top of page

ಕಬೀರ ಕಂಡಂತೆ... ೮೩

ಮನ ಶಾಂತವಾಗಿರೆ ಪಯಣ ಸುಂದರ.. ಜಗಮೆ ಬೈರಿ ಕೋಯ ನಹಿಂ, ಜೊ ಮನ ಶೀತಲ ಹೋಯ| ಯಾ ಆಯಾ ಕೊ ಡಾರಿ ದೇ, ದಯಾ ಕರೊ ಸಬ ಕೋಯ|| ಈ ಜಗತ್ತಿನಲ್ಲಿ ನಮ್ಮ ಮಿತ್ರರಾರು, ಶತೃಗಳಾರು ಎನ್ನುವ ಸಂಗತಿ ಇತರರ ಸ್ವಭಾವ, ವರ್ತನೆಗಳನ್ನು ಅವಲಂಬಿಸುವದರ ಜೊತೆಗೆ ನಾವೂ ಸಹ ಅದಕ್ಕೆ ಅಷ್ಟೇ ಕಾರಣರು ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಯಾವುದೊಇ ಕಾರಣಕ್ಕೆ ಪರಸ್ಪರರಲ್ಲಿ ಮತಭೇದ, ಕೋಪ, ನಿರಾಸೆ,ಅಪಮಾನ ಮುಂತಾದ ಭಾವನೆಗಳು ಮೂಡಬಹುದು. ಆದರೆ ಇವೇ ಮುಂದೆ ದ್ವೇಷ, ಶತೃತ್ವಗಳ ರೂಪ ತಳೆದು ಸಂಬಂಧ ಕಹಿಯಾಗಲು ಕಾರಣವಾಗುತ್ತದೆ. ಆದರೆ ಇಂಥ ಸಂದರ್ಭದಲ್ಲಿ ಇತರರಂತೆ ನಮ್ಮ ಜವಾಬ್ದಾರಿಯೂ ಅತ್ಯಂತ ಪ್ರಮುಖವಾಗಿದೆ. ಯಾವುದೊ ಕಹಿ ಘಟನೆ -ಗಳಿಗೆ ನಾವು ಹೇಗೆ ಪ್ರತಿಕ್ರಯಿಸುತ್ತೇವೆ ಎನ್ನುವದರ ಮೇಲೆಯೂ ಸಂಬಂಧಗಳು ಅವಲಂಬಿಸಿರುತ್ತವೆ. ನಮ್ಮವರು -ಪರಕೀಯರು, ಮಿತ್ರ - ಶತೃ ಮುಂತಾದ ಭಾವಗಳ ತಾಕಲಾಟದಲ್ಲಿ ನಮ್ಮ ಮನಸ್ಸು ಅಶಾಂತ -ಗೊಳ್ಳುತ್ತದೆ. ಆದರೆ ಇದರ ಪ್ರಮಾಣ ಅಥವಾ ತೀವ್ರತೆ ಎಷ್ಟ ಎನ್ನುವದು ಪ್ರತಿಯೊಬ್ಬರಲ್ಲಿ ಬೇರೆ ಬೇರೆಯಾಗಿಯೇ ಇರುತ್ತದೆ. ಈ ದೋಹೆಯಲ್ಲಿ, ಜಗದಲಿ ವೈರಿಗಳಿಲ್ಲ, ಮನವು ಶಾಂತಿಯಿಂದಿರೆ| ಪ್ರೀತಿ, ನಮ್ರತೆ ಬೆಳೆಸು, ಎಲ್ಲ ದಯೆ ತೋರುತ್ತಾರೆ|| ಎನ್ನುವ ಸಂತ ಕಬೀರರು ಹೇಳುತ್ತ, ನಮ್ಮ ಮನಸ್ಸು ಪ್ರಶಾಂತವಾಗಿದ್ದರೆ ಈ ಜಗತ್ತಿನಲ್ಲಿ ವೈರಿಗಳಾರೂ ಇರಲಾರರು ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಅಹಂಕಾರ ತ್ಯಾಗಮಾಡಿ ವಿನಮ್ರ ಭಾವದಿಂದ ವರ್ತಿಸಿದರೆ ಇತರರೂ ಸಹ ನಮ್ಮ ಮೇಲೆ ಪ್ರೇಮ ಭಾವದ ಮಳೆ ಸುರಿಸುವರು ಎಂಬುದು ಕಬೀರರ ಅಭಿಪ್ರಾಯ. ಟೀಕೆ, ನಿಂದನೆ, ದೂಷಣೆ, ತೆಗಳಿಕೆ ಮುಂತಾದವುಗಳಿಗೆ ಮನಸ್ಸನ್ನು ಕಲ್ಲಾಗಿಸಿಕೊಂಡರೆ ಮನಃಶಾಂತಿ ಸಿಕ್ಕೀತು‌ ಮಾನಸಿಕ ಅಶಾಂತಿ ಕೋಪ, ವೈರತ್ವಗಳಿಗೆ ಕಾರಣವಾಗುವದರಿಂದ ಮನವನ್ನು ಸದಾ ಶಾಂತವಾಗಿರಿಸುವದು ಅತ್ಯಗತ್ಯ.ಹೀಗಾದಾಗ ಆ ವ್ಯಕ್ತಿಗೆ ಮಿತ್ರರೂ ಅನೇಕ‌. ಇಂದಿನ ಕಾಲದಲ್ಲಿ ಪ್ರತಿಯಿಂದು ಕ್ಷಣವೂ ಅಶಾಂತಿ -ಯಿಂದ ಕೂಡಿದ್ದು ಶಾಂತಿ ಮರೀಚಿಕೆಯಾಗುತ್ತಿದೆ. ಇದರಿಂದ ಪರಸ್ಪರ ಸಂಬಂಧಗಳು ಹಳಸುತ್ತವೆ. ಆದರೆ ಮನೋನಿಗ್ರಹವೊಂದಿದ್ದರೆ ಎಂಥ ಕಠಿಣ ಪರಿಸ್ಥಿತಿಯನ್ನೂ ಸುಲಭವಾಗಿ ಎದುರಿಸಲು ಸಾಧ್ಯ. ಹಾಗಾಗಿ ಮನಸ್ಸನ್ನು ಸದಾ ಶಾಂತವಾಗಿಟ್ಟುಕೊಂಡು, ಪ್ರೀತಿ, ದಯೆ, ಕರುಣೆಯ ಭಾವದಿಂದ ನಡೆದಾಗ ಬದುಕ ಪಯಣ ಸರಳವಾದೀತು, ಸುಂದರ -ವಾದೀತು! ವಂದನೆಗೆ ಸೋಲದಿರು, ನಿಂದೆಗಳಿಗಂಜದಿರು ಹಿಂದಿನಿಂ ತೆಗಳಿ ನೀ ಮಂದೆಯಲಿ ಸೇರದಿರು | ಸಂದೇಹ, ಸಂಕುಚಿತತೆ ಸಂಬಂಧವ ಸುಟ್ಟೀತು ದ್ವಂದ್ವ ಬುದ್ಧಿಯ ಬಿಡು - ಶ್ರೀವೆಂಕಟ || ಶ್ರೀರಂಗ ಕಟ್ಟಿ ಯಲ್ಲಾಪುರ.

ಕಬೀರ ಕಂಡಂತೆ... ೮೩

©Alochane.com 

bottom of page