top of page

ಕಾಯ್ಕಿಣಿ ಓಣಿಯ ಕತೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ನನಗೆ ಮತ್ತು ನಮ್ಮ ಸಮಕಾಲೀನ ಸಾಹಿತ್ಯ ಬಳಗದ ಯುವ ಪೀಳಿಗೆಗೆ ಈ ಓಣಿ ಚಿರಪರಿಚಿತ. ಸಾಹಿತ್ಯ ಕ್ಷೇತ್ರದಲ್ಲಿ ನಮ್ಮನ್ನೆಲ್ಲ ಪ್ರೋತ್ಸಾಹಿಸಿ ಬೆಳೆಸಿದವರಲ್ಲಿ ಗೌರೀಶ ಕಾಯ್ಕಿಣಿಯವರು , ಹಾಗೆಯೇ , ಪಾಂಡೇಶ್ವರರು, ಪ್ರೊ. ಬಿ. ಎಚ್. ಶ್ರೀಧರರು, ಸು. ರಂ. ಯಕ್ಕುಂಡಿಯವರು ಇವರೆಲ್ಲರ ನೆನಪನ್ನು ಮಾಡಿಕೊಳ್ಳಬೇಕಾಗುತ್ತದೆ. ಆಗೆಲ್ಲ ನಮ್ಮ ಸಾಹಿತ್ಯ ಬಳಗದವರು , ವಿಶೇಷವಾಗಿ ಗಂಗಾಧರ ಶಾಸ್ತ್ರಿ, ಗೋಪಾಲಕೃಷ್ಣ ಪಿ. ನಾಯಕ, ಭರತನಳ್ಳಿ ನಾಸು , ಆರ್.ವಿ.ಭಂಡಾರಿ, ಜಿ. ಎಸ್. ಅವಧಾನಿ, ನಾನು , ಆಗಾಗ ಗೋಕರ್ಣಕ್ಕೆ ಭೆಟ್ಟಿ ಕೊಡುತ್ತಿದ್ದವು. ಕೆಲವು ಸಲ 'ಮಹಾಬಲೇಶ್ವರ'ನ ದರ್ಶನವಾಗದಿದ್ದರೂ ನಮಗೆ 'ಗೌರೀಶ'ನ ದರ್ಶನ ಆಗಿಯೇ ಆಗುತ್ತಿತ್ತು.ಕಡಲ ತೀರದಲ್ಲಿದ್ದ ಅವರ ಮನೆ ಯಾವತ್ತೂ ಸಾಹಿತಿಗಳಿಂದ ತುಂಬಿರುತ್ತಿತ್ತು. ಸಾಹಿತ್ಯದ ಬಗ್ಗೆ ಚರ್ಚೆ ನಡೆಯುತ್ತಿತ್ತು‌ . ಕಿರಿಯರ ಬೆನ್ನು ಚಪ್ಪರಿಸಿ, ಹೊಗಳಿ ಬರೆಯಲು ಉತ್ತೇಜನ ನೀಡುತ್ತಿದ್ದ ಗೌರೀಶರ ಮತ್ತು ಶಾಂತಕ್ಕನವರ ಉಪಚಾರ ಲೆಕ್ಕವಿಲ್ಲದಷ್ಟು ಸಲ ಪಡೆದಿದ್ದೇವೆ. ಆಗಿನ್ನೂ ಜಯಂತರು ಸಣ್ಣ ವಯಸ್ಸಿನವರು. ಈಚೆಗೆ ಮೈಸೂರಿನಲ್ಲಿ ಭೆಟ್ಟಿಯಾದಾಗ ನಾನು ಅವರ ಮನೆಯ ಬಗ್ಗೆ ಕೇಳಿದ್ದೆ. ಆಗಾಗ ಹೋಗಿ ಬರುತ್ತಿರುತ್ತೇನೆ ಎಂದಿದ್ದರು. ತಂದೆಯಂತೆಯೇ ಪ್ರತಿಭಾವಂತರಾದರೂ ಅವರ ನೆರಳಾಗಿ ಬೆಳೆದವರಲ್ಲ. ಮೊದಲ ಕವನ ಸಂಕಲನಕ್ಕೇ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದವರು. ಪ್ರಖ್ಯಾತಿಗೆ ಬಂದ ನಂತರವೂ ತಮ್ಮ ಸರಳತೆಯನ್ನು ಉಳಿಸಿಕೊಂಡವರು. ಗೌರೀಶರ ವೈಶಿಷ್ಟ್ಯವೆಂದರೆ ಅವರು ಸಾಹಿತ್ಯದ ಕಾರ್ಯಕ್ರಮಕ್ಕೆ ಯಾರು ಎಲ್ಲಿ ಕರೆದರೂ ಪ್ರೀತಿಯಿಂದ ಬಂದು ಭಾಗವಹಿಸುತ್ತಿದ್ದರು. ಪ್ರಖರ ಶೈಲಿಯ , ಮೊನಚಾದ ಬರವಣಿಗೆಯ ಅವರು ಬಳಸುತ್ತಿದ್ದ ‌ಶಬ್ದಗಳು, ವಾಕ್ಯಗಳು ಅವರವೆ. ಅದು ಅನುಕರಣೆಗೆ ಸಿಗದಂತಹದು. ಜನಸೇವಕದ ಅವರ ‌ಬರೆಹಗಳನ್ನು ನಾವೆಲ್ಲ ೨೫ ವರ್ಷ ಓದಿ ಅದರ ರುಚಿ ಪಡೆದಿದ್ದೇವೆ. ಬಹಳ ದೊಡ್ಡ ವಿಮರ್ಶಕರಾಗಿದ್ದರೂ ಯಾರನ್ನೂ ನಿರುತ್ಸಾಹಗೊಳಿಸುವವರಾಗಿರಲಿಲ್ಲ. ಬದಲಿಗೆ ಕಿರಿಯರಾದ ನಾವು ಮಾಡಿದ ಸಣ್ಣ ಕೆಲಸವನ್ನೂ ಬಹಳ ದೊಡ್ಡದಾಗಿ ತೋರಿಸುವ ಹೃದಯ ವೈಶಾಲ್ಯ ಅವರಲ್ಲಿತ್ತು. ಅದಕ್ಕೆ ಒಂದು ಉದಾಹರಣೆ - ಗೋಕರ್ಣದಲ್ಲಿ ಒಮ್ಮೆ ನನ್ನ ಗೀತರಾಮಾಯಣ ಹಾಡುಗಾರಿಕೆ ಕಾರ್ಯಕ್ರಮ ಆಗಿತ್ತು. ಮರುವಾರ ಜನಸೇವಕದಲ್ಲಿ ಒಂದೂವರೆ ಪುಟದಷ್ಟು ಅದರ ಬಗ್ಗೆ ಲೇಖನ ಬರೆದಿದ್ದರು. ನಾನೆಷ್ಟರ ಮಟ್ಟಿಗೆ ಆ ಪ್ರಶಂಸೆಗೆ ಅರ್ಹನೋ ಹೇಳಲಾರೆ. ನನಗೆ ಸ್ವಲ್ಪ ಮುಜುಗರವೂ ಆಯಿತು. ಆದರೆ ನಮ್ಮಂಥವರನ್ನು ಅವರು ಯಾವ ರೀತಿ ಬೆನ್ನು ತಟ್ಟಿ ಬೆಳೆಸಬಯಸುತ್ತಿದ್ದರು ಎನ್ನುವುದನ್ನು ಇದರಿಂದ ಅರಿಯಬಹುದಾಗಿದೆ. ತಮಗಿಂತ ಕಿರಿಯ ಕವಿಗಳ ಕಾವ್ಯದ ಕುರಿತೂ ಅವರು ಪುಸ್ತಕ ಬರೆದಿದ್ದುಂಟು. ದೊಡ್ಡ ಸಾಹಿತಿಗಳಲ್ಲಿ ಸಾಮಾನ್ಯವಾಗಿ ಕಾಣದಂತಹ ಉದಾರ ಮನಸ್ಸು ಅವರದಾಗಿತ್ತು. ಬಹಳ ಹಿಂದೆ ನಾನು ಬರೆದ ಒಂದು ಚೌಪದಿ‌ ಇಂದು ಮತ್ತೆ ನೆನಪಿಸಿಕೊಳ್ಳುತ್ತಿದ್ದೇನೆ- ಗೌರೀಶರಿಹರೆಂದೆ ಗೋಕರ್ಣ ವಾಸಿ ಸಾಹಿತ್ಯಕ್ಷೇತ್ರ ಸಂದರ್ಶಕರ ಕಾಶಿ ಶಾಂತಿ ಸಹಧರ್ಮಿಣಿಯು ಪುತ್ರ ಜಯವಂತ ಇವರಿಂದ ಆಯ್ತು ಈ ಜಿಲ್ಲೆ ಪ್ರಖ್ಯಾತ! - ಎಲ್. ಎಸ್. ಶಾಸ್ತ್ರಿ ಹಿರಿಯರು ಬಹುಶ್ರುತರು ಆದ ಶ್ರೀ ಎಲ್.ಎಸ್.ಶಾಸ್ತ್ರಿ ಅವರು ಬರೆದ ಕಾಯ್ಕಿಣಿ ಓಣಿಯ ಕತೆ ನಿಮ್ಮ ಓದು ಮತ್ತು ಸ್ಪಂದನಕ್ಕಾಗಿ. ಡಾ.ಶ್ರೀಪಾದ ಶೆಟ್ಟಿ ಸಂ.ಆಲೋಚನೆ.ಕಾಂ

ಕಾಯ್ಕಿಣಿ ಓಣಿಯ ಕತೆ
bottom of page