ಕಬೀರ ಕಂಡಂತೆ...೮೦
ದೈವ ಸ್ಮರಣೆಯಿಂದ ದುರಿತಗಳು ದೂರ... ಸುಮಿರನ ಸೆ ಸುಖ ಹೋತ ಹೈ, ಸುಮಿರನ ಸೆ ದುಃಖ ಜಾಯ| ಕಹೈ ಕಬೀರ ಸುಮಿರನ ಕಿಯೆ, ಸಾಂಯಿ ಮಾಂಹಿ ಸಮಾಯ || ಜೀವನ ಎಂಬುದು ಸುಖ-ದುಃಖಗಳ ಮಿಶ್ರಣ. ಈ ಕಾಲಚಕ್ರ -ದಲ್ಲಿ ಸುಖದ ನಂತರ ದುಃಖ ಮತ್ತು ದುಃಖದ ನಂತರ ಸುಖ ಬಂದೇ ಬರುತ್ತದೆ. ಹೀಗಿರುವಾಗ ಕೆಲವರು ಸುಖದ ಅಮಲಿ -ನಲ್ಲಿ ತಮ್ಮನ್ನೇ ಮರೆತಂತೆ ವರ್ತಿಸುತ್ತ ವಾಸ್ತವದಿಂದ ವಿಮುಖರಾಗುತ್ತಾರೆ. ಆದರೆ ಸುಖ&ದುಃಖಗಳ ಈ ಪಯಣದಲ್ಲಿ ಸದಾ ಸಂಭಾಳಿಸಿಕೊಂಡು ಸ್ಥಿತಪ್ರಜ್ಞರಾಗಿ ಜೀವನ ಸಾಗಿಸಿದರೆ ಈ ಕಾಲಚಕ್ರ ಅಷ್ಟಾಗಿ ಬಾಧಿಸದು. ದುಃಖದ ತಾಪ ಮರೆಯಲು ಈಶ್ವರ ಭಕ್ತಿ, ಪ್ರಾರ್ಥನೆ, ಸಾಧನೆಗಳಲ್ಲಿ ತೊಡಗುವದು ಅತ್ಯಂತ ಅವಶ್ಯ. ಕಷ್ಟದ ಸಮಯದಲ್ಲಿ ವಿಚಲಿತಗೊಂಡ ಮನಸ್ಸಿಗೆ ಶಕ್ತಿ ತುಂಬಲು ಮತ್ತು ಮನಸ್ಸಿನ ಏಕಾಗ್ರತೆ ಸಾಧಿಸಲು ಪ್ರಾರ್ಥನೆ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ಆದರೆ ಪ್ರಾರ್ಥನೆ ಎಂದರೆ ದೇವರ ಎದುರು ಬೇಡಿಕೆಗಳ ಪಟ್ಟಿ ಸಲ್ಲಿಸುವದಲ್ಲ. ಈ ಹಿನ್ನೆಲೆಯಲ್ಲಿ ಪ್ರಾರ್ಥನೆಗೆ ಅಪಾರ ಶಕ್ತಿಯಿದೆ ಎಂಬ ಸತ್ಯವನ್ನು ಸಂತ ಕಬೀರರು ಈ ದೋಹೆಯಲ್ಲಿ ಹೇಳಿದ್ದಾರೆ. ಸ್ಮರಣೆಯಿಂದ ಸಿಗುವದು ಸುಖ, ಜಪಿಸಲು ದುಃಖ ದೂರ| ಸದಾ ಪ್ರಾರ್ಥನೆ ಮಾಡಲು, ಭಕ್ತ, ಭಗವಂತನ ಹತ್ತಿರ|| ಎಂದು ಹೇಳುತ್ತ ಭಕ್ತಿ ಸಹಿತವಾದ ಪ್ರಾರ್ಥನೆಯಿಂದ ಮನಸ್ಸಿಗೆ ಸಿಗುವ ಸಂತೋಷ, ಸಮಾಧಾನಗಳು ದುಃಖ ದೂರನಾಡುತ್ತವೆ ಎಂದಿದ್ದಾರೆ. ಪ್ರಾರ್ಥನೆಯಲ್ಲಿ ಮೈಮರೆತ ಭಕ್ತ, ಕೊನೆಗೊಮ್ಮೆ ಭಗವಂತನೊಂದಿಗೆ ಲೀನವಾಗುತ್ತಾನೆ ಎಂಬುದು ಕಬೀರರ ಸ್ಪಷ್ಟ ನುಡಿ. ಈಶ್ವರ ಭಕ್ತಿ, ಕಾಯಕ ಭಕ್ತಿ ವಿಚಾರ ಭಕ್ತಿ ಮುಂತಾಗಿ ಯಾವುದೇ ರೀತಿಯ ಭಕ್ತಿಯಲ್ಲಿ ತಲ್ಲೀನನಾದ ಭಕ್ತನಿಗೆ ಸುಖ, ದುಃಖಗಳು ಬಾಧಿಸಲಾರವು! ಜಿವನ ಪಯಣದಲಗಲಿ ಬಂದು ಹೋಗುವ ಸುಜಕ, ದುಃಖ -ಗಳಿಗೆಲ್ಲ ಅವುಗಳದ್ದೇ ಆದ ಕಾರಣಗಳಿರುತ್ತವೆ.ಸುಖ- ದುಃಖಘಳೆಂಬ ಅಲೆಗಳಿಗೆ ತಲೆಕೊಟ್ಟಾಗ, ಒಂದು ಅಲೆಯಿರಲಿ, ಇನ್ನೊಂದು ಬೇಡ ಎನ್ನುವಂತಿಲ್ಲ. "ಬಂದದ್ದೆಲ್ಲ ಬರಲಿ, ಗೋವಿಂದನ ದಯೆ ಒಂದಿರಲಿ" ಎಂಬ ದಾಸವಾಣಿ -ಯಂತೆ ನಡೆದುಕೊಳ್ಳುವದು ಅಗತ್ಯ. ಭಗವದ್ಗೀತೆಯ ನುಡಿಯಂತೆ, ಸುಖ ಮತ್ತು ದುಃಖಗಳನ್ನು ಸಮದೃಷ್ಟಿಯಿಂದ ಕಾಣಬಲ್ಲ ತಿಳುವಳಿಕೆ ಮತ್ತು ಧೈರ್ಯ ಇದ್ದ ವ್ಯಕ್ತಿ ಸಂಸಾರ ಬಂಧನಕ್ಕೆ ಸಿಲುಕಲಾರ. ಇಂಥ ಸ್ಥಿತಪ್ರಜ್ಞತಾ ಭಾವದಿಂದ ಮನುಷ್ಯ ಈ ಸಂಸಾರ ಬಂಧನದಿಂದ ಮುಕ್ತನಾಗಿ ಮೋಕ್ಷ ಹೊಂದಲು ಸಾಧ್ಯ. ದೈವಭಯ ಧಾರ್ಮಿಕತೆಯಲಿ ಎಂದಿಗೂ ಸಲ್ಲ ದೇವನೊಲುಮೆಗೆ ಸಮರ್ಪಣೆಯೆ ಸಾಕಲ್ಲ?| ದೈವ-ಭಕ್ತನ ನಡುವೆ ಪ್ರೀತಿಯ ಅನುಬಂಧ ದೈವ, ಭಕ್ತರಾಧೀನ - ಶ್ರೀವೆಂಕಟ || ಶ್ರೀರಂಗ ಕಟ್ಟಿ ಯಲ್ಲಾಪುರ.