top of page

ನಿಸರ್ಗದೇವಿಯ ನಿತ್ಯಾರಾಧಕರು

ಮಾನವನ ಮಿತಿ ಮೀರಿದ ಸ್ವಾರ್ಥದಿಂದಾಗಿ ಪರಿಸರ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿದೆ. ಮನುಷ್ಯನ ಸ್ವಾರ್ಥದಿಂದಾಗಿ ಪ್ರಾಣಿ ಪಕ್ಷಿಗಳು ಪರಿಸರ ಆತಂಕವನ್ನು ಎದುರಿಸುತ್ತಿದೆ. ಪರಿಸರದ ಕುರಿತು ಜಾಗೃತಿ ಮೂಡಿಸಿ, ಅವುಗಳನ್ನು ರಕ್ಷಿಸುವುದಕ್ಕಾಗಿಯೇ ಜೂ.5ರಂದು ಪರಿಸರ ದಿನವನ್ನು ಆಚರಿಸಲಾಗುತ್ತದೆ. ಆದರೆ ಇದನ್ನು ಒಂದು ದಿನದ ಆಚರಣೆಯಾಗಿಸದೇ ವರ್ಷಪೂರ್ತಿ ಪರಿಸರದ ಉಳಿವಿಗಾಗಿ ಶ್ರಮಿಸುತ್ತಿರುವ ಐವರು ಸಾಧಕರ ಪರಿಚಯ ಇಲ್ಲಿದೆ. ವಿಶ್ವವಿದ್ಯಾಲಯ ಆವರಣದಲ್ಲಿ ಪಕ್ಷಿಗಳ ಕಲರವಕ್ಕೆ ಕಾರಣರಾದ ಶಿಶುಪಾಲ ದಾವಣಗೆರೆಯಲ್ಲಿ 24 ವರ್ಷಗಳಿಂದ ನೆಲೆಸಿರುವ ಶಿವಮೊಗ್ಗ ಮೂಲದ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್. ಶಿಶುಪಾಲ ಅವರು ಪರಿಸರ ಸಂರಕ್ಷಣೆಯಲ್ಲಿ ಗಮನ ಸೆಳೆಯುವ ಸಾಧನೆಗೈದಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ಆವರಣದಲ್ಲಿ ತಮ್ಮ ವಿದ್ಯಾರ್ಥಿಗಳ ಸಹಕಾರದೊಂದಿಗೆ ಸರಿಸುಮಾರು 7000 ಕ್ಕೂ ಅಧಿಕ ಮರಗಳನ್ನು ಬೆಳೆಸುವುದರ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಿದ್ದಾರೆ. ಇಲ್ಲಿ ಈವರೆಗೆ 72 ಕ್ಕೂ ಅಧಿಕ ಪಕ್ಷಿಗಳನ್ನು ಗುರುತಿಸಲಾಗಿದೆ. ಬಾಲ್ಯದ ದಿನಗಳಲ್ಲೇ ಪರಿಸರದತ್ತ ಆಕರ್ಷಿತರಾಗಿದ್ದ ಇವರು ಬಳಿಕ ಜೀವಶಾಸ್ತ್ರ ಕುರಿತು ಅಧ್ಯಯನ ನಡೆಸಿದರು. ತಮ್ಮ ಮನೆಯ ಆವರಣದಲ್ಲಿ 700ಕ್ಕೂ ಹೆಚ್ಚಿನ ಸಸ್ಯಗಳನ್ನು ಬೆಳೆಸಿದ್ದು, ದಾವಣಗೆರೆಯ ಪರಿಸರ ಮಾಲಿನ್ಯ ಇಲಾಖೆ ಇವರ ಮನೆಯನ್ನು `ಪರಿಸರ ಸ್ನೇಹಿ’ ಮನೆ ಎಂದು ಗುರುತಿಸಿದೆ. ಅಲ್ಲದೇ 2019ನೇ ಸಾಲಿನಲ್ಲಿ ತುರ್ಚಘಟ್ಟದ ಸರ್ಕಾರಿ ಶಾಲೆಯ ಮಕ್ಕಳಿಂದ 3000 ಬೀಜದ ಚೆಂಡುಗಳನ್ನು ತಯಾರಿಸಿ ದಾವಣಗೆರೆಯ ವಿವಿಧ ಭಾಗಗಳಲ್ಲಿ ಬಿತ್ತಿದ್ದಾರೆ. ಪ್ರಕೃತಿ ಛಾಯಾಗ್ರಾಹಕರೂ ಆಗಿರುವ ಇವರು ದಾವಣಗೆರೆಯಲ್ಲಿ 156 ವಿವಿಧ ಪ್ರಭೇದದ ಹಕ್ಕಿಗಳನ್ನು ಗುರುತಿಸಿ ದಾಖಲಿಸಿದ್ದಾರೆ. ಉರಗ ಪ್ರೇಮಿಯೂ ಆಗಿರುವ ಶಿಶುಪಾಲ ಅವರು ಸುಮಾರು 792 ಹಾವುಗಳನ್ನು ಬದುಕಿಸಿ ಸುರಕ್ಷಿತ ಸ್ಥಳಗಳಿಗೆ ಬಿಟ್ಟಿದ್ದಾರೆ. ಪರಿಸರದ ಕುರಿತು ಹಲವಾರು ಲೇಖನಗಳನ್ನೂ ಬರೆದಿದ್ದಾರೆ. ಶಾಲಾಮಕ್ಕಳಿಗೆ ಹೊರಸಂಚಾರಕ್ಕೆ ಕರೆದುಕೊಂಡು ಹೋಗಿ ಪ್ರಕೃತಿಯ ಕುರಿತು ಪಾಠವನ್ನೂ ಮಾಡುತ್ತಿದ್ದಾರೆ. ಕೃಷಿ ವಿಜ್ಞಾನ ವಿಷಯದಲ್ಲಿನ ಇವರ ಸಂಶೋಧನೆಗೆ ರಾಷ್ಟ್ರಿಯ ಯುವ ವಿಜ್ಞಾನಿ ಪ್ರಶಸ್ತಿಯೂ ದೊರೆತಿದೆ. `ಪರಿಸರವನ್ನು ಅಭ್ಯಸಿಸಲು ಸೂಕ್ಷ್ಮ ಸಂವೇದನಾಶೀಲ ಮನಸ್ಸು ಬೇಕು. ಪರಿಸರ ಅಧ್ಯಯನ ಯಾಂತ್ರೀಕೃತ ಬದುಕಿನಿಂದ ಹೊರಬರಲು ಒಂದು ಅತ್ಯುತ್ತಮ ಸಾಧನ ಎನ್ನುತ್ತಾರೆ ಡಾ.ಎಸ್. ಶಿಶುಪಾಲ. ಹೊಂಗೆ ಮರಗಳ ಸರದಾರ ಪ್ರಕಾಶ ಶಿವಮೊಗ್ಗದ ಗೋಪಾಲ ಗೌಡ ಬಡಾವಣೆ ಹಾಗೂ ಶಿವಮೊಗ್ಗ-ಸಾಗರ ರಸ್ತೆಯ ಅಲುಕೊಳದ ರಸ್ತೆಯಲ್ಲಿ ಸುಮ್ಮನೆ ನಡೆದು ಹೋಗುತ್ತಿದ್ದರೆ ರಸ್ತೆ ಪಕ್ಕದ ಹೊಂಗೆ ಮರಗಳು ದಾರಿಹೋಕರಿಗೆ ತಂಗಾಳಿ ಸೋಕಿಸುತ್ತದೆ. ಈ ಮರಗಳನ್ನು ಬೇಳೆಸಿರುವ ಹಾಗೂ ಸಂರಕ್ಷಿಸುತ್ತಿರುವ ಒಬ್ಬ ಕಾರಣಕರ್ತ ಪ್ರಕಾಶ ಕೆ. ನಾಡಿಗ್. ಕೇವಲ ಇಲ್ಲಷ್ಟೇ ಅಲ್ಲ, ತುಮಕೂರಿನ ಊರುಕೆರೆಯ ಸುತ್ತಮುತ್ತ ಕೂಡ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಇವರು ನೆಟ್ಟ ಗಿಡಗಳಲ್ಲಿ 80% ಹೊಂಗೆಮರಗಳೇ ಇರುವುದು ವಿಶೇಷ. ಈವರೆಗೆ ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟಿರುವ ಅಪರೂಪದ ಪರಿಸರ ಪ್ರೇಮಿ ಇವರು. ಹಾಗೆ ಗಿಡಗಳನ್ನೂ ಮಕ್ಕಳಂತೆ ಪೋಷಿಸುವ ಹಸಿರುಜೀವಿ. ಸ್ನಾತಕೋತ್ತರ ಪದವಿ ಮುಗಿದ ಬಳಿಕ ಕೆಲಸದ ಹುಡುಕಾಟದಲ್ಲಿದ್ದ ಇವರು ಹಲವಾರು ತಿಂಗಳು ಮನೆಯಲ್ಲೇ ಇರಬೇಕಾಯಿತು. ಇದೇ ಸಮಯದಲ್ಲಿ ಅರಣ್ಯನಾಶದ ಕುರಿತು ಮನಗಂಡ ಪ್ರಕಾಶ್, ಅರಣ್ಯನಾಶ ತಡೆಗಟ್ಟುವ ಉದ್ದೇಶದಿಂದ ಸ್ನೇಹಿತ ಡಾ. ಸಂಜಯ್ ಜೊತೆಗೂಡಿ ವೃಕ್ಷ ಸಂತತಿ ಬೆಳೆಸುವ ಸಾಹಸಕ್ಕೆ ಕೈ ಹಾಕಿದರು. ವೃತ್ತಿಯಲ್ಲಿ ತುಮಕೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಇವರು, ಪರಿಸರದ ಕುರಿತು ಅನೇಕ ಲೇಖನಗಳನ್ನೂ ಬರೆದಿದ್ದಾರೆ. ಮಕ್ಕಳಿಗೆ ಪರಿಸರ, ಪ್ರಾಣಿ, ಪಕ್ಷಿಗಳ ಬಗ್ಗೆ ಕುತೂಹಲ ಜಾಸ್ತಿ. ಇಂತಹ ಕುತೂಹಲವನ್ನು ಪೋಷಿಸಿ ಬೆಳೆಸಿದರೆ ಪರಿಸರ ಸಂರಕ್ಷಣೆಗೆ ಸಹಾಯವಾಗುವುದೆಂದು ಮನಗಂಡು ಗುಬ್ಬಚ್ಚಿ ಸಂಘವನ್ನು ಸ್ಥಾಪಿಸಿ ಅದರಲ್ಲಿ ಮಕ್ಕಳನ್ನು ಸೇರಿಸಿಕೊಳ್ಳುವ ಮೂಲಕ ಪರಿಸರ ದಿನಾಚರಣೆ, ವಿಶ್ವ ಜಲದಿನ, ಭೂಮಿ ದಿನ, ಓಝೋನ್ ದಿನ ಮುಂತಾದ ಪರಿಸರಕ್ಕೆ ಮೀಸಲಾದ ದಿನಗಳಂದು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದರ ಮೂಲಕ ಮಕ್ಕಳಲ್ಲೂ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸಲು ಯಶಸ್ವಿಯಾಗಿದ್ದಾರೆ. ಇವರ ಕಾರ್ಯದಲ್ಲಿ ಮಕ್ಕಳಾದ ಅಭಯ್ ಮತ್ತು ರಾಘವಿ ಕೂಡ ತೊಡಗಿಸಿಕೊಂಡಿದ್ದಾರೆ. ಇವರಿಗೆ ರಾಜ್ಯ ಪರಿಸರ ರಕ್ಷಕ ಪ್ರಶಸ್ತಿ, ಸಮರ್ಥ ಕನ್ನಡಿಗ-2018 ಹೀಗೆ ವಿವಿಧ ಪ್ರಶಸ್ತಿಗಳೂ ಲಭಿಸಿವೆ. ವನ್ಯಜೀವಿ ಛಾಯಾಚಿತ್ರ ಮಾಂತ್ರಿಕ ಶಶಿಧರಸ್ವಾಮಿ `ಪಕ್ಷಿ ಸಂಕುಲದ ಬೆನ್ನು ಹತ್ತಿ ಛಾಯಾಚಿತ್ರ ತೆಗೆಯುವುದು ಸುಲಭದ ಮಾತಲ್ಲ. ಒಂದು ಪಕ್ಷಿಯ ಛಾಯಾಚಿತ್ರ ಕ್ಲಿಕ್ಕಿಸಲು ತಾಳ್ಮೆಯಿರಬೇಕು. ಕೆಲವೊಮ್ಮೆ 2-3 ದಿನ, ಒಂದು ವಾರ ಅಥವಾ ಒಂದು ತಿಂಗಳೂ ಕಾಯಬೇಕಾಗುತ್ತದೆ. ಇಲ್ಲಿ ಛಾಯಾಗ್ರಾಹಕನಿಗೆ ತಾಳ್ಮೆ ಮತ್ತು ಸಂಯಮ ಮುಖ್ಯ. ಇದೊಂದು ಸಾಹಸದ ಕೆಲಸವೇ ಸರಿ.’ -ಇದು ಎರಡು ದಶಕಗಳಿಂದ ವನ್ಯಜೀವಿ ಛಾಯಾಗ್ರಾಹಕ, ಪಕ್ಷಿ ತಜ್ಞ, ನಿಸರ್ಗ ತಜ್ಞ, ಚಿಟ್ಟೆ ತಜ್ಞರಾಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಅಪರೂಪದ ಸಾಧಕ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕು, ಕದರಮಂಡಲಗಿ ನಿವಾಸಿ, ಶಶಿಧರಸ್ವಾಮಿ ಹಿರೇಮಠ ಅವರ ಅನುಭವದ ನುಡಿ. ಬಾಲ್ಯದಲ್ಲಿ ತಮ್ಮ ಹೊಲಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಅಲ್ಲಿಯ ಪಕ್ಷಿ, ಪ್ರಾಣಿ, ಕೀಟಗಳ ಚಲನವಲನ ಗಮನಿಸಿ, ಅವುಗಳತ್ತ ಒಲವು ಬೆಳೆಸಿಕೊಂಡು ಮುಂದೆ ಜೀವ ಜಗತ್ತಿನ ಕುರಿತು ಅಧ್ಯಯನ ನಡೆಸಿ ಇಂದು ಒಬ್ಬ ಪರಿಸರ ಸಂರಕ್ಷಕರಾಗಿ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ವನ್ಯಜೀವಿ ಛಾಯಾಗ್ರಾಹಕರಾಗಿ 526ಕ್ಕೂ ಹೆಚ್ಚು ಪಕ್ಷಿಗಳನ್ನು ಗುರುತಿಸಿ ಅಧ್ಯಯನ ನಡೆಸಿದ್ದು, ಪಕ್ಷಿಗಳ ಕುರಿತಾದ ಪುಸ್ತಕ ಅಚ್ಚಿನಮನೆಯಲ್ಲಿದೆ. ಶಾಲಾ-ಕಾಲೇಜುಗಳಿಗೂ ತೆರಳಿ ಪರಿಸರ ವಿಜ್ಞಾನದ ಕುರಿತು ಉಪನ್ಯಾಸ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಶಶಿಧರಸ್ವಾಮಿಯವರು ವಿಶೇಷವಾಗಿ ಚಿಟ್ಟೆ ತಜ್ಞರಾಗಿದ್ದು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಉದ್ಯಾನವನದಲ್ಲಿ ಸುಮಾರು 55 ಪ್ರಭೇದದ ಚಿಟ್ಟೆಯ ಇರುವಿಕೆಯನ್ನು ದಾಖಲಿಸಿ `ಜೈವಿಕ ಚಿಟ್ಟೆ ವನ’ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದು ಚಿಟ್ಟೆ ವನ ನಿರ್ಮಾಣದ ಹಂತದಲ್ಲಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಇವರ ಅನೇಕ ಛಾಯಾಚಿತ್ರಗಳು ಪ್ರದರ್ಶನಗೊಂಡಿವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ವನ್ಯಜೀವಿ ಕುರಿತು ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇವರು ಕ್ಲಿಕ್ಕಿಸಿದ ಚೇಳು ಮತ್ತು ಹಳದಿ ಚಿಟ್ಟೆಗಳ ಮಿಲನ ಇದೆರಡು ಛಾಯಾಚಿತ್ರಗಳು ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ತಲಾ 4 ಬಂಗಾರದ ಪದಕಗಳನ್ನು ಪಡೆದಿದೆ. `ವನ್ಯಜೀವಿ ಛಾಯಾಚಿತ್ರ ಕಲಾ ಪ್ರವೀಣ’ ಪ್ರಶಸ್ತಿಯೂ ಸಂದಿವೆ. ಆಗುಂಬೆಯಲ್ಲೊಂದು `ಕಾಳಿಂಗ ಮನೆ’ ನಿರ್ಮಿಸಿದ ಗೌರಿಶಂಕರ: ಹಾವು ಅಂದರೆ ಯಾರಿಗೆ ತಾನೇ ಭಯವಿಲ್ಲ? ಅದರಲ್ಲೂ ಸರ್ಪ ಅಥವಾ ಕಾಳಿಂಗ ಸರ್ಪ ಅಂದರೆ ಭಯ ಕೂಡ ಹಚ್ಚೇ ಎನ್ನಬಹುದು. ಆದರೆ ಈ ವ್ಯಕ್ತಿ ಪ್ರತಿನಿತ್ಯ ಕಾಳಿಂಗ ಸರ್ಪದ ಜೊತೆಗೇ ಕಾಲ ಕಳೆಯುತ್ತಾರೆ. ಅದರ ಕುರಿತು ಅಧ್ಯಯನವನ್ನೂ ನಡೆಸುತ್ತಿದ್ದಾರೆ. ಇವರು ಕಾಳಿಂಗ ಸರ್ಪಗಳಿಗಾಗಿಯೇ `ಕಾಳಿಂಗ ಮನೆ’ಯನ್ನೂ ನಿರ್ಮಿಸಿದ್ದಾರೆ. ಇವರೇ ಆಗುಂಬೆಯ ಕಾಳಿಂಗ ಫೌಂಡೇಶನ್‍ನ ಮುಖ್ಯಸ್ಥ ಗೌರಿಶಂಕರ್. ಇವರು ವನ್ಯಜೀವಿ ಜೀವಶಾಸ್ತ್ರಜ್ಞರಾಗಿದ್ದು ಕಾಳಿಂಗ ಸರ್ಪದ ಕುರಿತು ಕಳೆದ ಎರಡು ದಶಕಗಳಿಂದ ಅಧ್ಯಯನ ನಡೆಸುತ್ತಿದ್ದಾರೆ. ಒಡಿಶಾದ ಉತ್ತರ ಓರಿಸ್ಸಾ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಅಧ್ಯಯನ ನಡೆಸಿದ್ದಾರೆ. ಇವರು ಈ ಹಿಂದೆ ಸೆಂಟರ್ ಫಾರ್ ಹರ್ಪಿಟಾಲಜಿ, ಮದ್ರಾಸ್‍ನ ಕ್ರೋಕೊಡೈಲ್ ಬ್ಯಾಂಕ್, ಆಗುಂಬೆಯ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಿ ಇತ್ತೀಚೆಗೆ ಒಂದು ದಶಕದಿಂದ ಆಗುಂಬೆಯ `ಕಾಳಿಂಗ ಮನೆ’ಯಲ್ಲಿ ಕಾಳಿಂಗ ಸರ್ಪಗಳ ನೈಸರ್ಗಿಕ ಇತಿಹಾಸಗಳ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಈವರೆಗೆ 350ಕ್ಕೂ ಅಧಿಕ ಕಾಳಿಂಗ ಸರ್ಪಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದು `ಕಿಂಗ್ ಕೋಬ್ರಾ ಮತ್ತು ಐ’, `ಸೀಕ್ರೆಟ್ಸ್ ಆಫ್ ದಿ ಕಿಂಗ್ ಕೋಬ್ರಾ’, `ಏಷ್ಯಾದ ಮಾರಕ ಹಾವುಗಳು’ ಹೀಗೆ ಇಂಗ್ಲಿಷ್‍ನ ವಿವಿಧ ಸಾಕ್ಷ್ಯಚಿತ್ರಗಳಲ್ಲೂ ಇವರು ಕಾಣಿಸಿಕೊಂಡಿದ್ದಾರೆ. ಕಳೆದ 8 ವರ್ಷಗಳಲ್ಲಿ 700ಕ್ಕೂ ಹೆಚ್ಚು ಜನರಿಗೆ ಹಾವುಗಳನ್ನು ರಕ್ಷಿಸುವ ಮತ್ತು ಸ್ಥಳಾಂತರಿಸುವ ನೈತಿಕ ಮತ್ತು ಸರಿಯಾದ ವಿಧಾನಗಳ ಬಗ್ಗೆ ತರಬೇತಿ ನೀಡಿದ್ದಾರೆ. ಇವರ ಸಾಧನೆಯನ್ನು ಪರಿಗಣಿಸಿ 2015ರಲ್ಲಿ ಸ್ಪೀಡಿಷ್ ಹರ್ಪಿಟಾಲಜಿ ಸೊಸೈಟಿ `ವರ್ಷದ ಹರ್ಪಿಟಾಲಜಿಸ್ಟ್’ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದು ತೀರ್ಥಹಳ್ಳಿ, ಆಗುಂಬೆ ಭಾಗದ ಜನರು ಕಾಳಿಂಗ ಸರ್ಪದ ಜನನವನ್ನು ಸನಿಹದಿಂದಲೇ ನೋಡುತ್ತಿದ್ದಾರೆ. `ಕಾಡಿಗೆ ಹುಲಿಗಳು ಹೇಗೆ ಮುಖ್ಯವೋ ಅದೇ ರೀತಿ ಕಾಳಿಂಗಗಳೂ ಮುಖ್ಯ. ಇವುಗಳನ್ನು ರಕ್ಷಿಸುವುದೆಂದರೆ ಉಳಿದೆಲ್ಲಾ ಹಾವುಗಳನ್ನು ಮತ್ತು ಅರಣ್ಯಗಳನ್ನು ಕಾಪಾಡಿದಂತೆಯೇ’ ಎನ್ನುತ್ತಾರೆ ಗೌರಿಶಂಕರ್. ಬಳ್ಳಾರಿಯ ಉರಗ ತಜ್ಞ ಆದಿತ್ಯ ವಟ್ಟಂ: ನೀವು ಬಳ್ಳಾರಿ ನಗರದಲ್ಲಿ ಯಾವುದೇ ರೈಸ್‍ಮಿಲ್ ಅಥವಾ ದೊಡ್ಡ ದೊಡ್ಡ ದಾಸ್ತಾನು ಮಳಿಗೆಗಳಲ್ಲಿ ಸಾಮಾನ್ಯವಾಗಿ ಕೆರೆ ಹಾವು, ಹಸಿರು ಹಾವು ಹೀಗೆ ಯಾವುದೇ ಹಾವು ಕಂಡುಬಂದರೂ ಇಲ್ಲಿ ಕೆಲಸ ಮಾಡುªವರೇ ಇದನ್ನು ರಕ್ಷಿಸುತ್ತಾರೆ. ಸರ್ಪ, ಕಾಳಿಂಗ ಸರ್ಪದಂತಹ ವಿಷಕಾರಿ ಹಾವುಗಳೇನಾದರೂ ಕಂಡುಬಂದಲ್ಲಿ ಮಾತ್ರ ಉರಗ ತಜ್ಞರನ್ನು ಸಂಪರ್ಕಿಸುತ್ತಾರೆ. ಅಷ್ಟರ ಮಟ್ಟಿಗೆ ಹಾವನ್ನು ರಕ್ಷಿಸಲು ಪಳಗಿದ್ದಾರೆ ಇಲ್ಲಿನ ಕೆಲಸಗಾರರು. ಹೀಗೆ ಬಳ್ಳಾರಿ ನಗರದ ಬಹುತೇಕ ಕಾರ್ಖಾನೆಗಳ ಕಾರ್ಮಿಕರು, ನಗರದ ಜನತೆ ಹಾವನ್ನು ರಕ್ಷಿಸಲು ಪಳಗಿರಲು ಮುಖ್ಯ ಕಾರಣ ಬಳ್ಳಾರಿಯ ಉರಗ ತಜ್ಞ ಆದಿತ್ಯ ವಟ್ಟಂ. ಕಳೆದ 29 ವರ್ಷಗಳಿಂದ ಉರಗ ತಜ್ಞರಾಗಿರುವ ಇವರು