top of page

ಖಾಲಿ ಶಾಲೆಯ ಅಂಗಳದಿಂದ..

ಸಂಜೆ ಏಳರ ಹೊತ್ತಿಗೆ ಮೊಬೈಲ್ ಮೂರು ಬಾರಿ ಹೊಡೆದುಕೊಂಡು ನಿಂತುಹೋಯಿತೆಂದರೆ ಮರಕಾಲ ಬೆಟ್ಟದ ಊರಿನ ಒಂಟಿ ಮನೆಯಿಂದ ಟೀಚರ್ ಟೀಚರ್ ಅಂತ ಶಾಲೆಯಲ್ಲಿರೋವಾಗ ಬೆನ್ನು ಸುತ್ತುತ್ತಿದ್ದ ನಾಲ್ಕನೇ ವರ್ಗದ ಮುದ್ದುಲಕ್ಷ್ಮಿಯ ಮಿಸ್ಡ್ ಕಾಲ್ ಬಂದಿದೆ ಅಂತ ಅರ್ಥ. ಮುಷ್ಟಿಯಲ್ಲಿ ಇಟ್ಟುಕೊಂಡರೆ ತಕ್ಷಣ ಕಣ್ಣಿಗೆ ಬೀಳದ ಸಣ್ಣ ಬೇಸಿಕ್ ಮೊಬೈಲ್ ಸೆಟ್ಟಿಗೆ ಅವರಮ್ಮ ತುಂಬಿಸಿಕೊಂಡ ಐವತ್ತು  ರೂಪಾಯಿ ಬಹಳ ದಿನದವರೆಗೂ ಬರಬೇಕು ಅನ್ನೋದು ನನ್ನ ಕಾಳಜಿ. ಹಾಗಾಗಿ ಲಾಕ್‌ಡೌನ್ ಆರಂಭದಲ್ಲೇ ಹೇಳಿಬಿಟ್ಟಿದ್ದೇನೆ "ನೀನು ಎರಡು ರಿಂಗ್ ಕೊಟ್ಟರೆ ಸಾಕು". ಹಿಡಿದ ಕೆಲಸ ಅಲ್ಲೇ ಬಿಟ್ಟು ಟೀಚರ್ ಈ ತಕ್ಷಣ ತನಗೆ ವಾಪಸ್ ಫೋನ್ ಮಾಡುತ್ತಾರೆ ಎಂಬುದು ಅವಳಿಗೆ ಗೊತ್ತು.. "ಟೀಚರ್ ಹೇಗಿದ್ದೀರಿ" " ಶಾಲೆಗೆ ಬಂದು ಹೋದ್ರಾ" "ಟೀಚರ್ ಅದೆಷ್ಟು ದಿನವಾಯ್ತು ನಿಮ್ಮ ನೋಡಿ" "ಟೀಚರ್ ಸುಬ್ರಾಯಪ್ಪಜ್ಜಿಯ ಮಗ ರಾಘಣ್ಣನ ಮೊಬೈಲಿಗೆ ನಿಮ್ಮದೊಂದು ಸೆಲ್ಪಿ ಕಳಿಸಿ ..ಬೆಳಿಗ್ಗೆ ರಾಘಣ್ಣ ನಮ್ಮ ದೊಡ್ಡಪ್ಪನ ಮನೆಯ ಬಾವಿಗೆ ಕುಡಿಯುವ ನೀರಿಗೆ ಬರ್ತಾನೆ..ಅವನ ಹತ್ತಿರ ವ್ಯಾಟ್ಸಪ್ ಇರುವ ದೊಡ್ಡ ಮೊಬೈಲ್ ಉಂಟು..