top of page

ಬಾಳಿನ ಸಾರ್ಥಕತೆ

ಬದುಕು ಎಂದರೆ ಜೀವನವನ್ನು ಸಾಗಿಸುವುದು.ಬಾಳುವುದು ಎಂದರೆ ಬದುಕನ್ನು ಹಸನಾಗಿಸಿಕೊಂಡು ನೆಮ್ಮದಿಯಿಂದಿರುವುದು." ಬದಕೋದು ಬ್ಯಾರೆ ಬಳೋದು ಬ್ಯಾರೆ" ಎಂದರು ಕವಿ ದ.ರಾ.ಬೇಂದ್ರೆ.ಹೆಸರಾಂತ ವಿಮರ್ಶಕರು ನಿರಂತರ ಅಧ್ಯಯನಶೀಲರೂ ಆದ ಪ್ರೊ.ಜಿ.ಎಚ್.ನಾಯಕ ಅವರು ತಮ್ಮ ಆತ್ಮಕತೆಗೆ ಬಾಳು ಎಂಬ ಹೆಸರನ್ನು ಕೊಟ್ಟಿದ್ದಾರೆ. ಬಾಳನ್ನು ಹೇಗೆ ಸಾರ್ಥಕಗೊಳಿಸಿಕೊಳ್ಳಬೇಕು ಎಂಬುದರ ಬಗ್ಗೆ ವಚನಕಾರರು, ದಾಸರು, ತತ್ವಪದಕಾರರು,ಸುಭಾಷಿತಕಾರರು ತಮ್ಮ ಚಿಂತನೆಯನ್ನು ಸಾದರ ಪಡಿಸಿದ್ದಾರೆ. ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು ಕರ್ಣಕ್ಕೆ ಶೃಂಗಾರ ಪುರಾತನರ ಸಂಗೀತಂಗಳ ಕೇಳುವುದು ವಚನಕ್ಕೆ ಶೃಂಗಾರ ಸತ್ಯವ ನುಡಿವುದು ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು ಜೀವಿಸುವ ಜೀವಕ್ಕೆ ಶೃಂಗಾರ ಗಣಮೇಳವು ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾತೆಯಯ್ಯಾ ಚೆನ್ನಮಲ್ಲಿಕಾರ್ಜುನಾ? ಅಕ್ಕ ಮಹಾದೇವಿಯು ಬಾಳು ಸಾರ್ಥಕವಾಗಲು ಅಳವಡಿಸಿಕೊಳ್ಳ ಬೇಕಾದ ಮೌಲ್ಯಗಳ ಬಗ್ಗೆ ಈ ವಚನದಲ್ಲಿ ಹೇಳಿದ್ದಾಳೆ. ಕಣ್ಣು ಒಳ್ಳೆಯದನ್ನೆ ನೋಡ ಬೇಕು.ಗುರು ಹಿರಿಯರನ್ನು ನೋಡಿ ಕಣ್ತುಂಬಿಕೊಳ್ಳುವುದೆ ಕಣ್ಣುಗಳಿಗೆ ಶೃಂಗಾರ.ಅದಕ್ಕೆ ಬಸವಣ್ಣ" ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ ಎಂದು ಕೇಳಿಕೊಳ್ಳುತ್ತಾನೆ. ಕಿವಿಗೆ ಶೃಂಗಾರ ಪುರಾತನರ  ಸಂಗೀತವನ್ನು ಕೇಳುವುದು.ಅದು ಕರ್ಣಾಮೃತ. ಸತ್ಯವನ್ನು ನುಡಿಯುವುದು ವಚನಕ್ಕೆ ಅಥವಾ ಮಾತಿಗೆ ಶೃಂಗಾರ.