top of page

ಪ್ರಶಸ್ತಿಗಳು ಮಾನಸಮ್ಮಾನಗಳು

ಸಾಧಕರಿಗೆ ಸಿಗುವ ಪ್ರಶಸ್ತಿ-ಗೌರವಗಳು ಇತರರ ಮೆಚ್ಚಿಕೆಗೆ ಕಾರಣವಾಗಬೇಕೇ ಹೊರತು ಅಸಹನೆಗೆ ಕೋಪಕ್ಕೆ ಅಥವಾ ದ್ವೇಷಕ್ಕೆ ಕಾರಣ ಆಗಬಾರದು. ಅಂದರೆ ಪ್ರಶಸ್ತಿ-ಗೌರವಗಳು ಕೂಡ ಓರ್ವ ಸಾಧಕನಿಗೆ ಅರ್ಹವಾಗಿಯೇ ಸಲ್ಲಬೇಕು ಅಂದಂತಾಯಿತು. ಅರ್ಹವಾಗಿ ಸಂದಾಗ ಅಪಸ್ವರಗಳಿಗೆ ಆಸ್ಪದ ಇರುವುದಿಲ್ಲ. ಅನುಮಾನ ಹುಟ್ಟಿಕೊಂಡರೆ ಅಲ್ಲಿ ಅನರ್ಹತೆ ಇದೆ ಎಂದೇ ಅರ್ಥ. ಅಸಹನೆ - ಅಪಸ್ವರ ಎದ್ದಾಗ ಅದು ಅರ್ಹರಿಗೆ ಸಂದಾಯವಾಗಿರುವುದಿಲ್ಲ ಎಂಬುದೇ ತಾತ್ಪರ್ಯ. ಅಂಥವರು ಏಣಿಗಳನ್ನು ಕೆಡವಿ ಮುಂದುವರಿದವರೆಂದು ಭಾವಿಸಬಹುದು. ಅಂತಹ ಏಣಿಗಳು ತೆಗೆವ ಅಪಸ್ವರಗಳೇ ಈ ವ್ಯಕ್ತಿಯ ಸಮಾಧಿಯನ್ನು ತೋಡುತ್ತವೆ ಎಂಬುದನ್ನು ಗಮನಿಸಬೇಕು. ಮಾನ ಸಮ್ಮಾನಗಳು ಸಾಧನೆಯ ಶಿಖರದಲ್ಲಿ ಕೊಡಲ್ಪಡುವವುಗಳು. ಅಲ್ಲಿ ಅಪಸ್ವರಗಳು ಬರಬಾರದು. ಎಲ್ಲರ ಮೆಚ್ಚಿಕೆಯಿಂದ ಸಿಗಲ್ಪಟ್ಟಾಗ ಅದರಿಂದ ಒದಗುವ ಸಂತೋಷ ತೃಪ್ತಿಯೇ ಸಾಂಗೋಪಾಂಗವಾದದ್ದು. ಅದೇ ನಿಜವಾದ ಸಮ್ಮಾನ. ಕೆಲವೊಮ್ಮೆ ಇತರ ಮಾನದಂಡಗಳನ್ನು ಬಳಸಿ ಕಡಿಮೆ ಸಾಧಕರಿಗೆ ಕೊಡಲ್ಪಟ್ಟಾಗ ಅರ್ಹರಾದ ಇತರರು ಅದರಿಂದ ವಂಚಿತರಾದರೆಂದೂ ಅವರ ಸಾಧನೆ ಕಡೆಗಣಿಸಲ್ಪಟ್ಟಿತೆಂದೂ ಅರ್ಥ. ಆಗ ಅಪಸ್ವರಗಳು ಏಳುವುದು ಸ್ವಾಭಾವಿಕ. ಅಪಸ್ವರಗಳು ಎದ್ದಾಗ ಅಂತಹ ಪ್ರಶಸ್ತಿಗಳನ್ನು ಸ್ವೀಕರಿಸದಿರುವುದೇ ಶ್ರೇಯಸ್ಕರ. ಸ್ವೀಕರಿಸುವುದರಿಂದ ಅಂಥವರ ಕಿರೀಟಕ್ಕೆ ತುರಾಯಿ ಸೇರ್ಪಡೆ ಆಗುವುದಿಲ್ಲ, ಬದಲಾಗಿ ಇರುವ ಮಾನವೂ ಮುಕ್ಕಾಗುತ್ತದೆ. 