top of page

ಚಿಂತಕ ಗೌರೀಶ ಕಾಯ್ಕಿಣಿಯವರು

ಅದು ಎಪ್ಪತ್ತರ ದಶಕದ ಕೊನೆ. ಗೋಕರ್ಣದಲ್ಲಿ ನನ್ನದೊಂದು ಕನ್ನಡ ಗೀತ ರಾಮಾಯಣ ಹಾಡುಗಾರಿಕೆ ಕಾರ್ಯಕ್ರಮ ಕೊಡಬೇಕಾಯಿತು. ಯಾವುದೋ ದೇವಸ್ಥಾನದ ಜಗುಲಿ‌( ಪೌಳಿ) ಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗೌರೀಶ ಕಾಯ್ಕಿಣಿಯವರು, ಗೋಪಾಲಕೃಷ್ಣ ನಾಯಕರು , ಜಿ. ಎಸ್. ಹೆಗಡೆ ( ಸಪ್ತಕ) ಮೊದಲಾದವರೆಲ್ಲ ಶ್ರೋತೃಗಳು. ಒಂದೂವರೆ ಗಂಟೆ ನಾನು ಗೀತರಾಮಾಯಣವನ್ನು ಸಂಕ್ಷಿಪ್ತ ವಿವರಣೆಯೊಂದಿಗೆ ಹಾಡಿದೆ. ‌‌‌ ಮೂರು ನಾಲ್ಕು ದಿವಸಗಳಲ್ಲೇ ಅಂಕೋಲೆಯ , ದಿನಕರ ದೇಸಾಯಿಯವರ ಅಂದಿನ ಪ್ರಸಿದ್ಧ ವಾರಪತ್ರಿಕೆ "ಜನಸೇವಕ" ದಲ್ಲಿ ಸುಮಾರು ಒಂದೂವರೆ ಪುಟಗಳಷ್ಟು ನನ್ನ ಗೀತರಾಮಾಯಣದ ಕುರಿತಾಗಿಯೇ ಲೇಖನ ಬಂದಿತ್ತು. ಅದನ್ನು ಬರೆದವರು ಗೌರೀಶ ಕಾಯ್ಕಿಣಿಯವರು. ಸ್ವಲ್ಪ ನನಗೇ ಮುಜುಗರವಾಗುವಷ್ಟು ಹೊಗಳಿ ಬರೆದಿದ್ದರು. ನಾನು ಅಷ್ಟು ದೊಡ್ಡ ಹಾಡುಗಾರ‌ ಎಂದು ನಾನು ಹೇಳುತ್ತಿಲ್ಲ, ಆದರೆ ಕಾಯ್ಕಿಣಿಯವರು ನಮ್ಮಂತಹ ಕಿರಿಯರನ್ನು ಯಾವ ರೀತಿ ಪ್ರೋತ್ಸಾಹಿಸುತ್ತಿದ್ದರು ಎನ್ನುವದಕ್ಕಾಗಿ ಹೇಳಿದೆ. ಅವರ ಸ್ವಭಾವವೇ ಹಾಗೆ. ಅವರಿಗಿಂತ ಕಿರಿಯ ಕವಿಗಳ ಕುರಿತು ಸಹ ಅವರು ಪುಸ್ತಕವನ್ನೇ ಬರೆದಿದ್ದಾರೆ. ‌‌‌ ನಿನ್ನೆ ಯಕ್ಕುಂಡಿಯವರ ಕುರಿತು ಬರೆಯುವಾಗ ನಾನು ಹೇಳಿದಂತೆ ಆಗ ಉತ್ತರ ಕನ್ನಡ ಜಿಲ್ಲೆಯಲ್ಲಿ ನಮ್ಮಂತಹ ಯುವ ಪೀಳಿಗೆಯ ಬರೆಹಗಾರರಿಗೆ ಉತ್ತೇಜನ ನೀಡುತ್ತಿದ್ದವರಲ್ಲಿ ಕಾಯ್ಕಿಣಿಯವರೂ ಒಬ್ಬರು. ನಾನು, ಆರ್. ವಿ. ಭಂಡಾರಿ, ಜಿ. ಎಸ್. ಅವಧಾನಿ ಮೊದಲಾದವರನ್ನೆಲ್ಲ ಆ ಹಿರಿಯರು ಬೆನ್ನು ಚಪ್ಪರಿಸಿ ಬೆಳೆಸಿದರು. ಹೊನ್ನಾವರದಲ್ಲಿ ಆಗ ನಮ್ಮ ಮನೆ ( ಲಕ್ಷ್ಮೀನಾರಾಯಣ ದೇವಸ್ಥಾನ) ಎಂದರೆ ಒಂದು ಸಾಂಸ್ಕೃತಿಕ ಕೇಂದ್ರವಿದ್ದಂತಿತ್ತು. ನನ್ನ ತಂದೆ ಸಂಸ್ಕೃತ ಕನ್ನಡ ವಿದ್ವಾಂಸರು. ಲೇಖಕರು. ನನ್ನ ಹಿರಿಯ ಸಹೋದರರೂ ಸಾಹಿತಿಗಳು. ವಾತಾವರಣವೇ ಹಾಗಿತ್ತು. ೧೯೬೨ ರಲ್ಲಿ ಶೃಂಗಾರ ಮಂಟಪ ಸಂಸ್ಥೆ ಸ್ಥಾಪನೆಯಾದ ನಂತರವಂತೂ‌ ನಿರಂತರ ಬಿಡುವಿಲ್ಲದ ಕಾರ್ಯಕ್ರಮಗಳು. ಅಂದಿನ ಹೆಚ್ಚಿನ ಎಲ್ಲ ಹಿರಿಯ ಸಾಹಿತಿಗಳು ಕಲಾವಿದರು‌ ಬರುತ್ತಿದ್ದರು. ಕಾಯ್ಕಿಣಿಯವರು, ಯಕ್ಕುಂಡಿಯವರು, ಬಿ. ಎಚ್. ಶ್ರೀಧರರು, ಇನ್ನೂ ಹಲವರಂತೂ ತಿಂಗಳಿಗೊಂದೆರಡು ಸಲವಾದರೂ ಬಂದೇಬರುತ್ತಿದ್ದರು. ಆದ್ದರಿಂದ ನನ್ನ ಬಾಲ್ಯದಿಂದಲೇ ಅವರೆಲ್ಲರೊಡನೆ ಹತ್ತಿರದ ಒಡನಾಟ ದೊರಕಿತು. ಬೇಂದ್ರೆ, ಕಾರಂತರು, ಅನಕೃ, ಬೀಚಿ, ಪುರಾಣಿಕ, ಭಾರತೀಸುತ, ಆಗ ನಮ್ಮಲ್ಲಿಗೆ ಬರದೇ ಇದ್ದವರೇ ಇಲ್ಲ. ಕೆರೆಮನೆ ಕಲಾ ಕುಟುಂಬವಂತೂ ನಮಗೆ ಹತ್ತಿರದ್ದೇ. ಮನ್ಸೂರ , ರಾಜಗುರು , ಮಾಯಾರಾವ್, ಏಣಗಿ ಬಾಳಪ್ಪನವರು, ಹುಲಿಮನೆ ಸೀತಾರಾಮ ಶಾಸ್ತ್ರಿಯವರು, ಮಾಸ್ಟರ್ ಹಿರಣ್ಣಯ್ಯನವರು , ಸ್ತ್ರೀ ನಾಟಕ ಮಂಡಳಿಯ ನಾಗರತ್ನಮ್ಮನವರು, ಉದಯಕುಮಾರ, ಶ್ರೀನಾಥ್ ನರಸಿಂಹರಾಜು, ಹರಿಣಿ, ವಜ್ರಮುನಿ ರಾಜೇಶ, ಜಯಮಾಲಾ ಹೀಗೆ ಅಸಂಖ್ಯಾತ ಕಲಾವಿದರೂ ಬಂದಿದ್ದರು. ಕಾಯ್ಕಿಣಿಯವರು ಜಿ. ಪಿ. ನಾಯಕರು ಇವರೆಲ್ಲ ನಮ್ಮ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದವರು. * ಗೌರೀಶ ಕಾಯ್ಕಿಣಿಯವರನ್ನು ಕನ್ನಡ ನಾಡಿಗೆ ಹೊಸದಾಗಿ ಪರಿಚಯಿಸಬೇಕಾದ್ದೇನೂ ಇಲ್ಲ. 1912 ಸೆಪ್ಟೆಂಬರ್ ೧೨ ರಂದು ಜನಿಸಿ, ಗೋಕರ್ಣದ ಭದ್ರಕಾಳಿ ಹೈಸ್ಕೂಲಿನಲ್ಲಿ ಇಂಗ್ಲಿಷ ಶಿಕ್ಷಕರಾಗಿ , ೬೨ ಪುಸ್ತಕಗಳನ್ನು ಬರೆದು, ಶ್ರೇಷ್ಠ ವೈಚಾರಿಕರೆಂದು, ವಿಮರ್ಶಕರೆಂದು , ಚಿಂತಕರೆಂದು ಖ್ಯಾತಿವೆತ್ತ ಅವರು ನಾಸ್ತಿಕ ಮನೋಭಾವದವರೂ ಆಗಿದ್ದರು. ನಾಸ್ತಿಕ ಮತ್ತು ದೇವರು, ನವಮಾನವತಾವಾದ, ಮನೋವಿಜ್ಞಾನದ ರೂಪುರೇಷೆಗಳು ಮೊದಲಾದ ಉತ್ಕೃಷ್ಟ ಕೃತಿಗಳನ್ನು ನೀಡಿದವರು. ‌‌‌ ಜನಸೇವಕ ವಾರಪತ್ರಿಕೆಯಲ್ಲಿ ಅವರು ಪ್ರತಿವಾರ ಬರೆಯುತ್ತಿದ್ದ ಅಂಕಣ ಲೇಖನ ಬಹಳ ಪ್ರಸಿದ್ಧವಾಗಿತ್ತು. ಪತ್ರಿಕೆಯ ಪ್ರಸಿದ್ಧಿಗೂ ಅದು ಕಾರಣವಾಗಿತ್ತು. ಜಿಲ್ಲೆಯ ಇತರ ಪತ್ರಿಕೆಗಳಿಗೂ ಬರೆಯುತ್ತಿದ್ದರು. ನಮ್ಮ ಪತ್ರಿಕೆಗೂ ಕೇಳಿದಾಗೆಲ್ಲ ಲೇಖನ ಕೊಡುತ್ತಿದ್ದರು. ಅವರ ಹಸ್ತಾಕ್ಷರ ಮಾತ್ರ ಸಾಮಾನ್ಯವಾಗಿ ಯಾರಿಗೂ‌ ಓದಲು ಸಾಧ್ಯವಾಗುತ್ತಿರಲಿಲ್ಲ. ನನಗೆ ಅದು ರೂಢಿಯಾಗಿತ್ತಾದ್ದರಿಂದ ಬೇರೆ ಬರೆದು ಕಂಪೋಸಿಗೆ ಕೊಡುತ್ತಿದ್ದೆ. ಈಗಲೂ ನನ್ನ ಹತ್ತಿರ ಅವರು ಬರೆದ ಕೆಲ ಪತ್ರಗಳಿವೆ. ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕವಿವಿ ಗೌರವ ಡಾಕ್ಟರೇಟ್, ಕೊಂಕಣಿ ಸಾಹಿತ್ಯ ಪ್ರಶಸ್ತಿ, ಮೊದಲಾದವೆಲ್ಲ ದೊರಕಿದವು. ಆದರೆ ಅಂತಹ ಮಹಾನ್ ಸಾಹಿತಿಗೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಯ ಗೌರವ ಮಾತ್ರ ಸಿಗಲೇಇಲ್ಲ ಎನ್ನುವದು ಬೇಸರದ ವಿಷಯ. ಆದರೆ ಅವರ ಸಮಗ್ರ ಸಾಹಿತ್ಯ ಸಂಪುಟಗಳೂ ಪ್ರಕಟವಾಗಿವೆ. ಗೋಕರ್ಣದ ಸಮುದ್ರ ತೀರದ ಸುಂದರ ಪರಿಸರದಲ್ಲಿ ಇದ್ದ ಅವರ ಮನೆ ನಮ್ಮಂತಹ ಬರೆಹಗಾರರಿಗೆಲ್ಲ ಖಾಯಂ ಸಂದರ್ಶನೀಯ ಸ್ಥಳವಾಗಿತ್ತು. ಅದಕ್ಕೇ ನಾನು ಹಿಂದೆ ಅವರ ಬಗ್ಗೆ ಒಂದು ಚುಟುಕು ಬರೆದಿದ್ದುಂಟು- " ಗೌರೀಶರಿಹರೆಂದೆ ಗೋಕರ್ಣ- ವಾಸಿ; ಸಾಹಿತ್ಯ ಕ್ಷೇತ್ರ ಸಂದರ್ಶಕರ ಕಾಶಿ ! ಶಾಂತಿ ಸಹಧರ್ಮಿಣಿಯು, ಪುತ್ರ ಜಯ(ವಂ)ತ, ಹೆಸರು ಪಡೆದರು ನಮ್ಮ ನಾಡಿನಾದ್ಯಂತ. " ೨೦೦೨ ನವೆಂಬರ್ ೧೩ ರಂದು ಅವರು ಕಣ್ಮರೆಯಾದರು. ಆದರೆ ಅವರೊಂದಿಗಿನ ಒಡನಾಟದ ಸವಿ ನೆನಪು ಯಾವತ್ತೂ ‌ಇರುವಂತಹದು. - ಲಕ್ಷ್ಮೀನಾರಾಯಣ ಶಾಸ್ತ್ರಿ, ನಾಜಗಾರ

ಚಿಂತಕ ಗೌರೀಶ ಕಾಯ್ಕಿಣಿಯವರು
bottom of page