top of page

ಅಗ್ನಿಜೆ

ದುರ್ಯೋಧನನಲ್ಲಿ ಸಂಧಿಯೇ! ಇಲ್ಲಿಯವರೆಗೂ ಯುದ್ಧವೇ ಅಂತಿಮ.. ಎಂದುಕೊಂಡಿದ್ದ ಭೀಮ ಇವತ್ತು ಅಣ್ಣನ ಮಾತು ಕೇಳಿ ವಿಚಲಿತನಾಗಿದ್ದ... ಭೀಮನ ಮನಸ್ಸು ಗೊಂದಲದ ಗೂಡಾಗಿತ್ತು.. ಧರ್ಮಜನ ಮಾತುಗಳು ಭೀಮನ ಮನಸ್ಸಿನಲ್ಲಿ ಅಶಾಂತಿಯ ಅಲೆಗಳನ್ನು ಎಬ್ಬಿಸಿದ್ದವು.. ಶ್ರೀಕೃಷ್ಣನಲ್ಲಿ ಅಣ್ಣ ಧರ್ಮಜ ಹೇಳಿದ ಮಾತು "ಯುದ್ಧದಿಂದ ಮಹಾ ಸಂಕಷ್ಠ ಎದುರಾಗುವುದು ಕೃಷ್ಣ!.. ಸಾಮ್ರಾಜ್ಯಕ್ಕಾಗಿ ಬಂಧುಗಳನ್ನು ಬಲಿ ಕೊಡಲಾರೆ.. ಅದು ಧರ್ಮವಲ್ಲ..! ಯುದ್ಧಕ್ಕಿಂತ ಸಂಧಿಯೇ ಲೇಸು! ದುರ್ಯೋಧನನ ಷರತ್ತಿನಂತೆ 12 ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸ ಮುಗಿಸಿದ್ದೇವೆ.. ಈಗ ನೀನು ಹಸ್ತಿನಾವತಿಗೆ ಹೋಗಿ ದುರ್ಯೋಧನನಲ್ಲಿ ಸಂಧಾನದ ಪ್ರಸ್ತಾಪವನ್ನು ಇಡು.. ನಮ್ಮ ರಾಜ್ಯವನ್ನು ನಮಗೆ ಹಿಂದಿರುಗಿಸುವಂತೆ ದುರ್ಯೋಧನನಿಗೆ ಬುದ್ಧಿ ಹೇಳು.. ಅವನು ಒಪ್ಪದಿದ್ದರೆ ಯುದ್ಧದ ಬದಲು ನಮಗೆ ಐದು ಗ್ರಾಮವನ್ನಾದರೂ ನೀಡುವಂತೆ ನಮ್ಮ ಪರವಾಗಿ ಅವನಲ್ಲಿ ಬೇಡಿಕೋ... ಪಾಂಡವರಿಗೆ ಯುದ್ಧದ ವಾಂಛೆ ಇಲ್ಲ.. ಯುದ್ಧವನ್ನು ಅನಿವಾರ್ಯವಾಗಿಸಬೇಡ ಎಂದು ದುರ್ಯೋಧನನಿಗೆ ತಿಳಿಹೇಳು.." ಎಂದಾಗ ಕೃಷ್ಣ ಮುಗುಳು ನಕ್ಕ. ಅಣ್ಣ ಮುಂದುವರಿದು "ಬಂಧುಗಳನ್ನು ಕೊಂದು ಪಡೆಯುವ ರಾಜ್ಯ ಅನ್ನಕ್ಕೆ ವಿಷ ಸೇರಿಸಿ ತಿನ್ನುವಂತೆ".. ಎಂದಾಗ ಕೃಷ್ಣ ಭೀಮನಲ್ಲಿ ಕೇಳಿದ..” ಭೀಮಾ.. ನೀನೇನು ಹೇಳುವೆ.. ಸಂಧಿಯೋ? ಸಮರವೋ?”. ಸಂಧಿ ಎನ್ನುವ ಶಬ್ದವೇ ಭೀಮನ ಮನಸ್ಸನ್ನು ಸುಡುತ್ತಿತ್ತು.. ಹಸ್ತಿನಾವತಿಯ ದ್ಯೂತ. ಶಕುನಿಯ ಕುಹಕ.. ದುಶ್ಯಾಸನನ ದುರ್ವರ್ತನೆ.. ಮಾತುಮಾತಿಗೂ "ದಾಸ " ಎಂದ ದುರ್ಯೋಧನ.. ಅರಗಿನ ಮನೆ.. ಏಕಚಕ್ರನಗರದಲ್ಲಿ ಬೇಡಿ ತಿಂದ ಅನ್ನ.. ಅರಣ್ಯವಾಸ..ಸೀರೆಗೆ ಕೈಹಾಕಿದ ದುಶ್ಯಾಸನನಿಂದ ಕಾಪಾಡುವಂತೆ ಬೇಡುತ್ತಿರುವ ದ್ರೌಪದಿ... ವಿರಾಟನ ಊಳಿಗದ ಆಳಾಗಿ ಬದುಕಿದ ದಿನಗಳು ನೆನಪಾಗಿ.. ಕೃಷ್ಣನ ಪ್ರಶ್ನೆಗೆ ಉತ್ತರಿಸುವಾಗ ಭೀಮನ ಮಾತು, ಮುಖ ಎರಡು ಗಡುಸಾಗಿತ್ತು.. ಆದರೆ ಅಣ್ಣನ ಮಾತುಗಳನ್ನು ಖಂಡಿಸುವದು ಸರಿಯಲ್ಲ ಎಂಬ ಶಿಷ್ಠಾಚಾರದ ಬಲೆಯಲ್ಲಿ ಬಂಧಿತನಾಗಿದ್ದ ಭೀಮ ನಿಸ್ಸಾಹಯಕನಾಗಿದ್ದ. "ಅಣ್ಣನವರಿಗೆ ನೀತಿ ಯಾದರೆ... ಕೃಷ್ಣ, ನಿನ್ನ ಮನಕೊಪ್ಪಿದರೇ.. ಸಂಧಿಗೆ ದುರ್ಯೋಧನ ಒಪ್ಪಿದರೆ.. ಐದು ಗ್ರಾಮಗಳನು ಬೇಡಿ ತೆಗೆದುಕೊಳ್ಳುವುದೇ ಸರಿ ಎಂದು ಅಣ್ಣನವರ ಧರ್ಮ ವಿವೇಚನೆ ಹೇಳಿದರೆ ನನಗೇನಾಗಬೇಕಾಗಿದೆ” ಎಂದು ಸಭೆಯಿಂದ ಎದ್ದು ಹೊರಬಂದಿದ್ದ... ಅಯ್ಯೋ!! ಪಾಂಡವರ ಬದುಕಿನ ಪ್ರಾರಬ್ಧ ಇನ್ನೂ ಕಳೆಯಲಿಲ್ಲವೇ! ದುರ್ಯೋಧನನಲ್ಲಿ ಬೇಡಿ ರಾಜ್ಯವನ್ನು ಪಡೆಯಬೇಕಾದ ದಿನವೊಂದು ಬಾಕಿಯಿದೆಯೇ! ಎಂದು ಯೋಚಿಸುತ್ತಿದ್ದ ಭೀಮನಿಗೆ ದುರ್ಯೋಧನನ ಮಾತುಗಳು ನೆನಪಾದವು... ಉತ್ತರದ ತುತ್ತತುದಿಯ ತಪ್ಪಲಿನ ತಪೋವನಕ್ಕೆ ತೆರಳಿದ ಪಾಂಡು ಮಹಾರಾಜ ತನ್ನ ರಾಜ ಮುದ್ರೆಗಳನ್ನು ಹಸ್ತಿನಾವತಿಗೆ ಕಳಿಸಿ ಇನ್ನು ಮುಂದೆ ನಾನು ತಪಸ್ವೀ ಜೀವನ ಬದುಕುತ್ತೇನೆ ನನಗೆ ರಾಜ್ಯದ ಮೋಹವಿಲ್ಲ ಎಂದನಂತೆ..! ರಾಜ್ಯತ್ಯಾಗ ಮಾಡಿ ದೂರ ಹೋದ ನಿಮ್ಮಪ್ಪ ಈ ದೇಶದ ರಾಜನೂ ಅಲ್ಲ.. ಪ್ರಜೆಯೂ ಅಲ್ಲ.. ಮತ್ತೇಕೆ ಪಾಂಡವರಿಗೆ ಕೊಡಬೇಕು ರಾಜ್ಯ? ಧರ್ಮಜನ ಜನನಕ್ಕೆ ಯಮ, ಭೀಮನ ಜನನಕ್ಕೆ ವಾಯು, ಅರ್ಜುನನ ಜನನಕ್ಕೆ ಇಂದ್ರ, ನಕುಲ-ಸಹದೇವರ ಜನನಕ್ಕೆ ಅಶ್ವಿನೀದೇವತೆಗಳು ಕಾರಣಕರ್ತರಾದರೇ.. ನೀವೆಲ್ಲಾ ಹೇಗೆ ಪಾಂಡವರು? ಎಂದು ಕುಹಕವಾಡಿ.. ತುಂಬಿದ ಸಭೆಯಲ್ಲಿ ಕೀಳಾಗಿ ಮಾತನಾಡಿದ ದುರ್ಯೋಧನನಲ್ಲಿ ಎಂತಹ ಸಂಧಿ? ಅವನೆಂತಹ ಬಂಧು? ಎಂದೆಲ್ಲಾ ಯೋಚಿಸುತ್ತಿದ್ದ ಭೀಮ ಬಾಗಿಲ ಬಳಿ ಅದೇನೋ ಶಬ್ದವಾದಂತಾಗಿ ಅತ್ತ ತಿರುಗಿದ.. ನೋಡು ನೋಡುತ್ತಾ ಇದ್ದಂತೆ ಅವಸರ ಅವಸರವಾಗಿ ದ್ರೌಪದಿ ತನ್ನತ್ತಲೆ ಬರುತ್ತಿದ್ದಾಳೆಂಬುದು ಭೀಮನ ಗಮನಕ್ಕೆ ಬಂತು. ಬಿಚ್ಚಿದ ಮುಡಿ ಹೊತ್ತು ಅಗ್ನಿಶಿಖೆಯಿಂದ ಹೊರಬಂದ ಜ್ವಾಲೆಯೆ ಎಂಬಂತೆ ಭೀಮನ ಕಣ್ಣಿಗೆ ಅವಳು ಕಂಡಳು. ಪರಾಕ್ರಮಿಗಳಾದ ಪತಿಗಳೆದುರು.. ಪಿತಾಮಹ ಭೀಷ್ಮರೆದುರು.. ದುಶ್ಯಾಸನ ಸೀರೆಯ ಸೆರಗಿಗೆ ಕೈ ಹಾಕಿದಾಗ ಇಡೀ ಸಭೆಯೇ ತಲೆತಗ್ಗಿಸಿ ಕುಳಿತಿದ್ದಾಗ ದ್ರೌಪದಿಯ ಶಪಥ ನೆನಪಾಯಿತು. "ನಾನು ಅಗ್ನಿಜೆ!! ನನ್ನನ್ನು ಅವಮಾನಿಸಿದವರನ್ನು ಸುಡದಿದ್ದರೆ ನಾನು ದ್ರುಪದಜೆ ಅಲ್ಲ!! ಪಾಂಡವರಿಗೆ ಪತ್ನಿಯಲ್ಲ!" ಎಂದು ದ್ರೌಪದಿ ಗುಡುಗಿದಾಗ ದೊಡ್ಡಪ್ಪ ದೃತರಾಷ್ಟ್ರನ ಸಿಂಹಾಸನದ ಕಾಲುಗಳು ನಡುಗಿದಂತೆ ಭಾಸವಾಗಿತ್ತು.! ದ್ರೌಪದಿ ಉರಿಯುತ್ತಿರುವ ಅಗ್ನಿಯಂತವಳು..! ದ್ರುಪದ ರಾಜನ ಮುದ್ದಿನ ಮಗಳು.. ಪಾಂಡವರ ಘನತೆಯ ಕಿರೀಟಕ್ಕಿಟ್ಟ ಅಪರೂಪದ ವಜ್ರ..!! ಆದರೆ.. ಆದರೆ ಅಂದು ಶ್ರೀಕೃಷ್ಣ ಅಕ್ಷಯಾಂಬರ ಕರುಣಿಸದಿದ್ದರೆ ? ಘನತೆಯ ವಜ್ರದ ಗತಿ? ಭೀಮನ ಮನೋಪಟಲದಲ್ಲಿ ಹಳೆಯದೆಲ್ಲ ಮೂಡಿ ಮರೆಯಾಗುತ್ತಿದ್ದಂತೆ ದ್ರೌಪದಿ ಅವನೆದುರು ಪ್ರತ್ಯಕ್ಷಳಾಧಳು " ಏಳು,ಭೀಮಸೇನ ಹೋಗೋಣ” ಎಂದಳು”. ಎಲ್ಲಿಗೆ? ಎನ್ನುವಂತೆ ಪ್ರಶ್ನಾರ್ಥಕವಾಗಿ ನೋಡಿದ ಭೀಮಸೇನನಿಗೆ "ಅರೆ! ಏನಿದು..ನೀನಿನ್ನು ಇಲ್ಲೇ ಕುಳಿತಿರುವೆಯಲ್ಲ.. ಕೃಷ್ಣ ಬರ ಹೇಳಿರುವನಲ್ಲ" ಎಂದಳು "ಯುದ್ಧದ ಬಗೆಗಿನ ಮಾತುಕತೆಗೆ ಇರಬೇಕು.. ನೀನೇಕೆ ಹೀಗೆ ಇನ್ನೂ ಇಲ್ಲೇ ಕುಳಿತಿರುವೆ?? ನೀನಿಲ್ಲದೆ ಮುಂದೆ ಬರುವ ಯುದ್ಧದ ಚರ್ಚೆ ನಡೆಯುವುದಕ್ಕೆ ಸಾಧ್ಯವೇ?? " ಎಂದೆಲ್ಲಾ ಹೇಳುತ್ತಿದ್ದ ದ್ರೌಪದಿಯನ್ನು ನೋಡಿ ಭೀಮನ ಸಹನೆಯ ಕಟ್ಟೆ ಒಡೆಯಿತು.. ಯುದ್ಧ.. ಯುದ್ಧ.. ಯಾವ ಯುದ್ಧ? ಅಣ್ಣ ಧರ್ಮಜ ಬಂಧುಗಳ ಹತ್ಯೆಯ ಪಾಪದ ಭಾರ ಹೊರಲಾರನಂತೆ.. ಅರ್ಧ ರಾಜ್ಯದ ಬದಲು 5 ಊರುಗಳನ್ನಾದರೂ ದುರ್ಯೋಧನ ಕೊಟ್ಟರೆ ಸಾಕಂತೆ! ಅದಕ್ಕೆ ಶ್ರೀಕೃಷ್ಣನ ರಾಯಭಾರವಂತೆ! ಭೀಮನ ಮಾತುಗಳನ್ನು ಕೇಳಿ ಅಗ್ನಿ ಶಿಲೆಯಂತೆ ನಿಂತಳು ದ್ರೌಪದಿ! ಸಂಧಿಯೇ! ಇದಕ್ಕೆ ನೀನು ಒಪ್ಪಿರುವೆಯೋ? ಎಂದು ದ್ರೌಪದಿ ಕೇಳಿದಾಗ.. ಅಸಹನೆಯಿಂದಲೇ ಹೇಳಿದ ಭೀಮ.. "ಅಣ್ಣನ ಮಾತಿಗೆ ಎದುರಾಡಲಾಗದ ಹೇಡಿ ನಾನು!". ಭೀಮನ ಮಾತಿನಿಂದ ದ್ರೌಪದಿಯ ಸಹನೆಯ ಕಟ್ಟೆ ಒಡೆದಿತ್ತು...’ನೀನೂ ಸಹ ಉಳಿದವರಂತೆ ಅಧರ್ಮಕ್ಕೆ ಎದುರು ನಿಲ್ಲದ ಧರ್ಮರಾಯನ ತಮ್ಮಂದಿರಂತೆ ಬದುಕುವೆಯಾ? ಇದು ಪಾಂಡವರ ಜನ್ಮಕ್ಕೆ ಹಿಡಿದ ದೊಡ್ಡ ಶಾಪವಿರಬೇಕು!. ದ್ಯೂತದ ಆಟಕ್ಕೆ ನನ್ನನ್ನೇ ದಾಳವಾಗಿಸಿದಾಗಲೂ ಹೀಗೆ ಸುಮ್ಮನಿದ್ದೆ ಅಲ್ಲವೇ ನೀನು...? ನಾನು ಪಾಂಡವರ ನೆರಳಾಗಿ ಕಷ್ಟಕ್ಕೆ ಸುಖಕ್ಕೆ ಸಮಾನ ಪಾಲುದಾರಳಾಗಿ ಬದುಕಿದರೂ ನನ್ನ ಕಣ್ಣೀರಿಗೆ ಈ ಮೌನವೇ ಉತ್ತರ ಅಲ್ಲವೇ? ದ್ರುಪದರಾಜನ ಪುತ್ರಿ.. ಪಾಂಡವರ ಮಡದಿ.. ರಾಜಸೂಯ ಯಾಗದಲ್ಲಿ ಮಹಾರಾಣಿಯಾಗಿ ಭಾಗಿಯಾದ ನಾನು.. ಒಂದು ವರುಷ ವಿರಾಟನ ಹೆಂಡತಿಗೆ 'ದಾಸಿ'ಯಾಗಿ ಬದುಕು ಸವೆಸಿದರು ಪಾಂಡವರದು ಇದೇ ಹೇಡಿಮೌನ ಅಲ್ಲವೇ?? ನನ್ನ ಹೃದಯದ ಚೂರಗಳಾದ ನನ್ನ ಮಕ್ಕಳ ಲಾಲನೆ-ಪಾಲನೆ ಮಾಡಲಾರದ ನತದೃಷ್ಟೆ ನಾನು.. ನನ್ನ ತವರು ಮನೆಯಲ್ಲಿ ಬೆಳೆದ ನನ್ನ ಮಕ್ಕಳು ಮುಂದೂ ಪರರ ಆಶ್ರಯದಲ್ಲೇ ಇರಲಿ.. ಎನ್ನುವ ಭಾವನೆ ಇದೆಯೇ ಪಾಂಡವರಿಗೆ? ಅದಕ್ಕಾಗಿಯೇ ಈ ಮೌನವೇ? ಛೇ! ನಾನಿಷ್ಟು ಹೇಳುತ್ತಿದ್ದರೂ ಕಲ್ಲಿನಂತೆ ಕುಳಿತಿರುವೇಯಲ್ಲಾ ಭೀಮ... ಈಗಲೇ ಹೋಗು ಕೃಷ್ಣನಲ್ಲಿ.. ನನಗೆ ಸಂಧಿ ಬೇಡವೇ ಬೇಡ.. ಯುದ್ಧವೆ ಆಗಬೇಕು.. ದ್ರೌಪದಿಯ ಕೇಶ ದುಶ್ಯಾಸನ ತೊಡೆಯ ರಕ್ತದಿಂದ ತೋಯಬೇಕಿದೆ.. ನನ್ನ ಮಾನಕ್ಕೆ ಭಂಗತರುವ ಪ್ರಯತ್ನವೆಸಗಿದ ದುರ್ಯೋಧನನ ತೊಡೆ ಮುರಿಯ ಬೇಕಿದೆ... ಸಂಧಿ ಬೇಡವೇ ಬೇಡವೆಂದು ಹೇಳು. ದ್ರೌಪದಿಯ ಮಾತುಗಳಲ್ಲಿ ಬುಗಿಲೆದ್ದ ಕ್ರೋಧವಿತ್ತು. ಎಷ್ಟು ಹೇಳಿದರೂ ಕಲ್ಲಿನಂತೆ ಕುಳಿತಿರುವ ಭೀಮ ಬಗ್ಗುತ್ತಿಲ್ಲ ಎನ್ನುವ ಅಸಹಾಯಕತೆ ಭಾವ ದ್ರೌಪದಿಯ ಮನವನ್ನು ಕಾಡಿತು. ಸರಿ.. ಇನ್ನು ಯಾರನ್ನು ಬೇಡುವ.. ಗೋಗರೆಯುವ ಪ್ರಶ್ನೆಯೇ ಇಲ್ಲ.. ಪಾಂಡವರ ಸಹಾಯವೇ ನನಗೆ ಬೇಕಿಲ್ಲ.. ಪಾಂಡವರು ಯುದ್ಧಕ್ಕೆ ಹೆದರಿ ಹೇಡಿಗಳಂತೆ ಸಂಧಿಯನ್ನೇ ಮಾಡಿಕೊಳ್ಳ ಹೊರಟರೆ ನನ್ನ ನಿಲುವು ಬೇರೆಯೇ ಇದೆ.. ನಾನೇ ನನ್ನ ತಂದೆ ದ್ರುಪದನ.. ಅಣ್ಣ ದೃಷ್ಟದ್ಯುಮ್ನನ .. ಸಹಾಯದಿಂದ ಯುದ್ಧ ಮಾಡುತ್ತೇನೆ.. ಪಾಂಡವರು ಪಾಂಚಾಲಿಯ ಭಾವನೆಗೆ, ಮಾನಕ್ಕೆ, ಸುಖಕ್ಕೆ ಎಂದಿಗೂ ಬೆಲೆ ಕೊಟ್ಟಿಲ್ಲವೆಂಬುದು ಮತ್ತೊಮ್ಮೆ ಜಗತ್ತಿಗೆ ಜಾಹಿರವಾಗಲಿ. ಪಾಂಚಾಲಿಯ ಕಣ್ಣುಗಳು ನೋವು, ಅಸಾಹಯಕತೆ, ಸೇಡಿನ ಜ್ವಾಲೆಯಲ್ಲಿ ಮಿಂದೇಳುತ್ತಿರುವಂತೆ ಭೀಮನಿಗೆ ಕಂಡವು. ದ್ರೌಪದಿಯ ಮಾತು ಭೀಮಕಾಯವನ್ನು ಬಲವಾಗಿ ಚುಚ್ಚುತ್ತಿತ್ತು. ಅಗ್ನಿಪುತ್ರಿ ಹಚ್ಚಿದ ಬೆಂಕಿ ಭೀಮನ ಮನದಲ್ಲಿ ಕಿಡಿ ಹೊತ್ತಿಸಿತು. ಅವನ ಮನದಲ್ಲಿ ನಿಂತ ಅಸ್ಥಿರತೆಯು ಪಟ ಪಟನೆ ಸುಟ್ಟು ಕರಕಲಾಯಿತು. ಇದ್ದಕಿದ್ದಂತೆ ಭೀಮಘರ್ಜನೆ ಹೊರ ಹೊಮ್ಮಿತು, “ಪಾಂಚಾಲಿ ನಡೆ. ಸಂಧಾನಕ್ಕೆ ಹೊರಟ ಶ್ರೀಕೃಷ್ಣನಲ್ಲಿ ನಾನೇ ಹೇಳುತ್ತೇನೆ : ಸಂಧಿಯಲ್ಲಿ ನಮಗೆ ಮನವಿಲ್ಲ.. ಯುದ್ಧಕ್ಕೆ ಬೇರೆ ವಿಕಲ್ಪವಿಲ್ಲ” ಗುಡುಗಿದ ಭೀಮ ದಡದಡನೆ ಎದ್ದು ಹೊರನಡೆದಾಗ.. “ ನಾನು ಅಗ್ನಿಜೆ. ನನ್ನ ಸೆರಗಿನ ಬೆಂಕಿಯಿಂದ ಕೌರವರನ್ನು ಸುಡದೇ ಹೋದರೆ ಭವಿಷ್ಯದಲ್ಲಿ ಸೀರೆ ತೊಟ್ಟ ಹೆಂಗಳೆಯರು ಈ ಭೂಮಿಯಲ್ಲಿ ಮಾನ ಹೊತ್ತು ಬದುಕಲು ಸಾಧ್ಯವೇ ?” ದ್ರೌಪದಿಯ ವದನದಲ್ಲಿ ಮಹಾಭಾರತ ಯುದ್ಧ ಗೆದ್ದ ಭಾವ ಮೂಡಿತ್ತು! - ಸಂಗೀತಾ ವೈದ್ಯ, ಅಬುಧಾಬಿ ಸಂಗೀತಾ ವೈದ್ಯ : ಪ್ರಸ್ತುತದಲ್ಲಿ ಅಬುಧಾಬಿಯಲ್ಲಿ ನೆಲೆಸಿರುವ ಸಂಗೀತಾ ವೈದ್ಯ, ಎಮ್.ಎಸ್.ಸಿ. ಪದವೀಧರೆ. ಓದಿದ್ದು ವಿಜ್ಞಾನವಾದರೂ ಸಾಹಿತ್ಯ, ಯಕ್ಷಗಾನ ಅರ್ಥಗಾರಿಕೆ ಮುಂತಾದ ಕಲಾಮಾಧ್ಯಮಗಳಲ್ಲೂ ಅಪಾರ ಆಸಕ್ತಿ ಹೊಂದಿದವರು. ಮೂಲ ಯಲ್ಲಾಪುರದವರಾದ ಇವರು ವಿದ್ವಾಂಸರು, ಯಕ್ಷಗಾನ ಅರ್ಥಧಾರಿಗಳು, ಪ್ರಸಿದ್ಧ ಅಂಕಣಕಾರರು ಆಗಿರುವ ಶ್ರೀ ಅನಂತ ವೈದ್ಯ, ಯಲ್ಲಾಪುರ ಇವರ ಪುತ್ರಿ. ತಂದೆಯ ಅಪಾರ ಜ್ಞಾನದ ಗರಡಿಯಲ್ಲಿ ಬೆಳೆದ ಇವರು ಪ್ರತಿಭಾವಂತ ಬರೆಹಗಾರ್ತಿಯು ಹೌದು. ಪೌರಾಣಿಕ ಕತೆಯನ್ನು ವರ್ತಮಾನದ ನೆಲೆಗಟ್ಟಿನಲ್ಲಿ ಕಟ್ಟಿಕೊಡುವ ಅವರ ಬರೆಹಕ್ಕೆ ಅಪಾರ ಮೆಚ್ಚಿಗೆ ದೊರಕಿದೆ. ಪ್ರಸ್ತುತ ಕತೆ ಸಂಗೀತಾ ವೈದ್ಯರ ಪ್ರತಿಭೆಗೊಂದು ಉತ್ತಮ ಸಾಕ್ಷಿ

ಅಗ್ನಿಜೆ
bottom of page