top of page

ಓಂಕಾರದ ಮಹತ್

ದೇಶ ಮತ್ತು ಕಾಲ ಮತ್ತು ಒಳಗೂ ಹೊರಗೂ ಮೀರಿ ವ್ಯಾಪಿಸಿರುವ ಬೆಳಕು: ಅದೇ ಪ್ರಣವ ಓಂಕಾರದ ಮಹತ್ವವನ್ನು ತಿಳಿಸುವ ಮಾಂಡುಕ್ಯೋಪನಿಷತ್ತು :- ನಾರಾಯಣ ಯಾಜಿ ಓಮಿತ್ಯೇತದಕ್ಷರಮಿದಂ ಸರ್ವಂ, ತಸ್ಯೋಪವಾಖ್ಯಾನಂ ಭೂತಂ ಭವದ್ ಭವಿಷ್ಯದಿತಿ ಸರ್ವಮೋಂಕಾರ ಏವ I ಯಚ್ಛಾನ್ಯತ್ ತ್ರಿಕಾಲಾತೀತಂ ತದಪ್ಯೋಂಕಾ ಏವ II (ಮಾಂ. ಉ. 1-1) “ಇದೆಲ್ಲವೂ ‘ಓಂ’ ಎನ್ನುವ ಅಕ್ಷರವು. ಅದರ ಉಪವಾಖ್ಯಾನವು: ಇಂದೆ ಆಗಿಹೋಗಿರುವದು, ಈಗ ಇರುವದು ಮುಂದೆ ಆಗಲಿರುವದು ಇವೆಲ್ಲವೂ ‘ಓಂ’ ಕಾರವೇ, ಈ ಮೂರೂ ಕಾಲವನ್ನು ಮೀರಿದ್ದು ಯಾವದುಂಟೋ ಅದೂ ಸಹ ‘ಓಂ’ಕಾರವೇ” “ಓಂ” ಕಾರವೆನ್ನುವದು ವೇದ ಮತ್ತು ವೇದಾಂತಗಳಲ್ಲಿ ಪರಮಾತ್ಮನನ್ನು ಉದ್ಧೇಶಿಸಿ ವಿವರಿಸುವ ಒಂದು ಸಂಕೇತವಾಗಿದೆ. ಈ ಸಂಕೇತ ಜೈನ ಮತ್ತು ಬೌದ್ಧ ಅದರಲ್ಲಿಯೂ ಟಿಬೇಟಿಯನ್ ಮತ್ತು ವಜ್ರಯಾನ ಪಂಥದಲ್ಲಿನ ಪ್ರಾರ್ಥನೆಗಳಲ್ಲಿಯೂ ಕಂಡುಬರುತ್ತದೆ. ಈ ಸಂಕೇತ ಭಾರತೀಯ ಆಧ್ಯಾತ್ಮಿಕೆಯ ಪರಮಪದದ ಸಂಕೇತವಾಗಿದೆ. ಮೇಲೆ ಹೇಳಿದ ಮಂತ್ರ “ಮಾಂಡುಕ್ಯೋಪನಿಷತ್ತಿ” ನಲ್ಲಿ ಬಂದಿದೆ. ಉಪನಿಷತ್ತುಗಳಲ್ಲಿಯೇ ಅತೀ ಚಿಕ್ಕದು ಮಾಂಡುಕ್ಯೋಪನಿಷತ್ತು. ಕೇವಲ ಹನ್ನೆರಡು ಮಂತ್ರಗಳಿವೆ. ಆದರೂ ತಾತ್ವಿಕವಾಗಿ ಈ ಉಪನಿಷತ್ತು ಬಹಳ ಮಹತ್ವದ್ದಾಗಿದೆ. ಗೌಡಪಾದಾಚಾರ್ಯರು ಈ ಉಪನಿಷತ್ತಿಗೆ ಕಾರಿಕೆಗಳನ್ನು ಬರೆದರೆ ಅವರ ಶಿಷ್ಯರಾದ ಶಂಕರ ಭಗವತ್ಪಾದರು ಇದನ್ನು “ಸರ್ವವೇದಾಂತಸಾರಸಂಗ್ರಹ” ಎಂದು ಕರೆದು ಅದರ ಮೇಲೆ ಭಾಷ್ಯವನ್ನು ಬರೆದಿದ್ದಾರೆ. ಸಹಜವಾಗಿ ನಾವು ಓಂಕಾರವನ್ನು ಬ್ರಹ್ಮ ಶಬ್ದಕ್ಕೆ ಹೋಲಿಸಬಹುದು. ಕಠ, ಚಾಂದೋಗ್ಯ, ಪ್ರಶ್ನ, ಗೀತೆ ಇಲ್ಲೆಲ್ಲಾ ಭ್ರಹ್ಮ ಮತ್ತು ಓಂಕಾರದ ಸಮೀಕರಣದ ಕುರಿತು ಚನ್ನಾಗಿಯೇ ವಿವರಿಸಿದ್ದಾರೆ. ಆದರೆ ಇಲ್ಲಿ ಭಗವತ್ಪಾದರು ಓಂಕಾರನಿರ್ಣಯದಿಂದ ಆತ್ಮತತ್ವಜ್ಞಾನವಾಗುವ ಬಗೆ ಹೇಗೆನ್ನುವದನ್ನು ವಿವರಿಸುತ್ತಾರೆ. ಹಾಗಾಗಿ ಮಾಂಡುಕ್ಯದ ಈ ಮಂತ್ರ ಆತ್ಮಸಾಕ್ಷಾಕಾರಕ್ಕಿರುವ ಕೀಲಿಕೈ ಎಂದೇ ಪರಿಗಣಿಸಲ್ಪಟ್ಟಿದೆ. ಅಥರ್ವ ವೇದಕ್ಕೆ ಸಂಬಂಧಿಸಿದ ಈ ಉಪನಿಷತ್ತೂ ಸಹ ಎಲ್ಲಾ ಉಪನಿಷತ್ತುಗಳಂತೆ ಬ್ರಹ್ಮಸತ್ಯ ಕುರಿತು ಪ್ರತಿಪಾದಿಸುತ್ತದೆ. ಇದು ಬೇರೆ ಎಲ್ಲಾ ಉಪನಿಷತ್ತುಗಳಿಗಿಂತ ಭಿನ್ನ ಯಾಕೆಂದರೆ ಬ್ರಹ್ಮವೆನ್ನುವದು ತುರೀಯವಾಗಿರುವ ಬೇರೆ ಯಾವುದೋ ಅವಸ್ಥೆಯಲ್ಲ ಅದು ಅವಸ್ಥಾತೀತವಾದ ನಮ್ಮೊಳಗಿನ ಆತ್ಮವೇ ಎನ್ನುವದನ್ನು ವಿವರಿಸುವ ಕಾರಣಕ್ಕಾಗಿ. ಇದು ಒಳಗೂ ಹೊರಗೂ ಇರುವ ನಮ್ಮನ್ನೂ ಒಳಗೊಂಡ ವಸ್ತು. ಹೊರಗೆ ನೋಡುತ್ತಿರುವ ಎಂದರೆ ಯಾವುದೆಲ್ಲವೂ ನಮ್ಮ ಕಣ್ಣಿಗೆ ಕಾಣುವದೋ ಅದು. ನೋಡುವದು ಎಂದರೆ ಏನು ಯಾವುದನ್ನು ಮತ್ತು ಎಲ್ಲಿ ಎನ್ನುವಾಗ, ದೇಶ ಕಾಲ; ಇದರಲ್ಲಿರುವ ನಿನ್ನೆ ಇಂದು ನಾಳೆಗಳು ಎದುರಾಗುತ್ತವೆ. ಇವೆಲ್ಲವೂ ನಮ್ಮ ಅನುಭವಕ್ಕೆ ಬರುವದು ಏಕೆಂದರೆ ನಾವು ಅದನ್ನು ಅನುಭವಿಸುತ್ತಿರುವದರಿಂದ. ನಿನ್ನೆ ಇದ್ದೆವು ಎನ್ನುವದು ಭೂತಕಾಲ, ಅನುಭವಿಸಿದ್ದೇವೆ; ಇಂದಿನದು ವರ್ತಮಾನ ಅನುಭವ, ಈ ಎರಡರ ಆಧಾರದ ಮೇಲೆ ನಾಳೆಯೂ ಇರುತ್ತೇವೆ ಎನ್ನುವದು ನಂಬುಗೆ. ಅದೇ ಭವಿಷ್ಯ. ಹಾಗಾದರೆ ನಿನ್ನೆ ಎನ್ನುವ ಭೂತಕಾಲವನ್ನು ಎಲ್ಲಿಯವರೆಗೆ ತೆಗೆದುಕೊಂದು ಹೋಗಬಹುದು; ಹೋಗಲು ಸಾಧ್ಯವೇ ಹಾಗೇ ಸಾಧ್ಯ ಎಂತಾದರೆ ನಾಳೆಯ ಭವಿಷತ್ತು ನಮ್ಮನ್ನು ಎಲ್ಲಿಯವರೆಗೆ ಕೊಂಡೊಯ್ದೀತು; ಇವೆಲ್ಲ ಪ್ರಶ್ನೆಗಳು ಎದುರಾಗುತ್ತವೆ. ಈ ಗೂಢವನ್ನು ಕ್ರಾಂತದರ್ಶಿಗಳಾದ ನಮ್ಮ ಋಷಿಗಳು ಕಂಡುಕೊಂಡಿದ್ದರು. ನಾವು ಇಲ್ಲಿಗೆ ಬಂದವರು ಎನ್ನುವ ಭಾವ ಅವರಲ್ಲಿತ್ತು. ಈ ನಾವು ಎನ್ನುವದು ಸಮಷ್ಟಿಯಾಗಿ ಅಂದರೆ ನಾನು ನೀವು ಮತ್ತು ಈ ಲೋಕದ ಎಲ್ಲವನ್ನೊಳಗೊಂಡು. ಈ ನಾವು ಬಂದವರು ಎನ್ನುವ ಮಾತನ್ನು ನಾನು ತೆಗೆದುಕೊಂಡಿರುವದು ನಮ್ಮ ನಡುವಿನ ತತ್ವಜ್ಞಾನಿಗಳಾದ ಲಕ್ಷ್ಮೀಶ ತೋಳ್ಪಾಡಿಯವರ “ಪುತ್ತೂರ ಅಜ್ಜನ” ಮೇಲಿನ ಅವರ ಉಪನ್ಯಾಸದಿಂದ. ಪುತ್ತೂರ ಅಜ್ಜ ಮತ್ತು ಇಸ್ಮಾಯಿಲ್ ಬ್ಯಾರಿಯ ಕುರಿತು ಲೇಖಕ ಅಬ್ದುಲ್ ರಶೀದ್ ಅವರ ಬರಹಗಳೂ ಈ ಕುರಿತು ವಿವರಿಸಿದೆ. ನಾವು ಬಂದವರು ಎಂದಾಗ ಎಲ್ಲಿಂದ ಎನ್ನುವ ಉತ್ತರ ಸಿಕ್ಕಿದ್ದು ದಾರ್ಶನಿಕರಾದ ಋಷಿಗಳಿಗೆ ಮಾತ್ರ. ಇದನ್ನು ಅಭ್ಯುಪಗಮನ ಎನ್ನುತ್ತಾರೆ. ಮೂಲಕ್ಕೆ ಹೋಗುವದು ಎನ್ನುವದು. ಈ ಮೂಲತತ್ವವು “ಏಕಮೇವಾSದ್ವಿತೀಯಮ್” ತನಗೆರಡೆನೆಯದಿಲ್ಲದ ಒಂದೇ ಆಗಿರುವದಾಗಿದೆ. ಅದೇ ನಮ್ಮಲ್ಲರ ಆತ್ಮವಾದ ಬ್ರಹ್ಮವು “ಬ್ರಹ್ಮೈವೇದಂ ವಿಶ್ವಮ್”, “ಇದಂ ಸರ್ವಂ ಯದಯಮಾತ್ಮಾ” ಎನ್ನುವ ವೇದಾಂತದ ಸಾರವೂ ಇದೆ. ಎಲ್ಲವುದಗಳ ತಿರುಳಾದ ಸರ್ವಾತಿಶಯ ತತ್ವವಾದ ಬ್ರಹ್ಮವನ್ನು ತಿಳಿಸಿಕೊಡುವದಕ್ಕೆ ಮಾಂಡೂಕ್ಯೋಪನಿಷತ್ತು ಆರಿಸಿಕೊಂಡಿರುವ ಮಾರ್ಗ ವಿಶಿಷ್ಟವಾದುದು. ಅದು ಅವಸ್ಥಾತ್ರಯ ವಿಭಜನೆ. ಜೀವಿಗಳೆಲ್ಲವೂ ಬದುಕಿನಲ್ಲಿ ಮೂರು ಅವಸ್ಥೆಗಳಾದ ಜಾಗ್ರತ ಸ್ವಪ್ನ ಮತ್ತು ಸುಷುಪ್ತಿಗಳನ್ನು ಅನುಭವಿಸುತ್ತವೆ. ಮಾಂಡೂಕ್ಯನೆನ್ನುವ ಋಷಿಯಿಂದ ದರ್ಶಿತವಾದ ಈ ಉಪನಿಷಿತ್ತಿನಲ್ಲಿ ಈ ಅವಸ್ಥಾತ್ರಯಕ್ಕೆ ಕಾರಣೀಪುರುಷನನ್ನು ಗುರುತಿಸಿ ಅವನೊಂದಿಗೆ ಒಂದಾಗುವ ಮಾರ್ಗವನ್ನು ಹೇಳುತ್ತದೆ. ಆತ ಸಾಕ್ಷಿಯೂ ಹೌದು. ಕಾರಣನೂ ಹೌದು. ಓಂಕಾರವನ್ನು ಇಲ್ಲಿ ಬ್ರಹ್ಮನಿಗೆ ಒಂದು ಸಂಕೇತವನ್ನಾಗಿ ತೆಗೆದುಕೊಂಡಿರುತ್ತಾರೆ. ಕಠೋಪನಿಷತ್ತಿನಲ್ಲಿಯೂ “ಏತದ್ಧ್ಯೇವಾಕ್ಷರಂ ಬ್ರಹ್ಮ ಏತದ್ಧ್ಯೇವಾಕ್ಷರಂ ಪರಂ” ಎನ್ನುವ ವಿವರಣೆ ಇದೆ. ಚಿಹ್ನೆಯನ್ನಾಗಿ ಓಂಕಾರವನ್ನು ತೆಗೆದುಕೊಂಡಾಗ ಅದು ಸಗುಣ ಬ್ರಹ್ಮವಾಗಿ ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ ಆಗ ಅಪರಾ ವಿದ್ಯೆ ನಮಗೆಟಕುವದು. ಇದನು ಅಕ್ಷರವನ್ನಾಗಿ ತೆಗೆದುಕೊಂಡರೆ ಆತ ಗುಣಾತೀತನಾಗಿ, ಲೋಕಾತೀತನಾಗಿ ನಾಮರೂಪವನ್ನು ಮೀರಿರುತ್ತಾನೆ. ಇದನ್ನು ಅರಿಯುವದೇ ಪರಾ ವಿದ್ಯೆ. ವೇದ ಪಠಣದಲ್ಲಿಯೂ ಸಹ ಓಂಕಾರವನ್ನು ಮಂತ್ರಗಳ ಪ್ರಾರಂಬದಲ್ಲಿ ಮತ್ತು ಅಂತ್ಯದಲ್ಲಿ ಪ್ರಯೋಗಿಸುತ್ತಾರೆ. ವೇದದಲ್ಲಿ “ಓಮ್” ಎನ್ನುವ ಶಬ್ದದ ಮೂಲಕ ಪರಮಾರ್ಥ ತತ್ವವನ್ನು ಕರೆದಿರುವದಕ್ಕೆ ಕಾರಣ ಪರಮಾರ್ಥವನ್ನು ಇದ್ದದ್ದು ಇದ್ದಂತೆಯೇ ತಿಳಿಸುವದಕ್ಕೆ ಬೇರೆ ಯಾವ ಶಬ್ಧಕ್ಕೂ ಆ ಮಾನದಂಡವಿಲ್ಲವಾಗಿರುವದರಿಂದ. ವೇದದ ಮೂಲ ಉದ್ಧೇಶವೇ ತತ್ವವನ್ನು ತಿಳಿಸುವ ಸಾಧನವಾಗಿದೆ. ಮಂತ್ರಗಳ ಕೊನೆಯಲ್ಲಿ ಹೇಳುವ ಓಂಕಾರಕ್ಕೆ “ಪ್ರಣವ” ಎಂದು ಹೆಸರು. ಅದಿಯಿಂದ ಅಂತ್ಯದ ತನಕ ವೇದದಲ್ಲಿ ಹೇಳಿರುವ ಸಮಸ್ತ ನಾಮ ಪ್ರತಿಪಾದ್ಯವಾಗಿರುವದು ಪರಬ್ರಹ್ಮವೆನ್ನುವದನ್ನು ಸೂಚಿಸಲು. ಅಲ್ಲಿಗೆ ವೇದದ ಆದಿಯಲ್ಲಿಯೂ ಅಂತ್ಯದಲ್ಲಿಯೂ ಓಂಕಾರವನ್ನು ಉಚ್ಛರಿಸುವ ಕಾರಣ ಸ್ಪಷ್ಟವಾದಂತಾಯಿತು. . ವೇದಾಂತದ ಪ್ರಕಾರ ವೇದಗಳು ಕರ್ಮಕಾಂಡ ಪ್ರಧಾನವಾಗಿರುವದು. ಅಲ್ಲಿ ವಿವರಿಸುವ ಕರ್ಮದ ಸ್ವರೂಪವನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿಕೊಡುವದೇ ಬ್ರಾಹ್ಮಣಗಳು. ಯಾವ ಋಷಿ ಈ ಮಂತ್ರಗಳನ್ನು ಕಂಡುಕೊಂಡನೋ ಆತ ತಿಳಿಸಿದ ರೀತಿಯಲ್ಲಿಯೇ ಅದಕ್ಕೆ ಸಂಬಂಧಿಸಿದಂತಹ ಛಂದಸ್ಸು, ದೇವತೆಗಳ ಕುರಿತು ಅರಿವನ್ನು ಸಂಪಾದಿಸಿಕೊಂಡು ಆಯಾ ಕರ್ಮವನ್ನು