top of page

ಹೆಸರಲ್ಲೇನಿದೆ

ಹೆಸರಲ್ಲೇನಿದೆ ಅನ್ನಬೇಡಿ! ಎಲ್ಲವೂ ಇರುವುದು ಹೆಸರಿನಲ್ಲಿ. ’ನೀನ್ಯಾಕೊ ನಿನ್ನ ಹಂಗ್ಯಾಕೊ, ನಿನ್ನ ನಾಮದ ಬಲವೊಂದಿದ್ದರೆ ಸಾಕೊ’ ಎಂದು ದಾಸರು ಹಾಡಿದ್ದಾರೆ. ನಾಮದ ನೂಲೇಣಿಯನ್ನು ಹಿಡಿದುಕೊಂಡು ಸ್ವರ್ಗದ ವರೆಗೂ ಹೋದವರಿದ್ದಾರೆ. ಇಂದಿಗೂ ಹೆಸರಿನ ಬಲದಲ್ಲಿ ಏನೇನೆಲ್ಲ ಆಗುತ್ತದೆ! ಗಾಂಧಿ ಎಂಬ ಹೆಸರು ಕೂಡ ಹಾಗೇ ಆಗಲಿಲ್ಲವೆ?


ಪ್ರತಿಯೊಬ್ಬರಿಗೂ ಒಂದೊಂದು ಕೆಲವೊಮ್ಮೆ ಎರಡೆರಡು ಹೆಸರಿರುತ್ತದೆ. ಇಟ್ಟ ಹೆಸರೊಂದು, ಕೊಟ್ಟ ಹೆಸರೊಂದು. ಕೆಲವು ಕಡೆ ತರುಣಿಯರಿಗೆ ಅಪ್ಪನ ಮನೆಯಲ್ಲಿ ಇಟ್ಟ ಹೆಸರೊಂದು, ಗಂಡನ ಮನೆಯಲ್ಲಿ ಇನ್ನೊಂದು – ಹೀಗೆ ಎರಡು ಹೆಸರಿರುತ್ತದೆ.


ಪ್ರತಿಯೊಬ್ಬರಿಗೂ ಹೆಸರು ಇರಲೇಬೇಕು. ಅಮೂರ್ತವನ್ನು ಮೂರ್ತೀಕರಿಸಿಕೊಳ್ಳಲು ಹೆಸರಿರಬೇಕು. ಹೆಸರು ಆ ವ್ಯಕ್ತಿಯ ಗುಣಸ್ವಭಾವವನ್ನು ಹೊಂದಿಕೊಂಡಿರಬೇಕೆಂದಿಲ್ಲ. ಭೀಮ ಎಂಬ ಹೆಸರಿನ ನರಪೇತಲ ವ್ಯಕ್ತಿಯನ್ನು ನಾನು ನೋಡಿದ್ದೇನೆ. ಹೆಸರು ಸುಂದರಮೂರ್ತಿ. ಆದರೆ ಆ ವ್ಯಕ್ತಿಯನ್ನು, ಅಬ್ಬ..! ನಾನಿಲ್ಲಿ ವರ್ಣಿಸಲಾರೆ.


ಚಿಕ್ಕ ಮಕ್ಕಳಿರುವಾಗ ಒಂದು ಆಶಯವನ್ನಿಟ್ಟುಕೊಂಡು ಹೆತ್ತವರು ತಮ್ಮ ಮಕ್ಕಳಿಗೆ ಹೆಸರಿಡುತ್ತಾರೆ. ದೊಡ್ಡವನಾದಾಗ ಆ ವ್ಯಕ್ತಿ ಹೆತ್ತವರ ಆಶಯದಂತೆ ಇರಲೇಬೇಕೆಂದಿಲ್ಲ. ಬೆಳೆದು ದೊಡ್ಡವರಾಗುತ್ತಿದ್ದಂತೆ ಆಶಯಕ್ಕೆ ವ್ಯತಿರಿಕ್ತವಾಗಿ ತನ್ನ ಗುಣಧರ್ಮವನ್ನು ತೋರಿಸಲೂಬಹುದು.


ಹೆಸರಿಡುವುದು ಹೆತ್ತವರ ಕರ್ತವ್ಯ ಮತ್ತು ಹಕ್ಕು. ’ನಾಮಕರಣ’ ಎಂಬ ಶಾಸ್ತ್ರ ಅದಕ್ಕಾಗಿ ಇದೆ. ಸಾಮಾನ್ಯವಾಗಿ ನಾಮಕರಣದ ದಿನ ಒಳ್ಳೆಯ ಒಂದು ಹೆಸರನ್ನು ಶಾಸ್ತ್ರೋಕ್ತ ವಿಧಾನದಂತೆ ಇಡಲಾಗುತ್ತದೆ. ಕೆಲವರಿಗೆ ಬುದ್ಧಿ ತುಂಬ ಚುರುಕಾಗಿರುತ್ತದೆ ಅಥವಾ ಚುರುಕಾಗಿರಲಿ ಎಂಬ ಆಶಯ ಹೆತ್ತವರಿಗಿರುತ್ತದೆ. ಆಗ ಮತಿವಂತ, ಬುದ್ಧಿವಂತ, ಜ್ಞಾನವಂತ ಮುಂತಾದ ಹೆಸರನ್ನಿಡುತ್ತಾರೆ. ಅದೇ ರೀತಿ ಶೀಲವಂತ, ಗುಣಶೀಲ, ಗುಣವತಿ ಮುಂತಾದ ಹೆಸರುಗಳನ್ನಿಡುವುದು ಕಾಣುತ್ತದೆ.


ನಾರಾಯಣ ಎಂಬುದು ದೇವರ ಹೆಸರು. ಆ ದೇವರು ಸತ್ಯನಾರಾಯಣನಾದರೆ ಸುಳ್ಳು ಹೇಳುವುದನ್ನು ಕನಸು ಮನಸಿನಲ್ಲಿಯೂ ಎಣಿಸಲಾರೆವು. ’ಸತ್ಯ’ನಾರಾಯಣನೇ ಆಗಿರಲಿ ಎಂಬ ಉದ್ದೇಶದಿಂದ (ಸುಳ್ಳು ನಮ್ಮ ಮನೆ ದೇವರಾಗದಿರಲಿ ಎಂಬ ಆಶಯದಿಂದ) ಸತ್ಯನಾರಾಯಣ ಎಂಬ ಹೆಸರನ್ನಿಡುತ್ತಾರೆ.


ಹಾಲು ಮಜ್ಜಿಗೆಗೆ ತತ್ತ್ವಾರವಾಗದಿರಲಿ, ಸದಾ ಕ್ಷೀರಸಾಗರದಲ್ಲಿ ಮಲಗಿರುವ ಶ್ರೀಮನ್ನಾರಾಯಣನಂತೆ ಇರಲಿ ಎಂಬ ಉದ್ದೇಶದಿಂದ ಕ್ಷೀರಸಾಗರ ಭಟ್ಟ ಎಂಬ ಹೆಸರಿಡುತ್ತಾರೊ ಏನೊ!. ಕೆಲವೊಂದು ಸಲ ಕ್ಷೀರಸಾಗರ ಭಟ್ಟನ ಮನೆಯಲ್ಲಿ ಹನಿ ಮಜ್ಜಿಗೆಗೂ ಗತಿ ಇರುವುದಿಲ್ಲ.


