ಕಬೀರ ಕಂಡಂತೆ...೫೦
ತನು ಬೀಳುವ ಮುನ್ನ ಸುಜ್ಞಾನದೆಡೆಗೆ ನಡೆ...! ಜೀವನ ಕೋಯ ಸಮಝೆ ನಾಹಿ, ಮುವಾ ನ ಕಹ ಸಂದೇಶ | ತನ ಮನ ಸೆ ಪರಿಚಯ ನಾಹಿ, ತಾಕೊ ಕ್ಯಾ ಉಪದೇಶ|| ಸಮಾಜದಲ್ಲಿ ಒಳ್ಳೆಯ ಸಂದೇಶ, ವಿಚಾರಗಳನ್ನು ಹಂಚುವ ಜನರಿದ್ದರೂ ಸಹ ಅವುಗಳನ್ನು ಕೇಳುವ ತಾಳ್ಮೆ, ವ್ಯವಧಾನ ಯಾರಿಗಿದೆ? ಮತ್ತು ಕೇಳುವವರೆ ಇಲ್ಲದ ಮೇಲೆ ಹೇಳಿ ಏನು ಪ್ರಯೋಜನ? ಅನೇಕ ಪ್ರಕಾರದ ಜ್ಞಾನ, ಮಾಹಿತಿಗಳನ್ನು ಸಕಾಲದಲ್ಲಿ ಸ್ವೀಕರಿಸಿದಾಗ ಮಾತ್ರ ಅದರ ಪ್ರಯೋಜನ ಕಂಡು ಬಂದೀತು. ಇಂತ ಸಚ್ಚಿಂತನಗಳನ್ನು ಕೇಳಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಎಷ್ಟೋ ಸಮಸ್ಯೆ -ಗಳಿಗೆ ಪರಿಹಾರ ದೊರಕೀತು. ಯೌವನ ಅಥವಾ ಮಧ್ಯ ವಯಸ್ಸಿನ ದಿನಗಳಲ್ಲಿ ಒಳ್ಳೆಯ ವಿಚಾರಗಳನ್ನು ಕೇಳಿಸಿಕೊಂಡರೆ ಬದುಕನ್ನು ಸಕಾರಾತ್ಮಕವಾಗಿ ಕಟ್ಟಲು ಸಾಧ್ಯವಾದೀತು. ವೃದ್ಧರಾದ ಮೇಲೆ ಜ್ಞಾನ ಸಂಗ್ರಹಕ್ಕೆ ತೊಡಗಿದರೆ ಅದರ ಅನುಷ್ಠಾನ ಬಹಳ ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ, ಯೋಗ್ಯ ಸಮಯದಲ್ಲಿ ಸೂಕ್ತ ವಿಚಾರಗಳ ತಿಳುವಳಿಕೆ ಅಗತ್ಯ. ಸಂತ ಕಬೀರರು ಮೇಲಿನ ದೋಹೆಯಲ್ಲಿ , "ಜೀವನದ ಅರ್ಥ ಅರಿಯುವವರಿಲ್ಲ, ಸತ್ತವರಿಗಿಲ್ಲ ಸಂದೇಶ| ತನು-ಮನದಲಿ ಎಚ್ಚರವಿಲ್ಲ, ಅಂಥವರಿಗೆ ವ್ಯರ್ಥ ಉಪದೇಶ|| ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಅನೇಕ ಜನರು ಆಯುಷ್ಯದ ಪ್ರಮುಖ ಕಾಲಘಟ್ಟಗಳಲ್ಲಿ ಜ್ಞಾನ ಸಂಪಾದನೆಯಲ್ಲಿ ತೊಡಗದೆ ವೃಥಾ ಕಾಲಹರಣ ಮಾಡುತ್ತಾರೆ. ಸದ್ವಿಚಾರ, ಸತ್ಸಂಗ ಮುಂತಾದವುಗಳು ವೃದ್ಧರಿಗೆ ಎಂದು ಉಡಾಫೆಯ ಮಾತನಾಡಿದರೆ ನಷ್ಟ ತಪ್ಪಿದ್ದಲ್ಲ. ಇಂಥ ವ್ಯಕ್ತಿಗಳು ಸಾಯುವ ಅವಸ್ಥೆ ತಲುಪಿದಾಗ ಯಾರೂ ಅವರಿಗೆ ಉಪದೇಶ ಮಾಡುವ ಮನಸ್ಸು ಮಾಡುವದಿಲ್ಲ. ಜೀವನದ ಅರ್ಥ ತಿಳಿಯಲು ಪ್ರುತ್ನಿಸದವರು ಇದ್ದೂ ಸತ್ತಂತೆ ಎಂದು ಹೇಳುವ ಕಬೀರರು, ತನು - ಮನಗಳ ಸ್ವಾಸ್ಥ್ಯವಿಲ್ಲದೆ, ಎಚ್ಚರ ತಪ್ಪಿದವರಿಗೆ ಉಪದೇಶದಿಂದ ಏನು ಲಾಭ? ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ದಾಸವರೇಣ್ಯರು, " ಕಿವಿ ಕೇಳಿಸದ ಮುನ್ನ, ಕಣ್ಣು ಕಾಣಿಸದ ಮುನ್ನ, ಮತಿ ಭೃಷ್ಟವಾಗುವ ಮುನ್ನ ಹರಿನಾಮ ಭಜಿಸಿರೊ" ಎಂದರೆ, ಬಸವಣ್ಣ ನವರು, " ನೆರೆ ಕೆನ್ನೆಗೆ, ತೆರೆಗಲ್ಲಕೆ, ಶರೀರ ಗೂಡುವೋಗದ ಮುನ್ನ, ಹಲ್ಲು ಹೋಗಿ, ಬೆನ್ನುಬಾಗಿ, ಅನ್ಯರಿಗೆ ಹಂಗಾಗದ ಮುನ್ನ,ಕಾಲಮೇಲೆ ಕೈಯನಿಟ್ಟು ಕೋಲು ಹಿಡಿಯದ ಮುನ್ನ, ಮುಪ್ಪಿಂದೊಪ್ಪ ವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ, ಪೂಜಿಸೊ ಕೂಡಲಸಂಗಮ ದೇವನ ಎಂದು ಎಚ್ಚರಿಕೆಯ ಮೌಲಿಕ ಸಂದೇಶ ನೀಡಿದ್ದಾರೆ. ಹಾಗಾಗಿ ಮೈ, ಮನಸ್ಸುಗಳು ಗಟ್ಟಿಯಾಗಿರಬೇಕಾದರೆ ಸುಜ್ಞಾನ ಗಳಿಸಿದರೆ ಬದುಕಿಗೆ ಹಿತವಾದೀತು. ತನು-ಮನಗಳೆರಡು ದೇವ ದೇವನ ಕೊಡುಗೆ ತನು ಬೀಳುವ ಮುನ್ನ, ಮತಿ ಮಾಸುವ ಮುನ್ನ| ಸುಜ್ಞಾನ ಗಳಿಸುತಲೆ ಮುಕ್ತಿ ಮಾರ್ಗದಿ ಸಾಗು ಅಜ್ಞಾನಿಯಾಗದಿರು - ಶ್ರೀವೆಂಕಟ || ಶ್ರೀರಂಗ ಕಟ್ಟಿ ಯಲ್ಲಾಪುರ.