ಗಳಿಸಿಕೊಳ್ಳುವ ಸಲುವಾಗಿ ಉಪಯೋಗಿಸಕೊಳ್ಳಬೇಕು. ಕರ್ಮಾಂಗಪ್ರಧಾನವಾದ ಮಂತ್ರಗಳು ಅಕ್ಷರ ಪ್ರಧಾನವಾಗಿರುತ್ತದೆ. ಸ್ವರ ಮತ್ತು ಏರಿಳಿತಗಳನ್ನು ಸ್ವಲ್ಪವೂ ತಪ್ಪುವಂತೆಯೂ ಇಲ್ಲ. ಹಾಗೇ ಮಾಡಿದರೆ ಕರ್ಮಫಲವು ಸಿದ್ಧಿಸುವದಿಲ್ಲ. ಹಾಗಾಗಿ ವೇದವನ್ನು ಸರಿಯಾದ ರೀತಿಯಲ್ಲಿ ಗುರೂಪದೇಶ ಪಡೆದುಕೊಂಡೇ ಪಠಿಸಬೇಕು. ಅಂದರೆ ವೇದಾಧಿಕಾರಿಗಳಾದವರಿಂದಲೇ ಅದನ್ನು ಪಡೆಯಬೇಕು. ಆದರೆ ಜ್ಞಾನಕಾಂಡದಲ್ಲಿನ ವಿಷಯ ಹಾಗಲ್ಲ. ಇದು ಅಕ್ಷರ ಪ್ರಧಾನವಲ್ಲ, ಅರ್ಥಪ್ರಧಾನವಾಗಿರುವದು. ಜ್ಞಾನದ ಅನುಭವವಾಗಲು ವೇದದ ಏಣಿಬೇಕಿಲ್ಲ. ತುಂಬಿದ ಹೊಳೆಯನ್ನು ದಾಟಲು ದೋಣಿ ಬೇಕು. ಅದೇ ನಿಪುಣ ಈಜುಗಾರನೊಬ್ಬ ಸುಲಭವಾಗಿ ಈಜಾಡುತ್ತಾ ಅದೇ ಹೊಳೆಯನ್ನು ದಾಟಬಲ್ಲ. ಅಂಬಿಗನ ಹಂಗಿಲ್ಲ, ದೋಣಿಗಾಗಿ ಕಾಯಬೇಕಿಲ್ಲ. ಕರ್ಮಕಾಂಡವನ್ನು ಅವಿದ್ಯೆ ಎಂದು ಈಶಾವಾಸೋಪನಿಷತ್ತಿನಲ್ಲಿ ಹೇಳಿದ್ದಾರೆ. ಕರ್ಮಸ್ವರೂಪದ ಅಜ್ಞಾನವನ್ನು ಕರ್ಮಜ್ಞಾನದಿಂದ ಪಡೆದುಕೊಳಬಹುದಾದರೂ ಫಲಕ್ಕಾಗಿ ಕಾಲಾಂತರದವರೆಗೆ ಕಾಯಬೇಕಾಗುತ್ತದೆ. ಅದರೆ ಬ್ರಹ್ಮಜ್ಞಾನದಿಂದ ತಕ್ಷಣಕ್ಕೆ ಅಜ್ಞಾನವು ತೊಲಗಿಬಿಡುತ್ತದೆ. ಬ್ರಹ್ಮಜ್ಞಾನದಿಂದ ಸಿಗುವ ಫಲವೆಂದರೆ ಬ್ರಹ್ಮವೇ ಆಗಿಬಿಡುವದು. ಅದನ್ನೇ ಮೋಕ್ಷ ಎಂದು ಕರೆಯುತ್ತಾರೆ. ಇಲ್ಲಿ ಕಾಲದ ನಿರ್ಭಂಧತೆಯಿರುವದಿಲ್ಲ. ಬ್ರಹ್ಮವು ಕಾಲಕ್ಕೆ ಅಧೀನವಲ್ಲ. ಕಾಲ ವ್ಯಷ್ಟಿ ಸೃಷ್ಟಿ ಎಲ್ಲವೂ ಮೂಲಸ್ವರೂಪದಲ್ಲಿ ಬ್ರಹ್ಮವೇ ಆಗಿರುವದರಿಂದ ನದಿಗಳೆಲ್ಲ ಹೇಗೆ ಸಮುದ್ರವನ್ನು ಸೇರಿ ತನ್ನಸ್ವರೂಪವನ್ನು ಕಳೆದುಕೊಂಡು ಸಮುದ್ರವೇ ಆಗಿಬಿಡುವದೋ ಅದೇ ರೀತಿ ಜ್ಞಾನಪ್ರಾಪ್ತಿಯಾದವ ಶುದ್ಧ ಬ್ರಹ್ಮವೇ ಆಗಿಬಿಡುತ್ತಾನೆ. ನೇರವಾಗಿ ಪರಮಾತ್ಮನ ಪ್ರಜ್ಞೆಯನ್ನು ಪಡೆಯುವ ಮಾರ್ಗ ಇದು. ಅಂತಃಕರಣ ಸಂಸ್ಕಾರವಿರುವರೆಲ್ಲರಿಗೂ ಈ ಜ್ಞಾನಕ್ಕೆ ಅಧಿಕಾರಿಗಳಾಗಿರುತ್ತಾರೆ. ಈ ಕಾರಣಗಳಿಂದಲೇ ಮಾಂಡುಕ್ಯೋಪನಿಷತ್ತು ಪರಮಾರ್ಥಕ್ಕೂ ಓಂಕಾರಕ್ಕೂ ಅಭೇದ್ಯವನ್ನು ಕಲ್ಪಿಸಿರುವದು. ಪ್ರಶ್ನೋಪನಿಷತ್ತಿನಲ್ಲಿ ಇದನ್ನೇ ಏತದ್ವೈ ಸತ್ಯಕಾಮ ಪರಂ ಚಾಪರಂ ಚ ಬ್ರಹ್ಮ ಯದೋಂಕಾರಃ I (ಓಂಕಾರವು ಯಾವದೇ ಆಕಾರವಿಲ್ಲದ ವಿಕಾರ ರಹಿತವಾದ ಆದರೆ ಎಲ್ಲಾ ಆಕಾರಕ್ಕೂ ಉಗಮಸ್ಥಾನವಾದ ವಸ್ತುವಾಗಿದೆ) ಎಂದಿದ್ದಾರೆ. ಪ್ರತಿಯೊಂದು ಜೀವಿಯೂ ಜಾಗ್ರತ ಸ್ವಪ್ನ ಮತ್ತು ಸುಷಿಪ್ತಿ ಎನ್ನುವ ಅವಸ್ಥೆಯಲ್ಲಿ ಇರುತ್ತವೆ. ಎಚ್ಚರ ಮತ್ತು ಕನಸುಗಳಲ್ಲಿ ಕಾರ್ಯಕಾರಣಗಳೆರಡೂ ಇರುತ್ತದೆ. ತನಿನಿದ್ದೆಯ ಸುಷುಪ್ತಿಯಲ್ಲಿ ಕಾರ್ಯಗಳಿರುವದಿಲ್ಲ. ಕಾರಣ ಮಾತ್ರ ಇರುತ್ತದೆ. ಹಾಗಾಗಿ ಸುಷಿಪ್ತಿಯಲ್ಲಿ ಆತ್ಮವು ಬ್ರಹ್ಮನೊಂದಿಗೆ ಇರುವದೇ ಹೊರತೂ ಬ್ರಹ್ಮವೇ ಆಗಿರುವದಿಲ್ಲ. ತನಿನಿದ್ದೆಯಲ್ಲಿ ಕಾಲದೇಶಗಳ ಅರಿವಿರುವದಿಲ್ಲ. ಇಲಿ ನಾವು ಕಾಲವನ್ನು ಮೀರಿ ಇರುತ್ತೇವೆ. ದೇಶದಲ್ಲಿಯೂ ಇರುವದಿಲ್ಲ. ಎಲ್ಲಿದ್ದೇವೆನ್ನುವ ಪರಿವೆಯೂ ನಮಗಿರುವದಿಲ್ಲ. ಆದರೆ ಕಾರಣವಾದ ನಿದ್ರೆ ನಮ್ಮನ್ನು ಆವರಿಸಿರುತ್ತದೆ. ಎಚ್ಚರಾದ ಮೇಲೆ ಅದರ ಅರಿವಾಗಿರುತ್ತದೆ. ಆದರೆ ಅವಸ್ಥಾರಹಿತವಾದ ತುರೀಯದಲ್ಲಿ ಕಾರ್ಯಕಾರಣಗಳಿಲ್ಲದೇ ಆತ್ಮವೆನ್ನುವದು ಬ್ರಹ್ಮವೇ ಆಗಿಬಿಡುತ್ತದೆ. ಮಡಿಕೆಯ ಉದಾಹರಣೆಯನ್ನು ತೆಗೆದುಕೊಂಡರೆ ಅದರಲ್ಲಿ ದೊಡ್ಡದು, ಚಿಕ್ಕದು, ಅಗಲ ಬಾಯಿ ಚಿಕ್ಕಾದಾದವುಗಳು ಹೀಗೆ ಆಕಾರ ಬೇಧಗಳನ್ನು ಕಲ್ಪಿಸಬಹುದು. ಆದರೆ ಈ ಮಡಿಕೆಯಲ್ಲಿ ಇರುವದೆಲ್ಲವೂ ಜೇಡಿಮಣ್ಣು ಎನ್ನುವದನ್ನು ಸ್ಮರಣೆಗೆ ತಂದುಕೊಳ್ಳಬೇಕು. ಇಲ್ಲ್ಲಿ ಮಡಿಕೆ ಕಾರ್ಯವಾದರೆ ಜೇಡಿಮಣ್ಣು