ಭಾರತೀಯ ಚಲನಚಿತ್ರರಂಗ-೩೫
ಚಂದ್ರಹಾಸ: ಉತ್ತರ ಕರ್ನಾಟಕದಲ್ಲಿ ಚಲನಚಿತ್ರ ನಿರ್ಮಾಣದ ಎರಡನೆಯ ಪ್ರಯತ್ನ ****** ಉತ್ತರ ಕರ್ನಾಟಕದಲ್ಲಿ ಸಿನಿಮಾ ನಿರ್ಮಾಣದ ಮೊದಲ ಪ್ರಯತ್ನ ನಡೆದದ್ದು ೧೯೩೭ ರಲ್ಲಿ. ಹುಬ್ಬಳ್ಳಿಯಲ್ಲಿದ್ದ ಮುಧೋಳಕರ ಸಹೋದರರು ದೇವುಡು ನರಸಿಂಹ ಶಾಸ್ತ್ರಿಯವರ ಭಕ್ತ ಮಾರ್ಕಂಡೇಯ ನಾಟಕವನ್ನು " ಚಿರಂಜೀವಿ" ಎಂಬ ಹೆಸರಿನಿಂದ ಸಿನಿಮಾ ಮಾಡಿದರು. ಈ ಮುಧೋಳಕರರಲ್ಲಿ ಹಿರಿಯವರು ಬೆಳಗಾವಿಯಲ್ಲಿ ರಿಜ್ ಟಾಕೀಸ ಹತ್ತಿರ ಇದ್ದರು ಮತ್ತು ಅವರ ಮಗ ಮುಧೋಳಕರ ಕನ್ನಡಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ನಾನು ಅನೇಕ ಸಲ ಅವರ ಮನೆಗೆ ಹೋದಾಗ ಮುಧೋಳಕರರಿಂದ ಆ ಸಿನಿಮಾ ನಿರ್ಮಾಣದ ವಿಷಯ ಅವರ ಬಾಯಿಂದಲೇ ಕೇಳಿದ್ದುಂಟು. ಶ್ರೀ ಎ. ಎಲ್. ನಾಗೂರ ಎಂಬವರು ಯಾವುದೋ ಪತ್ರಿಕೆಯಲ್ಲಿ ಮೊದಲ ಚಂದ್ರಹಾಸ ಚಿತ್ರದ ಬಗ್ಗೆ ಬರೆದಿದ್ದು ಓದಿದಾಗ ಕೆಲವು ನೆನಪುಗಳು ಬಿಚ್ಚಿಕೊಂಡವು. ಇದು ಉತ್ತರ ಕರ್ನಾಟಕದವರಿಂದ ನಿರ್ಮಾಣಗೊಂಡ ಎರಡನೇ ಚಿತ್ರ. ಇದಕ್ಕೆ ಬಹಳ ವಿಶಿಷ್ಟ ಇತಿಹಾಸ ಇದೆ. ೧೯೪೬ ರಲ್ಲಿ ಈ ಸಿನಿಮಾ ತೆರೆಗೆ ಬಂತು. ಪಂಪಾ ಪಿಕ್ಚರ್ಸ್ ಲಿ, ಬಾಂಬೆ ಎಂಬ ಹೆಸರಿನಲ್ಲಿ ಒಂದು ನಿರ್ದೇಶಕ ಮಂಡಳಿ ರಚಿಸಿಕೊಳ್ಳಲಾಗಿತ್ತು. ಅದರಲ್ಲಿ ಬಿ. ಡಿ. ಜತ್ತಿ ( ಮಾಜಿ ಉಪರಾಷ್ಟ್ರಪತಿ), ಡಾ. ಬಿ. ಎಸ್. ಜೀರಗೆ, ಕೆ. ಬಿ. ಭದ್ರಾಪುರ, ಬಿ. ವಿ. ಭೂಮರೆಡ್ಡಿ, ಯಳಮೇಲಿ, ಗುತ್ತಿಗೋಳಿ, ಎಸ್. ಬಿ. ಪಾಟೀಲ್, ಬಿ. ವಿ. ಜಕಾತಿ ಮೊದಲಾದವರು ಇದ್ದರು. ವಿಜಾಪುರ ಜಿಲ್ಲೆಯ ಇಂಡಿಯವರಾದ ಶಾಂತೇಶ ಪಾಟೀಲ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚಿತ್ರ ನಿರ್ದೇಶಕರಾಗಿದ್ದರು. ಜೈಮಿನಿ ಭಾರತದ ಕತೆಯನ್ನು ಆಧರಿಸಿ ಅವರು ಚಿತ್ರಕತೆ ಬರೆದಿದ್ದರು. ಸಂಗೀತ ನಿರ್ದೇಶನ ಪಂ. ಮಲ್ಲಿಕಾರ್ಜುನ ಮನಸೂರ ಅವರದಾಗಿತ್ತಲ್ಲದೆ, ಸಂಭಾಷಣೆಯನ್ನು ಖ್ಯಾತ ಸಾಹಿತಿ ಎನ್ಕೆಯವರು ಬರೆದರೆ, ನಲವಡಿ ಶ್ರೀಕಂಠ ಶಾಸ್ತ್ರಿಗಳು ಮತ್ತು ಗಂಗಾಧರ ವಾಲಿಯವರು ಗೀತೆ ರಚಿಸಿದ್ದರು. ಅಮೀರಬಾಯಿ ಕರ್ನಾಟಕಿ, ಜೋಳದರಾಶಿ ದೊಡ್ಡನಗೌಡರು, ವಿಜಯಾ ದೇಸಾಯಿ ಹಾಡಿದ್ದರು. ವಿಶೇಷವೆಂದರೆ ಆ ಕಾಲದ ಮಹಾನ್ ರಂಗನಟ ಹಂದಿಗನೂರು ಸಿದ್ದರಾಮಪ್ಪನವರು ದುಷ್ಟಬುದ್ಧಿಯ ಪಾತ್ರ ಹಾಕಿದ್ದರಲ್ಲದೆ ಹಿನ್ನೆಲೆ ಗಾಯನವನ್ನೂ ಮಾಡಿದ್ದರು. ಈ ಮಹಾನಟನ ಅಬ್ಬರಕ್ಕೆ ಪೃಥ್ವಿರಾಜಕಪೂರರೇ ಬೆಚ್ಚಿಬಿದ್ದಿದ್ದರಂತೆ. ಇತರ ಪಾತ್ರಗಳನ್ನು ವಿಕಾಸ ಶಹಾ ಚಡಚಣ, ಬಿ. ಶಾರದಾ ( ವೈಶಾಲಿ ಕಾಸರವಳ್ಳಿಯವರ ಚಿಕ್ಕಮ್ಮ), ಚಂದ್ರಕಾಂತ ಮೋದಗಿ, ರವಿ ಪಾಟೀಲ್ ಶಶಿಧರ ಪಾಟೀಲ, ಯಮುನಾಮೂರ್ತಿ, ಎ. ಜಿ. ನೀಲಗಾರ ಮೊದಲಾದವರು ವಹಿಸಿದ್ದರು. ಸಿನಿಮಾ ಜನಮೆಚ್ಚುಗೆಗೆ ಪಾತ್ರವಾಯಿತಾದರೂ ಇಂದು ಅದರ ರೀಲ್ ಪ್ರತಿಗಳೇ ಲಭ್ಯವಿಲ್ಲ. ಆ ನಂತರವೂ ಎರಡು ಸಲ ಚಂದ್ರಹಾಸ ಚಿತ್ರ ನಿರ್ಮಾಣವಾಗಿದೆ. ಆದರೆ ಈ ಮೊದಲ ಚಿತ್ರಕ್ಕೆ ವಿಶೇಷ ಮಹತ್ವವಿದೆ. ಕನ್ನಡ ಚಿತ್ರೇತಿಹಾಸದಲ್ಲಿ ಅದರ ಹೆಸರು ಚಿರಸ್ಥಾಯಿ. ಅದಾದ ನಂತರ ಈ ಭಾಗದಲ್ಲಿ ನಿರ್ಮಾಣವಾದ ಬಹಳ ಪ್ರಮುಖ ಚಿತ್ರ " ಸಂಗೊಳ್ಳಿ ರಾಯಣ್ಣ". ( ಈಚಿನದಲ್ಲ, ಹಳೆಯದು.) ಅದರಲ್ಕಿ ಲತಾ ಮಂಗೇಶ್ಕರ್ ಕನ್ನಡ ಹಾಡು " ಬೆಳ್ಳನೆ ಬೆಳಗಾಯಿತು" ಹಾಡಿದ್ದಾರೆ. ಅದರ ಕುರಿತು ಮುಂದೆ ಬರೆಯೋಣ. - ಎಲ್. ಎಸ್. ಶಾಸ್ತ್ರಿ