ಪ್ರಪಂಚವನ್ನು ವರ್ತಮಾನದ ಘಟನೆಗೆ ಸೇರಿಸಿ ಹೆಣೆದಿರುವುದು ರೂಪಾ ಅವರ ಪರಿಶ್ರಮವನ್ನು ಎತ್ತಿ ತೋರುತ್ತದೆ, ಕಥಾನಾಯಕಿ ರೇಣುಕೆಯ ವಿಷಯದಲ್ಲಿ ಕೃತಿಯುದ್ದಕ್ಕೂ ಒಂದು ಬಗೆಯ ವಿಷಾದ ಭಾವ ಸ್ಥಾಯಿಯಾಗಿದ್ದನ್ನು ನಾವು ಕಾಣುತ್ತೇವೆ, ಮತ್ತದು ಒಂದು ಗೋಳಾಗದೇ ಸಿನಿಕತನವಿಲ್ಲದೇ ಸಾಧನೆಯ ಶಿಖರವೇರಿ ಬಿಡುಗಡೆಗೊಂಡ ಬಗೆ ಮೆಚ್ಚುವಂಥದ್ದು. ಸ್ತ್ರೀ ಬದುಕಿನ ಸ್ವರೂಪವನ್ನು ತಮ್ಮ ಅನುಭವ ಗ್ರಹಿಕೆಗಳ ಮೂಲಕ ದಾಖಲಿಸುತ್ತಲೇ. ಭೂತ ಹಾಗೂ ವರ್ತಮಾನಗಳೆರಡನ್ನೂ ನೋವು ಮತ್ತು ಅಸಹಾಯಕತೆಯ ಮಧ್ಯೆ ತಂದು ಅನುಸಂಧಾನಗೊಳಿಸ್ತಲೇ, ಲೇಖಕಿ ಪರಂಪರೆಯೊಂದಿಗಿನ ದೀರ್ಘ ಸಂಬಂಧವನ್ನು ಚೇತೋಹಾರಿಯಾಗಿ ಕಾದಂಬರಿಯಲ್ಲಿ ಹಿಡಿದಿಡುತ್ತಾರೆ. ಈ ಕೃತಿಗೆ ಮುನ್ನುಡಿ ಬರೀತಾ ಲೇಖಕ ಸಂತೋಷಕುಮಾರ ಮೆಹಂದಳೆಯವರು ಕೃತಿಯ ಇತಿಮಿತಿಗಳನ್ನೂ ಗುರ್ತಿಸುತ್ತ ಇಲ್ಲಿಯ ಭಾಷಾ ಬಳಕೆಯ ಕುರಿತು ಸಣ್ಣ ಸಂಶಯವನ್ನೂ ಸಹ ವ್ಯಕ್ತಪಡಿಸ್ತಾರೆ. ಪ್ರಾದೇಶಿಕ ಭಾಷಾ ಬಳಕೆಯ ಕುರಿತು ಇಲ್ಲಿ ಯಾವುದೇ ಅನುಮಾನಕ್ಕೆ ಕಾರಣ ಇಲ್ಲ. ಆಯಾ ನೆಲದ ಭಾಷೆಯನ್ನು ಆಯಾ ಪಾತ್ರಗಳು ಸಹಜವಾಗಿ ಆಡಲೇಬೇಕಾಗಿರುವುದರಿಂದ ಇಲ್ಲಿದು ಅನಿವಾರ್ಯ. ಮತ್ತು ಕಥನದ ಸೃಷ್ಟಿ ಯಾವ ನೆಲದಲ್ಲಿ ನಡೆಯುತ್ತೋ ಅದೇ ಪರಿಸರದ ಸತ್ವಯುತ ಭಾಷೆ ಪಾತ್ರಗಳ ಗಟ್ಟಿತನಕ್ಕೆ ಎರಕ ಹೊಯ್ಯಲು ತೀರಾ ಅವಶ್ಯವೇ ಆಗಿದೆ. ನನಗೆ ತಿಳಿದಂತೆ ಲೇಖಕಿ ಆ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನವನ್ನೂ ಕೈಗೊಂಡಿದ್ದಾರೆ, ಮೂಲತಃ ಉತ್ತರಕನ್ನಡದ ಕರಾವಳಿ ನೆಲದವರಾದರೂ ರೂಪಾ, ಪ್ರಕೃತಿಯೇ ಭಿನ್ನವಾಗಿರುವ ಇನ್ನೊಂದು ನೆಲದ ಸಂಗತಿಗಳನ್ನು ತಮ್ಮ ಅಂತರಂಗದ ಲೋಕಕ್ಕೆ ಎಳೆ ತಂದು, ಕೃತ್ರಿಮವೆನ್ನಿಸದ ಅನುಭವ ಸಹಜ ಅಭಿವ್ಯಕ್ತಿಯಲ್ಲಿ, ಜೀವಂತಿಕೆ ತುಂಬಿದ್ದು ಲೇಖಕಿಯ ಗಮನಾರ್ಹ ಸಾಧನೆಯೆಂತಲೇ ಹೇಳಬೇಕು. ಅವರು ಅಪಾರ ಸಹನೆಯಿಂದ ಕಟ್ಟಿದ ಭಾಷಾ ಪ್ರೌಢಿಮೆ ಇದು. ಮತ್ತು ಆ ಮೂಲಕ ಭಾಷಿಕ ಸಾಧ್ಯತೆಗಳ ಪ್ರಯೋಗಕ್ಕೆ ಕೂಡಾ ರೂಪಾ ಒಡ್ಡಿಕೊಂಡಿದ್ದಾರೆ ಅನ್ನಬಹುದು. ಮತ್ತು ಈ ಕೃತಿಯಲ್ಲಿ ಅತಿಸೂಕ್ಶ್ಮ ಸಂಗತಿಯೊಂದನ್ನ ರೂಪಾ ಚಿಂತನೆಗೆ ತಂದಿದ್ದಾರೆ. ಅದು ರೇಣುಕೆಯ ಹಿತೈಷಿ ಗೆಳತಿ ಸವಿತಾ ಕಂಡುಕೊಂಡ ಸ್ವಂತಿಕೆ ಮತ್ತು ಅನನ್ಯತೆಯ ನೆಲೆ. ಆತ್ಮ ಸಂಗಾತದ ರೀತಿಯಲ್ಲಿರುವ ಸವಿತಾ ಹಾಗೂ ವಿವಾಹಿತ ಮನೀಶ್ ಅವರ ಸಂಬಂಧವನ್ನು ದಾಂಪತ್ಯದ ಚೌಕಟ್ಟಿನ ಹೊರತಾದ ನೆಲೆಯಲ್ಲಿ ಒಂದು ಪರ್ಯಾಯ ಚಿಂತನೆಯಾಗಿ ಕೂಡ ಲೇಖಕಿ ನಿರೂಪಿಸಲು ಯತ್ನಿಸಿದ್ದಾರೆ. ಆದರೆ ಸವಿತಾ ಪಾತ್ರಕ್ಕೆ ಗಾಢ ಬಣ್ಣವನ್ನು ರೂಪಾ ಕೊಡಲು ಹೋಗಿಲ್ಲ. ಹಾಗಾಗಿ ಓದುಗರ ಮನಸ್ಸಿನಲ್ಲಿ ಸವಿತಾ ಪಾತ್ರದ ಭಿನ್ನ ವ್ಯಕ್ತಿತ್ವ ಅಷ್ಟಾಗಿ ಅಚ್ಚಾಗುವುದಿಲ್ಲ. ದಾಂಪತ್ಯವನ್ನು ಮೀರಿದ ಸವಿತಾಳ ವೈಚಾರಿಕತೆ ಮತ್ತು ರೇಣುಕೆಯ ವಿನೀತ ಭಾವದ ದಾಂಪತ್ಯ ಹೀಗೆ ಎರಡು ವಿಭಿನ್ನ ರೀತಿಯ ಪಾತ್ರಗಳಿವು. ಒಬ್ಬಳು ದಾಂಪತ್ಯದ ಶೃಂಖಲೆಯನ್ನು ಉಳಿಸಿಕೊಳ್ಳಲು ಹೋಟಡ್ತಾನೆ ಸಾಧನೆಯನ್ನ ಮಾಡ್ತಾಳೆ, ಇನ್ನೊಬ್ಬಳು ದಾಂಪತ್ಯದ ಚೌಕಟ್ಟಿಗೆ ಒಳಗಾಗದೇ ಅದನ್ನು ಮೀರಿದ ಸಂಬಂಧದೊಳಗೆ ಯಾವುದೇ ಶೃಂಖಲೆಗಳಿಲ್ಲದೇ ಬಂಧನಗಳಿಂದ ಮುಕ್ತವಾದ ನಿರಾಳತೆಯಿಂದಲೇ ಸಾಧನೆಗೆ ತೆರೆದುಕೊಳ್ತಾಳೆ. ಎರಡು ವಿರುದ್ಧ ದಿಕ್ಕಿನಲ್ಲಿ ಯೋಚಿಸುವ ಇಬ್ಬರು ಹೆಣ್ಣುಮಕ್ಕಳ ಮನಸ್ಸುಗಳು ಒಂದೇ ರೀತಿಯ ಸಾಧನೆಗೆ ಮಿಡಿಯುತ್ತಾರೆ, ಅದು ಭೂಮಿಗಾಗಿ ಹೊಸ ಬೆಳೆಗಾಗಿ ಸಾವಯವ ಕೃಷಿಗಾಗಿ ಅನ್ನೋದು ಇಲ್ಲಿ ಮುಖ್ಯ. ಎರಡು ಮನಸ್ಥಿತಿಗಳ ನಡುವೆ ಯಾವ ಸಂಘರ್ಷವೂ ಏರ್ಪಡದೇ ಗೆಳತಿಯ ಲಿವ್ ಇನ್ ರಿಲೇಷನ್‌ಶಿಪ್ಪನ್ನ ರೇಣುಕೆಗೆ ಹೊಸದೊಂದೇ ದಿಗಿಲಿನ ಭಾವದಲ್ಲಿ ಚಿಂತಿಸಲು ಹಚ್ಚಿದ ಲೇಖಕಿ ರೂಪಾ, ಕಾದಂಬರಿಯ ಇಡಿಯಾದ ಆಶಯಕ್ಕೆ ಸ್ತ್ರೀಪರವಾದ ಒಂದು ಆಲೋಚನಾ ಕ್ರಮದ ಹೊಸ ಹೊಳಹನ್ನು ತೋರಿದ್ದಾರೆ ಅಂತ ನನಗೆ ಅನ್ನಿಸಿತು. ನಾಯಕಿ ರೇಣುಕೆಯ ಸುತ್ತಲೇ ಸುತ್ತುತ್ತ ಕಟ್ಟಿಕೊಳ್ಳುವ ಈ ಕಥನ ಅವಳೊಂದಿಗೇ ಬೆಳೆಯುತ್ತ ಹೋಗುತ್ತದೆ. ಬದುಕಿನ ದಿಕ್ಕನ್ನೇ ಬದಲಿಸಿದ ಹಳೆಯ ಗೆಳತಿ ಸವಿತಾ ಇರಬಹುದು, ಕೃಷಿ ಕಛೇರಿಯಲ್ಲಿ ಸಿಗುವ ಬಸವರಾಜ ಇರಬಹುದು, ಪ್ರಹ್ಲಾದನ ಪಾತ್ರ ಮಾಡಿದ ಶಿವು ಇರಬಹುದು, ಹೀಗೆ ಎಲ್ಲೆಲ್ಲೋ ಚದುರಿ ಹೋದ ಪಾತ್ರಗಳು ಹೆರಳಿನ ಕೂದಲುಗಳ ಹಾಗೆ ಜೊತೆಯಾಗ್ತ ಹೋಗೋದು ಓದಿಗೆ ಒಂದು ರೀತಿಯಲ್ಲಿ ಒಟ್ಟಂದದ ಭಾವವನ್ನ ರ‍್ತದೆ. ಹಲವು ತಿರುವುಗಳನ್ನು ದಾಟುತ್ತ ಓಡುವ ಕತೆ ಸುಮಾರು ಹದಿನೈದು ವರ್ಷಗಳ ಅವಧಿಯಲ್ಲಿ ವಿಸ್ತಾರಗೊಂಡಿದೆ, ರೇಣುಕಾ ಹತ್ತನೇಯತ್ತೆ ಇರುವಾಗ ಆರಂಭಗೊಳ್ಳುವ ಕತೆ, ಅವಳು ಮದುವೆಯಾಗಿ ಮಗು ಹುಟ್ಟಿ ಆತ ಏಳೆಂಟು ವರ್ಷದವನಾಗುವವರೆಗೆ ಬೆಳೆಯುತ್ತದೆ, ಕತೆ ನಡೆವ ಈ ಕಾಲದ ಪರಿಮಿತಿ ತುಸು ಕಡಿಮೆಯಿದ್ದರೆ ಕಥನದ ಬಂಧ ಇನ್ನೂ ಬಿಗಿಯಾಗಿರುತ್ತಿತ್ತೇನೋ ಅಂತನ್ನುವುದು ನನ್ನ ಬರವಣಿಗೆಯ ಪಯಣದ ಅನುಭವದಲ್ಲಿ ಪಡೆದಂತಹ ಒಂದು ಸಣ್ಣ ಅನಿಸಿಕೆ. ಒಟ್ಟಾರೆ ನಿರೂಪಣೆಯ ಕ್ರಮದಲ್ಲಿಯೂ ನಿರೂಪಕಿ ಪ್ರತ್ಯೇಕವಾಗಿ ನಿಂತು ಕತೆಯನ್ನ ಹೇಳುತ್ತಲೇ ಓದುಗರಿಗೆ ಕಾಣಿಸಲು ಯತ್ನಿಸುವುದು ರೂಪ ಅವರ ಶೈಲಿ. ಇದು ಅವರಿಗೆ ಈಗಾಗಲೇ ಸಿದ್ದಿಸಿದ ಮತ್ತು ಕೈಹಿಡಿದ ಮಾರ್ಗ, ಪುಟ್ಟ ಪುಟ್ಟ ಘಟನೆಗಳ ಮೂಲಕ ಸನ್ನಿವೇಶಗಳನ್ನು ಅರ್ಥಪೂರ್ಣ ಚಿತ್ರವಾಗಿ ಕಟ್ಟಿಕೊಡುವ, ಓದುಗರಿಗೆ ಇನ್ನೂ ಹೆಚ್ಚಿನ ಪರಿಣಾಮಕಾರಿಯಾದ ದರ್ಶನ ಭಾಗ್ಯ ದೊರಕಿಸಿಕೊಡುವ, ಓದುಗರೊಳಗೆ ಹೆಚ್ಚು ದಿನಗಳ ಕಾಲ ಉಳಿದು ಆಪ್ತವಾಗಿ ಕಾಡಬಲ್ಲಂಥ ಕಥನ ಕೌಶಲ್ಯವುಳ್ಳ, ಸಮಕಾಲೀನತೆಯನ್ನು ಹೊಸ ರೀತಿಯಲ್ಲಿ ಎದುರುಗೊಳ್ಳುವ ಪ್ರಯೋಗಶೀಲವಾದ ಇನ್ನಷ್ಟು ಕಾದಂಬರಿಗಳನ್ನು ರೂಪಾ ಕನ್ನಡದ ಮನಸ್ಸುಗಳಿಗೆ ನೀಡಲಿ ಅಂತ ಹಾರೈಸ್ತಾ, 'ಶೃಂಖಲಾ' ಬಿಡುಗಡೆಯ ಈ ಸುಸಂದರ್ಭದಲ್ಲಿ ರೂಪಾ ಅವರನ್ನು ತುಂಬು ಮಮತೆಯಿಂದ ಅಭಿನಂದಿಸುತ್ತೇನೆ, -ಸುನಂದಾ ಕಡಮೆ

ಭಾಷಾ ಪ್ರೌಢಿಮೆ ಮೆರೆಯುವ 'ಶೃಂಖಲಾ'
bottom of page