top of page

ಕಬೀರ ಕಂಡಂತೆ.. ೨೧

ಸಾವೆಂಬುದು ಸಹಜ ಸತ್ಯ..! ನವದ್ವಾರದ ಪಂಜರದಲಿ ಇರುವ ಹಕ್ಕಿ ಯಾವುದು?/ ಅದು ಒಳಗಿದ್ದರೆ ಅಚ್ಚರಿ, ಹಾರಿದರೇನು ವಿಶೇಷ?// "ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ", " ಜಾತಸ್ಯ ಮರಣಂ ಧೃವಂ" ಎಂಬ ಉಕ್ತಿಗಳು ಹುಟ್ಟಿದ ಜೀವಿಗೆ ಸಾವು ಕಟ್ಟಿಟ್ಟ ಬುತ್ತಿ ಎಂಬುದನ್ನು ಸಾರುತ್ತವೆ. ಉದಯಿಸಿದ ಸೂರ್ಯ ಸಂಜೆ‌ ಅಸ್ತನಾಗುವಂತೆ, ಸಾವು ಎಂಬುದು ಕಟು ಸತ್ಯ. ಇದೇ ಪ್ರಕೃತಿಯ ನಿಯಮ. ಇಲ್ಲಿ ಯಾರೂ ಚಿರಂಜೀವಿಗಳಲ್ಲ ಎಂಬ ಸತ್ಯವನ್ನು ಅರಿತಾಗ ಮಾತ್ರ ಮೃತ್ಯವಿನ ಭಯವಾಗಲೀ, ದುಃಖ ವಾಗಲೀ ಕಾಡುವದಿಲ್ಲ. ಇಡೀ ಬ್ರಹ್ಮಾಂಡವೇ ಕಾಲ ಚಕ್ರದ ನಿಯತಿಗೆ ಒಳಪಟ್ಟಿರಬೇಕಾದರೆ ಅದರಲ್ಲಿರುವ ಅಣು ಸಮಾನ ಜೀವಿಗಳಿಗೂ ಈ ನಿಯಮ ಅನ್ವಯಿಸುತ್ತದೆ. ಋತು ಬದಲಾದಂತೆ ಸಸಿಗಳು ಚಿಗಿತು, ಹಸಿರಾಗಿ ಮುಂದೊಂದು ದಿನ ಹಣ್ಣಾದ ಎಲೆಗಳು ಮಣ್ಣಾಗುತ್ತವೆ. ಇದೇ ಸೃಷ್ಟಿಯ ತತ್ವ. ಈ ವಾಸ್ತವ ಅರಿತು ನಡೆದವನಿಗೆ ಬದುಕು ತೀರ್ಥಯಾತ್ರೆಯಂತೆ ಕಂಡೀತು! ಸಾವು ಎಂಬುದು ಸಹಜ ಸತ್ಯ ಎಂದರಿತ ಸಾಧು, ಸಂತರು, ಋಷಿ ಮುನಿಗಳು, ಸಾವಿನ ನಂತರದ ರಹಸ್ಯವನ್ನು ಕಂಡುಕೊಳ್ಳಲು ತಪಸ್ಸನ್ನೇ ಮಾಡಿದ ದೃಷ್ಟಾಂತಗಳು ನಮ್ಮಲ್ಲಿವೆ. ಸಾವಿನ ರಹಸ್ಯ ತಿಳಿದ ರಾಜಕುಮಾರ ಸಿದ್ಧಾರ್ಥ ಕೊನೆಗೆ ಬುದ್ಧನಾದ. ಅಧ್ಯಾತ್ಮ ಜೀವಿಗಳು ಸಾವನ್ನು ಸಹಜವಾಗಿ ಸ್ವೀಕರಿಸಿದರೆ, ಲೌಕಿಕರು ಅದರ ಬಗ್ಗೆ ಭಯ, ದುಃಖ ಬೆಳೆಸಿಕೊಂಡಿರುತ್ತಾರೆ. "ಶರೀರ ವೆಂಬುದು ನವದ್ವಾರಗಳಿದ್ದ ಪಂಜರದಂತೆ, ಆತ್ಮ ಎಂಬ ಪಕ್ಷಿ ಅದರಲ್ಲಿ ವಾಸವಾಗಿದೆ" ಎಂದಿರುವ ಸಂತ ಕಬೀರರು, ಆ ಪಕ್ಷಿ ಇಲ್ಲಿಂದ ಹಾರಿ ಹೋಗುವದರಲ್ಲಿ ಯಾವ ವಿಶೇಷತೆಯೂ ಇಲ್ಲ ಎಂದಿದ್ದಾರೆ. ಬಂಧನ ರಹಿತ ಮತ್ತು ಸಾವಿಗೆ ಅತೀತವಾದ ಆತ್ಮ, ಶರೀರದ ಪಂಜರದಲ್ಲಿ ಹೇಗೆ ಬಂದಿಯಾಗಿ ಉಳಿದೀತು? ಎಂದು ಅವರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಭಗವಂತ ನೀಡಿದ ಆಯುಷ್ಯವನ್ನೇ ಮಹಾಪ್ರಸಾದವೆಂದು ಅರಿತು ನಡೆದಾಗ ಯಾವ ದುಃಖವೂ ಎದುರಾಗದು. ಗೋಡೆ ಬರಹದಷ್ಟೇ ನಿಚ್ಚಳವಾದ ಸಾವಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇದ್ದಷ್ಟು ದಿನ "ಪರೋಪಕಾರಾಯ ಮಿದಂ ಶರೀರಂ" ಎಂಬ ತತ್ವವನ್ನು ಅನುಸರಿಸಿ ನಡೆದರೆ ಶಾಂತಿ, ಸಮಾಧಾನ ನಮ್ಮದಾದೀತು. ಮೃತ್ಯುವನು ಅರಿತವಗೆ ಮರಣ ಭಯವಿಲ್ಲ ಸತ್ಯಾನ್ವೇಷಿಗೆ ಮೋಹಪಾಶದ ಬಂಧನವಿಲ್ಲ/ ಅಂತರಾತ್ಮವೆ ಗುರು-ಕರ್ತೃ ಬದುಕ ಯಜ್ಞಕೆ ಮಿಥ್ಯಾ ಶರೀರ ಸಮಿತ್ತು - ಶ್ರೀವೆಂಕಟ // ಶ್ರೀರಂಗ ಕಟ್ಟಿ ಯಲ್ಲಾಪುರ.

ಕಬೀರ ಕಂಡಂತೆ.. ೨೧

©Alochane.com 

bottom of page