ಕಾರಣವಾಗಿರುತ್ತದೆ. ಇಲ್ಲಿರುವ ವಸ್ತುಗಳೆಲ್ಲವನ್ನೂ ನಾವು ಗುರುತಿಸಿಸಲು ಮಾಡಿಕೊಂಡ ನಾಮರೂಪಗಳು. ಕನ್ನಡದಲ್ಲಿ ನೀರು ಎನ್ನುವದನ್ನು ಹಿಂದಿಯಲ್ಲಿ ಪಾನಿ ಎನ್ನುತ್ತೇವೆ, ಇಂಗ್ಲೀಷಿನಲ್ಲಿ ಅದನ್ನು ವಾಟರ್ ಎಂದು ಕರೆಯುತ್ತೇವೆ. ನಾಮರೂಪ ಬೇಧ ದೇಶ ದೇಶಗಳ ವೆತ್ಯಾಸದಿಂದಾದರೂ ಅದರ ಮೂಲಸ್ವರೂಪವಾದ ದ್ರವ್ಯ ಎಲ್ಲಾ ಕಾಲಕ್ಕೂ ಎಲ್ಲಾ ದೇಶಗಳಲ್ಲಿಯೂ ಒಂದೇ ಆಗಿರುತ್ತದೆ. ಇದನ್ನೇ ಇಲ್ಲಿ ನಮಗೆ ಏನೇನು ಕಾಣಿಸುತ್ತದೆಯೋ ಯಾವ ಯಾವರ್ದು ತರ್ಕಕ್ಕೆ ಗೋಚರವಾಗಿರುತ್ತದೆಯೋ, ನಮ್ಮ ಅನುಭವಕ್ಕೆ ಯಾವುದೆಲ್ಲವೂ ಬರುತ್ತದೆಯೋ ಅವೆಲ್ಲವನ್ನೂ “ಓಮಿತ್ಯೇತದರಕ್ಷರಮಿದಂ” ಓಂಕಾರವೆನ್ನುವ ಒಂದು ಶಬ್ದದಿಂದ ಕರೆದಿದ್ದಾರೆ. ನಮ್ಮ ವಿಚಾರಕ್ಕೆ ಗೋಚರವಾಗಬಹುದಾಗಿರುವದನ್ನು ವಿಷಯಿ ಮತ್ತು ವಿಷಯ ಎನ್ನುವ ಎರಡು ಬಗೆಯಾಗಿ ಹೇಳಬಹುದು. ವಿಷಯ ಎಂದರೆ ತಿಳಿಸಲ್ಪಟ್ಟದ್ದು ವೀಷಯಿ ಎಂದರೆ ತಿಳಿಸುವದು ಎಂದು ಅರ್ಥ. ಇವು ನಮಗೆ ಬಾಹ್ಯವಾಗಿ ಗೋಚರವಾಗುವ ವಸ್ತುಗಳು. ನೀರು ವಿಷಯಿ ದ್ರವ್ಯವೆನ್ನುವದು ವಿಷಯ ಎಂದು ತಿಳಿದುಕೊಂಡರೆ ಸಾಕು. ಆದರೆ ಈ ನೀರು ಮೂಲಭೂತವಾಗಿ ಎರಡು ಅನಿಲಗಳ ಅಣುಗಳು ಸೇರಿ. ಈ ಅಣುವಿನ ಅರಿವು ನಮಗೆ ಸುಲಭದಲ್ಲಿ ಆಗುವದಿಲ್ಲ. ಅರಿಯಲು ವಿಶೇಷ ಜ್ಞಾನದ ಅವಶ್ಯವಿರುತ್ತದೆ. ಇದನ್ನೇ ಅಭಿದಾನ (ಹೆಸರು) ಅಭಿಧೇಯ (ಹೆಸರಿನಿಂದ ಕರೆಯಲ್ಪಡುವ ವಸ್ತು) ಎಂದು ಕರೆಯುತ್ತಾರೆ. ಈ ಲೋಕವೆಲ್ಲ ಈ ಎರಡರ, ಅಂದರೆ ಅಭಿದಾನ ಮತ್ತು ಅಭಿಧೇಯ ಎಂದು ಕರೆಯಲ್ಪಡುವ ವಸ್ತುವಿನಂದಲೇ ಆಗಿದೆ. ಈ ಎಲ್ಲ ಅಭಿದಾನಗಳನ್ನು ಸಮಗ್ರವಾಗಿ ಸೇರಿಸಿ ಅದನ್ನು “ಓಮ್” ಎನ್ನುವ ಮೂಲಕ ವಾಚ್ಯಗಳ ಸಮೂಹವನ್ನೆಲ್ಲ ಕರೆಯುವದಕ್ಕೆ ಅನುಕೂಲಿಸುವ ಶಬ್ಧಗಳಾಗಿವೆ. ಅದರ ತಿರುಳು