top of page

ಕಬೀರ ಕಂಡಂತೆ... ೭೯

ಮರಣಾನಂತರದ ಪಯಣಕ್ಕೆ ಬೇಕು ಪುಣ್ಯದ ಗಂಟು..! ಕಬೀರ ಸೋ ಧನ ಸಂಚಿಯೆ, ಜೊ ಆಗೆ ಕ್ಯೂಂ ಹೋಯಿ| ಸೀಸ ಚಡಾಯೆ ಪೋಟಲಿ, ಲೇ ಜಾತ ನ ದೇಖ್ಯಾ ಕೋಯಿ|| ಜಗತ್ತಿನಲ್ಲಿ ಸದಾ ಕಾಲ ಕಾಡುವದು ಕೀರ್ತಿ ಮತ್ತು ಸಂಪತ್ತಿನ ಮೋಹ.‌ ಮನುಷ್ಯ ತನ್ನ ಆಯುಷ್ಯವಿಡೀ ಹಗಲು-ರಾತ್ರಿ ಎನ್ನದೆ ಇವುಗಳ ಹಿಂದೆ ಓಡುತ್ತಲೇ ಇರುತ್ತಾನೆ. ಆದರೆ ಇಷ್ಟು ಕಷ್ಟಪಟ್ಟು ಗಳಿಸಿದ ಸಂಪತ್ತು ಆತನ ಮರಣದ ಬಳಿಕ ಜೊತೆ ಬರುವುದಿಲ್ಲ ಎಂಬುದು ಮಾತ್ರ ಕಟುಸತ್ಯ! ಮಾಮಮಾರ್ಗ ಹಿಡಿದು ಗಳಿಸಿದ ಸಂಪತ್ತು, ಜೀವಂತ ಇದ್ದಾಗಲೇ ಸಂತೋಷ ಸಮಾಧಾನಗಳನ್ನು ಕಿತ್ತು ಕೊಳ್ಳುತ್ತದೆ. ಅಲ್ಲದೇ ಒಳ್ಳೆಯ ದಾರಿಯಿಂದ ಗಳಿಸಿದ ಸಂಪತ್ತು ಮನಸ್ಸಿಗೆ ಸಮಾಧಾನ ತಂದರೂ ಇವು ಯಾವವೂ ವ್ಯಕ್ತಿಯ ಜೊತೆಗೆ ಆತನ ಮರಣದ ನಂತರ ಹೋಗುವದೇ ಇಲ್ಲ. "ಎಷ್ಟು ಗಳಿಸಿದರೂ ಏನು ಫಲ, ಒಂದಿಲ್ಲೊಂದು ದಿನ ಬರಿಗೈಯಲ್ಲಿ ಹೋಗುವದು ಇದ್ದೇ ಇದೆ" ಎಂಬ ವಾಸ್ತವ ಕೊನೆಗೊಮ್ಮೆ ಅರ್ಥವಾದೀತು. ಜೀವನ ಎದುರಿಗೆ ಇರಬೇಕಾದರೆ ಈ ಸತ್ಯ ಅರ್ಥವಾದರೆ, ಬದುಕನ್ನು ತಿದ್ದಿಕೊಳ್ಳಬಹುದು. ಆದರೆ ಜೀವನದ ಸತ್ಯ ಅರಿಯುವ, ಅದನ್ನು ಅನುಷ್ಠಾನಗೊಳಿಸಿ ಪಾವನರಾಗುವ ಮನೋಭಾವ ಇಲ್ಲದಿರುವದು ಅತ್ಯಂತ ವಿಷಾದನೀಯ ಸಂಗತಿ. ಜೀವನದಲ್ಲಿ ಸತ್ಕಾರ್ಯಗಳಲ್ಲಿ ತೊಡಗಿಕೊಂಡು ಪುಣ್ಯ ಗಳಿಸಲು ಮುಂದಾದರೆ ಅದೇ ಪುಣ್ಯ, ಪರಲೋಕ ಪಯಣಕ್ಕೆ ಬುತ್ತಿಯಾದೀತು! ಸಂತ ಕಬೀರರು