top of page

ಕೀರ್ತಿನಾಥ ಕುರ್ತಕೋಟಿಯವರು

ಕೀರ್ತಿನಾಥ ಕುರ್ತಕೋಟಿಯವರು ***""****************************** ಕನ್ನಡದ ಬಹಳ ಮಹತ್ವದ ಪ್ರಕಾಶನ ಸಂಸ್ಥೆಯೆನಿಸಿರುವ ಧಾರವಾಡದ ಮನೋಹರ ಗ್ರಂಥಮಾಲೆ ೧೯೫೯ ರಲ್ಲಿ ೨೫ ನೆಯ ವರ್ಷಕ್ಕೆ ಕಾಲಿಟ್ಟ ಸಂಭ್ರಮದ ಸಂದರ್ಭದಲ್ಲಿ ಅದರ ನೆನಪಿಗೆ ಕೀರ್ತಿಕಲಶವಿಟ್ಟವರು ಕೀರ್ತಿನಾಥ ಕುರ್ತಕೋಟಿಯವರು. ಅವರ ಸಂಪಾದಕತ್ವದಲ್ಲಿ ಆಗ ಹೊರಬಂದ " ನಡೆದು ಬಂದ ದಾರಿ" ಸಂಪುಟಗಳು ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳ ಸಮಗ್ರ ದರ್ಶನ ಮಾಡಿಕೊಡುವ ಮೂಲಕ ಕನ್ನಡದ ಒಂದು ಅಮೂಲ್ಯ ದಾಖಲೆಯಾಗಿ ಪರಿಣಮಿಸಿತು. ಅವು ಕೀರ್ತಿನಾಥ ಕುರ್ತಕೋಟಿಯವರ ಅಧ್ಯಯನದ ಆಳ ಅಗಲಗಳನ್ನು ಪರಿಚಯಿಸಿತಲ್ಲದೆ ಸಾಹಿತ್ಯಾಭ್ಯಾಸಿಗಳಿಗೆ ಸಾರ್ವಕಾಲಿಕ ಆಧಾರ ಗ್ರಂಥವಾಗಿ ಉಳಿದುಕೊಂಡವು. ಕನ್ನಡದ ಖ್ಯಾತ ವಿಮರ್ಶಕ ಕುರ್ತಕೋಟಿಯವರು ೧೯೨೮ ರ ಅಕ್ಟೋಬರ್ ೧೩ ರಂದು ಗದಗದಲ್ಲಿ ಜನಿಸಿ, ಗದಗ ಶಾಲೆಯಲ್ಲಿ ಅಧ್ಯಾಪಕರಾಗಿ ಪದವಿ ಪಡೆದ ನಂತರ ಆನಂದಕ್ಕೆ ತೆರಳಿ ಗುಜರಾತದ ಸರ್ದಾರ ಪಟೇಲ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡುವದರೊಂದಿಗೆ, ಕುಮಾರವ್ಯಾಸ ಮತ್ತು ಬೇಂದ್ರೆ ಪ್ರಭಾವಕ್ಕೊಳಗಾಗಿ ಕನ್ನಡ ಸಾಹಿತ್ಯದ ಅಗಾಧ ಅಧ್ಯಯನ ನಡೆಸಿ ಅಮೂಲ್ಯ ವಿಮರ್ಶಾ ಕೃತಿಗಳನ್ನು ರಚಿಸಿದರು. ಸಾಹಿತ್ಯದ ಎಲ್ಲ ಪ್ರಕಾರಗಳ ಬಗೆಗೂ ಪ್ರಭುತ್ವದಿಂದ ಬರೆಯಬಲ್ಲವರಾಗಿದ್ದ ಕುರ್ತಕೋಟಿಯವರ ವ್ಯಾಪಕವಾದ ವಿಮರ್ಶಾಸಾಹಿತ್ಯ ರಚನೆ ಕನ್ನಡಕ್ಕೆ ಅಪೂರ್ವ ಕೊಡುಗೆಯನಿಸಿದೆ. ಅವರ " ಉರಿಯ ನಾಲಗೆ" ಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ ದೊರಕಿದೆ. ಅವರು ನಾಟಕ, ಅನುವಾದ, ಕಾವ್ಯ, ವಿಚಾರ ವಿಮರ್ಶೆ, ಕಾದಂಬರಿ ಪ್ರಕಾರಗಳಲ್ಲೂ ಕೃಷಿ ನಡೆಸಿದ್ದಾರೆ. ಆ ಮನಿ ನಾಟಕ, ಸ್ವಪ್ನದರ್ಶಿ ಗೀತರೂಪಕಗಳ ಸಂಕಲನ, ರಾಜಸ್ಪರ್ಶ ಕಾದಂಬರಿ, ಭಾಸನ ಸ್ವಪ್ನ ವಾಸವದತ್ತೆ ಅನುವಾದ, ಶಂ. ಬಾ. ಜೋಶಿಯವರ ಮರಾಠಿ ಕೃತಿ " ಮರಾಠಿ ಸಂಸ್ಕೃತಿ: ಕೆಲವು ಸಮಸ್ಯೆಗಳು ಭಾಷಾಂತರ, ನವ್ಯಕಾವ್ಯ ಪ್ರಯೋಗ, ಯುಗಧರ್ಮ ಸಾಹಿತ್ಯದರ್ಶನ, ವಿಮರ್ಶೆಯ ವಿನಯ, ಸಂಸ್ಕೃತಿ ಸ್ಪಂದನ, ನೂರು ಮರ ನೂರು ಸ್ವರ, ಬಾರೊ ಸಾಧನಕೇರಿಗೆ, ಭೃಂಗದಾ ಬೆನ್ನೇರಿರಾಜಕೀಯ ಮತ್ತು ಧರ್ಮ, ಅರ್ಥಾಂತರ, ಪ್ರತ್ಯಾಭಿಜ್ಞಾನ, ಅಧ್ಯಯನ ಮತ್ತು ಪಾರಾಯಣ ಇತ್ಯಾದಿ ಕೃತಿಗಳೊಡನೆ " ಮನ್ವಂತರ" ನಿಯತಕಾಲಿಕವನ್ನೂ ಕೆಲಕಾಲ ನಡೆಸಿದರು. ಕುರ್ತಕೋಟಿಯವರು ಮನೋಹರ ಗ್ರಂಥಮಾಲೆ ಯ ಸಲಹೆಗಾರರಾಗಿ ಉತ್ತಮ ಗುಣಮೌಲ್ಯದ ಗ್ರಂಥಗಳು ಹೊರಬರುವಂತೆ ಮಾಡಿದರು. ಜಿ. ಬಿ. ಜೋಶಿಯವರ ( ಜಡಭರತ) ಈ ಗ್ರಂಥಮಾಲೆಯ ಅಟ್ಟವೆಂದರೆ ಅಂದು "ಸಾಹಿತಿಗಳ ಅಟ್ಟವೇ" ಆಗಿತ್ತು. ಹಲವು ಪ್ರಸಿದ್ಧ ಸಾಹಿತಿಗಳು ಅಲ್ಲಿ ಸೇರಿ ಸಾಹಿತ್ಯ ಚರ್ಚೆ ಮಾಡುತ್ತಿದ್ದರು. ಕುರ್ತಕೋಟಿಯವರು ಜ್ಞಾನ ಪೀಠ ಪ್ರಶಸ್ತಿ ಆಯ್ಕೆ ಸಮಿತಿ ಪ್ರತಿನಿಧಿಯೂ ಆಗಿದ್ದರು. ೨೦೦೩ ಜುಲೈ ತಿಂಗಳು ಕೀರ್ತಿನಾಥ ಕುರ್ತಕೋಟಿ ಯವರು ನಿಧನರಾದ ದಿನವೇ ಅವರ ಪತ್ನಿ ಸರಸ್ವತಿಯವರೂ ನಿಧನರಾದರು. ( ಇದು ಡಾ. ಶಂ. ಬಾ. ಜೋಶಿ ಮತ್ತು ಅವರ ಪತ್ನಿ ಒಂದೇ ದಿನ ನಿಧನರಾದದ್ದನ್ನು ನೆನಪಿಸುವಂತಾಯಿತು) ಅವರ ನಿಧನಾನಂತರ ಇನ್ನೊಬ್ಬ ಖ್ಯಾತ ವಿಮರ್ಶಕರಾದ ಡಾ. ಗಿರಡ್ಡಿ ಗೋವಿಂದರಾಯರ ಸಂಪಾದಕತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿಇಲಾಖೆಯಿಂದ ಕುರ್ತಕೋಟಿ ಯವರ ಸಮಗ್ರ ವಿಮರ್ಶಾ ಸಾಹಿತ್ಯದ ಸಂಗ್ರಹ ನಾಲ್ಕು ಸಂಪುಟಗಳಲ್ಲಿ ಹೊರಬಂದಿದೆ. ‌- ಎಲ್. ಎಸ್. ಶಾಸ್ತ್ರಿ ಕ್ರಿಯಾಶೀಲ ಲೇಖಕ ಎಲ್.ಎಸ್.ಶಾಸ್ತ್ರಿ ಅವರು ಪ್ರೊ.ಕೀರ್ತಿನಾಥ ಕುರ್ತಕೋಟಿ ಅವರ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ.ಡಾ.ಶ್ರೀಪಾದ ಶೆಟ್ಟಿ ಸಂಪಾದಕ

ಕೀರ್ತಿನಾಥ ಕುರ್ತಕೋಟಿಯವರು
bottom of page