ಜವಾಬ್ದಾರಿ ವಿಮುಖತೆ
ಡಾ.ಪೆರ್ಲ ಅವರ ವಾರಾಂಕಣ ವಸಂತೋಕ್ತಿ – 6 *ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು* ಕುಟುಂಬ, ಆಡಳಿತಕ್ಷೇತ್ರ ಅಥವಾ ಬದುಕಿನ ಇನ್ನಿತರ ಯಾವುದೇ ಕ್ಷೇತ್ರದಲ್ಲಿ ವ್ಯವಸ್ಥೆ ಅರ್ಥಪೂರ್ಣವಾಗಿ ಮುಂದುವರಿದುಕೊಂಡು ಹೋಗಬೇಕಾದರೆ ಎರಡನೇ ತಲೆಮಾರನ್ನು ಸಿದ್ಧಗೊಳಿಸುತ್ತ ಹೋಗುವುದು ಮತ್ತು ಎರಡನೇ ತಲೆಮಾರು ಅದಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತ ಹೋಗುವುದು ಒಂದು ಅನಿವಾರ್ಯ ಅಗತ್ಯ. ಇಲ್ಲದೇ ಹೋದರೆ ವ್ಯವಸ್ಥೆ ಅಸ್ತವ್ಯಸ್ತವಾಗಿ ಎಲ್ಲರೂ ಮುಗ್ಗರಿಸಿ ಬೀಳಬೇಕಾಗುತ್ತದೆ. ಪರಂಪರೆ ಮುಂದುವರಿಯಬೇಕಾದರೆ ಅಥವಾ ಅರಂಭಿಸಿದ ಕೆಲಸಗಳು ಅದೇ ಗತಿಯಿಂದ ಮುಂದುವರಿಯಬೇಕಾದರೆ ಎರಡನೇ ತಲೆಮಾರು ತನಗಿಂತ ಹಿಂದಿನ ತಲೆಮಾರಿನೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕಾಗುತ್ತದೆ ಮತ್ತು ಪರಸ್ಪರ ಹೊಂದಿಕೊಂಡು ಹೋಗಬೇಕಾಗುತ್ತದೆ. ಮೊದಲ ತಲೆಮಾರು ಗುರುಸ್ಥಾನದಲ್ಲಿ ಎರಡನೇ ತಲೆಮಾರು ಶಿಷ್ಯನ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಅದೇ ರೀತಿ ಕಲಿಸುವ ಜವಾಬ್ದಾರಿ ಮೊದಲ ತಲೆಮಾರಿನಲ್ಲಿ ಕಲಿಯುವ ಆಸಕ್ತಿ ಎರಡನೇ ತಲೆಮಾರಿನಲ್ಲಿ ಇರಬೇಕಾಗುತ್ತದೆ. ಅವರು ಒಬ್ಬರಿಗೊಬ್ಬರು ಉತ್ತರಧ್ರುವ ಮತ್ತು ದಕ್ಷಿಣಧ್ರುವದಂತೆ ಇದ್ದರೆ ಎಲ್ಲ ಪ್ರಯತ್ನಗಳೂ ನಿಷ್ಫಲ. ಶಿಷ್ಯ ಅವಿಧೇಯತೆ ತೋರಿಸಿ ವಿತಂಡವಾದ ಹೂಡಿದಾಗ ಕಲಿಯುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ. ಮುಂದೆ ಜವಾಬ್ದಾರಿ ಹೆಗಲ ಮೇಲೆ ಬಿದ್ದಾಗ ನಿರ್ವಹಿಸುವ ಸಾಮರ್ಥ್ಯವಿಲ್ಲದೆ ಸೋತು ಹೋಗಬೇಕಾಗುತ್ತದೆ. ಯೋಜನೆ (planning) ಮತ್ತು ಆಗುಮಾಡುವ ಶಕ್ತಿ (Executive force) ಜೊತೆಜೊತೆಗೇ ಇದ್ದರೆ ಮಾತ್ರ ಎಲ್ಲ ಕೆಲಸಗಳೂ ಯಶಸ್ವಿಯಾಗಿ ನೆರವೇರುತ್ತವೆ. ಮೊದಲ ತಲೆಮಾರನ್ನು ಯೋಜಕಶಕ್ತಿ ಎಂದೂ ಎರಡನೇ ತಲೆಮಾರನ್ನು ಆಗುಮಾಡುವ ಶಕ್ತಿ ಎಂದೂ ಕರೆಯಬಹುದು. ಮೂರ್ನಾಲ್ಕು ಮಂದಿ ಅಣ್ಣತಮ್ಮಂದಿರಿರುವ ಕೆಲವು ಕುಟುಂಬಗಳಲ್ಲಿ ಇಂತಹ ಒಂದು ಸ್ಥಿತಿಯನ್ನು ಕಾಣಬಹುದು. ಅಣ್ಣ ಸಂಸಾರದ ಮತ್ತು ಒಟ್ಟು ಕುಟುಂಬದ ಜವಾಬ್ದಾರಿಯನ್ನು ಹೆಗಲಲ್ಲಿ ತೆಗೆದುಕೊಂಡು ನಿರ್ವಹಿಸುತ್ತ ಬರುತ್ತಿರುತ್ತಾನೆ. ತಮ್ಮಂದಿರು ಜವಾಬ್ದಾರಿ ಇಲ್ಲದೆ ಇರುತ್ತಾರೆ. ತಮ್ಮಂದಿರು ಮದುವೆಯಾದ ಬಳಿಕ ಸ್ವತಂತ್ರವಾಗಿ ಜೀವನ ನಿರ್ವಹಣೆ ಮಾಡಬೇಕಾದ ಸಂದರ್ಭ ಬಂದಾಗ ಹೆಜ್ಜೆಹೆಜ್ಜೆಗೂ ಹಿಂಜರಿಕೆಯ ಪ್ರವೃತ್ತಿ ತೋರುವ ಅಥವಾ ಸೋಲುವ ಹಲವು ದೃಷ್ಟಾಂತಗಳನ್ನು ಕಾಣುತ್ತೇವೆ. ಇದು ಕಲಿಯಬೇಕಾದ ಹಂತದಲ್ಲಿ ಕಲಿಯದಿರುವ ಎರಡನೇ ತಲೆಮಾರಿನ ವೈಫಲ್ಯದ ಒಂದು ಉದಾಹರಣೆ. ನಿರ್ಣಾಯಕ ಹಂತದಲ್ಲಿ ಅವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದಿರುವ ಅಥವಾ ಅಂತಹ ಹಂತದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮನೋಭಾವ ತೋರಿಸುತ್ತಾರೆ. ಆಗ ಅವರನ್ನು ಅವಲಂಬಿಸಿಕೊಂಡಿರುವವರ ಸ್ಥಿತಿ ಹೇಗಾಗಬೇಡ! ಸಣ್ಣ ಪ್ರಮಾಣದ ಕೀಳರಿಮೆಯೂ ಅಂಥವರಲ್ಲಿ ಕಂಡುಬರುತ್ತದೆ. ಧೈರ್ಯದಿಂದ ಮುನ್ನುಗ್ಗುವ ಮತ್ತು ಸೋಲುಗೆಲುವುಗಳನ್ನು