top of page

ಹೆಸರುಗಳು

ಡಾ. ಪೆರ್ಲರ ವಾರಾಂಕಣ

ವಸಂತೋಕ್ತಿ – 8.


ಹೆಸರಿನಲ್ಲಿ ಏನಿದೆ ಅನ್ನಬೇಡಿ. ಹೆಸರು ಅಂದರೆ ಅಸ್ಮಿತೆ, ಗುರುತು ಮತ್ತು ಅದು ನಮ್ಮ ಸಹಿ ಇದ್ದಂತೆ. ಮನುಷ್ಯನಿಗೆ ಒಂದು ಮುಖ ಬೇಕಲ್ಲವೇ, ಹಾಗೆ ಹೆಸರು ಅಂದರೆ ನಮ್ಮ ಮುಖ.

ಹೆಸರುಗಳು ನಮ್ಮ ಸಾಂಸ್ಕೃತಿಕ ಇತಿಹಾಸ ತಿಳಿಸುವ ಕುರುಹುಗಳಲ್ಲಿ ಒಂದು. ಹೆಸರುಗಳ ಮೂಲಕ ಒಂದು ನಾಡಿನ, ಒಂದು ಸಮುದಾಯದ ಮತ್ತು ಅಷ್ಟೇಕೆ, ವ್ಯಕ್ತಿಗಳ ಇತಿಹಾಸ ಮತ್ತು ಪರಂಪರೆಯನ್ನು ಕೂಡ ಬಗೆಯಬಹುದಾಗಿದೆ.

ಉದಾಹರಣೆಗೆ ‘ಕರ್ನಾಟಕ’ ಎಂಬ ಹೆಸರನ್ನೇ ತೆಗೆದುಕೊಳ್ಳೋಣ. ಇದು ಇಲ್ಲಿನ ಭೂಪರಿಸರವನ್ನು ಮತ್ತು ನಮ್ಮ ಜನಪದವನ್ನು ಒಟ್ಟಾಗಿ ಪರಿಚಯಿಸತಕ್ಕ ಹೆಸರಾಗಿದೆ. ಕರುತ್ತ (ಕರಿಯದಾದ, ಕಪ್ಪಾದ)+ನಾಟ್(ನಾಡು)=ಕರ್ನಾಟಕ ಆಗಿದೆ. ದಖ್ಖಣ ಪೀಠಭೂಮಿಯಾದ ಇಲ್ಲಿನ ಕಪ್ಪು ಮಣ್ಣಿನಲ್ಲಿ ಸಮೃದ್ಧವಾಗಿ ಹತ್ತಿ ಹಾಗೂ ಬತ್ತ ಬೆಳೆಯುತ್ತದೆ. ಇಂತಹ ಭೂಭೌತಿಕ ವಿಶೇಷತೆಯಿಂದ ‘ಕರ್ನಾಟಕ’ ಎಂಬ ಹೆಸರು ಅರ್ಹವಾಗಿಯೇ ಪ್ರಾಪ್ತವಾಗಿದೆ.

ಅದೇ ರೀತಿ ಸಮುದಾಯಗಳ ಹೆಸರುಗಳು ಕೂಡ. ಹೈಗರು, ನಾಯಕರು, ಬೇಡರು, ಹಸಲರು, ಭೈರರು ಮುಂತಾದ ಹೆಸರುಗಳನ್ನು ಹೇಳಿದ ಕೂಡಲೇ ಅವರ ಬದುಕು ಮತ್ತು ಸಾಂಸ್ಕೃತಿಕ ಇತಿಹಾಸ ಕಣ್ಣಮುಂದೆ ಬಂದುಬಿಡುತ್ತದೆ.

ಹಿಂದಿನ ಕಾಲದಲ್ಲಿ ಮಕ್ಕಳಿಗೆ ಹೆಸರಿಡುವಾಗ ಒಂದು ನಿರ್ದಿಷ್ಟ ಪದ್ಧತಿಯನ್ನು ಅನುಸರಿಸುತ್ತಿದ್ದರು. ಹಿರಿಯ ಮಗನಿಗೆ ಪಿತಾಮಹನ (ಅಜ್ಜನ) ಹೆಸರು. ಎರಡನೇ ಮಗನಿಗೆ ಮಾತಾಮಹನ (ತಾಯಿಯ ತಂದೆ) ಹೆಸರನ್ನಿಡುತ್ತಿದ್ದರು. ಅದೇ ರೀತಿ ಹಿರಿಯ ಮಗಳಿಗೆ ಪಿತಾಮಹಿಯ (ಅಜ್ಜಿಯ) ಹೆಸರು ಮತ್ತು ಎರಡನೇ ಮಗಳಿಗೆ ಮಾತಾಮಹಿಯ (ತಾಯಿಯ ಅಮ್ಮ) ಹೆಸರಿಡುತ್ತಿದ್ದರು. ಈ ಪದ್ಧತಿಯಿಂದ ಹಲವು ತಲೆಮಾರುಗಳು ಕಳೆದರೂ ನಮ್ಮ ಹಿರಿಯರ ಹೆಸರುಗಳನ್ನು ಮತ್ತು ನಮ್ಮ ಧಾರ್ಮಿಕ ಪರಂಪರೆಯನ್ನು ನೆನಪಿಟ್ಟುಕೊಳ್ಳಲು ಅನುಕೂಲವಾಗುತ್ತಿತ್ತು.