ನೋಡಿಕೊಳ್ತೇನೆ ಟೀಚರ್ ಪ್ಲೀಸ್.." "ಹಾಗೇ ನನ್ನದೂ ಒಂದು ಕಳಿಸ್ತೇನೆ ಅದರಲ್ಲೇ".. ಅವಳ ಚಿಟಪುಟ ಮಾತಿಗೆ ತಕ್ಕುದಾದ ಉತ್ತರ ಕೊಡುತ್ತ ಮಾತು ಮುಂದುವರಿಸುವ ನನಗೆ ಈಗ ಚಿನಕುರಳಿ ಮಕ್ಕಳಿಲ್ಲದೆ ಸಿಟ್ಟುಮಾಡಿಕೊಂಡು ನಿಂತಂತಿರುವ ಬಿಕೋ ಶಾಲೆ ಮತ್ತು ಅದೇ ಶಾಲೆಯಲ್ಲಿ ಬೆಳಿಗ್ಗೆ ಬಂದು ಗಂವ್ ಎನ್ನುವ ಮೌನದಲ್ಲಿ ಕಾಗದಪತ್ರಗಳ ಸಣ್ಣ ಸದ್ದಿನ ಜೊತೆ ಮಾತಾಡಿ ಸಂಜೆ ಎದ್ದು ಹೋಗುವ ನಾವು ಟೀಚರ್‌ಗಳ ನಿರುಪಾಯಕತೆ ಕಣ್ಮುಂದೆ ಹಾಯುತ್ತದೆ. ಗೋಧಿಹಿಟ್ಟೋ..ಎಣ್ಣೆಯೋ.. ಖಾಲಿಯಾದ ಕೊಟ್ಟೆಗಳಲ್ಲಿ ಒಂದಿಷ್ಟು ಮಣ್ಣು ಗೊಬ್ಬರ ತುಂಬಿ ಪುಟ್ಟ ನಿತ್ಯಪುಷ್ಪದ ಗಿಡ,ಚಂಡು ಹೂವಿನದು,ಗುಲಾಬಿ ಕಾಂಡ ನೆಟ್ಟು ಶಾಲೆಬಾಗಿಲಲ್ಲೇ ಇಟ್ಟು ಹೋಗಿದ್ದಾನೆ ಐದನೇ ವರ್ಗದ "ರಂಜು" ...ಬಾಗಿಲಿಗೊಂದು ಚೀಟಿ. "ಟೀಚರ್ ಇವು ನನ್ನ ಗಿಡಗಳು..ಮೊಗ್ಗಾಗಿವೆ.. ಮಳೆ ಬರದ ದಿನ ಇವಕ್ಕೆ ನೀರು ಹಾಕಿ ಟೀಚರ್...ಹೋಗುವಾಗ ಗೇಟು ಹಾಕಿಕೊಂಡೇ ಹೋಗಿ..ಮೀನಾಕ್ಷಕ್ಕನ ಆಕಳು ಬಂದು ಎಲ್ಲ ತಿಂದು ಹಾಕೀತು.." ಬಸ್ಸಿನ ಸಂಚಾರವಿಲ್ಲದ  ಈ ಕೋವಿಡ್ ಹೊತ್ತಿನಲ್ಲಿ ಹಾಲಿನವಾಹನವನ್ನೋ, ಪೇಪರ್‌ಗಾಡಿಯನ್ನೋ ಹತ್ತಿ ಶಾಲೆಗೆ ಬರುವ ನಮ್ಮಿಂದಾಗಿ ಮಕ್ಕಳಿಗೇನೂ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಸುಮ್ಮನೆಯೂ ಶಾಲೆಯ ಹತ್ರ ಸುಳಿಯಬಾರದು ನೀವು ಅಂತ ತಾಕೀತು ಮಾಡಿದ್ದೇವೆ.ಹಾಗಾಗಿ ರಂಜುವಿನದು ಈ ಉಪಾಯ.  ಕೋವಿಡ್  ಶಿಕ್ಷಕರನ್ನೂ ಮಕ್ಕಳನ್ನೂ ಬೇರೆ ಮಾಡಿ ಇದು ಐದನೆಯ ತಿಂಗಳು.ಜೂನ್ ತಿಂಗಳಿಂದ ಶಿಕ್ಷಕರು ನಿತ್ಯವೂ ಶಾಲೆಗೆ ಹೋಗಿ ಬರುತ್ತಿದ್ದಾರೆ. ವಿದ್ಯಾರ್ಥಿಗಳಿಲ್ಲದ ಶಾಲೆ ನಮಗೆ ನಮ್ಮ ಸರ್ವೀಸ್ ಪೂರ್ತಿ ಅಪರಿಚಿತ.. ಈ ಕೋವಿಡ್ ಕಾಲಘಟ್ಟ ಅನಿವಾರ್ಯವಾಗಿ ಒಂಟಿ ನಿಶ್ಯಬ್ದ ಶಾಲೆಯನ್ನು ನಮಗೆ ಜೊತೆಮಾಡಿದೆ. ರಾಜ್ಯದಲ್ಲೇ ಅತೀ ಹೆಚ್ಚು ಅರಣ್ಯ ಹೊಂದಿದ ಜಿಲ್ಲೆ ಉತ್ತರಕನ್ನಡ. ಇಂತಹ ಜಿಲ್ಲೆಯಲ್ಲಿ ಓರ್ವ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಪೂರ್ತಿ ಗ್ರಾಮೀಣ ಭಾಗದಲ್ಲೇ ಹೆಚ್ಚು ಕೆಲಸಮಾಡಿದ, ಮಾಡುತ್ತಿರುವ ನನಗೆ ವರ್ಷದ ಮೂರೂ ಕಾಲವೂ ಜ್ಞೀಂ..... ಎನ್ನುವ ಶಬ್ಧ ಹೊರಡಿಸುವ ಜೀರುಂಡೆಗಳ ಹೊತ್ತುಕೊಂಡ ಮಾಮೇರಿ ಮರಗಳು, ಅವುಗಳ ಅಪಾರ ಕಪ್ಪು ನೆರಳುಗಳು,ಬೆಟ್ಟದ ಕಿಲೋಮೀಟರುಗಟ್ಟಲೆ ಕಾಲು ಹಾದಿ..ಅಥವಾ ದಿನಕ್ಕೊಂದೆರಡು ಅಲ್ಲಿಗೆ ಇರುವ ಬಸ್ಸುಗಳು ನನ್ನವೇ ಎಂಬಷ್ಟು ಚಿರಪರಿಚಿತ ಮತ್ತು ಆಪ್ತ.. ಕಾರಣ ಈ ಬೆಟ್ಟಗಳ ಮಧ್ಯದಲ್ಲೆಲ್ಲೋ ಸಮತಟ್ಟು ಮಾಡಿದ ಜಾಗದಲ್ಲಿ ಅಥವಾ ಕಾಲುಹಾದಿಯ ಕೊನೆಯಲ್ಲಿರುವ ನಮ್ಮ ಶಾಲೆ,ಆ ಶಾಲೆಗೆ ಸುತ್ತಲಿನ ಒಂದೆರಡು ಕಿಲೋಮೀಟರ್ ಒಳಹಾದಿಯಿಂದ ನಡೆದು ಬಂದು, ಕದತೆರೆದು, ಗುಡಿಸಿ, ಅಂಗಳದ ಕಸ ಹೆಕ್ಕಿ, ಓದುತ್ತ ಬರೆಯುತ್ತ ಕುಳಿತು ಒಂದು ಕಣ್ಣನ್ನು ನಮ್ಮ ಬರವಿನ ಕಡೆಗೆ ಇಟ್ಟು ನಿಲ್ಲುವ ಪುಟುಪುಟು ಹೆಜ್ಜೆಯ ಅರಳಿದ ಕಣ್ಣುಗಳ ಸಣ್ಣಪುಟ್ಟ ಜೀವಗಳು ನಮ್ಮ ವಿದ್ಯಾರ್ಥಿಗಳು..ಅವು ನಮ್ಮದೇ ಹೃದಯದ ಸಣ್ಣ ತುಣುಕುಗಳು. ಕ್ರೀಚ್...!! ಬಸ್ಸು ಬ್ರೇಕ್ ಹಾಕಿದ್ದೇ ಹತ್ತು ಮಾರು ದೂರದ ಶಾಲೆಯ ವರಾಂಡಾದಲ್ಲಿ "ಟೀಚರ್ ಬಂದ್ರೂ..ಟೀಚರ್ ಬಂದ್ರೂ."ಕುಣಿತ. ಬಸ್ಸೊಳಗೆ ತೂಕಡಿಸುತ್ತಲೋ ಮಾತಾಡುತ್ತಲೋ ಚಿಂತೆಮಾಡುತ್ತಲೋ ಕುಳಿತ ಎಲ್ಲ ಜೀವರಾಶಿಗಳ ನಗುಮೊಗದ ಚಿತ್ತ ಶಾಲೆಯತ್ತ.. " ಅಕ್ಕೋರು ಬಂದ್ರು ಅಂತ ಎಷ್ಟು ಖುಷಿ ನೋಡು ಇವಕೆ.... ದಿನಾ ಬರ್ತಾರೆ ಅಕ್ಕೋರು..ಆದ್ರೂ ಹೊಸ್ತಾಗಿ ಬಂದಂಗೆ ಮಾಡ್ತವಲ್ಲ ಇವು.." ಬಸ್ಸೊಳಗೆ ಕಕ್ಕುಲಾತಿಯ ಮಾತುಕತೆ..ಕಂಡಕ್ಟರ್ ಡ್ರೈವರಣ್ಣರ ಜನ್ಮ ಜಾತಕ ಮಕ್ಕಳಿಗೆ ಬಾಯಿಪಾಠ..ಇವರದ್ದೂ ಮಕ್ಕಳೊಂದಿಗೆ ಹೊಕ್ಕಳುಬಳ್ಳಿಯ ಹಾಗಿನ ಸಂಬಂಧ..ಹಾಗಾಗಿ,  "ನಿಮ್ಮಕ್ಕೋರು ಇವತ್ತು ಬರಲಿಲ್ಲ" ಸುಳ್ಳೇ ಹೇಳಿ ಬಸ್ಸಿನೊಳಗೆ ಅರೆನಿಮಿಷ ನಮ್ಮನ್ನು ನಿಲ್ಲಿಸಿಕೊಳ್ಳುವ ನಾಟಕ..ಮಕ್ಕಳ ನಗುವಿನ ಮೊಗಕ್ಕೆ ಎಲ್ಲವೂ ಗೊತ್ತು . ರೋಡಿಗೆ ಬರಬಾರದು ಎಂದರೆ ಗೇಟಿನವರೆಗೆ ಬಂದು ನಮ್ಮ ಬ್ಯಾಗು ಛತ್ರಿ ಇಸಿದುಕೊಂಡು ಆಯಾ ಸ್ಥಳಕ್ಕೆ ಹೋಗಿ ಇಡುವ ಪೈಪೋಟಿ..ಕಾಟ ತಡೆಯಲಾರದೆ ಇದನ್ನೂ ಈ ದಿನ ಇಂತವರು ಅಂತ ಹಂಚಿಕೊಳ್ಳಿ ಎಂದು ಹೇಳದಿದ್ದರೆ ದಿನಾ ಅವರವರಲ್ಲೇ ಮುನಿಸು, ಕಚ್ಚಾಟ..ನಮ್ಮ ಬ್ಯಾಗು ಅವರ ಪುಟ್ಟ ಕೈಗಳಿಗೆ ಹೋಗಿ ಖುಷಿ ಹೆಚ್ಚಿಸಬಲ್ಲುದಾದರೆ ಹೇಗೆ ದಾಟಿಸದಿರೆವು ಹೇಳಿ.. ಪ್ರಾರ್ಥನೆಯ ಗಂಟೆ..ಅಮರವಾಣಿ ,ಸುಭಾಷಿತ, ಪುಸ್ತಕ ಪರಿಚಯ, ಸುದ್ದಿ ಓದು..ಚಟಪಟ ಮುದ್ದು ಸ್ವರಗಳು....ಸಾಲಾಗಿ ಹಾಲು ಕುಡಿಯಲು ಹೋಗಿ ಬಂದು ಕಲಿಕೆ. ಓದು.. ಬರಹ..