top of page

ಪತ್ರಿಕಾರಂಗ-೬೦: ನಡೆದು ಬಂದ ದಾರಿಭಾಗ-೨

ಪರಿಪೂರ್ಣ ‌ಪತ್ರಕರ್ತನಾಗುವದು ಹೇಗೆ? ಪತ್ರಿಕಾ ರಂಗ ನನ್ನ ಆಯ್ಕೆಯಾಗಿರಲಿಲ್ಲ. ಬಂದುಬಿಟ್ಟೆ. ಬಂದಮೇಲೆ ಅರವತ್ತು ವರ್ಷ ಕಾಲ ಇದರಲ್ಲೇ ಇರುತ್ತೇನೆ ಅಂದುಕೊಂಡಿರಲಿಲ್ಲ. ಇದ್ದೇನೆ. ಯಾಕೆಂದರೆ ಈ ಪತ್ರಿಕಾರಂಗವೇ ಒಂದು ರೀತಿ ಅಮಲು. ಆ ಚಕ್ರವ್ಯೂಹದಲ್ಲಿ ಒಮ್ಮೆ ಒಳಹೊಕ್ಕವೆಂದರೆ ಹೊರಬರುವದು ಕಷ್ಟ. ಅಂತಹ ಆಕರ್ಷಣೆ. ವೀರಮರಣವೇ ಗತಿ. ಆರು ದಶಕಗಳ ಹಿಂದೆ ಬಹಳ ದೊಡ್ಡ ಸಂಬಳವಂತೂ ಯಾರಿಗೂ ಇರಲೇಇಲ್ಲ. ನಮಗಿಂತ ಹಿಂದಿನ ಹಲವು ಹಿರಿಯ ಪತ್ರಕರ್ತರು ಪಟ್ಟ ಕಷ್ಟವನ್ನು ಕಣ್ಣಾರೆ ಕಂಡಿದ್ದೇವೆ. ವಿಶ್ವವಾಣಿಯಲ್ಲಿ ಕರವೀರ ಮಮ್ಮಿಗಟ್ಟಿ ಎಂಬವರಿದ್ದರು. ಅವರು ಮೃತರಾದಾಗ ನಾವೇ ಕೆಲವು ಪತ್ರಕರ್ತರು‌ ವಂತಿಗೆ ಹಾಕಿಕೊಂಡು ಅವರನ್ನು ಹೊತ್ತೊಯ್ದು ಅಂತ್ಯಸಂಸ್ಕಾರ ಮಾಡಿದ್ದೆವು. ವಿಶ್ವ ವಾಣಿಯಲ್ಲಿ ಆಗ ಪಾಪು ಅವರು ತಿಂಗಳಿಗೆ ೨೦೦ ರೂ. ಕೊಡುತ್ತಿದ್ದರು. ವೀರೇಂದ್ರ ಪಾಟೀಲರ ನವಕಲ್ಯಾಣದಲ್ಲಿ ಊಟ ವಸತಿ ಎಲ್ಲ ಕೊಟ್ಟು ೪೦೦/- ಕೊಡುತ್ತಿದ್ದರು. ೬೦-೭೦ ರ ದಶಕದಲ್ಲಿ ಅದೂ ದೊಡ್ಡ ಮೊತ್ತವೇ ಬಿಡಿ. ಈಗ ಮಾಧ್ಯಮ ಸೇರಿದವರು ಆರಂಭದಲ್ಲಿ ಪಡೆಯುವಷ್ಟು ಸಂಬಳವನ್ನೂ ನಾವು ನಮ್ಮ ವೃತ್ತಿಯ ಕೊನೆಯಲ್ಲಿ ಪಡೆಯಲಿಲ್ಲ. ನಮಗೆ ಈಗ ಸಿಗುವ ಮಾಸಾಶನ ಅದಕ್ಕಿಂತ ದೊಡ್ಡದು. ಆದರೆ ಎಲ್ಲ ನಮ್ಮ ತೊಂದರೆಗಳ ನಡುವೆಯೂ ನಾವು ಮಾನಸಿಕ ತೃಪ್ತಿ, ಖುಷಿಯಲ್ಲಿದ್ದೆವು. ನಮಗದೊಂದು ಕೇವಲ ಜೀವನ ನಡೆಸಲು ಪಡೆಯುವ ಸಂಬಳ ಅನಿಸಿರಲಿಲ್ಲ. ಆ ವೃತ್ತಿಯ ಆನಂದವನ್ನು ನಾವು ಅನುಭವಿಸುತ್ತಿದ್ದೆವು. ಸಮಯ ನೋಡಿ ಕೆಲಸ ಮಾಡುವ ಅಭ್ಯಾಸವೂ ಇರಲಿಲ್ಲ. ನಾನು ನನ್ನೊಬ್ಬನ ವಿಚಾರ ಹೇಳುತ್ತಿಲ್ಲ. ನನ್ನ ಸಮಕಾಲೀನ ಹಲವು ಪತ್ರಕರ್ತರನ್ನೂ ಸೇರಿಸಿ ಹೇಳುತ್ತಿದ್ದೇನೆ. ನಮ್ಮೆಲ್ಲರ ಅನುಭವವೂ ಒಂದೇ. ಕೆಲವರು ರಾಜಕೀಯ ಮಾಡಿ ತಮ್ಮ ಸ್ಥಿತಿ ಉತ್ತಮಗೊಳಿಸಿಕೊಂಡವರೂ ಇದ್ದರು. ಆ 'ಕೆಪ್ಯಾಸಿಟಿ' ನಮಗಿರಲಿಲ್ಲವೆನ್ನಿ. ಆಗಿನ್ನೂ ಇಂಟರ್ನೆಟ್ ಯುಗ ಆರಂಭವಾಗಿರಲಿಲ್ಲ. ಮುದ್ರಣ ವ್ಯವಸ್ಥೆ ಸುಧಾರಿಸಿರಲಿಲ್ಲ. ಕೈಯಲ್ಲಿ ಮೊಳೆ ಜೋಡಿಸಿ ಪೇಜ್ ಕಟ್ಟಿ ಟ್ರೆಡಲ್ ಸಿಲೆಂಡರ್ ಗಳಲ್ಲಿ ಮುದ್ರಿಸುವ ಕಾಲ. ನನ್ನ ಸಹಿತ ಕೆಲವರಿಗೆ ಅದರ ಅಭ್ಯಾಸವೂ ಇತ್ತು. ಪೇಪರ್ ಸಂಪಾದಕರೇ ಪತ್ರಿಕೆ ಬಂಡಲ್ ಹೊತ್ತು ಬಸ್ ಸ್ಟ್ಯಾಂಡಿಗೆ ಹೋಗಿ‌ಬಸ್ಸಿನ ಸುತ್ತ ತಿರುಗುತ್ತ ಪೇಪರ್ ಪೇಪರ್ ಎಂದು ಒದರಿ‌ ಮಾರಾಟ ಮಾಡಿದ್ದನ್ನೂ ಕಂಡಿದ್ದೇವೆ ನಾವು. ‌ನಾನು ಮಾಸ- ವಾರಪತ್ರಿಕೆಗಳಿಂದ ದಿನಪತ್ರಿಕೆಗೆ ದಾಟಿದ್ದು ೧೯೬೭ ರಲ್ಲಿ. ಆಗ ಟೆಲಿಪ್ರಿಂಟರ್ ಮೂಲಕ ಯುಎನ್ ಐ, ಪಿಟಿಐ ಸುದ್ದಿಗಳನ್ನು ಇಂಗ್ಲಿಷಿನಲ್ಲಿ ಪಡೆದು ಅದನ್ನು ಕನ್ನಡಕ್ಕೆ ಅನುವಾದಿಸಿ ಕೊಡಬೇಕಿತ್ತು. ಈಗ ಆ ತೊಂದರೆಯಿಲ್ಲ. ನೇರವಾಗಿ ಕನ್ನಡದಲ್ಲೇ ಸಿಗುತ್ತದೆ. ೬೭-೬೮-೬೯ ರತನಕ ನಾನು ಕೆ. ಎಚ್. ಪಾಟೀಲರ ವಿಶಾಲ ಕರ್ನಾಟಕದಲ್ಲಿ ಈ ಅನುವಾದದಲ್ಲಿ ಪಳಗಿದೆ. ಅದು‌ ಮುಂದೆ ಬಹಳ ವರ್ಷ ಉಪಯೋಗಕ್ಕೆ ಬಂತು. * ನಾನು ಮಾಸಪತ್ರಿಕೆ, ಪಾಕ್ಷಿಕ, ಸಾಪ್ತಾಹಿಕ, ಹಾಗೂ ದೈನಿಕ ಈ ನಾಲ್ಕೂ ಬಗೆಯ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದೇನೆ. ಸಂಗಡ, ಪ್ರೂಫ್ ರೀಡಿಂಗ್, ವರದಿಗಾರಿಕೆ, ಉಪ ಸಂಪಾದಕ, ಸುದ್ದಿ ಸಂಪಾದಕ, ಸಂಪಾದಕ, ಸಾಪ್ತಾಹಿಕ ಪುರವಣಿ ಮತ್ತು