ಡಾ.ನಾ.ಸು.ಹರ್ಡೀಕರ
ಅಮೆರಿಕೆಯ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪದವಿ ಪಡೆದು ಬಂದ ಡಾ. ನಾರಾಯಣ ಸುಬ್ಬರಾವ್ ಹರ್ಡಿಕರ ಅವರು ವೈದ್ಯ ವೃತ್ತಿ ಮಾಡಿ ಬೇಕಾದಷ್ಟು ಹಣ ಗಳಿಸಿ ಸುಖವಾಗಿ ಬಾಳಬಹುದಿತ್ತು. ಆದರೆ ಅವರ ಬದುಕು ರಾಷ್ಟ್ರಕ್ಕೆ ಸಮರ್ಪಿತವಾಯಿತು. ಲಾಲಾ ಲಜಪತರಾಯರ ಸಂಪರ್ಕಕ್ಕೆ ಬಂದ ಅವರು ಅಮೆರಿಕೆಯಲ್ಲಿದ್ದಾಗಲೇ ಭಾರತಪರ ಹೋರಾಟಕ್ಕೆ ಧುಮುಕಿದರು. ಅಮೆರಿಕೆಯಲ್ಲಿನ ಭಾರತೀಯ ಕಾರ್ಮಿಕರ ಯೂನಿಯನ್ ಸೆಕ್ರೆಟರಿಯಾಗಿ , ಹಿಂದುಸ್ತಾನ್ ಅಸೋಸಿಯೇಶನ್ ಆಫ್ ಅಮೆರಿಕಾದ ಅಧ್ಯಕ್ಷರಾಗಿ ಕೆಲಸ ಮಾಡಿದರು. ಭಾರತಕ್ಕೆ ಮರಳಿ ಬಂದ ನಂತರವೂ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ೧೮೮೯ ರ ಮೇ ೭ ರಂದು ಹುಬ್ಬಳ್ಳಿಯಲ್ಲಿ ಜನಿಸಿದ ಹರ್ಡಿಕರರು ಕಲ್ಕತ್ತಾದಲ್ಲಿ ವೈದ್ಯಶಿಕ್ಷಣ ಮುಗಿಸಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕೆಗೆ ಹೋದರು. ೧೯೨೧ ರಲ್ಲಿ ಹುಬ್ಬಳ್ಳಿಗೆ ಬಂದ ಅವರು ೧೮೨೩ ರ ಧ್ವಜ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಅದೇವರ್ಷ ಹುಬ್ಬಳ್ಳಿ ಸೇವಾ ಮಂಡಳಿ ಸ್ಥಾಪಿಸಿದರು. ಅದೇ ಮುಂದೆ ಹಿಂದುಸ್ತಾನ್ ಸೇವಾದಳವಾಗಿ ರೂಪುಗೊಂಡಿತು. ಈ ಶಿಸ್ತಿನ ಸಂಘಟನೆ ೧೯೨೪ ರಲ್ಲಿ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಜರುಗಿದ ೩೯ ನೇ ಕಾಂಗ್ರೆಸ್ ಮಹಾಧಿವೇಶನದಲ್ಲಿ ಸ್ವಯಂ ಸೇವಾ ಕಾರ್ಯ ನಿರ್ವಹಿಸಿ ಗಾಂಧೀಜಿ ಸಹಿತ ಎಲ್ಲ ರಾಷ್ಟ್ರನಾಯಕರ ಮತ್ತು ದೇಶದ ವಿವಿಧೆಡೆಗಳಿಂದ ಆಗಮಿಸಿದ ಜನರ ಪ್ರಶಂಸೆಗೆ ಪಾತ್ರವಾಯಿತು. ನಂತರ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಜನರಲ್ ಸೆಕ್ರೆಟರಿಯನ್ನಾಗಿ ಮಾಡಲಾಯಿತು. ಹರ್ಡಿಕರರ ನೇತೃತ್ವದ ಸೇವಾದಳ ಕನ್ನಡಿಗರಲ್ಲಿ ಶಿಸ್ತು, ಸಂಘಟನೆ, ಸ್ವಾತಂತ್ರ್ಯ ಪ್ರೇಮದ ಭಾವನೆ ಬೆಳೆಸುವ ಕೆಲಸ ಮಾಡಿತು. ಅಸಹಕಾರ ಆಂದೋಲನ, ಕ್ವಿಟ್ ಇಂಡಿಯಾ ಚಳವಳಿ ಮೊದಲಾದ ಸಂದರ್ಭಗಳಲ್ಲಿ ಸೇವಾದಳದ ಕಾರ್ಯಕರ್ತರು ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಿದರು. ಹರ್ಡಿಕರ ಸ್ವತಃ ಶಿಸ್ತಿನ ಸಿಪಾಯಿಯಾಗಿದ್ದರು. ಅಂದಿನ ಕಾಂಗ್ರೆಸ್ ಸಂಸ್ಥೆಯ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಸೇವಾದಳ ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ಮಾಡಿತು. ಹರ್ಡಿಕರರು ಬೆಳಗಾವಿಯ ಘಟಪ್ರಭಾದಲ್ಲಿ ಕರ್ನಾಟಕ ಆರೋಗ್ಯ ಸಂಸ್ಥೆಯ ಸ್ಥಾಪನೆಗೆ ಕಾರಣರಾಗಿ ಉತ್ತರ ಕರ್ನಾಟಕದ ಜನರ ಪಾಲಿಗೆ ಧನ್ವಂತರಿ ಸ್ವರೂಪರೆನಿಸಿದರು. ೧೯೫೨ ರಿಂದ ೬೨ ರತನಕ ಅವರು ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದರು. ೧೯೫೮ ರಲ್ಲಿ ಅವರಿಗೆ ಭಾರತ ಸರಕಾರ ಪದ್ಮಭೂಷಣ ಗೌರವ ನೀಡಿತು. ಅವರು ೧೯೭೫ ರ ಅಗಸ್ಟ್ ೨೬ ರಂದು ನಿಧನರಾದರು. ಭಾರತ ಸರಕಾರ ೧೯೮೯ ರಲ್ಲ ಅವರ ಜನ್ಮ ಶತಮಾನೋತ್ಸವದ ನಿಮಿತ್ತ ಅಂಚೆಚೀಟಿ ಹೊರತಂದು ಗೌರವ ಸಲ್ಲಿಸಿತು. ಹರ್ಡಿಕರರ ಕಾರ್ಯವ್ಯಾಪ್ತಿ ಅಗಾಧವಾದುದು. ಅವರು ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರರಲ್ಲೊಬ್ಬರು. - ಎಲ್. ಎಸ್. ಶಾಸ್ತ್ರಿ