ಬ್ರಹ್ಮವೇ ಆಗಿದೆ ಎಂದು ಗ್ರಹಿಸಬೇಕು. ಈ ಓಂಕಾರದ ಉತ್ಮತ್ತಿ ಅನಾಹತ ಚಕ್ರದಲ್ಲಿ ಆಗುವದು. ಮತ್ತೆ ತಿರುಗಿ ಹೋಗುವದು ಅನಾಹತಕ್ಕೆ. ಓಂಕಾರದ ಉಚ್ಛಾರಕ್ಕೆ ನಾವು ನಾಭಿಯಿಂದ ಆರಂಭಿಸಿ ಕಂಠದಮೂಲಕ ಬಾಯಿಯನ್ನು ಓಷ್ಟದಿಂದ ಅಂದರೆ ತುಟಿಯ ಚಲನೆಯಿಂದ “ಉ”ಕಾರವನ್ನು ಹೇಳಿ ಕೊನೆಗೆ “ಮ” ಕಾರವನ್ನು ಹೇಳುವಾಗ ಸಂಪೂರ್ಣವಾಗಿ ಬಾಯಿಯನ್ನು ಮುಚ್ಚಿಬಿಡುತ್ತೇವೆ. ಅಕ್ಷರವೆನ್ನುವದಕ್ಕೆ “ಅಶ್ನುತೇ” ಅಂದರೆ ವ್ಯಾಪಿಸಿರುವದು ಎನ್ನುವ ಅರ್ಥವೂ ಇದೆ. ಈ ವ್ಯಾಪಕತತ್ವವೇ ಅಭಿದಾನಪ್ರಪಂಚ ಮತ್ತು ಅಭಿಧೇಯ ಪ್ರಪಂಚ ಎನ್ನುವ ತಿರುಳು ಹಾಗಾಗಿ ಓಂಕಾರವೆನ್ನುವದು ನಾಮ ರೂಪವಾಗಿಯೂ ನಾಮರೂಪಕ್ಕೆ ಅತೀತವಾಗಿಯೂ ಇದೆ. ಮಾಂಡೂಕ್ಯೋಪನಿಷತ್ತು ಅನೇಕ ದೃಷ್ಟಿಯಿಂದ ಆಧ್ಯಾತ್ಮದ ಅಧ್ಯಯನಕ್ಕೆ ಮಹತ್ವದ್ದಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನಾಲ್ಕು ಪ್ರಸಿದ್ಧ ಮಹಾವಾಕ್ಯಗಳಲ್ಲೋಂದಾದ “ಅಯಮಾತ್ಮಾ ಬ್ರಹ್ಮ” ಎನ್ನುವದಕ್ಕೆ ಪೀಠಿಕೆಯಾಗಿ ಇಲ್ಲಿ ಓಂಕಾರದ ಮಹತ್ವವನ್ನು ಶಿಷ್ಯನಿಗೆ ಉಪದೇಶಿಸುತ್ತಿದ್ದಾನೆ. ವ್ಯಷ್ಟಿಯಿಂದ ಪರಮೇಷ್ಠಿಗೆ ವ್ಯಾಪಿಸಿರುವ ಎಲ್ಲವೂ ಅವನ ಸ್ವರೂಪವೇ; ಇದು ಹಿಂದೆಯೂ ಇತ್ತು ಈಗಲೂ ಇದೆ ಮುಂದೆಯೂ ಇರುವದು. ಇದು ಗುರುಶಿಷ್ಯರಾದಿಯಾಗಿ ಎಲ್ಲರ ಒಳಗಿರುವ ಆತ್ಮನೂ ಅವನೇ, ಅದನ್ನು ಆತ್ಮತತ್ವವೆನ್ನುವರು ಅದನ್ನು ಅರಿಯಬೇಕಾದರೆ ವಾಚ್ಯವಾಚಕಭಾವರಹಿತವಾಗಿರುವ ಓಂಕಾರವನ್ನು ತಿಳಿಯಬೇಕು. ಹಾಗೆ ತಿಳಿದಾಗ ಆತ್ಮ ಮತ್ತು ಪರಮಾತ್ಮನಲ್ಲಿ ಬೇಧ ಹೊರಟುಹೋಗಿ ಇವೆಲ್ಲವೂ ಪ್ರಪಂಚೋಪಶಮನಾದ ಶಿವನೇ ಎನ್ನುವದನ್ನು ತಿಳಿಸಲಿಕ್ಕಿರುವ ಮನೋಭೂಮಿಕೆಯನ್ನು ಇಲ್ಲಿ ಸಿದ್ದಪಡಿಸಲಾಗಿದೆ.

ಓಂಕಾರದ ಮಹತ್
bottom of page