ನೂರ್_ಏ_ತಬಸ್ಸುಮ್
ಕೃತಿ: ನೂರ್_ಏ_ತಬಸ್ಸುಮ್ ಪ್ರಕಾರ: ಗಜಲ್ ಸಂಕಲನ ಕವಿ: ನೂರ ಅಹ್ಮದ್ ನಾಗನೂರ್ ಬ್ಯಾಡಗಿ ಪ್ರಕಾಶನ: ಖುಷಿ ಪ್ರಕಾಶನ ತುಮಕೂರು ಗಜಲ್ ಉರ್ದು ಕಾವ್ಯದ ಅತ್ಯಂತ ಜನಪ್ರೀಯ ರೂಪ. ಪ್ರಾಯಶಃ ಹತ್ತನೆ ಶತಮಾನದಲ್ಲಿ ಪ್ರಾರಂಭವಾಗಿರಬೇಕು. ಗಜಲ್ ಅನ್ನು ಉರ್ದು ಕಾವ್ಯದ ರಾಣಿ ಎನ್ನುತ್ತಾರೆ, ಗಜಲ್ ಎಂದರೆ ‘ನಲ್ಲೆಯೊಂದಿಗೆ ಸಂವಾದ’ ಎಂದರ್ಥ. “ಇರುವಿಕೆಯೇ ಇಲ್ಲದಿರುವಿಕೆ ಮತ್ತು ಇಲ್ಲದಿರುವಿಕೆಯೇ ಇರುವಿಕೆ” ಇದುವೇ ಗಜಲ್ ನ ಜೀವ. ಕನ್ನಡದ ಭಾವಗೀತೆಗಳಿಗೆ ಹೋಲಿಸಬಹುದಾದ ಗಜಲ್, ಸಂಕೇತಗಳ ಮೂಲಕ ವ್ಯಕ್ತಪಡಿಸುವ ಸೂಕ್ಷ್ಮ, ವಿವಶತೆಯ ದಿವ್ಯ ಭಾವತರಂಗಗಳು ಮತ್ತು ಕರುಣಾರಸ ಪ್ರಧಾನವಾದ ದ್ವೀಪದಿಗುಚ್ಚಗಳು. ಮತ್ಲಾ, ಕಾಫಿಯಾ, ರದೀಪ್ ಮತ್ತು ಮಕ್ತಾ ಎಂಬ ಸೂತ್ರಗಳು ಗಜಲ್ ನ ಮುಖ್ಯ ಲಕ್ಷಣಗಳಾಗಿವೆ.
ಛಂದೋಬದ್ಧವಾಗಿ ಗಜಲ್ ಬರೆಯುವ ಕೆಲವೇ ಕೆಲವರಲ್ಲಿ ನೂರಅಹ್ಮದ್ ನಾಗನೂರ್ ಅವರು ಕೂಡಾ ಇಬ್ಬರು, ಗದಗಿನ ಶಾಸ್ತ್ರಿಜಿ ಪ್ರೌಡ ಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರ ಮಾತೃಭಾಷೆ ಉರ್ದು, ಮನದ ಭಾಷೆ ಕನ್ನಡ, ಗಜಲ್ ಕಾವ್ಯ ಪ್ರಕಾರವನ್ನು ಶಿಸ್ತು ಬದ್ದವಾಗಿ ಅಧ್ಯಯನ ಮಾಡುತ್ತಿರುವ ಇವರು ತಮ್ಮ ಧರ್ಮಪತ್ನಿಯ ಹೆಸರು, ತಮ್ಮ ಹೆಸರನ್ನು ಸೇರಿಸಿಕೊಂಡು 'ನೂರ್_ಏ_ತಬಸ್ಸುಮ್' ಎಂಬ ಗಜಲ್ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡುವುದರ ಮೂಲಕ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.... ನೂರ್_ಏ_ತಬಸ್ಸುಮ್ ಗಜಲ್ ಸಂಕಲನದಲ್ಲಿ ಒಟ್ಟು ೭೨ ಗಜಲ್ ಗಳಿವೆ. ಈ ಗಜಲ್ ಸಂಕಲನದಲ್ಲಿರುವ ಗಜಲ್ ಗಳನ್ನು