ಬಳ್ಳಾರಿ ನಗರದ ಬಹುತೇಕ ಜನರಿಗೆ ತರಬೇತಿ ನೀಡಿದ್ದಾರೆ. ಈವರೆಗೆ 8000ಕ್ಕೂ ಹೆಚ್ಚು ಅಧಿಕ ಹಾವುಗಳನ್ನು ರಕ್ಷಿಸಿ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಸಾವಿರಾರು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಉರಗಗಳನ್ನು ರಕ್ಷಿಸುವ ಮತ್ತು ಸ್ಥಳಾಂತರಿಸುವ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸುವಲ್ಲೂ ಯಶಸ್ವಿಯಾಗಿದ್ದಾರೆ. ಅಲ್ಲದೇ ವಿಷಕಾರಿ ಹಾವು ಕಂಡುಬಂದ ತಕ್ಷಣ ಕೂಡಲೇ ರಕ್ಷಿಸಲು ತಮ್ಮದೇ ಆದ ತಂಡವನ್ನೂ ರಚಿಸಿದ್ದಾರೆ. ಬಳ್ಳಾರಿ ಭಾಗದಲ್ಲಿ ಹಲವಾರು ಪ್ರಭೇದದ ಹಾವುಗಳನ್ನು ಗುರುತಿಸಿದ್ದಾರೆ. ಹಾವನ್ನು ಹಿಡಿಯಲು ಬೇಕಾಗುವ ಸಲಕರಣೆಗಳನ್ನು ತಯಾರಿಸಿ ಭಾರತದಾದ್ಯಂತ ಪೂರೈಕೆ ಮಾಡುತ್ತಿದ್ದಾರೆ. `ಜೀವಿತಾವಧಿಯಲ್ಲಿ ಅಂದಾಜು 22 ಸಾವಿರ ಇಲಿಗಳನ್ನು ತಿನ್ನುವ ಹಾವುಗಳು ಮಾನವರಿಗೆ ನೆರವಾಗುತ್ತಿದ್ದು, ಅವುಗಳ ಬಗ್ಗೆ ಅನಗತ್ಯ ಭಯ ಹೊಂದಿರುವವರು ಕಂಡ ಕೂಡಲೇ ಬಡಿದು ಕೊಲ್ಲುವುದು ಸರಿಯಲ್ಲ, ಎನ್ನುವುದು ಆದಿತ್ಯ ವಟ್ಟಂ ಅವರ ಅಭಿಪ್ರಾಯ. - ಎಂ.ಎಸ್.ಶೋಭಿತ್ ಮೂಡ್ಕಣಿ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಮೂಡ್ಕಣಿಯವರು. ಪ್ರಸ್ತುತ ಹೊನ್ನಾವರದ ಎಸ್‍ಡಿಎಂ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ. ಓದು, ಬರವಣಿಗೆ ಮತ್ತು ವರದಿಗಾರಿಕೆ ನೆಚ್ಚಿನ ಹವ್ಯಾಸ. ವಿಜಯವಾಣಿ, ಹೊಸದಿಗಂತ, ಉದಯವಾಣಿ, ಜನಮಾಧ್ಯಮ ಮುಂತಾದ ದಿನಪತ್ರಿಕೆ ಮತ್ತು ಸುಧಾ, ವಿಕ್ರಮ, ನಾಗರಿಕ ಮುಂತಾದ ನಿಯತಕಾಲಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. -ಸಂಪಾದಕರು

ನಿಸರ್ಗದೇವಿಯ ನಿತ್ಯಾರಾಧಕರು

©Alochane.com 

bottom of page