'ಸಮಾಜಪುರುಷ'ನಿಗಿಂತ ದೊಡ್ಡ ತೀರ್ಪುಗಾರನಿಲ್ಲ. ಯಾರಿಗಾದರೂ ಪ್ರಶಸ್ತಿ ಬಂದಾಗ 'ಓಹ್..! ಅವರಿಗೆ ಎಂದೋ ಪ್ರಶಸ್ತಿ ಬರಬೇಕಾಗಿತ್ತು' ಎಂಬ ಉದ್ಗಾರ ಸಾಮಾಜಿಕರಿಂದ ಬಂದರೆ ಅದು ಪ್ರಶಸ್ತಿಗೂ ವ್ಯಕ್ತಿಗೂ ಸಲ್ಲುವ ನಿಜವಾದ ಗೌರವ. ಜನ ಮೂಗು ಮುರಿದರೆ ಎಲ್ಲ ಬಣ್ಣವನ್ನೂ ಮಸಿ ನುಂಗಿತು ಎಂಬಂತೆ ಆತ ಜನ್ಮವಿಡೀ ಮಾಡಿದ ಸಾಧನೆ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತಾಗುವುದರಲ್ಲಿ ಸಂಶಯವಿಲ್ಲ. ತನ್ನ ಕ್ಷೇತ್ರದಲ್ಲಿ ತನ್ನ ವಿಷಯದ ಬಗ್ಗೆ ಇರುವ ಪಾಂಡಿತ್ಯ ಮತ್ತು ತಜ್ಞತೆಯೇ ನಿಜವಾದ ಸಾಧನೆ. ನಾಲ್ಕು ಮಂದಿ ಆತನ ವ್ಯಕ್ತಿತ್ವವನ್ನು ಗೌರವಿಸುವರಾದರೆ ಅದೇ ಸಾಧನೆ. ಒಬ್ಬಾತನ ಸಾಧನೆಯ ಬಗ್ಗೆ ಸಮಾಜ ಮೆಚ್ಚುನುಡಿ ಆಡುವುದಾದರೆ ಅದೇ ಸಾಧನೆ. ಇತರರಿಗೆ ಮಾದರಿಯಾಗಿ ಉಪಕಾರಿಯಾಗಿ ಬಾಳುವರಾದರೆ ಅದೇ ಸಾಧನೆ. ಅದಕ್ಕೆ ಪ್ರಶಸ್ತಿ ಅನ್ನುವ 'ರಶೀದಿ' ಕೆಲವೊಮ್ಮೆ ಸಿಗಬಹುದು, ಕೆಲವೊಮ್ಮೆ ಸಿಗದೇ ಹೋಗಬಹುದು. ಸಾಧನೆಯ ಮೂಲಕ ಸಿಗುವ ಫಲಿತ ಮುಖ್ಯವೇ ಹೊರತು ಅದಕ್ಕಾಗಿ ಸಿಗುವ 'ರಶೀದಿ' ಅಲ್ಲ. ಅಂತಹ 'ರಶೀದಿ'ಯನ್ನು ಪಡಕೊಂಡ ಎಷ್ಟೋ ಮಂದಿ ಮರುದಿನದಿಂದಲೇ ರಂಗದಿಂದ ಹೇಳಹೆಸರಿಲ್ಲದೆ ಕಣ್ಮರೆಯಾಗಿದ್ದಾರೆ. ಅವರು ಪಡಕೊಂಡ ಪ್ರಶಸ್ತಿ-ಗೌರವಗಳಿಂದ ಅವರ ಅಹಂಕಾರ ತೃಪ್ತವಾದುದು ಬಿಟ್ಟರೆ ಸಮಾಜಕ್ಕೆ ಬೇರಾವ ಉಪಯೋಗವೂ ಆಗಲಿಲ್ಲ! ಯಾವ ವ್ಯಕ್ತಿ ಸಮಾಜಕ್ಕೆ ಏನು ದೇಣಿಗೆ ಕೊಟ್ಟಿದ್ದಾನೆ ಎಂಬುದು ಮುಖ್ಯ; ಸ್ವಂತಕ್ಕಲ್ಲ. ಯಾವ ವ್ಯಕ್ತಿ ಸಮಾಜಕ್ಕೆ ಮಾದರಿಯಾಗಿ ತೋರುಗಂಬದಂತೆ ನಿಂತಿದ್ದಾನೆ ಎಂಬುದು ಮುಖ್ಯ; ಇತರ ಅಂಶಗಳಲ್ಲ. ಅಷ್ಟಕ್ಕೂ ಸಮಾಜವು ಸಾಧನೆ ಮಾಡಿದ ಎಲ್ಲರಿಗೂ ಪ್ರಶಸ್ತಿ - ಗೌರವ - ಮಾನ - ಸಮ್ಮಾನಗಳನ್ನು ಮಾಡಿದ ಉದಾಹರಣೆಗಳಿಲ್ಲ. ಯಾಕೆಂದರೆ ಯಾರೋ ಒಬ್ಬರನ್ನು ಗೌರವಿಸುವುದು ಸಮ್ಮಾನಿಸುವುದು ಸಮಾಜದ ಬಾಧ್ಯತೆಯೇನೂ ಅಲ್ಲ. ಸಮಾಜಕ್ಕೂ ಕೆಲವೊಮ್ಮೆ ಮೈಮರೆವು ಉಂಟಾಗುತ್ತದೆ. ತನಗೆ ಮಾನ ಸಮ್ಮಾನ ಸಿಗಬೇಕೆಂದು ಯಾವ ವ್ಯಕ್ತಿಯೂ ಸಾಧನೆ ಮಾಡುವುದಿಲ್ಲ. ತನ್ನ ಕೆಲಸವನ್ನು ಆತ ಶ್ರದ್ಧೆ ನಿಷ್ಠೆ ಪ್ರಾಮಾಣಿಕತೆಯಿಂದ ಮಾಡುತ್ತ ಹೋಗುತ್ತಾನೆ. ಅದು ನಿಜವಾದ ಸಾಧನೆ. ಕೆಲವೊಮ್ಮೆ ಅದು ಉಪಯುಕ್ತವಾದದ್ದು ಎಂದು ಸಮಾಜಕ್ಕೆ ಅನ್ನಿಸಬಹುದು. ಹಾಗೆ ಸಮಾಜಕ್ಕೆ ಅನ್ನಿಸಬೇಕಾದ್ದು ಮುಖ್ಯ. ಹಾಗೆ ಅನಿಸುವುದು ಕೂಡ ದೊಡ್ಡ ಸಂಗತಿಯೇನಲ್ಲ. ಪ್ರಶಸ್ತಿ ಪುರಸ್ಕಾರ ಮಾನ ಸಮ್ಮಾನಗಳೆಲ್ಲ ವ್ಯಾಪ್ತವಾದ ಬದುಕಿನ ಅತಿಸಣ್ಣ ಘಟನೆಗಳು. ಮರುದಿನವೇ ಜನರಿಗೆ ಮರೆತು ಹೋಗುವ ಸಂಗತಿಗಳು. ಪಡೆದವನಿಗಿಂತ ಸಮಾಜಕ್ಕೆ ಅದರಿಂದ ಲಾಭವೇನೂ ಇಲ್ಲ. ಎಲ್ಲಕ್ಕಿಂತ ಬದುಕು ದೊಡ್ಡದು. ಶುಭ್ರ ವ್ಯಕ್ತಿತ್ವದಿಂದ ಲೋಕೋತ್ತರವಾಗಿ ಬಾಳುವುದೇ ನಿಜವಾದ ಸಾಧನೆ. -ಡಾ. ವಸಂತಕುಮಾರ ಪೆರ್ಲ

ಪ್ರಶಸ್ತಿಗಳು ಮಾನಸಮ್ಮಾನಗಳು
bottom of page