ಸದ್ಭಕ್ತರಾದವರ ಒಳ್ಳೆಯ ಮಾತುಗಳು ಸಂಭಾಷಣೆಗೆ ಶೃಂಗಾರ. ಸತ್ಪಾತ್ರರಾದವರಿಗೆ ಅಂದರೆ ಯಾರು ಅರ್ಹರೊ ಅಂಥವರನ್ನು ಗುರುತಿಸಿ ದಾನ ಮಾಡುವುದು ಕೈಗಳಿಗೆ ಶೃಂಗಾರ." ದಾನೇನ ಪಾಣಿ ನ ತು ಕಂಕಣೇನ ಸ್ನಾನೇನ  ಶುದ್ದಿ ನ ತು ಚಂದನೇನ ಮಾನೇನ ತೃಪ್ತಿ ನ ತು ಮುಂಡನೇನ" ಎಂದು ಸಂಸ್ಕೃತದ ಸುಭಾಷಿತವಿದೆ.ದಾನದಿಂದ ಕೈಗೆ ಶೋಭೆಯೆ ಹೊರತು ಬಳೆಗಳನ್ನು ಹಾಕಿಕೊಳ್ಳುವುದರಿಂದಲ್ಲ ಎಂದು ಅದರ ಅರ್ಥ.ಮಾನವಂತನಾಗಿದ್ದರೆ ತೃಪ್ತಿಯೆ ಹೊರತು ತಲೆಯನ್ನು ಬೋಳಿಸಿಕೊಳ್ಳುವುದರಿಂದ ಅಲ್ಲ  ಎನ್ನುತ್ತದೆ ಸುಭಾಷಿತ. ಜೀವಿಸುವ ಜೀವನಕ್ಕೆ ಶಿವಶರಣರ ಜೊತೆಗಿರುವುದೆ ಶೃಂಗಾರವು.ಇವು ಇಲ್ಲದ ಜೀವಿಯ ಬಾಳು ಏನು ಪ್ರಯೋಜನ, ಅದರಿಂದ ಏನು ಫಲ ಅಂದು ಅಕ್ಕ ಪ್ರಶ್ನಿಸುತ್ತಾಳೆ. "ಓಂ ಭದ್ರಂ ಕರ್ಣೇಭಿ:ಶ್ರುಣುಯಾಮ ಭದ್ರಂ ಪಶ್ಯೇಮಾಕ್ಷಿಭಿರ್ಯಜತ್ರಾ:" ನಾವು ಕಿವಿಗಳಿಂದ ಒಳ್ಳೆಯದನ್ನೆ ಕೇಳೋಣ.ಕಣ್ಣುಗಳಿಂದ ಒಳ್ಳೆಯದನ್ನೆ ನೋಡೋಣ ಎಂದು ಮಂತ್ರವು ಹೇಳುತ್ತದೆ. ಬಸವಣ್ಣ ಮತ್ತು ಮುಂದುವರಿದು ಲಿಂಗ ಸಾಕ್ಷಾತ್ಕಾರದಿಂದ ಆದ ಅನುಭವವನ್ನು ಕಂಗಳು ತುಂಬಿದ ಬಳಿಕ ಕಾಣಲೆ ಇಲ್ಲ ಕಿವಿಗಳು ತುಂಬಿದ ಬಳಿಕ ಕೇಳಲೆ ಇಲ್ಲ ಎನ್ನುತ್ತಾನೆ. ಕೇಳಿದ್ದಕ್ಕಿಂತ ಕೇಳದೆ ಇರುವುದು ಇನ್ನೂ ಮಧುರ ಎನ್ನುತ್ತಾನೆ ಆಂಗ್ಲಕವಿ. " Heard melodies are sweet unheard melodies are sweeter" ಮಹಾತ್ಮಾ ಗಾಂಧೀಜಿಯವರ ಮೂರು ಮಂಗಗಳು ಕಣ್ಣು,ಕಿವಿ,ಬಾಯಿಯನ್ನು ಮುಚ್ಚಿಕೊಂಡು ಕೆಟ್ಟದ್ದನ್ನು ನೋಡುವುದಿಲ್ಲ, ಕೆಟ್ಟದ್ದನ್ನು ಕೇಳುವುದಿಲ್ಲ,ಕೆಟ್ಟದ್ದನ್ನು ಆಡುವುದಿಲ್ಲ ಎಂಬ ಸಂದೇಶವನ್ನು ಸಾರಿ ಹೇಳಳುತ್ತಿವೆ.ನಾವು ಒಳ್ಳೆಯದನ್ನು ಕಾಣುತ್ತಾ,ಒಳಿತನ್ನೆ ಕೇಳುತ್ತಾ, ಶಕ್ತಿಯಿದ್ದಾಗ ಅಶಕ್ತರಿಗೆ ಕೊಡುತ್ತಾ ಬಾಳನ್ನು ಸಾರ್ಥಕ ಮಾಡಿಕೊಳ್ಳುವಲ್ಲಿಯೆ ಆನಂದವಿದೆ.                      ಡಾ.ಶ್ರೀಪಾದ ಶೆಟ್ಟಿ.

ಬಾಳಿನ ಸಾರ್ಥಕತೆ

©Alochane.com 

bottom of page