ನವಕರ್ನಾಟಕ ನಿರ್ಮಾಣದ ಆದಿಪುರುಷ ಡೆಪ್ಯುಟಿ ಚೆನ್ನಬಸಪ್ಪನವರು
[ ಮರೆಯಲಾಗದ ಮಹಾನುಭಾವರು -೮] ಇಂದು ನಾವು ಕನ್ನಡ ಹೋರಾಟ, ಚಳವಳಿ, ಕನ್ನಡ ಸೇನೆ, ಕನ್ನಡ ರಕ್ಷಣೆ ಮೊದಲಾದ ಶಬ್ದಗಳನ್ನು ಬಹಳ ಕೇಳುತ್ತೇವೆ. ಆದರೆ ಶತಮಾನದ ಹಿಂದೆಯೇ ಕೆಲವು ಹಿರಿಯರು ಇಂತಹ ಯಾವ ಶಬ್ದಾಡಂಬರಕ್ಕೂ ಹೋಗದೆ, ಪ್ರಚಾರ ಫೋಟೋಗಳಿಗೆ ಹಪಹಪಿಸದೇ ಸದ್ದಿಲ್ಲದೇ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡಿದರೆನ್ನುವದನ್ನು ನಾವಿಂದು ಕೃತಜ್ಞತೆ ಯಿಂದ ಸ್ಮರಿಸಿಕೊಳ್ಳಬೇಕಾಗಿದೆ. ಅಂತಹ ಹಿರಿಯರಲ್ಲಿ ಡೆಪ್ಯುಟಿ ಚನ್ನಬಸಪ್ಪ ನವರ ಹೆಸರು ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಅವರು ಮಾಡಿದ ಅಗಾಧ ಸ್ವರೂಪದ ಕೆಲಸವನ್ನು ಈ ಸಣ್ಣ ಲೇಖನದಲ್ಲಿ ಹಿಡಿದಿಡುವದು ಕಷ್ಟ. ಆದರೂ ಅವರ ಬಗ್ಗೆ ಅರಿಯದ ಇಂದಿನ ಪೀಳಿಗೆಯವರಿಗೆ ಅಲ್ಪಸ್ವಲ್ಪ ಪರಿಚಯ ಮಾಡಿಕೊಡುವದು ನನ್ನ ಉದ್ದೇಶ. ಚೆನ್ನಬಸಪ್ಪನವರ ಮನೆತನ ಮೂಲತಃ ಬೆಳಗಾವಿಯದು. ಬಸಲಿಂಗಪ್ಪ - ತಿಪ್ಪವ್ವ ದಂಪತಿಗಳ ಮಗನಾಗಿ 1833 ರಲ್ಲಿ ಜನಿಸಿದ ಚನ್ನಬಸಪ್ಪನವರು ಮಾಧ್ಯಮಿಕ ಶಿಕ್ಷಣದ ನಂತರ ಪುಣೆಗೆ ಕಾಲ್ನಡಿಗೆಯಲ್ಲಿ ಅದೂ ಬರಿಗಾಲಲ್ಲಿ ನಡೆದು ಹೋಗಿ ಇಂಜಿನಿಯರಿಂಗ್ ಪದವಿ ಪಡೆದದ್ದು ಅವರ ಕಲಿಯುವ ಹಸಿವಿಗೆ ಸಾಕ್ಷಿ. ಅಂದಿನ ಹಿರಿಯ ರಾಜಕೀಯ ನಾಯಕರಾದ ದಾದಾಭಾಯಿ ನವರೋಜಿ ಅವರು ಈ ಹುಡುಗನ ಬುದ್ಧಿವಂತಿಕೆ ಮತ್ತು ಕಲಿಯುವ ಆಸಕ್ತಿ ಗಮನಿಸಿ ಇವರನ್ನು ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ಕಲಿಸಲು ಪ್ರಯತ್ನಿಸಿದರಾದರೂ ಏನೋ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಪುಣೆಯಲ್ಲಿದ್ದಾಗ ಅವರಿಗೆ ಮಹಾರಾಷ್ಟ್ರದ ಪ್ರಸಿದ್ಧ ಜ್ಯೋತಿರಾವ್ ಫುಲೆಯಂಥವರ ಒಡನಾಟವಿತ್ತು. 1855 ರಲ್ಲಿ ಅವರು ಕರ್ನಾಟಕಕ್ಕೆ ಮರಳಿದ್ದು ಕನ್ನಡದ ಅದೃಷ್ಟ. ಚನ್ನಬಸಪ್ಪನವರು ಅಲ್ಲಿಂದೀಚೆ ಕೊನೆಯುಸಿರಿನತನಕವೂ ಕನ್ನಡದ ದೀಕ್ಷೆ ತೊಟ್ಟು ತಮ್ಮಿಂದ ಏನೇನು ಸಾಧ್ಯವೋ ಆ ಎಲ್ಲ ರೀತಿಯಿಂದ ಕನ್ನಡದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಆ ಸಂದರ್ಭದಲ್ಲಿ ಬೆಳಗಾವಿಯಲ್ಲಷ್ಟೇ ಅಲ್ಲ ಧಾರವಾಡದಲ್ಲಿ ಸಹ ಮರಾಠಿ ಭಾಷೆಯ ಪ್ರಾಬಲ್ಯಇತ್ತು. ಆ ಪ್ರಾಬಲ್ಯವನ್ನು ತಗ್ಗಿಸಿ ಕನ್ನಡ ತಲೆಯೆತ್ತಿ ನಡೆಯುವಂತೆ ಮಾಡಿದ ಮೊದಲಿಗರು ಚನ್ನಬಸಪ್ಪರವರು. ನಂತರ ಅವರ ದಾರಿಯಲ್ಲಿ ಸಾಗಿದ ಹಿರಿಯರು ಹಲವರಿದ್ದಾರೆ. ಮುಂದೆ ಕರ್ನಾಟಕ ಏಕೀಕರಣ ಚಳವಳಿಯೂ ನಡೆಯಿತು. ಆಗ ಒಂದೆಡೆ ಬ್ರಿಟಿಷರ ಆಡಳಿತದಿಂದಾಗಿ ಇಂಗ್ಲಿಷಿಗೆ ಆದ್ಯತೆ, ಸಂಗಡ ಮರಾಠಿಯ ಪ್ರಾಬಲ್ಯ. ಇವರ ರಡರ ನಡುವೆ ಕನ್ನಡ ಉಸಿರುಗಟ್ಟಿ ಸಾಯುವಂತಹ ಪರಿಸ್ಥಿತಿ ಇತ್ತು. ಆದರೆ ಕನ್ನಡದ ಸುದೈವ ಚನ್ನಬಸಪ್ಪನವರು ಧಾರವಾಡ ಮತ್ತು ಬೆಳಗಾವಿಗಳಲ್ಲಿ ಡೆಪ್ಯೂಟಿ ಎಜ್ಯಕೇಶನ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದರಿಂದ ಅವರು ಕನ್ನಡ ಭಾಷಾ ಶಿಕ್ಷಣಕ್ಕೆ ಮಹತ್ವ ತಂದುಕೊಡುವ ಕೆಲಸಕ್ಕೆ ಕೈಹಾಕಿದರು. ಕರ್ನಾಟಕದಲ್ಲಿ ಕನ್ನಡ ಮಕ್ಕಳಿಗೆ ಕನ್ನಡದಲ್ಲೇ ಶಿಕ್ಷಣ ಸಿಗಬೇಕೆಂಬ ನಿಲುವನ್ನು ಹೊಂದಿದ್ದ ಚನ್ನ ಬಸಪ್ಪನವರು ಅದಕ್ಕೆ ತಕ್ಕಂತೆ ಕನ್ನಡದ ಬೆಳವಣಿಗೆಗೆ ಅಗತ್ಯವಾದ ಅನೇಕ ಕ್ರಮಗಳನ್ನು ಕೈಗೆತ್ತಿಕೊಂಡರು. ಅವರ ಪ್ರಯತ್ನದ ಫಲವಾಗಿ ಧಾರವಾಡದಲ್ಲಿ 1860 ರಲ್ಲಿ ಮೊದಲ ಕನ್ನಡ ಶಾಲೆ ತಲೆಯೆತ್ತಿತು. ನಂತರ ಅದು ಶಿಕ್ಷಕರ ತರಬೇತಿ ಕಾಲೆಜು ಆಯಿತು. ಅದು ನಂತರ 1864 ರಲ್ಲಿ ಬೆಳಗಾವಿಗೆ ಸ್ಥಳಾಂತರವಾಯಿತು. 1861 ರಲ್ಲಿ ಅವರೇ ಅದರ ಪ್ರಾಚಾರ್ಯರಾದರು. ಡೆಪ್ಯುಟಿ ಎಜ್ಯುಕೇಶನ್ ಇನ್ಸ್ಪೆಕ್ಟರ್ ಸ್ಥನಕ್ಕೆ ನೇಮಕವಾದ ಮೊದಲ ಕನ್ನಡಿಗರೂ ಚನ್ನಬಸಪ್ಪನವರೇ.ಅವರು ಆ ಹುದ್ದೆಯಲ್ಲಿ ಅದೆಷ್ಟು ತಾದಾತ್ಮ್ಯ ಭಾವ ಹೊಂದಿ ಕೆಲಸ ಮಾಡಿದರೆಂದರೆ ಮತ್ತು ಅದೆಷ್ಟು ಜನಪ್ರಿಯರಾದರೆಂದರೆ ಅವರ ಹೆಸರಿಗೇ ಡೆಪ್ಯೂಟಿ ಎಮಬ ಶಬ್ದ ಸೇರಿಹೋಯಿತು. ಅವರು ಡೆಪ್ಯುಟಿ ಚನ್ನಬಸಪ್ಪನವರೆಂದೇ ಖ್ಯಾತರಾದರು. ತಮ್ಮ ಅಧಿಕಾರಾವಧಿಯಲ್ಲಿ ಅವರು ಕನ್ನಡ ಪ್ರಾಥಮಿಕ ಶಾಲೆಗಳ ಸ್ಥಾಪನೆಗೆ ಹೆಚ್ಚು ಮಹತ್ವ ನೀಡಿದರಲ್ಲದೇ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ತರಬೇತಿ ಸಂಸ್ಥೆ ಯನ್ನೂ ಸ್ಥಾಪಿಸಿದರು. ಕನ್ನಡ ಶಿಕ್ಷಕರ ಸಂಖ್ಯೆ ಹೆಚ್ವಿಸಿದರು. ಅವರಲ್ಲಿ ಕೆಲಸದ ಸಂಸ್ಕೃತಿ , ಕನ್ನಡ ಪ್ರೇಮ, ಶಿಸ್ತು ಬೆಳೆಸಲು ಪ್ರಯತ್ನಿಸಿದರು. ಬೆಳಗಾವಿಯಲ್ಲಿ ಮೊದಲ ಲಿಂಗಾಯತ ಪ್ರಸಾದ ನಿಲಯವನ್ನು 1886 ರಲ್ಲಿ ಸ್ಥಾಪಿಸಿದ ಶ್ರೇಯಸ್ಸೂ ಅವರಿಗೇ ಸಲ್ಲುತ್ತದೆ. ಪತ್ರಕರ್ತರಾಗಿ ಚೆನ್ನಬಸಪ್ಪ : ಅದಿನ್ನೂ ಕನ್ನಡ ಪತ್ರಿಕೋದ್ಯಮದ ಪ್ರಾರಂಭದ ಕಾಲ. 1843 ರಲ್ಲಿ ಕನ್ನಡದ ಮೊದಲ ಪತ್ರಿಕೆ ಬಂದದ್ದು. ಡೆ. ಚನ್ನಬಸಪ್ಪನವರು ಶಿಕ್ಷಣದ ಉತ್ಕರ್ಷಕ್ಕಾಗಿಯೇ 1865 ರಲ್ಲಿ " ಮಠ ಪತ್ರಿಕೆ" ಎಂಬ ಹೆಸರಲ್ಲಿ ಒಂದು ಶೈಕ್ಷಣಿಕ ಮಾಸಪತ್ರಿಕೆ ಆರಂಭಿಸಿ ಅದರ ಮೊದಲ ಸಂಪಾದಕರಾದರು. ಒಂದು