ಮಧ್ಯ ಮಧ್ಯ ಅಹವಾಲು.. ದೂರು.. ಮನೆಯ,ತೋಟದ ಸುದ್ದಿ, ಗದ್ದೆಯಲ್ಲಿ ಆಮೆ ನೋಡಿದ್ದು ,ಕಳೆದ ವರುಷ ಮಳೆಗಾಲದಲ್ಲಿ ನೆರೆ ಬಂದು ಮನೆಯೊಳಗೆ ಅರಲು ತುಂಬಿ ಕಥೆಯಾದದ್ದು, ನೇರಳೆ ಮರದ ಪೊಟರೆಯಲ್ಲಿ ಗಿಳಿ ಮರಿ ಕಂಡದ್ದು ಹೀಗೆ ನೂರಾರು ಸುದ್ದಿಗಳ ಸಂತೆ..ಗಣತಿ,ಮನೆಭೇಟಿ ಎಲ್ಲದಕ್ಕೂ ಈ ಪುಟಾಣಿಗಳ ಒಟ‌ಒಟ ನಮ್ಮ ಜೊತೆಗೇ ಬೇಕು.ಅವರಿದ್ದರೆ ನಮಗೆ ಬಲ,ನೆಮ್ಮದಿ. ಸದಾ ಗೌಜಿಯ ಜೊತೆಗೆ ಶ್ರದ್ಧೆ,ವಿಧೇಯತೆ.. ಪ್ರತಿಭಾಕಾರಂಜಿಗೆ ಗೆದ್ದೇ ಬರಬೇಕು ಹಟ. ಸ್ವಾತಂತ್ರ್ಯೋತ್ಸವಕ್ಕೆ ವಾರ ಮೊದಲೇ ಭಾಷಣ ಬಾಯಿಪಾಠ.. ತಲೆ ತಿನ್ಬೇಡ್ರೋ ಅಂದ್ರೆ ಸುಮ್ಮನಾಗಿ ಮತ್ತೆ ಚಿಟಪಿಟ...  ನೂರಕ್ಕೆ ಅರವತ್ತು ಶೇಕಡಾ ವಿದ್ಯಾರ್ಥಿಗಳ ಮನೆಯಲ್ಲಿ ಮೊಬೈಲಿಲ್ಲ.ನೆಟ್ವರ್ಕ ಇಲ್ಲದ ಜಾಗಗಳೇ ಶೇಕಡಾ ಎಪ್ಪತ್ತರಷ್ಟಿವೆ ಜಿಲ್ಲೆಯಲ್ಲಿ..ವಿದ್ಯುತ್ ಕೂಡ ಇತ್ತೀಚೆಗೆ ಬಂದದ್ದು. ಮನೆ,ಹಟ್ಟಿ,ಗದ್ದೆ,ಕೂಲಿ ಇಷ್ಟರೊಳಗೆ ನೆಮ್ಮದಿಯ ಚುಟುಕು,ಚಟುವಟಿಕೆಯ ಬದುಕು..ಆಧಾರ್ ಕಾರ್ಡ,ಭಾಗ್ಯಲಕ್ಷ್ಮಿ ಬಾಂಡ್ ಮುಂತಾದವುಗಳನ್ನೆಲ್ಲ ಮಾಡಿಸುವಾಗ  ಮೊಬೈಲ್ ನಂಬರ್ ಕೇಳಿದ ಕಡೆಗೆಲ್ಲ ಟೀಚರ್ ಗಳ,ಅಂಗನವಾಡಿ ಅಕ್ಕೋರ ನಂಬರ್ ಕೊಟ್ಟು ಬಂದದ್ದು ಅವರು ಇಲ್ಲಿಯವರೆಗೆ.. ಹೀಗಿರುವಾಗ ಆನ್‌ಲೈನ್ ಕ್ಲಾಸುಗಳ ಪ್ರಯೋಜನ ಎಲ್ಲ ವಿದ್ಯಾರ್ಥಿಗಳಿಗೆ ಸಿಕ್ಕೀತೇ..? ಸಿಕ್ಕರೂ ಮಗುವಿನ ಶೀಲ ಸಂವರ್ಧನೆ,ನೈತಿಕ ಸದ್ಗುಣಗಳು, ಸಚ್ಚಾರಿತ್ರ್ಯವನ್ನು ಬೆಳೆಸುವಲ್ಲಿ ಶಾಲೆಯ ಪಾತ್ರದ ಜಾಗವನ್ನು ಅವು ತುಂಬಲಾಗುತ್ತದೆಯೇ..? ಎಲ್ಲಿ ಹೋದವೋ ನನ್ನ ವಿದ್ಯಾರ್ಥಿಗಳೊಂದಿಗೆ ಮುದ್ದಾಗಿ ಇರುತ್ತಿದ್ದ ಆ ದಿನಗಳು..