top of page

ಬದುಕಿನ ಪುಟ ತೆರೆದಾಗ.

ಜೀವನ ಅಂದರೆ ಮೂರು ಪುಟದ ಡೈರಿಯಿದ್ದಂತೆ. ನಾವು ಭೂಮಿಗೆ ಬರುವಾಗ ಭಗವಂತ ನಮ್ಮ ಕೈಯಲ್ಲಿ ಈ ಡೈರಿ ಕೊಟ್ಟು, " ಮೊದಲನೇ ಪುಟದಲ್ಲಿ ನಿನ್ನ ಹುಟ್ಟು ಮತ್ತು ಕೊನೆಯ ಪುಟದಲ್ಲಿ ನಿನ್ನ ಸಾವಿನ ವಿವರ ಇರುತ್ತದೆ. ಈ ಎರಡೂ ಪುಟಗಳನ್ನು ಬರೆಯುವವ ನಾನು. ಆದರೆ ಇವೆರಡರ ಮಧ್ಯದ ಪುಟ ಬದುಕು. ಇದನ್ನು ನೀನೇ ಬರೆಯಬೇಕು" ಎಂದು ಹೇಳಿ ಕಳಿಸುತ್ತಾನಂತೆ.  ನಾವು ಎಲ್ಲಿ, ಹೇಗೆ, ಯಾವಾಗ ಹುಟ್ಟಬೇಕು ಮತ್ತು ಎಲ್ಲಿ, ಹೇಗೆ, ಯಾವಾಗ ನಮ್ಮ ಇಹಲೋಕ ಯಾತ್ರೆ ಮುಗಿಸಬೇಕು ಎಂಬುದು ನಮ್ಮ ಕೈಯಲ್ಲಿಲ್ಲ. ಆದರೆ ಬದುಕು ಸಂಪೂರ್ಣವಾಗಿ ನಮ್ಮ ಇಚ್ಛಾಶಕ್ತಿಯ ಮೇಲಿದೆ. ಈ ಪುಟವನ್ನು ಕೆಟ್ಟದಾಗಿಯೊ, ಸುಂದರವಾಗಿಯೋ ಇಟ್ಟುಕೊಳ್ಳುವದು ನಮ್ಮ ವಿವೇಚನೆಗೆ, ಇಚ್ಛಾಶಕ್ತಿಗೆ ಬಿಟ್ಟದ್ದು. ಈ ಪುಟವನ್ನು ಖಾಲಿಯಾಗಿಡಬಹುದು. ಅಥವಾ ಅದರ ಮೇಲೆ ಗೋಜಲು ಗೋಜಲಾಗಿ ಗೆರೆಯೆಳೆದು ಯಾರಿಗೂ ತಿಳಿಯದಂತೆ ಮಾಡಬಹುದು! ವಿವಿಧ ಬಣ್ಣಗಳನ್ನು ತುಂಬಿ ಸಿಂಗರಿಸುವ, ದೀನರ ಕಣ್ಣೀರು ಒರೆಸಿದ ಕಥೆಗಳನ್ನು ಬರೆಯುವ, ಕಾಯವನ್ನೇ ಕಲಂ ಆಗಿ ಮಾಡಿಕೊಂಡು  ಮಾನವೀಯ ಸಂವೇದನೆಗಳನ್ನು ಚಿತ್ರಿಸಲು ಈ ಪುಟವನ್ನು ಬಳಸಿಕೊಳ್ಳಬಹುದು. ಆದರೆ ಆಯ್ಕೆಯ ಜವಾಬ್ದಾರಿ ಮಾತ್ರ ನಮ್ಮದು!                     ಬದುಕಿನ ಪುಟದಲ್ಲಿ ನಾವು ದಾಖಲಿಸಿದ ವಿವರಗಳು ಡೈರಿಯ ಸಾರ್ಥಕತೆಗೆ ಕನ್ನಡಿ ಹಿಡಿಯುತ್ತವೆ. ಜನರು ರಾಮನನ್ನು ನೆನೆಸುತ್ತಾರೆ ಜೊತೆಗೆ ರಾವಣನನ್ನೂ ಸಹ! ಕೃಷ್ಣನ ನೆನಪು ಮಾಡುತ್ತಾರೆ ಸಂಗಡ ಕಂಸನನ್ನೂ ಕೂಡ. ಆದರೆ ಒಬ್ಬನನ್ನು ನೆನೆಸುವಾಗ ಕಣ್ಣು ಹೆಮ್ಮೆಯಿಂದ ಹೊಳೆದರೆ, ಇನ್ನೊಬ್ಬನ ನೆನಪಿನಿಂದ ಕಣ್ಣು ಅವಮಾನದಿಂದ ಕುಗ್ಗುತ್ತದೆ. ಜನ ನಮ್ಮನ್ನು ಯಾವರೀತಿ ನೆನಪಿಸಿಕೊಳ್ಳಬೇಕು ಎನ್ನುವದು ನಮ್ಮ ಕೈಯಲ್ಲಿದೆ. ಬದುಕಿರುವಾಗ ಎಷ್ಟು ಜನರಿಗೆ ಪ್ರೀತಿ ಹಂಚುತ್ತೇವೆ? ಎಷ್ಟು ಜನರ ಕಣ್ಣೀರು ಒರೆಸುತ್ತೇವೆ? ಎಷ್ಟು ಜನರಿಗೆ ಹಂಚಿ ತಿನ್ನುತ್ತೇವೆ? ಮುಂತಾದ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ.               ನಾವು ನಮ್ಮ ವೃತ್ತಿ, ಗಳಿಕೆ, ಅಧಿಕಾರ, ಅಂತಸ್ತುಗಳನ್ನೇ ಜೀವನ ಎಂಬ ಭ್ರಮೆಯಲ್ಲಿ ಮುಳುಗಿದ್ದೇವೆ. ಆದರೆ ಇವೆಲ್ಲ ಇದ್ದೂ ಜನ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ಕಡೆ ಮುಖ ಮಾಡುತ್ತಿದ್ದಾರೆ! ಇದನ್ನು ನೋಡಿದಾಗ ಆಸ್ತಿ, ಅಂತಸ್ತು ಎಲ್ಲಕ್ಕಿಂತ ಬದುಕಿನಲ್ಲಿ  ಸಂತೃಪ್ತಿ, ಸಮಾಧಾನಗಳೇ ಮುಖ್ಯ ಎನ್ನುವ ಸತ್ಯ ಅರಿವಾಗದೇ ಇರದು. ಕೋವಿಡ್ ಮಹಾಮಾರಿ ನಮ್ಮ ಧಾವಂತಕ್ಕೆ, ಬದುಕಿನ ನಾಗಾಲೋಟಕ್ಕೆ ದೊಡ್ಡ ಬ್ರೇಕ್ ಹಾಕಿದೆ. ಲಾಕಡೌನನಿಂದಾಗಿ ನಮ್ಮ ಕುಟುಂಬದ ಜನರ ಜೊತೆಗೆ ಕಾಲಕಳೆಯುವ, ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಅದ್ಭುತ ಅವಕಾಶ ನಮಗೆ ದಕ್ಕಿದೆ! ಈ ಸಮಯ ದಲ್ಲಿ ಎಷ್ಟೋವರ್ಷಗಳಿಂದ ಮರೆತುಹೋದ ಸ್ನೇಹಿತರನ್ನು, ಬಂಧುಗಳನ್ನು ನೆನಪಿಸಿಕೊಂಡು ಮಾತಾಡಿದ್ದೇವೆ. ಎಲ್ಲಕ್ಕಿಂತ ಬದುಕು ಮುಖ್ಯ ಎಂಬ ಜೀವನ ಪಾಠವನ್ನು ಈ ಮಹಾರೋಗ ನಮಗೆ ಕಲಿಸಿದೆ! ನಮ್ಮ ಮನಸ್ಸಿಗೆ ನಾವೇ ಹಾಕಿಕೊಂಡ ಲಾಕ್ ತೆರೆಯುವ ಕಾಲ ಬಂದಿದೆ.               ಪ್ರಕೃತಿಗೆ ತನ್ನದೇ ಆದ ಲಯವಿದೆ. ನದಿಯ ಜುಳುಜುಳು ನಾದ, ಗಾಳಿ ಬೀಸುವ ಶಬ್ದ, ಮರಗಿಡಗಳು ತೊನೆದಾಡುವ ಸಪ್ಪಳ, ಪಶು, ಪಕ್ಷಿ, ಕೀಟಗಳ ಉಲಿತದ ಮೂಲಕ ಭಗವಂತ ನಮ್ಮೊಂದಿಗೆ ಮಾತನಾಡಲು ಬಯಸುತ್ತಾನೆ. ಆದರೆ ನಾವು ಎಷ್ಟು ಜನ ಆತನ ಮಾತುಗಳನ್ನು ಕೇಳಿಸಿಕೊಂಡಿದ್ದೇವೆ!? ಇದೆಲ್ಲದರ ಜೊತೆಗೆ ನಮ್ಮಲ್ಲೇ ಅಡಗಿ ನಮ್ಮ ಉಸಿರಿನಲ್ಲಿಯೇ ಸಮ್ಮಿಳಿತವಾಗಿರುವ " ಓಂಕಾರ" ನಾದ ಪ್ರತಿಕ್ಷಣ ರಿಂಗಣಿಸುತ್ತಿರುತ್ತದೆ. ಇದು ನಮ್ಮ ಬದುಕಿನ ಮತ್ತು ಬ್ರಹ್ಮಾಂಡದ ನಾದವೂ ಹೌದು! ಈ ಓಂಕಾರ ನಾದವನ್ನು ಕೇಳಿಸಿಕೊಳ್ಳುವದರ ಜೊತೆಗೆ ಒಳ್ಳೆಯ ಸಂಗೀತ, ಶ್ರೇಷ್ಠ ಚಿಂತನೆ, ಪ್ರಕೃತಿಯ ರಮ್ಯದನಿಗಳನ್ನು ಕೇಳಿಸಿಕೊಳ್ಳುವ ಹವ್ಯಾಸ ನಮ್ಮದಾಗಲಿ. ಶ್ರೀರಂಗ ಕಟ್ಟಿ ಯಲ್ಲಾಪುರ.                       ನಿವೃತ್ತ ಪ್ರಾಚಾರ್ಯರು. ಉತ್ಸಾಹ ಮತ್ತು ಕ್ರಿಯಾಶೀಲತೆಗೆ ಇನ್ನೊಂದು ಹೆಸರು ಎನ್ನವ ಹಾಗೆ ನಿವೃತ್ತಿಯ ದಿನಗಳಲ್ಲು ಪೃರ್ವತ್ತರಾಗಿರುವವರು ಶ್ರೀರಂಗ ಕಟ್ಟಿಯವರು.೩೮ ವರ್ಷಗಳ ಕಾಲ ಯಲ್ಲಾಪುರದ ವೈಟಿಎಸ್ಎಸ್  ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕ ಮತ್ತು ಪ್ರಾಚಾರ್ಯರಾಗಿ ಸೇವೆಸಲ್ಲಿಸಿ  ಸಾವಿರಾರು ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿರುವ  ಶ್ರೀರಂಗ ವೆಂಕಟರಾವ್ ಕಟ್ಟಿಯವರು ನಿವೃತ್ತರಾದರೂ ತಮ್ಮ ಕರ್ತತ್ವಶಕ್ತಿಯ ಬಲದಿಂದ ಸಮಾಜದ ಏಳ್ಗೆಗಾಗಿ ಸದಾ ತುಡಿಯುವ, ದುಡಿಯುವ ಹಂಬಲ ಹೊಂದಿದವರು‌. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಇವರು ಪತ್ರಿಕೋದ್ಯಮದಲ್ಲಿ ತಮ್ಮ ಸಮಾಜಮುಖಿ ಬರಹಗಳಿಂದ ಎರಡು ಬಾರಿ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದವರು. ಕಳೆದ ಹಲವಾರು ವರ್ಷಗಳಿಂದ ವಿವಿಧ ಪತ್ರಿಕೆಗಳ ಅಂಕಣಕಾರ ರಾಗಿ ಇವರ ಚಿಂತನ ಬರಹಗಳು ಪ್ರಕಟಗೊಂಡು ಜನ ಮೆಚ್ಚುಗೆ ಗಳಿಸಿವೆ.ಇದೀಗ ಶ್ರೀರಂಗ ಕಟ್ಟಿಯವರು, ಸದ್ವಿಚಾರ, ಸತ್ ಚಿಂತನೆ ಮತ್ತು ಬದುಕಿಗೆ ಅಗತ್ಯವಾದ ಅನುಭವದ ನುಡಿಗಳನ್ನು ನಾಡಿನ ಜನತೆಗೆ ತಲುಪಿಸಲು, ಯೂಟ್ಯೂಬ್ ಚಾನೆಲ್  ತೆರೆದಿದ್ದು ಅದರಲ್ಲಿ ಪಾಕ್ಷಿಕವಾಗಿ "ಬದುಕು ಜಟಕಾಬಂಡಿ" ಚಿಂತನ ಮಾಲಿಕೆಯ ವಿಡೀಯೊಗಳು  ಪ್ರಸಾರವಾಗುತ್ತಿವೆ.ಅವರ ಚಿಂತನಗಳು ನಿಮ್ಮ ಓದಿಗಾಗಿ.  ಸಂಪಾದಕರು

ಬದುಕಿನ ಪುಟ ತೆರೆದಾಗ.

©Alochane.com 

bottom of page