ಕೂದಲು ಕಡಿಮೆ ಇರುವ ಸುಕೇಶಿನಿಯರು, ನೀಲವೇಣಿಯರು ಆಗೀಗೊಮ್ಮೆ ಕಾಣ ಸಿಗುತ್ತಾರೆ. ಲತಾ ಎಂಬ ಹೆಸರಿನವರು ಲತೆಯಂತೆ ಇರುತ್ತಾರೆಂಬ ನಂಬಿಕೆಯೇನಿಲ್ಲ. ಸುಹಾಸಿನಿ ಎಂಬ ಹೆಸರಿನವರು ನಗುತ್ತಲೇ ಇರಬೇಕೆಂದಿಲ್ಲ. ಗಣಪತಿ ಎಂಬ ಹೆಸರಿನವರಿಗೆ ಡೊಳ್ಳೊಟ್ಟೆ ಇರಲೇಬೇಕೆಂದಿಲ್ಲ. ಸುಮತಿ, ಚಾರುಮತಿಯರಿಗೆ ಒಳ್ಳೆಯ ಮತಿ ಇರುತ್ತದೆ ಅಂತೇನಿಲ್ಲ. ಬಾಲಕೃಷ್ಣ ಎಂಬ ಹೆಸರಿನವರು ಎಂದೆಂದಿಗೂ ’ಬಾಲ’ರೇ ಆಗಿರುವುದಿಲ್ಲ. ಭಗವಾನ್, ದೇವರು ಮುಂತಾದ ಹೆಸರನ್ನಿಟ್ಟುಕೊಂಡು ಅದಕ್ಕೆ ವ್ಯತಿರಿಕ್ತವಾಗಿ ವರ್ತಿಸುವವರು; ರಾಕ್ಷಸ ಎಂಬ ಹೆಸರನ್ನಿಟ್ಟುಕೊಂಡು ದೈವಭೀರು ಲೋಕಸಜ್ಜನನಾಗಿ ಬಾಳಿದವರು ನಮ್ಮಲ್ಲಿದ್ದಾರೆ. ಮುತ್ತು, ರತ್ನ, ಚಿನ್ನ, ಬೆಳ್ಳಿ ಎಂಬ ಹೆಸರಿನ ಸ್ನೇಹಿತರು ನನಗಿದ್ದಾರೆ. ಅದೇ ರಿತಿ ಮಿಂಚು, ಮಳೆ, ಇಳೆ, ಆಕಾಶ, ಧರೆ, ಲೋಕ, ವಿಶ್ವ ಮುಂತಾದ ಹೆಸರಿನವರಿದ್ದಾರೆ. ಮೊಸಳೆ, ಕರಡಿ, ಕುದುರಿ (ಕುದುರೆ) ಎಂಬ ಹೆಸರಿನವರು ನನ್ನ ಗೆಳೆಯರಾಗಿದ್ದಾರೆ.


(ತಿರುಪತಿಯ) ತಿಮ್ಮಪ್ಪನಂತಾಗಲೆಂದು ತಿಮ್ಮಪ್ಪ ಎಂಬ ಹೆಸರಿಡುತ್ತಾರೆ; ಆದರೆ ಅವರು ಬಡವರ ರಾಜ ಆಗಿರುತ್ತಾರೆ! ಬಾಲಗಂಗಾಧರ ತಿಲಕರಿಗೆ ’ಲೋಕಮಾನ್ಯ’ ಎಂಬುದು ಬಿರುದು. ಆದರೆ ’ಲೋಕಮಾನ್ಯ ತಿಲಕ್’ ಎಂದೇ ಹೆಸರಿಟ್ಟುಕೊಂಡವರನ್ನು ನಾನು ನೋಡಿದ್ದೇನೆ. ರವೀಂದ್ರನಾಥ ಟ್ಯಾಗೋರ್, ಆಶುತೋಷ್ ಎಂದೆಲ್ಲ ಹೆಸರಿಟ್ಟುಕೊಂಡ ಕನ್ನಡಿಗರಿದ್ದಾರೆ.


ಪ್ರತಿಯೊಂದು ಹೆಸರಿಗೂ ಒಂದು ಸಾಂಸ್ಕೃತಿಕ ಇತಿಹಾಸ ಇರುತ್ತದೆ. ಕನ್ನಡಿಗರು ಬೆಂಗಾಳಿ, ಮರಾಠಿ ಹೆಸರನ್ನಿಟ್ಟುಕೊಳ್ಳುವ ಪರಿಪಾಠ ಕಾಣಿಸಿಕೊಳ್ಳುತ್ತಿದೆ. ಪಾಪ, ಅಂಥವರಿಗೆ ತಿಳಿಹೇಳುವವರು ಯಾರೂ ಇರುವುದಿಲ್ಲ. ಕೃಷ್ಣ ಎಂಬ ಹೆಸರನ್ನು ಹಿಂದಿ ಪ್ರಭಾವದಿಂದ ’ಕಿಷನ್’ ಎಂದು ಮಾಡಿಕೊಳ್ಳುವವರಿದ್ದಾರೆ.


ಹೆಸರುಗಳು ನಾಮಪದಗಳೇ ಆಗಿರಬೇಕು ಎಂಬ ನಿಯಮ ಹಿಂದೆ ಇತ್ತು; ಹೆಸರುಗಳ ಹಿಂದೆ ಒಂದು ಕ್ರಮ, ಸಂಪ್ರದಾಯ ಇತ್ತು. ಹೆಚ್ಚಾಗಿ ದೇವರ ಹೆಸರುಗಳನ್ನೇ ಇಡುತ್ತಿದ್ದರು. ಈಗ ಫ್ಯಾಷನ್ ಹೆಸರಿನಲ್ಲಿ ಕ್ರಿಯಾಪದಗಳು, ಸರ್ವನಾಮಗಳು, ರೂಢನಾಮಗಳು, ವಿಶೇಷಣಗಳು, ಬೇರೆ ದೇಶದ ಹೆಸರುಗಳನ್ನೆಲ್ಲ ಇಡುವವರಿದ್ದಾರೆ. ಹೆಸರುಗಳ ಹಿಂದೆ ಇರುವ ಸಂಪ್ರದಾಯ, ಚಾರಿತ್ರಿಕತೆ, ಇತಿಹಾಸಗಳು ಈಗ ಕಣ್ಮರೆಯಾಗತೊಡಗಿವೆ.


ವಾರದ ಏಳು ದಿನಗಳ ಹೆಸರನ್ನು – ಯಾವ ವಾರ ಹುಟ್ಟಿದರೆಂಬ ನೆನಪಿಗೆ - ಮಕ್ಕಳಿಗೆ ಇಡುವ ಪರಿಪಾಠ ತುಳು ಜನರಲ್ಲಿ ಹಿಂದೆ ಇತ್ತು. ಆದಿತ್ಯ (ಐತ), ಸೋಮ (ಚೋಮ), ಮಂಗಳ (ಅಂಗಾರ), ಬುಧ (ಬೂದ), ಗುರು (ಗುರುವ), ಶುಕ್ರ (ತುಕ್ರ ಅಥವಾ ಚುಕ್ರ), ಶನಿ (ಚನಿಯ) – ಹೀಗೆ. ಇದೊಂದು ರೂಢಿ ಮತ್ತು ಪರಂಪರೆ.


ಮಕ್ಕಳು ಒಳ್ಳೆಯವರಾಗಿ ಬಾಳಿ ಬದುಕಬೇಕೆಂಬುದು ಹೆತ್ತವರ ಬಯಕೆ. ಯಾರೂ ಹೆಸರಿನಿಂದ ಒಳ್ಳೆಯವರು/ಕೆಟ್ಟವರು ಆಗುವುದಿಲ್ಲ, ನಿಜ. ಒಳ್ಳೆಯದು ಕೆಟ್ಟದು ಎಂಬುದು ಸಾಂದರ್ಭಿಕ/ಸಾಮಯಿಕ (relative) ಆಗಿರುತ್ತದೆ. ಕೆಲವರಿಗೆ ಒಳ್ಳೆಯದಾಗಿರುವುದು ಕೆಲವರಿಗೆ ಕೆಟ್ಟದಾಗಿ ಕಾಣಬಹುದು. ಅದೇ ರೀತಿ ಕೆಲವರಿಗೆ ಕೆಟ್ಟದಾಗಿ ಕಾಣುವುದು ಇನ್ನು ಕೆಲವರಿಗೆ ಒಳ್ಳೆಯದಾಗಿ ಕಾಣಬಹುದು. ವ್ಯಕ್ತಿತ್ವ ಒಳ್ಳೆಯದು ಕೆಟ್ಟದರ ಒಂದು ಸಂಕೀರ್ಣ. ಸನ್ನಡತೆಯಿಂದ ಬಾಳಿ ಬದುಕಿ ಹೆಸರಿಗೆ ಅರ್ಥಪೂರ್ಣತೆಯನ್ನು ತರುವುದು ಆಯಾ ವ್ಯಕ್ತಿಯ ಜವಾಬ್ದಾರಿ. ಕೆಡುಕನ್ನು ಮೆಟ್ಟಿ ಒಳಿತಿನ ಕಡೆ ಸಾಗುವುದೇ ಜೀವನ.


ಡಾ. ವಸಂತಕುಮಾರ ಪೆರ್ಲ

43 views1 comment
bottom of page