ಸದ್ದೇ ಇರದೇ ಸುಮ್ಮನಿರುವ ಶಾಲೆ.ಕೈ ಕಾಲು ಕಟ್ಟಿ ಯಾರೋ ನನ್ನೊಬ್ಬಳನ್ನೇ ಇಲ್ಲಿ ಎಸೆದುಹೋದಂತೆ..ಸಂಜೆವರೆಗೆ ಹೇಗಿರಲಪ್ಪಾ ಚಿಂತೆ..ಗೇಟ್ ಹಾಕು,ಚಪ್ಪಲಿ ಸರಿಯಾಗಿಡು,ಕೈ ತೊಳಿ,ಸಾಲಾಗಿ ಹೋಗು ..ಮಗ್ಗಿ ಹೇಳು..ಕವಿತೆ ಬಾಯಿಪಾಠ ಆಯ್ತಾ? ಗಣಿತ ಮಾಡ್ಕೊಂಬಂದ್ಯಾ? ಎಲ್ಲ ಮಾತುಗಳು ಎದ್ದು ಗುಳೆ ಹೋದಂತೆ ಐದು ತಿಂಗಳ ಹಿಂದೆ.. ಅಂಗಳದಿಂದ ಖೋ ಸದ್ದು..ಯಾರೋ ಬಿದ್ದರು ಇನ್ಯಾರೋ ಕಿರುಚಿದರು ಪೆಟ್ಟಾಗದ್ದಿದ್ದರೂ ಟೀಚರ್ ಅಪ್ಪಿಕೊಂಡು ಸಮಾಧಾನಿಸಲಿ ಅನ್ನೋ ಆಸೆ..  ಟೀಚರ್ ಇವತ್ತು ಬುಧವಾರ ಡ್ರೈವರ್ ಎಂಕಟ್ರಮಣಣ್ಣನಿಗೆ ವಾರದ ರಜೆ.. ತಿಂಗಳಬೈಲು ಬಸ್ಸಿಗಿಂದು ಆಂದ್ಲೆಯ ಶಿಣ್ತಮ್ಮ ಬರ್ತಾನೆ..ಇಂವ ಚೂರು ಜಾಸ್ತಿ ಸ್ಪೀಡು.. ನೀವು ಐದು ನಿಮಿಷ ಮೊದಲೇ ಹೊರಡಿ.ಈ ಬಸ್ಸು ತಪ್ಪಿದರೆ ನಿಮಗೆ ಆರು ಗಂಟೆಯ ಮಾಬಗಿ ಬಸ್ಸು..ನಾವೆಲ್ಲ ಮನೆಗೆ ಹೋದಮೇಲೆ ನೀವು ಈ ಸುರಿಮಳೆಯಲ್ಲಿ ಒಬ್ಬರೇ ರಸ್ತೆಯಲ್ಲಿ ನಿಲ್ಲಬಾರದು...ಇಕ್ಕೊಳ್ಳಿ ಬ್ಯಾಗು..ಕೈಗೆ ಹಿಡಿಸಿ ಇನ್ನೇನು ದಬ್ಬೇ ಬಿಡುವ ಹಾಗೆ ನನ್ನ ಹೊರಗಟ್ಟಿ ಬೀಗ ಹಾಕಿ ಹೊರಡಿಸುತ್ತಿದ್ದರು ನನ್ನ ಮಕ್ಕಳು..ಅವರ ಆಜ್ಞಾಧಾರಕಿ ನಾನು.. ಕೋಲೆಬಸವಿ..