ವಿಶೇಷಾಂಕ ನಿರ್ವಹಣೆ, ಹೀಗೆ ಎಲ್ಲ ವಿಭಾಗಗಳಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಒಬ್ಬ ಪರಿಪೂರ್ಣ ಪತ್ರಕರ್ತನೆನಿಸಲು ಇವೆಲ್ಲ ಬೇಕೇಬೇಕು ಎಂದು ನನ್ನ ಭಾವನೆ. ಆ ಕೆಲಸ ನನ್ನದಲ್ಲ, ಈ ಕೆಲಸ ನನ್ನದಲ್ಲ, ನಾನ್ಯಾಕೆ ಮಾಡಬೇಕು ಎಂಬ ಭಾವನೆ ನನ್ನಲ್ಲಿ ಯಾವತ್ತೂ ಬರಲಿಲ್ಲ. ಯಾವುದೇ ಒಂದು ವೃತ್ತಿಯ ಪೂರ್ಣ ಆನಂದವನ್ನು ಅನುಭವಿಸಲು ಇದರಿಂದ ಸಾಧ್ಯವಾಗುತ್ತದೆ. ಬೆಳಗಾವಿಯ ಒಂದು ದಿನಪತ್ರಿಕೆಯಲ್ಲಿ ಒಂದು ಸಂದರ್ಭದಲ್ಲಿ ಮುದ್ರಣ ಕೆಲಸಗಾರರು ಮುಷ್ಕರ ಹೂಡಿದಾಗ ನಾನೇ ನಿಂತು ಪೇಜ್ ಕಟ್ಟಿ ಪತ್ರಿಕೆ ಹೊರಬರುವಂತೆ ಮಾಡಿದ್ದೂ ಉಂಟು. ಆ ಕೃತಜ್ಞತೆ ಮಾತ್ರ ಮಾಲಕರಾದವರಲ್ಲಿ ಇರುವದಿಲ್ಲ , ಆ ಪ್ರಶ್ನೆ ಬೇರೆ. * ಪತ್ರಿಕಾ ಕ್ಷೇತ್ರ ಇಂದು ಟಿವಿ ಸೇರಿದಂತೆ ಮಾಧ್ಯಮ ಕ್ಷೇತ್ರವಾಗಿದೆ. ಸಕಲ ಸೌಕರ್ಯಗಳಿವೆ. ಯಾರೂ ನಮ್ಮಷ್ಟು ಕಷ್ಟ ಪಡಬೇಕಾಗಿಲ್ಲ. ಅದು ಸಂತಸದ ವಿಷಯವೇ. ಅವರೂ ನಮ್ಮಂತೆಯೇ ಕಷ್ಟ ಪಡಬೇಕೆಂದು ನಾನು ಬಯಸುವದಿಲ್ಲ. ನನಗೆ ಸಂತೋಷವಿದೆ. ಆದರೆ ಪತ್ರಿಕಾರಂಗದ ಉನ್ನತ ಮೌಲ್ಯಗಳನ್ನು ಅವರು ಪಾಲಿಸಲಿ ಎಂದಷ್ಟೇ ನಾನು ಬಯಸುತ್ತೇನೆ. ಮಾಧ್ಯಮ ಕ್ಷೇತ್ರದಲ್ಲಿ ‌ಭ್ರಷ್ಟರಿಲ್ಲವೆಂದಲ್ಲ, ಇದ್ದಾರೆ. ಸಂಗಡ ತಮ್ಮಷ್ಟಕ್ಕೆ ತಾವೇ ಪ್ರಾಮಾಣಿಕವಾಗಿ ದುಡಿಯುವವರೂ ಇದ್ದಾರೆ. ಅಂತಹ ಸ್ವಾರಸ್ಯಕರ ಸಂಗತಿಗಳ ಬಗ್ಗೆ ಮುಂದೆ ಬರೆಯುತ್ತೇನೆ. ಅರವತ್ತು ವರ್ಷಗಳ ‌ನನ್ನ ಅನುಭವದ ಖಜಾನೆ ಬಹಳ ಶ್ರೀಮಂತವಾಗಿದೆ. ನಿಮ್ಮೊಡನೆ ಹಂಚಿಕೊಳ್ಳುತ್ತೇನೆ. ಶುಭಸಂಜೆ.

ಪತ್ರಿಕಾರಂಗ-೬೦: ನಡೆದು ಬಂದ ದಾರಿಭಾಗ-೨

©Alochane.com 

bottom of page