top of page

ಹದಿಹರೆಯ ತಲ್ಲಣ



ಹದಹರೆಯ ವತ್ಸರಿಯೆ

ಹದಿನಾರು ವಯಕಳೆಯೆ

ಹದಚೆಲುವು ಮೂಡಿಹುದು ಚೆಂದಕಳೆಯೆ

ಹದವಾಗಿ ಗುಣಮಣಿಯೆ

ಮೆದುತನವ ನೀತಳೆಯೆ

ಮುದವಿರುವ ನಗುವದನ. ಮೆರೆಸು ತಿಳಿಯೆ

ಮೊದಲರಳಿದಾಕನಸು

ಮೆದುಮನದಿ ನೀ ಭರಿಸು

ಹದಮೀರಿದವಳಾಗಿ ಕೊರೆವ ಮನಸು

ಮದತೋರುವಾ ವಯಸು

ಮದನಾರಿಗಳ ಸರಿಸು

ಕುದಿಯದಿರು ಮೆದುಮಾತು ಗಳಲಿ ಸೊಗಸು

ಹೊಂಗನಸಿನಾ ವೊಲವು

ಕಂಗಳಿಗವೂ ಚೆಲುವು

ಚಂಗನೇಳುವ ಬಯಕೆಗಳಿವೆ ಕೆಲವು

ಕಂಗೆಡದಿರಲಿ ನಿಲುವು

ಭಂಗಕೆಡೆಗೊಡೆ ಮನವು

ಕoಗಾಲುಸುಳಿಯಲ್ಲಿ ಸಿಲುಕಿ ದಿನವು

ಹುಡುಗಾಟಕೆಡೆ ಗೊಡದೆ

ತಡೆಮನವ ಹರಿಬಿಡದೆ

ಚಡಪಡಿಸುತಿಹೆಯೇಕೆ ಮುಗುದೆ

ಹುಡುಕಾಟ ಸರಿಯಿರದೆ

ತೊಡಕೆರಗಿ ಬಲುಬಾಧೆ

ಮಿಡುಕುತಿರೆ ಫಲವೇನು ತಿಳಿಯದಾದೆ


ನಾಗೇಶ ಅಣವೇಕರ ಕಾರವಾರ


ಯಲ್ಲಾಪುರ ತಾಲೂಕಿನ ಮಂಚಿಕೇರಿಯ ನಾಗೇಶ ಮ.ಅಣವೇಕರ ಅವರು ಜೀವನೋತ್ಸಾಹದ ಕವಿ. ಕೊಂಕಣಿ ಭಾಷೆಯಲ್ಲಿ ಅವರ ಕವನ ಸಂಕಲನಗಳು ಪ್ರಕಟವಾಗಿವೆ. ಐವತ್ತಕ್ಕಿಂತ ಹೆಚ್ಚುಯಕ್ಷಗಾನ ತಾಳ ಮದ್ದಲೆಯ ಪ್ರಸಂಗ ಕರ್ತೃಗಳಾದ ಅವರು ಛಂದೋಬದ್ದವಾದ ಕಾವ್ಯ ರಚನೆಯಲ್ಲಿ ಪರಿಣತರು.ಹೊಸಗನ್ನಡ,ಹಳಗನ್ನಡಗಳಲ್ಲಿ ಕಾವ್ಯ ರಚಿಸಿರುವ ಶ್ರೀಯುತರು ಮಹಾಕಾವ್ಯ ರಚನೆಯಲ್ಲಿ ತೊಡಗಿರುತ್ತಾರೆ. ಅವರ ಈ ಕವನ ಕುಸುಮ ಷಟ್ಪದಿಯಲ್ಲಿ ರಚನೆಗೊಂಡಿದೆ.

ಕವಿ ನಾಗೇಶ ಅಣವೇಕರ ಅವರು ಸತ್ವಶಾಲಿ ಕವಿಯಾಗಿ ನಾಡಿನ ಗಮನ ಸೆಳೆಯಲಿ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ

30 views0 comments
bottom of page