ದಾಖಲೆಯ ವಿಷಯ ಎಂದರೆ ಆ ಪತ್ರಿಕೆ 155 ವರ್ಷಗಳ ನಂತರವೂ ಇಂದಿಗೂ ನಿರಂತರ ಪ್ರಕಟಗೊಳ್ಳುತ್ತಲೇಇದೆ. ಸದ್ಯ ಅದು ಜೀವನ ಶಿಕ್ಷಣ ಎಂಬ ಹೆಸರಿನಿಂದ ಮುಂದುವರಿದಿದೆ. ಕನ್ನಡದಲ್ಲಿ ಇಷ್ಟು ದೀರ್ಘಕಾಲ ಮುನ್ನಡೆದ ಇನ್ನೊಂದು ಪತ್ರಿಕೆ ಬೆಳಗಾವಿಯ. " ಬೆಳಗಾಂವ್ ಸಮಾಚಾರ್" . ಧಾರವಾಡದಲ್ಲಿ ಶತಮಾನೋತ್ತರ ಬದುಕು ಕಂಡ ಕರ್ನಾಟಕ ವಿದ್ಯಾವರ್ಧಕ ಸಂಘ, ಅಲ್ಲದೆ, ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ ಮೊದಲಾದವುಗಳ ಸ್ಥಾಪನೆಯಲ್ಲೂ ಡೆ. ಚನ್ನಬಸಪ್ಪನವರದೇ ಪ್ರಮುಖ ಪಾತ್ರ ಇತ್ತು ಎನ್ನುವದನ್ನು ಮರೆಯುವಂತಿಲ್ಲ. ಬ್ರಿಟಿಷರ ಆಡಳಿತ ಕಾಲದಲ್ಲೇ ಅವರು ಕನ್ನಡ ಶಾಲಾ ಶಿಕ್ಷಣದ ಸುಧಾರಣೆಗೆ ಸಂಬಂಧಿಸಿ 99 ಸರ್ಕ್ಯುಲರ್ ಗಳನ್ನು ಹೊರಡಿಸಿದ್ದರೆನ್ನುವದು ಗಮನಿಸಬೇಕಾದ ಸಂಗತಿ. ಇಂತಹ ಅನೇಕ ಕನ್ನಡದ ಕೆಲಸಗಳನ್ನು ಮಾಡಿದ ಡೆ. ಚೆನ್ನಬಸಪ್ಪನವರನ್ನು Tiger of Karnataka [ಕರ್ನಾಟಕದ ಹುಲಿ] ಎಂದೂ ಜನ ಕರೆದಿದ್ದುಂಟು. ಕನ್ನಡ ಭಾಷೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರಷ್ಟು ಕೆಲಸ ಮಾಡಿದವರು ಬಹಳ ಅಪರೂಪ. ಅವರ ಬಗ್ಗೆ ಹೇಳಬೇಕಾದ್ದು ಸಾಕಷ್ಟು ಇದೆ. ಶೇಕ್ಸಪಿಯರನ ನಾಟಕಗಳನ್ನೂ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಪತ್ನಿ ಗುರವ್ವ. ಇಬ್ಬರು ಮಕ್ಕಳು ಬಸಲಿಂಗಪ್ಪ ಮತ್ತು ರುದ್ರಪ್ಪ. ಅವರು ಬದುಕಿದ್ದು ಮಾತ್ರ 48 ವರ್ಷ. ಆದರೆ ಅವರು ಮಾಡಿದ ಕನ್ನಡದ ಕೆಲಸ ಕನ್ನಡ ಇರುವತನಕವೂ ಇದ್ದೇ ಇರುತ್ತದೆ. 00=00 - ಲಕ್ಷ್ಮೀನಾರಾಯಣ ಶಾಸ್ತ್ರಿ ನಾಜಗಾರ ಬೆಳಗಾವಿ