ಸಮಭಾವದಲ್ಲಿ ನೋಡುವ ಮನೋಭಾವ ಅಂಥವರಲ್ಲಿ ಕಾಣಿಸುವುದಿಲ್ಲ. ಸೋಲಿಗೆ ಬಹುಬೇಗ ಕುಗ್ಗಿಬಿಡುತ್ತಾರೆ; ಮುಂದಕ್ಕೆ ಹೆಜ್ಜೆ ಇಡಲು ಸಾಧ್ಯವಾಗುವುದಿಲ್ಲ. ಸದಾ ಇತರರನ್ನು ಟೀಕಿಸುವ ಮತ್ತು ಹಿಂದಿನಿಂದ ಆಡಿಕೊಳ್ಳುವ ಪ್ರವೃತ್ತಿ ಇಂಥವರಲ್ಲಿ ಹೆಚ್ಚಾಗಿರುತ್ತದೆ. ಇದು ತನ್ನ ಸೋಲು ಹಾಗೂ ಅಸಫಲತೆಯನ್ನು ಮುಚ್ಚಿಹಾಕುವ ಒಂದು ಪ್ರಯತ್ನವಾಗಿ ಕಂಡುಬರುತ್ತದೆ. ಉದ್ಯಮಶೀಲತೆಯ ಕೊರತೆಯಿಂದಾಗಿ ಇಂಥವರು ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ದೊಡ್ಡರೀತಿಯಲ್ಲಿ ಹಣ ಸಂಪಾದನೆ ಕೂಡ ಮಾಡಲಾಗುವುದಿಲ್ಲ. ಸಮಾಜವನ್ನು ಮನುಷ್ಯನ ದೇಹದೊಂದಿಗೆ ಹಿಂದಿನವರು ಹೋಲಿಸಿದ್ದರು. ಒಂದು ರೂಪಕವಾಗಿ ತಲೆ, ದೇಹ, ತೊಡೆ ಮತ್ತು ಕಾಲು ಎಂದು ಸಮಾಜಪುರುಷನನ್ನು ಗುಣ ಮತ್ತು ಕರ್ಮಗಳ ಆಧಾರದಲ್ಲಿ ವಿಭಾಗಿಸಿದ್ದು ಒಂದು ವಿಶಿಷ್ಟ ನೋಟ ಮತ್ತು ಅಭ್ಯಾಸಕ್ರಮವೇ ಹೊರತು ಅದು ಮೇಲು - ಕೀಳು ಎಂಬುದರ ಅಭಿವ್ಯಕ್ತಿಯೇನೂ ಅಲ್ಲ. ವಾಸ್ತವವಾಗಿ ಇಡೀ ದೇಹವೇ ಒಂದು ಘಟಕ. ಅದೇ ರೀತಿ ಸಮಾಜವೂ ಒಂದು ಇಡೀ ಘಟಕ. ತಲೆ ಇಲ್ಲದೆ ಕಾಲು ಇಲ್ಲ ಅಥವಾ ಕಾಲು ಇಲ್ಲದೆ ತಲೆಯೂ ಇರಲಾರದು. ಯಂತ್ರ ಇದ್ದರೆ ಮಾತ್ರ ರೈಲಿನ ಬೋಗಿಗಳಿಗೆ ಚಲನೆ ಸಾಧ್ಯ. ಅಂತೆಯೇ ಬೋಗಿಗಳಿಲ್ಲದಿದ್ದರೆ ಯಂತ್ರದ ಅಸ್ತಿತ್ವಕ್ಕೆ ಅರ್ಥವಿಲ್ಲ. ಒಳ್ಳೆಯ ಶಿಷ್ಯವೃತ್ತಿಯಿಂದ ಸಾರ್ಥಕವಾದುದನ್ನು ಕಲಿತು ಸಾಧಿಸುವುದು ಮತ್ತು ಸಕಾರಾತ್ಮಕ ನಿಲುವಿನಿಂದ ಶಿಷ್ಯನಿಗೆ ಹೇಳಿಕೊಟ್ಟು ಆತನನ್ನು ಮುನ್ನೆಲೆಗೆ ತರುವುದು ಎರಡೂ ಭುವನದ ಭಾಗ್ಯವೇ ಸರಿ! ಡಾ.ವಸಂತಕುಮಾರ ಪೆರ್ಲ