top of page

ಗುರು – ಒಂದು ಚಿಂತನೆ

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಗೌರವ ಸಲ್ಲಿಸುವ ಪರ್ವವಾಗಿ ಗುರುಪೌರ್ಣಿಮೆಯನ್ನು ಆಚರಿಸಲಾಗುತ್ತದೆ. ಯಾರಿವನು ಗುರು? ಶಬ್ದಶಃ ನೋಡಿದರೆ ಗುರುವೆಂದರೆ ಭಾರ. ಒಂದಕ್ಷರವನ್ನು ಕಲಿಸಿದವನೂ ಗುರುವು ಎನ್ನಲಾಗುತ್ತದೆ; ಆದರೆ ಅವನು ಶಿಕ್ಷಕ. ಸ್ಯಾನ್ನಿಷೇಕಾದಿಕೃದ್ಗುರುಃ ಎನ್ನುತ್ತದೆ ಕೋಶ. ಗರ್ಭಾಧಾನಾದಿ ಹದಿನಾರು ಸಂಸ್ಕಾರಗಳನ್ನು ಮಾಡಿದವನು ಗುರು; ಆದರೆ ಅವನು ತಂದೆ. ಯಾವುದೇ ವಿಷಯದಲ್ಲಿ ವಿಶೇಷವಾದ ಅರಿವುಳ್ಳವನು ಗುರು ಎನ್ನುತ್ತದೆ ಪಾಶ್ಚಾತ್ಯ ಪರಿಭಾಷೆ; ಮ್ಯಾನೇಜ್ಮೆಂಟ್ ಗುರು ಇತ್ಯಾದಿ; ಆದರೆ ಅವನು ಬಲ್ಲಿದ. ಗುಕಾರವೆಂದರೆ ಅಜ್ಞಾನವೆಂಬ ಕತ್ತಲೆ, ರುಕಾರವು ಅದರ ನಿವಾರಕ – ಎನ್ನುತ್ತದೆ ಭಾರತೀಯ ಪರಿಕಲ್ಪನೆ. ಹಾಗಿದ್ದರೆ ನಿಜವಾಗಿಯೂ ಗುರುವೆಂದು ಯಾರನ್ನು ಕರೆಯಬೇಕು? ಇವೆಲ್ಲವುಗಳ ಸಮಷ್ಟಿರೂಪವೇ ಗುರುವು. ರಿಕ್ತಃ ಸರ್ವೋ ಭವತಿ ಹಿ ಲಘುಃ ಪೂರ್ಣತಾ ಗೌರವಾಯ –ಎಂದು ಬಹಳ ಸುಂದರವಾಗಿ ಗುರುತ್ವವನ್ನು ವ್ಯಾಖ್ಯಾನಿಸುತ್ತಾನೆ ಕವಿಕುಲಗುರು ಕಾಳಿದಾಸ. ಪ್ರಸಿದ್ಧ ಖಂಡಕಾವ್ಯ ಮೇಘದೂತದಲ್ಲಿ ಹೇಳಿದ ಮಾತಿದು. ಯಾವುದು ಬರಿದಾಗಿರುತ್ತದೋ ಅದು ಹಗುರವಾಗಿರುತ್ತದೆ; ಯಾವುದು ತುಂಬಿರುತ್ತದೆಯೋ ಅದು ಭಾರವಾಗಿರುತ್ತದೆ. ಇದು ನಮಗೆ ಗೊತ್ತಿಲ್ಲವೇ? ಪೇಟೆಗೆ ಹೋಗಿಬರುವ ಮಗುವೂ ಹೇಳುತ್ತದೆ – ಹೋಗುವಾಗ ಬರಿದಾಗಿ ಹಗುರವಾಗಿದ್ದ ಚೀಲವು ಬರುವಾಗ ತುಂಬಿಕೊಂಡು ಭಾರವಾಗಿರುತ್ತದೆ. ಇದನ್ನು ಹೇಳಲು ಕಾಳಿದಾಸ ಬೇಕೆ?!! ಆದರೆ ಅದರ ನಿಜವಾದ ಅರ್ಥವೈಶಾಲ್ಯವನ್ನು ತಿಳಿಯಬೇಕಾದರೆ ಒಳಹೊಕ್ಕು ನೋಡಬೇಕು. ಇದನ್ನೇ reading between two lines ಎನ್ನುತ್ತಾರೆ. ಯದ್ಯಪಿ ಮೋಡಕ್ಕೆ ಹೇಳಿದ ಸ್ವಭಾವೋಕ್ತಿಯಿದಾದರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಬಹುದೊಡ್ಡ ಸೂಕ್ತಿಯೂ ಹೌದು. ಒಬ್ಬ ವ್ಯಕ್ತಿಯಲ್ಲಿ ಸದ್ಗುಣಗಳ ಬಾಹುಲ್ಯವಿದ್ದರೆ ಸಮಾಜದಲ್ಲಿ ಅವನಿಗೆ ತೂಕವಿರುತ್ತದೆ. ಅವನ ಮಾತಿಗೆ ಬೆಲೆಯಿರುತ್ತದೆ. ಜನರು ಅವನನ್ನು ಗೌರವಿಸುತ್ತಾರೆ. ಗುಣಹೀನನಾದವನು ಜನರ ದೃಷ್ಟಿಯಲ್ಲಿ ಬಹಳ ಹಗುರನಾಗಿಬಿಡುತ್ತಾನೆ. ಆಹಾರ-ನಿದ್ರೆ-ಭಯ-ಲೈಂಗಿಕಕ್ರಿಯೆ ಇವೆಲ್ಲವುಗಳು ಪಶುಗಳಲ್ಲೂ ಇರುತ್ತವೆ. ಕೇವಲ ಇವಿಷ್ಟೇ ಜೀವನವೆಂದು ತಿಳಿದು ಬದುಕುವವನು ಕೋಡು-ಬಾಲಗಳಿಲ್ಲದೇ ಪಶುವೇ ಸರಿ. ಇವುಗಳಿಂದ ಮೇಲೆದ್ದು ಸಮಾಜಕ್ಕೆ ಉಪಯೋಗವಾಗುವ ಕೆಲಸಗಳನ್ನು ಮಾಡಬೇಕು. ಪಾಶವೀಯತೆಯಿಂದ ಮಾನವೀಯತೆಯ ಕಡೆಗೆ, ಮಾನವೀಯತೆಯಿಂದ ಪರಿಪೂರ್ಣತೆಯ ಕಡೆಗೆ ಹೋಗಬೇಕು. ಸದ್ಗುಣಗಳಿಂದ ಪರಿಪೂರ್ಣನಾದವನನನ್ನು ಜಗತ್ತು ಗುರುವಿನ ಸ್ಥಾನದಲ್ಲಿಟ್ಟು ನಮಿಸುತ್ತದೆ; ದೇವರಸ್ಥಾನದಲ್ಲಿಟ್ಟು ಪೂಜಿಸುತ್ತದೆ. ಮಾನವನೆತ್ತರ ಆಗಸದೇರಿಗೆ ಏರುವವರೆಗೂ ಏರಬೇಕು ಎನ್ನುತ್ತಾರೆ ವೀಸಿ. ’ಸ್ವರ್ಗವೆ, ಭೂಮಿಯುಳಿರದಿರೆ ನೀನು, ಮೇಣೆಲ್ಲಿಯೂ ನೀನಿಲ್ಲ ಇಲ್ಲ! ದೇವತೆಗಳು ನಾವಾಗಲಾರದಿರೆ ದೇವತೆಗಳು ಇನ್ನಿಲ್ಲ, ಇಲ್ಲ!’ ಎನ್ನುತ್ತಾರೆ ಕುವೆಂಪು. ಹೌದು...ದೇವತೆಗಳು ನಮ್ಮಲ್ಲೇ ಇದ್ದಾರೆ. ರಾಮ-ಕೃಷ್ಣ-ಬುದ್ಧ ಇವರೆಲ್ಲರೂ ನಮ್ಮ-ನಿಮ್ಮಂತೆಯೇ ಬಾಳಿ-ಬದುಕಿ-ಮರಣಹೊಂದಿದವರು. ಆದರೆ ತಮ್ಮ ಸದ್ಗುಣಗಳ ಪಾರಮ್ಯದಿಂದ ದೇವರಾಗಿ ನಮ್ಮಿಂದ ಪೂಜಿಸಲ್ಪಡುತ್ತಿದ್ದಾರೆ. ನಮಗೆಲ್ಲ ಆದರ್ಶರಾಗಿದ್ದಾರೆ. ಕನ್ನಡಿಗೆ ಸಂಸ್ಕೃತದಲ್ಲಿ ಆದರ್ಶವೆನ್ನುತ್ತಾರೆ. ಆದರ್ಶವನ್ನು ನೋಡಿ ಹೇಗೆ ನಾವು ನಮ್ಮ ಬಾಹ್ಯರೂಪವನ್ನು ಸರಿಪಡಿಸಿಕೊಳ್ಳುತ್ತೇವೆಯೋ ಅಂತೆಯೇ ಆದರ್ಶಪುರುಷರ ಜೀವನವನ್ನು ನೋಡಿ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಅವರಂತೆ ನಾವಾಗಬೇಕು. ಆಗ ನಾವು ಸಮಾಜದಲ್ಲಿ ಗುರುವಾಗುತ್ತೇವೆ. ವ್ಯವಹಾರದಲ್ಲಿ ಶಿಕ್ಷಕನಿಗೆ ಗುರುವೆನ್ನುತ್ತಾರೆ. ನೈಜಾರ್ಥದಲ್ಲಿ ಗುರುವೆನಿಸಿಕೊಳ್ಳಬೇಕಾದರೆ ಶಿಕ್ಷಕನಿಗೆ ಬಹಳ ದೊಡ್ಡ ಹೊಣೆಗಾರಿಕೆಯಿರುತ್ತದೆ. ತಿಮ್ಮಗುರು ಹೇಳುವಂತೆ ’ಸುರಿದು ಪ್ರಶ್ನೆಗಳನುತ್ತರವ ಕೊಡೆ ಬಾರದನ, ಗುರುವೆಂದು ಕರೆಯುವೆಯ? – ಮಂಕುತಿಮ್ಮ’ ಅವನು ಕಲಿಸುವ ವಿಷಯದಲ್ಲಿ ಅವನಿಗೆ ಆಳವಾದ ಜ್ಞಾನವಿರಬೇಕು. ಅದರ ಒಳ-ಹೊರಗಿನ ಪರಿಪೂರ್ಣ ಪರಿಚಯವಿರಬೇಕು. ಯಾವದೇ ಸಮಯದಲ್ಲಿ ಎಂತಹದೇ ಪ್ರಶ್ನೆಕೇಳಿದರೂ ಉತ್ತರಿಸುವ ಸಾಮರ್ಥ್ಯವಿರಬೇಕು. ವ್ಯಕ್ತಿತ್ವ-ಚಾರಿತ್ರ್ಯ-ಜ್ಞಾನ ಇವು ಮುಪ್ಪರಿಗೊಂಡಾಗ, ಸಮಾಜದ ಪರೀಕ್ಷಕದೃಷ್ಟಿಯ ಒರೆಗಲ್ಲಿನಲ್ಲಿ ತಿಕ್ಕಿಸಿಕೊಂಡು ಅಪರಂಜಿಯಾಗಿ ಹೊರಹೊಮ್ಮಿದಾಗ ಶಿಕ್ಷಕ ಗುರುವಾಗುತ್ತಾನೆ. ಒಟ್ಟಿನಲ್ಲಿ ಪರಿಪೂರ್ಣತೆಯೇ ಗುರುತ್ವದ ನಿಕಷ. ಪ್ರತಿಯೊಬ್ಬ ವ್ಯಕ್ತಿಯು ಸದ್ಗುಣಗಳಿಂದ ಪೂರ್ಣನಾಗಲಿ. ಸಮಾಜವು ಗುಣಿಗಳಿಂದ ಪೂರ್ಣವಾಗಲಿ. ನಮ್ಮ ರಾಷ್ಟ್ರವು ಜಗತ್ತಿಗೆ ಗುರುವಾಗಲಿ ಎಂಬುದೇ ಗುರು ಪೌರ್ಣಿಮೆಯ ಹಾರೈಕೆ. ಪತಂಜಲಿ ವೆಂಕಟೇಶ ವೀಣಾಕರ ಪತಂಜಲಿ ವೆಂಕಟೇಶ ವೀಣಾಕರ ಅವರು ಹೊನ್ನಾವರ ಕಾಲೇಜಿನ ಪ್ರಕಾಂಡ ಪಂಡಿತರಾಗಿದ್ದ ಪ್ರೊ.ವಿ.ಕೆ.ವೀಣಾಕರ ಅವರ ಪುತ್ರರು. ಕಂಪ್ಯೂಟರ್‌ ಸೈನ್ಸ್ ನಲ್ಲಿ ಡಿಪ್ಲೋಮಾ ಮತ್ತು AMIE. ಸಂಸ್ಕೃತದಲ್ಲಿ ಎರಡು ಸ್ನಾತಕೋತ್ತರ ಪದವಿ ಅಲಂಕಾರ ಮತ್ತು ವ್ಯಾಕರಣ. ಪಿಎಚ್ಡಿ ವಿಷಯ: ಸಾಮಾಜಿಕ ಸಮಸ್ಯೆಗಳಿಗೆ ವೈದಿಕ ಪರಿಹಾರಗಳು - ವಿಮರ್ಶಾತ್ಮಕ ಅಧ್ಯಯನ. ಮುಂಬೈಯಲ್ಲಿ ಸ್ವಂತ software development firm ಸ್ಥಾಪಿಸಿದ್ದ ಅವರು ಹೊನ್ನಾವರಕ್ಕೆ ಮರಳಿ ಬಂದರು.ಎಸ್.ಡಿ.ಎಂ.ಕಾಲೇಜು ಹೊನ್ನಾವರದ ಸಂಗಣಕ ವಿಭಾಗದಲ್ಲಿ ಐದು ವರ್ಷ ಬೋಧಕರಾಗಿ ಕಾರ್ಯ ನಿರ್ವಹಿಸಿ, ಪ್ರಸ್ತುತ ಸುಬ್ರಹ್ಮಣ್ಯ ಸ್ನಾತಕ ಸಂಶೋಧನಾ ಕೇಂದ್ರದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಋಷಿ ವಾಖ್ಯ ಮತ್ತು ಲೋಕ ಜ್ಞಾನವನ್ನು ಮೇಳವಿಸಿ ವಿಷಯವನ್ನು ಮಂಡಿಸುವ ಅವರ ಚಿಂತನೆಯು ನಿಮ್ಮ ಓದಿಗಾಗಿ. ಸಂಪಾದಕ

ಗುರು – ಒಂದು ಚಿಂತನೆ

©Alochane.com 

bottom of page