top of page

ನೋವಲ್ಲಿ ನಿಂತ ನಗುವಿನ ಕವಿತೆಗಳು

ಕುಮಟಾ ತಾಲೂಕಿನ ಮಾಸ್ಕೇರಿಯವರಾದ ಹೊನ್ನಮ್ಮ ನಾಯಕ ತಮ್ಮ ಉಪನ್ಯಾಸಕಿ ವೃತ್ತಿಯಿಂದ ನಿವೃತ್ತಿಯ ನಂತರ ಅಂಕೋಲೆಯಲ್ಲಿ ನೆಲೆನಿಂತು ಸಾಹಿತ್ಯ - ಸಂಘಟನೆ ಸಾಮಾಜಿಕ  ಕಾರ್ಯಗಳಲ್ಲಿ ತೊಡಗಿಸಿಕೊಂಡು ನಿವೃತ್ತಿಯ ನಂತರ ಹೀಗೂ ಬದುಕ ಬಹುದು ಅಂತ ಕಿರಿಯರಿಗೆ ಮಾರ್ಗದರ್ಶನ ಮಾಡುತಿರುವರು. "ನಗುವಿನಲಿ ನೋವ ಬಚ್ಚಿಟ್ಟು" ಇದು ಇವರ ಪ್ರಥಮ ಕವನ ಸಂಕಲನವಾಗಿದ್ದು, ಅಂಕೋಲೆಯ  ಅನಘ ಪ್ರಕಾಶನ ಪ್ರಕಟಿಸಿದ ಈ ಪುಸ್ತಕದ ೧೦೪  ಪುಟಗಳಲ್ಲಿ ಬದುಕಿನ ನೋವು ನಲಿವುಗಳ ೫೫ ಕವಿತೆಗಳಿವೆ. ಬಂಕೀಕೋಡ್ಲದ ಆನಂದಾಶ್ರಮ ಹೈಸ್ಕೂಲ್ ವಿದ್ಯಾರ್ಥಿಯಾದ ಇವರು ನನ್ನೆಲ್ಲಾ ಬರಹಗಳಿಗೆ ಅಂದಿನ ತನ್ನ ಗುರುಗಳಾದ ಸುಬ್ಬಣ್ಣ ರಂ ಯಕ್ಕುಂಡಿಯವರೇ ಸ್ಪೂರ್ತಿ ಎನ್ನುವಾಗ,  ಅರ್ಧ ಶತಕದ ನೆನಪು ಇವರ ಕಣ್ಣಲ್ಲಿ ಇಂದಿಗೂ ಮಿಂಚುವದು. "ಹೆತ್ತೊಡಲು" ಕವಿತೆಯಲ್ಲಿ ರೆಕ್ಕೆ ಬಲಿತಾ ಹಕ್ಕಿ ಕಡೆಗಣಿಸಿ ಪೊರೆದವರ ತೋರುವರು ಧಿಕ್ಕಾರ ಮರೆತು ಮಮಕಾರ ಹಡೆದೊಡಲನರಿಯದೆ ! ಮರೆಯದಿರಿ ಎದೆಯ ಹಾಲಿತ್ತ ತಾಯ , ಇರಿಯದಿರಿ ಬೆಳೆಸಿರುವ ತಂದೆ ಹೃದಯ ಎನ್ನುತ್ತಾ ಇಂದಿನ ಮಕ್ಕಳ - ತಂದೆತಾಯAದಿರ ಬದುಕಿನ ಕೈಗನ್ನಡಿಗೆ ಸಾಕ್ಷಿಯಾಗಿರುವರು. ಈಗಂತೂ ಕಾಲಮಾನವೇ ಬದಲಾಗಿದೆ. ದುಡ್ಡಿನ ಮಮಕಾರದಲಿ ಮನುಷ್ಯ ತನ್ನತನವನ್ನೇ ಕಳೆದುಕೊಳ್ಳುತ್ತಿರುವನು. ಐಟಿ ಬಿಟಿ, ಗ್ಲೋಬಲೈಜೇಷನ್ ಅಡಿಯಲಿ ಮಕ್ಕಳು ತಮ್ಮ ಮೂಲತ್ವವನ್ನೇ ಮರೆಯುತಿರುವರು. ಊರುಗಳೆಲ್ಲಾ ವೃದ್ಧಾಶ್ರಮಗಳಾಗುತಿದೆ. ಈ ಓಟದ ಭರದಲ್ಲಿ ಅಲ್ಲಲ್ಲಿ ಇಂತಹ ಕಲಿತ ಮಕ್ಕಳು ತಮ್ಮ ತಂದೆತಾಯಿಗಳನ್ನೇ ಮರೆಯುವ ಹುನ್ನಾರದಲ್ಲಿರುವರು. ಆದರೆ ಇಲ್ಲಿ ಹೆತ್ತೊಡಲು ಉರಿಯುತಿದೆ. ಮಕ್ಕಳ ಕುರಿತಾಗಿ ನೂರಾರು ಕನಸು ಕಟ್ಟಿದ ಈ ಜೀವಿಗಳು ಅನುಭವಿಸುವ ಯಾತನೆ ಕರುಣಾಜನಕವಾಗಿದೆ. ಇದಕಾಗಿಯೇ ಕವಿ ಇಲ್ಲಿ ಹಾಲುಣಿಸಿದ ತಾಯಿ, ಬೆಳೆಸಿದ ತಂದೆಯನ್ನು ಮರೆತು ಅವರ ಎದೆಗೆ ಇರಿಯದಿರಿ ಎಂದು ಶಾಂತವಾಗಿಯೇ ಕಿವಿಮಾತ ನುಡಿದಿರುವರು. ಇಲ್ಲ ಸಲ್ಲದ ಸುದ್ದಿ ಹರಡುತ ತನ್ನದಲ್ಲದ ವಿಷಯ ಕೆದಕುತ ಬೆನ್ನ ಹಿಂದೆ ಚೂರಿ ಇಕ್ಕುವ ಕಪಟ ಮನದ ಕಳಂಕರು ! ...... ಎನ್ನುತ್ತಾ " ಹಿತಶತ್ರು " ಕವಿತೆಯಲ್ಲಿ ಗೋಸಂಭಿ ಪ್ರವೃತ್ತಿಯ, ಸಮಯ ಸಾಧಕರ, ನಯ ವಂಚಕರ ಕುರಿತಾಗಿ ಗೋಮುಖ ವ್ಯಾಘ್ರರ ಬಣ್ಣ ಬಯಲುಮಾಡಿರುವರು. ಇಂತಹ ಜನ ಎಲ್ಲಿಂದಲೋ ಹೊರಗಿನಿಂದ ಬಂದವರಲ್ಲ. ಇಲ್ಲೇ ನಮ್ಮಲ್ಲೇ ಇದ್ದು ನಮ್ಮದೇ ತಿಂದು ತೇಗಿ , ಎದುರಿಗೆ ನಸುನಗುತ್ತಾ , ಇಲ್ಲ ಸಲ್ಲದ ಸುದ್ದಿ ಹರಡುತ್ತಾ ಮನಸ್ಸಿಗೆ ನೋವು ಕೊಟ್ಟು  ಬೆನ್ನಿಗೆ ಚೂರಿ ಹಾಕುತಿರುವರು. ಇಂಥವರಿಗೆ ಪಾಪ ಪ್ರಜ್ಞೆಯ ಅರಿವೂ ಇರುವದಿಲ್ಲ; ಇವರು ಆತ್ಮ ಘಾತುಕ ಕ್ರಿಮಿಗಳು ಎನ್ನುತ್ತಾ ಕುಹಕಿಗಳ ವರ್ಣನೆಗೈದಿರುವರು. ನಾಡಿನ ಸಾಂಸ್ಕೃತಿಕ ಸಂಘಟಕ , ಬರಹಗಾರ ಸದಾ ಹೊಸಬರ ಬೆನ್ನುಚಪ್ಪರಿಸುವ ಕವಿ ವಿಷ್ಣು ನಾಯ್ಕ ಈ ಸಂಕಲನಕ್ಕೊAದು ಮುನ್ನುಡಿ ಬರೆಯುತ್ತಾ , "ಈ ಕವಿಯಲ್ಲಿ ಕವಿತೆಗಳಿಗೆ ಬಡತನವಿಲ್ಲ ; ಆದರೆ ಕೆಲವು ಪದ್ಯಗಳು ಆನಾವಶ್ಯಕವಾಗಿ ಬೆಳೆದಿದೆ. ಹಾಗೆ ಬೆಳೆಯುತ್ತಾ ಹೋದರೆ ಕವಿತೆ ಸೂಚ್ಯದಿಂದ ವಾಚ್ಯದತ್ತ ಜಾರುತ್ತದೆ. ಹಾಗಾಗದಿರಲಿ. ಒಟ್ಟಿನಲ್ಲಿ ಹೊನ್ನಮ್ಮ ಅವರ  ಕವಿಹೃದಯ ಆಬಾಧಿತವಾಗಿದೆ. ಅವರು ಬೆಳೆಯುವ ಎಲ್ಲ ಲಕ್ಷಣಗಳೂ ಇವೆ, ಬೆಳೆಯಲಿ, ಅದಕ್ಕೆ ಈ ಸಂಕಲನ ನಾಂದಿಯಾಗಲಿ " ಎಂದಿರುವರು. "ಮೌಢ್ಯ ನಿಷೇಧ ಕಾನೂನು " ಕವಿತೆಯಲಿ ತಡೆವ ಮನವಿದ್ದಲ್ಲಿ ಸ್ವಾಮಿ, ಮೊದಲು ತೊಲಗಲಿ ವಿಧಾನಸೌಧದ ಗೋಡೆ ಕೆಡವಿ -ಕಟ್ಟುವ ಆಟ ವಾಸ್ತು-ಹವನ- ಹೋಮ ನಿಂಬೆ- ಮಂತ್ರ - ಮಾಟ ! ಎನ್ನುತ್ತಾ ಆಳುವವರ ಮೌಢ್ಯತೆಯ ವಿರುದ್ಧ ಸಿಡಿದೆದ್ದಿರುವರು. ಮೌಢ್ಯ ನಿಷೇಧ ಕಾನೂನನ್ನು ಜಾರಿಗೆ ತರುವ ಮಹಾಸೌಧದಲ್ಲೇ ನಿಂಬೆ ಹಣ್ಣಿನ ಮಂತ್ರ ಮಾಟ ; ಕೆಡವಿ ಕಟ್ಟುವ ಆಟ ! ಇದೆಂತಹ ವಿಪರ್ಯಾಸ ? ತೋರಿಕೆಗೆ ಮಾತ್ರ ಕಾನೂನು , ಮನದಲ್ಲೆಲ್ಲಾ ಮೌಢ್ಯ ಗಳೇ ತುಂಬಿ ತುಳುಕುತಿದೆ. ಈ ಎಲ್ಲಾ ಕಾಯ್ದೆಯ ಹಿಂದೆಯೂ ತಮ್ಮ ಫಾಯ್ದೆಯ ಹುನ್ನಾರು ಇದ್ದೇ ಇರುವದು ಎನ್ನುತ್ತಾ, ಕೆಡವಿ ಕಟ್ಟುವ ಆಟ ಬಿಟ್ಟು ಮನುಷ್ಯತೆಗೆ ಉಸಿರಾಗುವಾ  ಎಂದು ಕವಿ ಮೌಢ್ಯತೆಯ ವಿರುದ್ಧ ಸಿಡಿದೆದ್ದಿರುವರು.   ಎತ್ತರೆತ್ತರ ಧರೆಯ ಹಿಟಾಚಿ ಅಗೆದಾಗ ಹರಡಿದ ಕೆಂಪು ಮಣ್ಣಲಿ ದುಶ್ಯಾಸನನ ಉದರ ಬಗೆದ ಭಯಾನಕ ನೋಟ ! ಎಂದು " ಹೆದ್ದಾರಿ ನೋಟ " ಕವಿತೆಯಲ್ಲಿ ಅಭಿವೃದ್ಧಿಯ ಹೆಸರಲಿ ಮರಗಳ ಮಾರಣ ಹೋಮವ ಖಂಡಿಸಿರುವರು.  ಅಗೆದ ಆ ಕೆಂಪು ಮಣ್ಣಿನಲಿ  , ಬಗೆದ ದುಶ್ಯಾಸನನ ಹೊಟ್ಟೆ ಕಂಡ ಕವಿ ಈ ಗಿಡ - ಮರ- ಮಣ್ಣು ಕಣ್ಮುಂದೇ ಕರಗಿ ಕಥೆಯಾಗುವ ಪರಿ ಸಹಿಸಲಾಗದ ವೇದನೆಯಾಗಿದೆ. ಪ್ರಕೃತಿಯ ವಿರುದ್ಧ ನಾವು ಕೈ ಬೀಸಿದರೆ ನಮ್ಮ ಅಪಮೃತ್ಯುವನ್ನು ನಾವೇ ಸ್ವಾಗತಿಸಿದಂತೆ ಎನ್ನುತ್ತಾ  ಅಭಿವೃದ್ಧಿಯ ಹೆಸರಿನ ಈ ಬೂಟಾಟಿಕೆ ಕೊನೆಗೊಳ್ಳಲಿ . ಕಾಲ ಕಾಲಕೆ ಮಳೆ,ನೆರಳು ನಮ್ಮದಾಗಲಿ , ಪ್ರಕೃತಿ ನಿಯಮಕೆ ತಲೆ ಬಾಗುವಾ ಎಂದು ಹೆದ್ದಾರಿಯ ಹೆಸರಿನಲ್ಲಿಯ ದರೋಡೆಯನ್ನು ಮನ ಮುಟ್ಟಿಸಿರುವರು. ಈ ಸಂಕಲನಕೆ ಬೆನ್ನುಡಿ ಬರೆದ  ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ  " ಹೊನ್ನಮ್ಮ ಸ್ಪಂದಿಸಿದ ರೀತಿ ಅವಳ ಭಾವ ಬಾಗಿಲುಗಳಿಂದ ಹೊರಬಿದ್ದು ಕವನಗಳಾಗಿ ಸಂತೋಷ, ದುಃಖ, ಆತಂಕ, ಅಪಮಾನ, ಶೋಷಣೆ,ಬಡತನದ ಭಾವಗಳ ಅತಿರೇಕಕ್ಕೆ ಅಂತರಾಳದ ಮಾಧ್ಯಮದಂತಿದೆ. ಸಾತ್ವಿಕ ಜೀವನದ ಗುರಿ, ಸಂತೃಪ್ತ ಬದುಕಿನ ಹಾರೈಕೆ, ಆಪ್ತ ಮನೋಭಾವ, ಶರಣಾಗುವ, ಋಣವಾಗುವ ಪರಿ ಮಾರ್ಮಿಕವಾಗಿದೆ" ಎಂದಿರುವರು. ನರಗಿAತ ನೀ ಮಿಗಿಲು ಎರಡು ಮಾತಿಲ್ಲ ಪ್ರೀತಿ ವಿಶ್ವಸಕೆ ಸಾಟಿ ಬೇರಿಲ್ಲ ಹೆತ್ತವರ ಇತ್ತವರ ಮರೆಯುವ ಮನುಜ ! ತುತ್ತು ಕೂಳಿತ್ತವರ ಮರೆಯದದು ಶುನಕ ಎಂದು " ನರ ಮತ್ತು ನಾಯಿ " ಕವಿತೆಯಲಿ , ಈ ಸ್ವಾರ್ಥಿ ಮನುಷ್ಯನಿಗಿಂತ ಸ್ವಾಮಿನಿಷ್ಠೆಯ ನಾಯಿಯೇ ಮೇಲು ಎಂದಿರುವರು. ನಾಯಿಯೊಡನೆ ನರನ ಹೋಲಿಕೆಗೂ ಅಪವಾನವೇ. ನಾಯಿಗೆ ಎಂದೂ ಬೆನ್ನಿಗಿರಿಯುವ ಬುಧ್ಧಿ ಇಲ್ಲವೇ ಇಲ್ಲ. ಈ ಮನುಷ್ಯ ತಮ್ಮ ಹೆತ್ತವರನ್ನು ಮತ್ತು ಸಲಹಿದವರನ್ನು ತನ್ನ ಸಮಯಸಾಧಕತೆಯಿಂದ ಮರೆತು ಬಿಡುವನು ಆದರೆ ತುತ್ತು ಕೂಳಿತ್ತವರನು ಈ ಶುನಕ ಎಂದಿಗೂ ಮರೆಯಲಸಾಧ್ಯ ಎಂದು ಮನುಷ್ಯನ ಅಸಲಿ ಬುದ್ಧಿಗೆ ಬದ್ಧತೆ ತೋರಿರುವರು. ಅಂಕೋಲೆಯ ಸಾಹಿತ್ಯಿಕ ಸಾಂಸ್ಕೃತಿಕ ರಂಗದ ಮತ್ತೊಬ್ಬ ಒಡನಾಡಿ ಪ್ರೊ. ಮೋಹನ ಹಬ್ಬು , " ತಾವು ಕಂಡ / ಅನುಭವಿಸಿದ ಸಂಗತಿಯನ್ನು ಅವರು ಕವನ ರೂಪದಲ್ಲಿ ಆಪ್ತವಾಗಿ ಕಟ್ಟಿಕೊಡುತ್ತಾರೆ. ಕವಿತೆಯು ವಸ್ತುನಿಷ್ಠವೂ, ಭಾವ ನಿಷ್ಠವೂ ಆಗಿದೆ. ತೀರ ತಡವಾಗಿಯಾದರೂ ಹೊನ್ನಮ್ಮ ನಾಯಕರು ರಂಗ ಪ್ರವೇಶ ಮಾಡಿದ್ದಾರೆ. ಅವರಿಂದ ಇನ್ನೂ  ಗಟ್ಟಿಯಾದ, ಸಾರ್ಥಕವಾದ ಕಾವ್ಯ ಹೊಮ್ಮಲಿ ; ಅವರ ಕಾವ್ಯೋಪಾಸನೆ ನಿರಂತರವಾಗಿ ಸಾಗಲಿ" ಎಂದಿರುವರು. "ಅಪ್ಪನೆAದರೆ" ಕವಿತೆಯಲ್ಲಿ ನನ್ನಪ್ಪನೆಂದರೆ ನನಗೆ, ಕತ್ತಿ ಕಂಬಳಿ ಹಾರೆ ನೊಗ ಹೊತ್ತ ಹೆಗಲು ಕೆಯ್ಯು ಕುತ್ತರಿ ಕಣಜ ಸಾಕರೆಯ ಹುಲ್ಲು ಉದ್ದು ಹೆಸರು ಹುರುಳಿ ನೆಲಗಡಲೆ ಭತ್ತ ತುಂಬಿ ತುಳುಕುವ ಧಾನ್ಯ ಮನೆಯ ಸುತ್ತ. ಎನ್ನುತ್ತಾ ತನ್ನ ಅಪ್ಪನೊಡನೆ ಒಬ್ಬ ಪರಿಪೂರ್ಣ ರೈತನ ಚಿತ್ರ ನೀಡಿರುವದರೊಂದಿಗೆ  ಹಾರೆ , ನೊಗ, ಕೆಯ್ಯು, ಕುತ್ತರಿ ಮುಂತಾದ ಅದ್ಭುತ ಶಬ್ಧಗಳನ್ನು ಬಳಸಿ ನಗರೀಕರಣದ ಈ ಗುಂಗಿನಲಿ  ನಶಿಸಿಹೋಗುತ್ತಿರುವ ನಮ್ಮ ಶಬ್ಧ ಭಂಡಾರದ ಕಣಜಕ್ಕೆ ಕಾಳಾಗಿರುವರು. ಗುರುಗಳಾದ ಯಕ್ಕುಂಡಿಯವರ ಪ್ರಭಾವ ಈ ಕವಿತೆಯಲಿ ಅಚ್ಚೊತ್ತಿ ನಿಂತAತೆನಿಸಿದೆ. ಗಾಣದೆತ್ತಾದ ಅಪ್ಪನನು ನೆನೆಯುತ್ತಾ ನೀ ಸರಳ, ಸಜ್ಜನ ,ಮುಗ್ಧ ಕಾಯಕದಿ ಕೈಲಾಸ ಸೇರಿಕೊಂಡೆ ಎನ್ನುತ್ತಾ ಮನೆ ಮಕ್ಕಳಿಗಿಂತ ಪ್ರೀತಿ ಪ್ರಾಣಿಗಳು ಎಂದು ಅಪ್ಪನ ಮಗು ಮನವನ್ನೂ ನೆನೆದಿರುವರು. ಹಸಿವ ಹಿಂಗಿಸೆ ಕದ್ದ ಹಿಡಿ ಅಕ್ಕಿಗಾಗಿ ಬಡವಗೆ ಅದೆಂಥ ಕ್ರೂರ ಶಿಕ್ಷೆ ಮಾನವೀಯತೆ ಮರೆತ ಹೀನ ಕೃತ್ಯವ ಕಂಡು ಕುದಿಯುತಿಹುದೆನ್ನ ಮನವೂ ಅಸಹಾಯಕರ ಬದುಕಿಗಿಲ್ಲ ಕಸುವು ! ಎನ್ನುತ್ತಾ "ಬಡವರ ಬದುಕಿಗಿಲ್ಲ ಕಸುವು" ಕವಿತೆಯಲ್ಲಿ ಕೋಟಿ ಲೂಟಿ ಹೊಡೆಯುವ ಲಫಂಗರ ಲಂಪಟತನವನ್ನು ವಿರೋಧಿಸಿ ಬಡ, ಹಿಡಿ ಅನ್ನದ ಜನರ ಕಳಕಳಿಯಲಿ ಮಾನವೀಯತೆ ಮೆರೆದು ಅಸಹಾಯಕರ ಬದುಕಿಗಿಲ್ಲ ಕಸುವು ಎಂದು ಮರಗಿರುವರು, ಇಲ್ಲಿ ಕವಿಯ ಮನುಷ್ಯ ಪ್ರೀತಿದೊಡ್ಡದು. ಸಂಕಲನದ ಕವಿ ಹೊನ್ನಮ್ಮ ನಾಯಕರು ತಮ್ಮ ಅಂತರAಗದ ಭಾವನೆಗಳ ಅಭಿವ್ಯಕ್ತಿಸುತ್ತಾ, "ಅಂತರAಗದ ನೋವುಗಳೆಲ್ಲಾ ನಗುವಿನಲಿ ಬಚ್ಚಿಟ್ಟು ಸವೆದ ದಾರಿಯಲ್ಲಿ ಸುಖವಾಗಿ ಬದುಕಿದ್ದೇನೆ. ನನ್ನಂತರಾಳದ ನೋವು ನಲಿವುಗಳ ಒಳಸುಳಿಗಳನ್ನು ಹೊರ ತಂದು ಬಚ್ಚಿಟ್ಟ ಭಾವಗಳನ್ನು ಬಿಚ್ಚಿ ಖುಷಿಯಿಂದ ಹಂಚಿಕೊಳ್ಳುವ ಅಪೇಕ್ಷೆ ನನ್ನದು" ಎಂದಿರುವರು. ಬರಬೇಡ ತಾತಾ, ಮತ್ತೀ ನಾಡಿಗೆ ನರಳಿ ಶರಣಾಗುತಿಹ ನಿನ್ನ ರಾಮರಾಜ್ಯದ ರೈತ ನೇಣಿಗೆ ! ಎಂದು ಗಾಂಧಿತಾತನನ್ನು ನೆನೆಯುವ ಹೊನ್ನಮ್ಮ ನಾಯಕರ ಕವಿತೆಯಲ್ಲಿ ಬದುಕಿನಲಿ ನೋವುಂಡವರ ನಲಿವಿದೆ. ಸಾಮಾಜಿಕ ಕಳಕಳಿ, ಬಡವರ ,ರೈತರ, ಹೆಣ್ಣಿನ ನೋವು ,ಸೈನಿಕರ ತ್ಯಾಗ, ತಂದೆಯ ಮಮತೆ ಅಡಕವಾಗಿದೆ. ಸಮಯ ಸಾಧಕರ, ಗೋಸುಂಬಿಗಳ  ಕುಹಕದ ಮಾತಿಗೆ ಪ್ರತಿಭಟನೆ ಇದೆ. ಕನ್ನಡ ಕಾವ್ಯವನ್ನು ಅಭ್ಯಸಿಸಿ ಸುತ್ತಲಿನ ಬದುಕಿನ ಒಳಗಣ್ಣಿನಿಂದ ಇನ್ನೂ ಹೆಚ್ಚಿನ ಕವಿತೆಗಳು ಹುಟ್ಟಲಿ ಎಂದು ಆಶಿಸಿ, ನಿವೃತ್ತಿಯ ನಂತರ ಲವಲವಿಕೆಯಲಿ ಸಂಕಲನ ತಂದ ನಾಯಕರನ್ನು ಅಭಿನಂದಿಸಿ ಶುಭಕೋರುವೆ. -ಪ್ರಕಾಶ ಕಡಮೆ ನಾಗಸುಧೆ,ಹುಬ್ಬಳ್ಳಿ

ನೋವಲ್ಲಿ ನಿಂತ ನಗುವಿನ ಕವಿತೆಗಳು
bottom of page