top of page

ಪಹರೆಗೆ ನಿದ್ದೆಯ ಹಂಗಿಲ್ಲ

ಹೂ ಗಿಡ ಬಳ್ಳಿ ನೆಲದ ಜಿಗುಟು ಶಿರವ ಸಪಾಟು ಸವರಿ ಹನಿಯಮೃತವುಣಿಸಿ ಕಾಯಬೇಕೆಂದರೆ ಸದ್ದಿಲ್ಲದೆ ನಿಯತತೆಯಲಿ ನಿಡಿದಾದ ಕಣ್ಗಾವಲಿದೆ ಪಹರೆಗೆ ಚಂಚಲತೆಯಿದೆ ರೆಪ್ಪೆಯಡಿಗೆ ಮೈಯೆಲ್ಲಾ ಕಣ್ಣೋ! ಕಣ್ಣೇ ಬಯಲ ಬೆದರು ಚಿತ್ರವೋ! ಈ ಪಹರೆಗೆ ನಿದ್ದೆಯ ಹಂಗಿಲ್ಲ ಸಾಕಾಗಲ್ಲ ಎರಡು ನಿರ್ಮೀಲಿತ ನೇತ್ರ ಹರಡಿದೆ ಜಗದಗಲ ಧನ ಕನಕ ಸಾಮ್ರಾಜ್ಯ ಕಾಯಬೇಕಿರುವುದು ಪೀಠವಾ? ಪೀಠಾರೋಹಿಯಾ? ನಿಕ್ಕಿಯಾಗಬೇಕಿದೆ ಇನ್ನಷ್ಟೆ ಈ ಪಹರೆಗೆ ಮಿತಿಗಳ ಹಂಗಿಲ್ಲ ಆಗಸಕ್ಕೆ ಕೊಡೆ ಹಿಡಿಯುವ ಜರೂರತ್ತುಗಳ ನಡುವೆ ಇದ್ದೂ ಇಲ್ಲವೆಂಬ ಅವಕಾಶದ ಕೊಲೆಯ ನಿತ್ಯ ನರ್ತನದಲ್ಲಿ ಬೇಕು ಬೇಡಗಳ ಕಂಠಮರ್ಧನದ ಚಣಗಳು ನಿಕಾಲೆಯಾಗದೆ ಅಂತರಪಿಶಾಚಿಯಾಗಿ ಅನುರಣಿಸುತಿದೆ ಅನುದಿನ ಪೇಟೆ ಸುತ್ತುತ್ತಿವೆ ಕೊಳ್ಳುವವರಿಲ್ಲದೆ ಕನಸುಗಳು ಕೊರಗಿ ಲಕ್ಷ ಲಕ್ಷ ಭಕ್ಷ್ಯಗಳಿರುವಲ್ಲಿ ಈ ಪಹರೆಗೆ ಭಕ್ಷೀಸಿನ ಹಂಗಿಲ್ಲ ನೆಲ ಮುಗಿಲಾಚೆ ಒಂದು ಪಯಣವಿದೆ ಪಯಣದುದ್ದಕ್ಕೂ ಪಹರೆ ಇದೆ - ಮಂಜುನಾಥ ನಾಯ್ಕ ಯಲ್ವಡಿಕವೂರ

ಪಹರೆಗೆ ನಿದ್ದೆಯ ಹಂಗಿಲ್ಲ

©Alochane.com 

bottom of page