ಗಮನಿಸಿದಾಗ ಪ್ರೀತಿ, ಪ್ರೇಮ, ಕನ್ನಡಾಭಿಮಾನ, ದೇಶ ಪ್ರೇಮ, ವಿರಹದ ಭಾವ, ಸಾಮಾಜಿಕ ಕಳಕಳಿ, ವಿಶ್ವಮಾನವತೆಯ ದೂರದೃಷ್ಟಿ, ಆಧ್ಯಾತ್ಮಿಕ ಸ್ಪರ್ಶ, ನೊಂದವರ ಧ್ವನಿಯನ್ನು ಚಿತ್ರಿಸಿದ್ದಾರೆ. ಈ ಗಜಲ್ ಸಂಕಲನದ ಕೆಲವು ಗಜಲ್ ಗಳ ಶೇರ್ ಗಳನ್ನು ಗಮನಿಸಿದಾಗ *•ನಂಬಿಕೆ ಇಲ್ಲದಿದ್ದರೆ ನಾನೇನು ಮಾಡಲಿ ಆದರೆ ಮೋಸಗಾರ ನಾನಲ್ಲ* *ಕೆಟ್ಟವನೆಂದು ಕರೆದುಬಿಡಿ ಬೇಕಾದರೆ ಜಗದ ಮೋಜುಗಾರ ನಾನಲ್ಲ•* ನಂಬಿಕೆ ಇಲ್ಲದಿದ್ದರೆ ದೇವರು ಸಹ ಒಲಿಯಲಾರ, ಮೊದಲು ನಂಬಿಕೆ ಇಡಬೇಕು ಅಂದಾಗ ಎಲ್ಲ ಕೆಲಸಗಳು ಆಗುತ್ತವೆ ನಂಬಿಕೆ ಇಡದೆ ಹೋದರೆ ನಾನೇನು ಮಾಡಲಿ, ನಾನು ಮೋಸಗಾರನಲ್ಲ, ಮೋಜು ನೋಡಿ ಬದುಕುವವನಲ್ಲ, ಕೆಟ್ಟವನೆಂದು ಕರೆದುಬಿಡಿ ತಲೆಗೆ ಹಾಕಿಕೊಳ್ಳುವುದಿಲ್ಲ ಎನ್ನುತ್ತಾರೆ. *•ನೆಮ್ಮದಿ ತೊಟ್ಟ ಮನಸು ಬೀದಿಯಲಿ ಅಲೆಯುತ್ತಿದೆ ಸಾಕಿ* *ಭಾವದ ತೊಟ್ಟಿಲು ತೂಗುತ ಎದೆಯಲಿ ನರಳುತ್ತಿದೆ ಸಾಕಿ•* ಬಡತನದ ಭೀಕರತೆಯನ್ನು ಬಿಂಬಿಸುತ್ತದೆ ಈ ಶೇರ್ ನೆಮ್ಮದಿಯ ತೊಟ್ಟ ಮನಸು ಬೀದಿಯಲಿ ಅಂದರೆ ಆ ಎಳೆ ಮಗು ಬೀದಿಯಲಿ ತಿರುಗಿ ಒಂದೊತ್ತಿನ ಊಟಕ್ಕಾಗಿ ಭಿಕ್ಷೆ ಬೇಡುತ್ತದೆ. ಚಿಂತೆಯಿಲ್ಲದೆ ಆ ಮಗುವಿನಲ್ಲಿ ನೆಮ್ಮದಿಯೂ ನೆಲೆಸಿದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸುತ್ತದೆ. ತೊಟ್ಟಿಲು ಎನ್ನುವುದು ಆ ಮಗುವಿಗಿಲ್ಲ ಏನಿದ್ದರೂ ಆ ತಾಯಿಯ ಅಪ್ಪುಗೆಯೇ ತೊಟ್ಟಿಲಾಗಿದೆ, ಚೆಂದದ ತೊಟ್ಟಿಲು ಇಲ್ಲದೆ ತಾಯಿಯ ಹೃದಯ ನೊಂದಿದೆ. *•ಸ್ವರ್ಗದ ಶಿರವಿದು ಭಾರತದ ಕಾಶ್ಮೀರ ನಿನಗೇಕೆ ಕೊಡಲಿ* *ಸಿಂಧುಗಳ ಹಿಂದ್ ಗಳ ನಾಡಿದು ಸಿಂಧೂರ ನಿನಗೇಕೆ ಕೊಡಲಿ•* ಇಡಿ ವಿಶ್ವದ ಸ್ವರ್ಗ ಯಾವುದೆಂದರೆ ಅದು ನನ್ನ ಭಾರತದ ಕಾಶ್ಮೀರ ಎಂದು ಎದೆ ತಟ್ಟಿಕೊಂಡು ಹೇಳುತ್ತಾರೆ ಗಜಲ್ ಕಾರ ನೂರ್ ಅಹ್ಮದ್ ಅವರು. ಭಾರತದ ಸಿಂಧೂರ ಅಂದರೆ ತಿಲಕವಿದು ನಾನೆಂದಿಗೂ ಬಿಟ್ಟುಕೊಡುವುದಿಲ್ಲ ಎಂದು ವೈರಿ ದೇಶದ ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನು ನೀಡುತ್ತಾರೆ. ಈ ಗಜಲ್ ದೇಶ ಪ್ರೇಮವನ್ನು ಸಾರುತ್ತದೆ.
*•ಬರಡು ಬಾಳಿನಲಿ ದೀಪವು ನಲಿಯುತ್ತ ಉರಿದು ಒಂಟಿಯಾಗಿ ಕಾಣಿಸುತ್ತಿದೆ* *ನೆರಳ ಒಂಟಿತನದಲಿ ಆತ್ಮದ ಹಾಡು ಹಾಡುತ್ತಿದ್ದೇನೆ ನೀನೇಕೆ ಅಳುತ್ತಿದ್ದಿಯಾ•* ವಿರಹ ಭಾವವನ್ನು ಅದೆಷ್ಟು ಆರ್ಧವಾಗಿ ಕಟ್ಟಿಕೊಟ್ಟಿದ್ದಾರೆಂದರೆ ಕಣ್ಣಂಚಲಿ ಹನಿ ಜಿನುಗುವಂತೆ, ಬರಡಾದ ಬಾಳಿಗೆ ಬೆಳಕಾದ ದೀಪವೂ ಉರಿದು ದೂರವಾಗುತ್ತಿದೆ ಎನ್ನುವಾಗ ಹೃದಯ ಝಲ್ ಎಂದು ಬಿಡುತ್ತದೆ. ನೆರಳಿನ ಜೊತೆಗೆ ನನ್ನ ಆತ್ಮದ ಹಾಡು ಹಾಡುತ್ತಿದ್ದೇನೆ ಎಂದಾಗ ಆ ಹೃದಯ ಎಷ್ಟು ನೊಂದಿದೆ ಎನ್ನುವುದು ಅರ್ಥವಾಗುತ್ತದೆ.... *•ನನ್ನ ನಂತರ ಪ್ರೀತಿಯನ್ನು ಅರಸುತ್ತ ಹೋಗುತ್ತಿಯಾ* *ಗೊತ್ತಿಲ್ಲದ ಊರಿನಲ್ಲಿ ನೀ ಹುಡುಕುತ್ತ ಹೋಗುತ್ತಿಯಾ•* ಮೋಸ ಮಾಡಿದ ಅವಳ ಬಗ್ಗೆ ನೊಂದುಕೊಂಡು ಬರೆದ ವಿರಹಭಾವದ ಗಜಲ್ ಇದಾಗಿದೆ, ಮೋಸ ಮಾಡಿ ಮತ್ತೊಬ್ಬರಿಗಾಗಿ ಗೊತ್ತಿಲ್ಲದ ಊರಲ್ಲಿ ನೀ ಹೋಗುತ್ತಿಯಾ ಎಂದು ತೊರೆದು ಹೋದ ಅವಳ ಬಗ್ಗೆ ಕನವರಿಸುತ್ತದೆ ಈ ಗಜಲ್. *•ಗೋಸುಂಬೆ ಅದ್ಹೇಗೆ ಬಣ್ಣ ಬದಲಾಯಿಸುತ್ತಿಯಾ ನನಗೂ ಸ್ವಲ್ಪ ಹೇಳು* *ನಗರವಾಸಿ ಜನಗಳ ನಡುವೆ ಅದ್ಹೇಗೆ ಬದುಕುತ್ತಿಯಾ ನನಗೂ ಸ್ವಲ್ಪ ಹೇಳು•* ಮುಖವಾಡದ ಬದುಕು ಈಗ ನಗರ ಎಂದು ಭೇದ ಭಾವ ಮಾಡದೆ ಹಳ್ಳಿಗೂ ವ್ಯಾಪಿಸಿದೆ. ಮುಖವಾಡ ಬದಲಿಸುವ ಜನಗಳ ಮಧ್ಯೆ ನಾನು ಬಣ್ಣ ಬದಲಾಯಿಸಿ ಅವರಂತಾಗಬೇಕಿದೆ ನನಗೂ ಬಣ್ಣ ಬದಲಿಸುವುದ ಹೇಳಿಕೊಡು ಎಂದು ಗೋಸುಂಬೆಗೆ ಕೇಳಿಕೊಳ್ಳುವಾಗ ನಗರದ ಜನಗಳ ಮುಖವಾಡಕ್ಕೆ ರೋಸಿಹೋಗಿದ್ದಾರೆಂದು ಸೂಚ್ಯವಾಗಿ ತಿಳಿಸುತ್ತದೆ ಈ ಗಜಲ್. *•ಮಾತು ಮಾತಿಗೂ ನಾಲಿಗೆ ನಿನ್ನ ಹೆಸರೆ ಹುಡುಕಾಡುತ್ತಿದೆ ಅಲ್ಲಿ ನೀನೇ ನಾಪತ್ತೆ* *ನವಿರಾದ ತಂತಿಯ ವೀಣೆಯಲಿ ನಾದ ಕುಣಿದಾಡುತ್ತಿದೆ ಅಲ್ಲಿ ನೀನೇ ನಾಪತ್ತೆ•* ತೊರೆದು ಹೋದ ಅವಳ ಗಾಢವಾದ ನೆನಪು ಹೇಗೆ ಕಾಡುತ್ತಿದೆ ಎಂದು ಈ ಗಜಲ್ ನಲ್ಲಿ ಚಿತ್ರಿಸಿದ್ದಾರೆ. ಮಾತು ಮಾತಿಗೂ ನಿನ್ನ ಹೆಸರೆ ಹುಡುಕಾಡುತಿದೆ ನಾಲಿಗೆ ನೀನೆ ನಾಪತ್ತೆ ಎಂದಾಗ ಅವಳ ನೆನಪು ಅದೆಷ್ಟು ತೀವ್ರವಾಗಿ ಬರುತ್ತಿದೆ ಎನ್ನುವುದನ್ನು ಚಿತ್ರಿಸಿದ್ದಾರೆ. *•ಸಾಕು ಮಾಡಿ ಈ ನಿಮ್ಮ ಮಾತು ಜೀವನದ ಸುಖವು ಎಲ್ಲಿ* *ಹತ್ತು ಹಲವಾರು ಯೋಜನೆ ಹೊತ್ತ ನಿಮ್ಮ ಮುಖವು ಎಲ್ಲಿ•* ಆಶ್ವಾಸನೆಯ ಅರಮನೆಯ ಕಟ್ಟುವ ರಾಜಕಾರಣಿಗಳಿಗೆ ಚಾಟಿಏಟು ಕೊಡುವ ಮೂಲಕ ಆಕ್ರೋಶ ವ್ಯಕ್ತಪಡಿಸುವ ಗಜಲ್ ಇದಾಗಿದೆ. ಆ ಯೋಜನೆ, ಈ ಯೋಜನೆ ಎಂದು ಮತ ಹಾಕಿಸಿಕೊಳ್ಳುವ ನೀವೂ ಗೆದ್ದ ಮೇಲೆ ಹೊರಳಿ ನೋಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬಡವರ ಕನಸು ಕನಸಾಗಿಯೇ ಉಳಿದಿದೆ ಎಂದು ಮಮ್ಮಲ ಮರುಗುತ್ತಾರೆ. *•ಟೊಂಗೆಗಳಿಂದ ಹಳದಿ ಎಲೆಗಳು ಉದುರುವುದು ಸೃಷ್ಟಿಯ ಗುಣ* *ಅದೇ ಟೊಂಗೆಗಳಿಂದ ಹಸಿರೆಲೆ ಚಿಗುರಿಸಿ ವಸಂತದಲಿ ತೇಲಾಡುವಿರಿ•* ಪಾಶ್ಚಿಮಾತ್ಯ ದೇಶದ ಸಂಪ್ರದಾಯವನ್ನು ಅನುಸರಿಸಿ ನಮ್ಮ ಸಂಪ್ರದಾಯ ಮರೆಯುತ್ತಿರುವ ಯುವ ಪೀಳಿಗೆಯ ಬಗ್ಗೆ ಮರುಕ ವ್ಯಕ್ತಪಡಿಸುತ್ತಾರೆ. ಹರೆಯ ತೀರಿ ವೃದ್ಧಾಪ್ಯವನ್ನು ಸೂಚಿಸುವ ಹಳದಿ ಎಲೆಗಳು ಉದುರಿ ಹಸಿರು ಚಿಗುರೆಲೆಗೆ ದಾರಿ ಮಾಡಿ ಕೊಡುವ ವಸಂತ ಮಾಸದ ಯುಗಾದಿಯೇ ನಮಗೆ ಹೊಸ ವರ್ಷ ಎಂದು ನೆಲದ ಸೊಡರಿನ ಬಗ್ಗೆ ಎಚ್ಚರಿಸುತ್ತಾರೆ... *•ಒಂದೊಂದು ನೆನಪು ಎದೆಯಲ್ಲಿ ನಾಟಿ ನಿಂತಿದೆ* *ಅದೊಂದು ಕನಸು ಮನಸಿನಲ್ಲಿ ದಾಟಿ ನಿಂತಿದೆ•* ಅವನ ನೆನಪು ಎದೆಯ ಹೊಲದಲಿ ನಾಟಿ ನಿಂತಿದೆ ಎನ್ನುತ, ಅವನ ಪ್ರೀತಿ, ಪ್ರೇಮ ಅವನೊಂದಿಗಿನ ಬೆಚ್ಚಗಿನ ಭಾವದೊಂದಿಗೆ ಮೂಡಿ ಬಂದ ಗಜಲ್ ಇದಾಗಿದೆ. *•ಮುಂಜಾವ ಮಂದ ಮಾರುತ ಅವಳ ಭಾಷೆಯಲಿನುಡಿಸಿತು* *ನೂರ್ ಪಡಿಯಚ್ಚಿನಲಿ ಪ್ರೀತಿಯು ಸೊಬಗಿನಲಿ ಬೆಳೆಯಿತು•* ನವಿರಾದ ಪ್ರೀತಿಯ ಮೊಗ್ಗು ನಗುಬೀರಿ ಎದೆಯಲಿ ಬೆಳೆಯಿತು ಎಂದು ಹೋಲಿಕೆಗಳನ್ನು ಬಳಸಿ ಬರೆದ ಗಜಲ್ ಇದಾಗಿದ್ದು ಮುಂಜಾನೆಯ ಮಂದ ಮಾರುತವೂ ಅವಳ ಭಾಷೆಯಲ್ಲಿ ಮಾತಾಡುತಿದೆ, ನೂರ್ ಅವರಲ್ಲಿ ಪ್ರೀತಿ ಸೊಗಸಾಗಿ ಬೆಳೆಯುತ್ತದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸುತ್ತಾರೆ. *•ದಿನನಿತ್ಯ ಹೇಗೆ ಹುಡುಕಲಿ ಹೃದಯವಂತರ ದುಕಾನಿನಲಿ* *ಹಳೆಯ ಗೆಳೆಯ ನೆನಪಾಗುವದೆ ಗುಣವಂತರ ದುಕಾನಿನಲಿ•* ಈ ಗಜಲ್ ನ ಮತ್ಲಾದ ಸಾಲುಗಳ ರದೀಪ್ ದುಕಾನಿನಲಿ ಎಂಬ ಪದವೂ ಈ ಗಜಲ್ ನ ಶಕ್ತಿಯಾಗಿದೆ ಹೃದಯವಂತರ ದುಕಾನ್(ಅಂಗಡಿ) ನಲ್ಲಿ ದಿನ ನಿತ್ಯ ಹುಡುಕುವುದು ಕಷ್ಟ, ಹಳೆಯ ಗೆಳೆಯರು ಸಿಗುವುದು ಗುಣವಂತರ ದುಕಾನಿನಲ್ಲಿ ಮಾತ್ರ ಎಂದು ತಿಳಿಸುವ ಈ ಗಜಲ್ ಇಂದಿನ ಜನರ ಮನಸ್ಥಿತಿ, ಇಂದಿನ ಸಮಾಜದ ಸ್ಥಿತಿ ಯನ್ನು ಹಾಗೂ ಅವರ ಕೃತಕತೆ, ವಿಕೃತವನ್ನು ಹೋಲಿಕೆಗಳೊಂದಿಗೆ ನಿರೂಪಿಸಯತ್ತದೆ. *•ಬುಡ ಬುಡಿಕೆ ಮಾತುಗಳ ಬಡ ಬಡಿಸುವುದು ಸಾಕು* *ನಡೆ ನುಡಿಯ ಬಂಧುರಕೆ ಜನ ಜೀವನ ನೂಕುವುದು ಸಾಕು•* ಬುಡುಬುಡಿಕೆ ಮಾತುಗಳು ಈಗ ಬೇಕಾಗಿಲ್ಲ ಎಲ್ಲರೂ ಒಂದೇ ತಾಯಿಯ ಮಕ್ಕಳು, ಮುಸ್ಲಿಂ ಹಿಂದೂ ಎನ್ನುವುದು ಬಿಟ್ಟು ಮನುಷ್ಯ ಕುಲ ಎನ್ನುತ್ತಾ ಇರೋಣ ಎನ್ನುವ ಆಶಯವನ್ನು ಹೊಂದಿದ ಈ ಗಜಲ್ ಇವರಲ್ಲಿನ ಸಾಮಾಜಿಕ ಸಾಮರಸ್ಯವನ್ನು ಸೂಚಿಸುತ್ತದೆ. *•ಮಾನವನ ಮನಸು ಅಂದಕಾರಕೆ ಇಳಿಯದೆ ಉನ್ನತಿಗೇರಬೇಕು* *ನೀತಿ ಮೌಲ್ಯಗಳ ದಾರಿಯಿಂದ ಸರಿಯದೆ ಉನ್ನತಿಗೇರಬೇಕು•* ಮಾನವನಲ್ಲಿರುವ ಅಂದಕಾರವೂ ಅಳಿದು ಜ್ಞಾನದ ಬೆಳಕು ಮಾಡಬೇಕು, ನೀತಿ ಮೌಲ್ಯಗಳ ದಾರಿಯನ್ನು ಹಿಡಿದು ನಡೆಯಬೇಕು,ಆಚಾರ ವಿಚಾರಗಳಲ್ಲಿ ಬಾಂಧವ್ಯ, ದುರಾಸೆಗಳಿಗೆ ಬಲಿಯಾಗಬಾರದು ಎನ್ನುವ ಮೂಲಕ ನೀತಿಯನ್ನು ತಿಳಿ ಹೇಳುವ ಗಜಲ್ ಇದಾಗಿದೆ. ತ್ರಿವರ್ಣ ಧ್ವಜದ ಕುರಿತು, ಚೆನ್ನಮ್ಮಳ ಸಾಹಸಗಾಥೆ, ಪ್ರಕೃತಿಯ ವರ್ಣನೆ, ರಾಜಕೀಯ ವಿಡಂಬನೆ, ಶ್ರಮಿಕರ ನೋವು, ಹತಾಶೆ ಹೀಗೆ ವಿವಿಧ ವಿಷಯ ವಸ್ತುಗಳನ್ನು ಹೊಂದಿದ ಈ ಗಜಲ್ ಸಂಕಲನದ ಗಜಲ್ ಗಳು ಭಾವತೀರ್ವತೆ, ಲಯ, ರಾಗ, ತಾಳ ಅಳವಡಿಸಿಕೊಂಡು ಬರೆದ ಇವರ ಬಹುತೇಕ ಗಜಲ್ ಗಳು ಹಾಡುಗಬ್ಬಗಳಾಗಿವೆ. ನೂರ್_ಏ_ತಬಸ್ಸುಮ್ ಗಜಲ್ ಸಂಕಲನವೂ ಹೊಸ ಹಾಗೂ ಯುವ ಗಜಲ್ ಕಾರರಿಗೆ ಮಾರ್ಗದರ್ಶಿಯಾಗಿ ತೋರುತ್ತದೆ ಈ ಸಂಕಲನದಲ್ಲಿ ಮುನ್ನುಡಿಯಲ್ಲಿ ಯು ಸಿರಾಜ್ ಅಹ್ಮದ್ ಅವರು ಗಜಲ್ ನ ೧೯ ಪ್ರಕಾರಗಳನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ. ಗಜಲ್ ನ ಬಹುತೇಕ ಪ್ರಕಾರಗಳಲ್ಲಿ ಗಜಲ್ ಗಳು ಮೂಡಿಬಂದಿದ್ದು ಇನ್ನೂ ಹೆಚ್ಚಿನ ಅಧ್ಯಯನ ಮಾಡಿ ಮತ್ತಷ್ಟು ಹೊಸ ಗಜಲ್ ಸಂಕಲನಗಳನ್ನು ಕೊಡುಗೆಯಾಗಿ ನೀಡಲಿ ಎಂದು ಶುಭ ಹಾರೈಸುತ್ತೇನೆ... *ಶಿವಕುಮಾರ ಮೋ ಕರನಂದಿ* *ಗುಳೇದಗುಡ್ಡ(ಬಾಗಲಕೋಟೆ)* *ಮೋ:೮೯೭೧೦೨೨೪೩೦*