ಮೆರಲಿನ ದೋಹೆಯಲ್ಲಿ, ಕಬೀರ ಗಳಿಸಿದ ಸಂಪತ್ತು, ಮುಂದೆ ಜೊತೆ ಬರುವದಿಲ್ಲ| ತಲೆಮೇಲೆ ಗಂಟು ಹೊತ್ತು, ನಡೆವವರ ಯಾರೂ ನೋಡಿಲ್ಲ|| ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಲೌಕಿಕ ಸಂಪತ್ತು ಈ ಲೋಕದಲ್ಲಿಯೇ ಉಳಿದರೆ, ದೈವಭಕ್ತಿ ಮತ್ತು ಸತ್ಕಾರ್ಯ -ಗಳಿಂದ ಪಡೆದ ಪುಣ್ಯ ಪರಲೋಕದಲ್ಲಿ ಜೊತೆಯಾಗುತ್ತದೆ. ಹಾಗಾಗಿ ಪುಣ್ಯ ಸಂಪಾದನೆ ಅಗತ್ಯ ಎಂದು ಸಾಧು-ಸಂತರು ಕಾಲಕಾಲಕ್ಕೆ ಎಚ್ಚರಿಸುತ್ತಲೇ ಬಂದಿದ್ದಾರೆ. ಜಗತ್ತನ್ನೇ ಗೆದ್ದ ಅಲೆಗ್ಸಾಂಡರ್, ತಾನು ಮರಣಿಸಿದಾಗ ಎರಡೂ ಕೈಗಳನ್ನು ಹೊರಗಿಟ್ಟು ತನ್ನ ಶವ ಹೂಳಲು ಕೇಳಿಕೊಂಡಿದ್ದ! ಇದರಿಂದ 'ಜಗತ್ತನ್ನು ಗೆದ್ದ ಸಾಮ್ರಾಟ, ಬರಿಗೈಯಲ್ಲಿ ತೆರಳಿದ' ಎಂಬ ಉದಾತ್ತ ಸಂದೇಶವನ್ನು ಜಗತ್ತಿಗೆ ಸಾರಿದ. ಬದುಕಲು ಸಂಪತ್ತು ಅವಶ್ಯವಾದರೂ ಮುಂದಿನ ಪಯಣಕ್ಕೆ ಪುಣ್ಯದ ಗಂಟು ಸಿದ್ಧಪಡಿಸಿಕೊಳ್ಳುವದು ಅಷ್ಟೇ ಮುಖ್ಯ.‌ಈ ಹಿನ್ನೆಲೆಯಲ್ಲಿ ಧನದಾಹ ಕಡಿಮೆ ಮಾಡಿಕೊಂಡು ಸತ್ಮರ್ಮ -ಗಳಲ್ಲಿ ತೊಡಗಿದರೆ ಸಂತಸ, ಸಮಾಧಾನಗಳು ಬದುಕನ್ನು ಸಿಂಗರಿಸುವದರಲ್ಲಿ ಯಾವುದೇ ಸಂದೇಹವಿಲ್ಲ. ಗಾಡಿ, ಕುದುರೆ, ರಾಜ್ಯಕೋಶ ಇದ್ದೊಡೇನು? ಹಿಡಿಯಕ್ಕಿ, ಆರಡಿ ಜಾಗ ಸಾಕು ಬದುಕಿಂಗೆ| ಸಿರಿ ವೈಭೋಗಗಳ ನೆಚ್ಚಿ ಕೆಡದಿರು ಮರುಳೆ ಅರಿತುಕೊ ನಿಜಪಥವ - ಶ್ರೀವೆಂಕಟ || ಶ್ರೀರಂಗ ಕಟ್ಟಿ ಯಲ್ಲಾಪುರ.

ಕಬೀರ ಕಂಡಂತೆ... ೭೯

©Alochane.com 

bottom of page