ಅಯ್ಯೋ... ಅಳುವೇ ತುಟಿಗೆ ಬಂದು...... -ರೇಣುಕಾ ರಮಾನಂದ ವೃತ್ತಿಯಲ್ಲಿ ಶಿಕ್ಷಕಿಯಾದ ರೇಣುಕಾ ರಮಾನಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶೆಟಗೇರಿಯವರು. ಅವರ ಮೊದಲ ಕವಿತಾ ಸಂಕಲನ 'ಮೀನುಪೇಟೆಯ ತಿರುವು' ಇದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಮುಂಬೈನ ಶ್ರೀಮತಿ ಸುಶೀಲಾ ಶೆಟ್ಟಿ ಕಾವ್ಯ ಹಸ್ತಪ್ರತಿ ಪ್ರಶಸ್ತಿ, ಗುಲ್ಬರ್ಗಾ ಸೇಡಂನ ಮಾತೋಶ್ರೀ 'ಅಮ್ಮ' ಪ್ರಶಸ್ತಿ, ಹಾಸನದ ಮಾಣಿಕ್ಯ ಪ್ರಕಾಶನದ ಕಾವ್ಯಮಾಣಿಕ್ಯ ರಾಜ್ಯಪ್ರಶಸ್ತಿ, ಹರಿಹರದ ಸಾಹಿತ್ಯ ಸಂಗಮದ ಹರಿಹರಶ್ರೀ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಕೆ ವಿ ರತ್ನಮ್ಮ ದತ್ತಿ ಪ್ರಶಸ್ತಿಗಳು ದೊರೆತಿವೆ. ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘದಿಂದ೨೦೧೪ ಮತ್ತು ೨೦೧೫ ನೇ ಸಾಲಿನಲ್ಲಿ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ, ೨೦೧೪ ರ ಸಂಕ್ರಮಣ ಕಾವ್ಯ ಬಹುಮಾನ, ತುಷಾರ ಮಾಸಪತ್ರಿಕೆಯ ೨೦೧೯ ಸಾಹಿತ್ಯಾಂಜಲಿ ಕ್ಯಾಲಿಫೋರ್ನಿಯಾ ಕಥಾಸ್ಪರ್ಧೆ ಬಹುಮಾನ ಹಾಗೂ ಮುಂಬೈ ಗೋಕುಲವಾಣಿ ಪತ್ರಿಕೆ ಏರ್ಪಡಿಸಿದ ೨೦೨೦ ರ ಕಥಾಸ್ಪರ್ಧೆಯ ದ್ವಿತೀಯ ಬಹುಮಾನವನ್ನು ರೇಣುಕಾ ರಮಾನಂದರು ಪಡೆದಿದ್ದಾರೆ. ಹೀಗೆ ಕನ್ನಡದ ಭರವಸೆಯ ಬರಹಗಾರ್ತಿಯಾಗಿ ರೂಪುಗೊಂಡಿದ್ದಾರೆ - ಸಂಪಾದಕ

ಖಾಲಿ ಶಾಲೆಯ ಅಂಗಳದಿಂದ..
bottom of page