top of page

ಕಬೀರ ಕಂಡಂತೆ.. ೭೫

ಪ್ರೀತಿ, ಪ್ರೇಮದ ಸೆಲೆ ಜೀವನಾಧಾರ... ಜಹಾಂ ಪ್ರೇಮ ತಹಂ ನೇಮ ನಹಿ, ತಹಾಂ ನ ಬುದ್ಧಿ ವ್ಯವಹಾರ| ಪ್ರೇಮ ಮಗನ ಜಬ ಮನ ಭಯಾ, ಕೌನ ಗಿನೆ ತಿಥಿ ವಾರ|| "ಪ್ರೇಮ ಮತ್ತು ಸಮರದಲ್ಲಿ ಎಲ್ಲವೂ ಸರಿ" ಎಂಬ ಆಂಗ್ಲ ಗಾದೆ ಜನಜನಿತವಾಗಿದೆ. ಎಷ್ಟು ವಿರೋಧವಾದರೂ, ನೋವು, ಯಾತನೆಗಳು ಎದುರಾದರೂ ನಿಷ್ಕಳಂಕವಾಗಿ ಪರಸ್ಪರರನ್ನು ಪ್ರೀತಿಸುವ ಪ್ರೇಮಿಗಳು ಎಲ್ಲದಕ್ಕೂ ಸಿದ್ಧರಾಗಿಬಿಡುತ್ತಾರೆ. ಮೃದು ಸ್ವಭಾವದ ಪ್ರೇಮಿಗಳು ಅದು ಹೇಗೆ ಕಠಿಣ ಪರಿಸ್ಥಿತಿ ಎದುರಿಸಲು ಸಜ್ಜಾಗುತ್ತಾರೆ ಎಂಬ ಸಂಗತಿ ಆಶ್ಚರ್ಯ ಹುಟ್ಟುಸಿದರೂ ಅದುವೇ ಸತ್ಯ. ಇಲ್ಲಿ ಯಾವುದೇ ಯುಕ್ತಿ, ತರ್ಕಗಳಿಗೂ ಅವಕಾಶ ಇರಲಾರದು.‌ ಪ್ರೇಮಪಾಶದಲ್ಲಿ ಸಿಲುಕಿದ ಪ್ರೇಮಿಗಳಿಗೆ ಪರಸ್ಪರ ತನ್ಮಯತೆ, ಆಸಕ್ತಿಗಳು ಹೆಚ್ಚಾಗುವ ಕಾರಣ ಪ್ರೇಮ ಅಳತೆ ಮೀರಿ ಬೆಳೆದುಬಿಡುತ್ತದೆ. ಹಗಲು-ರಾತ್ರಿಗಳೆನ್ನದೆ ಕಷ್ಟ- ಸುಖ ಎನ್ನದೆ ಎರಡು ದೇಹ ಒಂದು ಜೀವ ಎಂಬ ಭಾವದೊಂದಿಗೆ ಪರಸ್ಪರ ಬಿಡಿಸಲಾಗದ ಬಾಂಧವ್ಯದಲ್ಲಿ ಅವರು ಬೆಸೆದು -ಕೊಳ್ಳುತ್ತಾರೆ. ಇಂಥವರಿಗೆ ಯಾವುದೇ ನಿಯಮ, ನಿಬಂಧನೆಗಳು, ಜಾತಿ ಮತ ಅಂತಸ್ತಿನ ಗಡಿಗಳು ಎಂದಿಗೂ ಬಾಧಿಸಲಾರವು. ಮನುಕುಲದ ಮೇಲೆ, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳ ಮೇಲೆ ಒಟ್ಟಾರೆಯಾಗಿ ಸೃಷ್ಟಿಯ ಪ್ರತಿಯೊಂದು ಜೀವಿಗಳ ಮೇಲೂ ಸಾಧು, ಸಂತರು ಸಮನ್ವಯ ದೃಷ್ಟಿಯಿಂದ ಪ್ರೀತಿ ಮಾಡುತ್ತಲೇ ಬಂದಿದ್ದಾರೆ. ಗೌತಮ ಬುದ್ಧ, ರಾಮಕೃಷ್ಣ ಪರಮಹಂಸ, ವಿವೇಕಾನಂದ ಮುಂತಾದವರು ಸ್ವತಃ ಪ್ರೇಮ ಯಾತ್ರಿಕರಾಗಿ ನಡೆದು ಸಮಾಜಕ್ಕೆ ಅಮೂಲ್ಯ ಸಂದೇಶ, ಮಾರ್ಗದರ್ಶನ ನೀಡಿದ್ದಾರೆ. "ಪ್ರೇಮಭಾವಿಲ್ಲದೆ ಬದುಕಿಲ್ಲ" ಎಂಬ ಸತ್ಯವನ್ನು ಅನೇಕ ದಾರ್ಶನಿಕರು ಸಾರಿ ಸಾರಿ ಹೇಳಿದ್ದಾರೆ. ಪ್ರೇಮವಿದ್ದರೆ ಅಲ್ಲಿ ನೇಮವಿಲ್ಲ, ಇಲ್ಲ ಬುದ್ಧಿ, ವ್ಯವಹಾರ| ಪ್ರೇಮದಿ ಮನ ಮಗ್ನವಾಗಿರೆ, ಲೆಕ್ಕಿಸರು ತಿಥಿ, ವಾರ|| ಎಂದು ಸಂತ ಕಬೀರರು, ನೈಜ ಪ್ರೇಮದ ದರ್ಶನ ಮಾಡಿಸಿದ್ದಾರೆ. ಪ್ರೇಮ ವ್ಯವಹಾರಗಳು ಹೃದಯಕ್ಕೆ ಸಂಬಂಧಿಸಿದ್ದರಿಂದ ಅವು ಬುದ್ಧಿಗೆ ಎಟುಕಲು ಸಾಧ್ಯವಿಲ್ಲ. ಈ ರೀತಿ ಪ್ರೇಮಧ್ಯಾನದಲ್ಲಿ ಮುಳುಗಿದ ವ್ಯಕ್ತಿಗೆ ತಿಥಿ ವಾರಗಳ ಲೆಕ್ಕವಿಲ್ಲ, ಮುಹೂರ್ತ, ಗ್ರಹಗಳ ಗೊಡವೆಯಿಲ್ಲ. ಅದೇ ರೀತಿ ತಂದೆ, ತಾಯಿಯರು ಮಕ್ಕಳನ್ನು ಪ್ರೀತಿಸುವಾಗ ತಿಥಿ, ವಾರ, ನಕ್ಷತ್ರಗಳ ಲೆಕ್ಕ ಇಡುತ್ತಾರೆಯೆ? ಹಾಗೆಯೇ ಭಗವಂತನ ಮೇಲಿನ ಪ್ರೀತಿಗೂ ಯಾವುದೇ ಕಟ್ಟಳೆಗಳಿಲ್ಲ ಎಂದು ಮೇಲಿನ ದೋಹೆಯಲ್ಲಿ ಕಬೀರರು ಹೇಳಿದ್ದಾರೆ. ಪ್ರೀತಿ, ಪ್ರೇಮವೆಂಬುದು ಜೀವನದ ಆಧಾರ ಪ್ರತಿಫಲವ ಬಯಸದ ಪ್ರೀತಿ ಸದಾ ಅಮರ | ಪಾಲಕರ ಕರುಳು ಲೆಕ್ಕಿಸದು ತಿಥಿ, ವಾರಗಳ ಪಾಲಿಸು ಹರಿಪ್ರೀತಿ - ಶ್ರೀವೆಂಕಟ|| ಶ್ರೀರಂಗ ಕಟ್ಟಿ ಯಲ್ಲಾಪುರ.

ಕಬೀರ ಕಂಡಂತೆ.. ೭೫
bottom of page