ಧಾರ್ಮಿಕ ಪರಂಪರೆ ಎಂದರೆ ಸ್ಮಾರ್ತರೋ ಮಾಧ್ವರೋ ಶ್ರೀವೈಷ್ಣವರೋ ಅಥವಾ ಇನ್ನಾವ ಪಂಗಡ ಎಂಬುದು. ಶಂಕರನಾರಾಯಣ ಎಂಬ ಹೆಸರು, ಗೋವಿಂದ ಎಂಬ ಹೆಸರು, ಶ್ರೀನಿವಾಸ ಎಂಬ ಹೆಸರು ಅವರವರ ಮತಪರಂಪರೆಯನ್ನು ತೋರಿಸುತ್ತಿತ್ತು. ಹೆಸರುಗಳು ಅವರವರ ಮತಪರಂಪರೆ, ಜಾತಿಪದ್ಧತಿಗೆ ಅನುಗುಣವಾಗಿ ಇರುತ್ತಿತ್ತು.

ಈಗಿನವರು ತಮ್ಮ ಮಕ್ಕಳಿಗೆ ಪರಂಪರೆ ಮತ್ತು ಹಿರಿಯರ ತಲಪಾಯವಿಲ್ಲದ ಏನೇನೋ ಹೆಸರಿಡುವುದು ಕಂಡುಬರುತ್ತದೆ. ಕೆಲವೊಮ್ಮೆ ಅವಕ್ಕೆ ಅರ್ಥವೇ ಇರುವುದಿಲ್ಲ! ಇನ್ನು ಕೆಲವೊಮ್ಮೆ ಅರ್ಥಾರ್ಥ ಸಂಬಂಧವಿರದ ವಿಚಿತ್ರ ಹೆಸರುಗಳು ಕಾಣಿಸಿಕೊಳ್ಳುತ್ತವೆ. ರವೀಂದ್ರನಾಥ ಠಾಗೋರ್, ಅಶುತೋಷ್, ಅವನೀಂದ್ರನಾಥ ಮುಂತಾಗಿ ಹೆಸರಿಟ್ಟುಕೊಂಡಿರುವ ಕನ್ನಡಿಗರಿದ್ದಾರೆ. ಅವರು ಬಂಗಾಳಿಗಳೇನೋ ಎಂಬ ಭಾವನೆ ಮೇಲ್ನೋಟಕ್ಕೆ ಉಂಟಾಗುತ್ತದೆ.

ಹೆಸರುಗಳು ದಾಖಲೆಗಳು. ಅವನ್ನು ಬದಲಿಸುವುದರಿಂದ ಪರಂಪರೆ ನಾಶವಾಗುತ್ತದೆ. ಕಾಸರಗೋಡಿನ ಪೆರ್ಲದ ಬಳಿ ‘ಮೈರೆ’ ಎಂಬ ಗ್ರಾಮವಿದೆ. ಇದು ಪಕ್ಷಿಗಳಿಗೆ ಸಂಬಂಧಿಸಿದ ತುಳುಮೂಲದ ಒಂದು ಹೆಸರು. ಭಾಷಾವಾರು ಪ್ರಾಂತ ರಚನೆಯ ಸಂದರ್ಭದಲ್ಲಿ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು ತಾನೇ. ಮಲಯಾಳಿಗರ ಪ್ರಾಬಲ್ಯ ಶುರುವಾಯಿತು. ಮಲಯಾಳದಲ್ಲಿ ‘ಮೈರೆ’ ಎಂಬುದಕ್ಕೆ ಅದೇನೋ ಕೆಟ್ಟ ಅರ್ಥ ಇದೆಯಂತೆ. ಜಿಲ್ಲಾಡಳಿತವು ಮೈರೆ ಎಂಬ ಹೆಸರನ್ನು ಬದಲಿಸಿ ‘ಶೇಣಿ’ ಎಂದು ನಾಮಕರಣ ಮಾಡಿತು. ಶೇಣಿ ಎಂಬುದು ಮೈರೆಯ ಪಕ್ಕದ ಊರು. ಮೈರೆ ಎಂಬುದಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಅದನ್ನು ಮರೆಮಾಚಲಾದೀತೇ? ಜನ ವಿರೋಧಿಸಿದರು. ಪ್ರತಿಭಟಿಸಿದರು. ಆದರೆ ಸರಕಾರೀ ದಾಖಲೆಗಳಲ್ಲಿ ಶೇಣಿ ಎಂದೇ ನಮೂದಿಸಲಾಗುತ್ತಿದೆ.

ಆಯಾ ಪ್ರದೇಶದ ಭಾಷೆ ಮತ್ತು ಸಂಸ್ಕೃತಿಯ ಪ್ರಭಾವ ಹೆಸರುಗಳ ಹಿಂದೆ ಇರುತ್ತದೆ. ಅದು ಅತ್ಯಂತ ಸಹಜವಾದುದು. ಅದನ್ನು ಮರೆಮಾಡಕೂಡದು ಮತ್ತು ಅದರ ತಂತು ಕಡಿಯಬಾರದು. ಅದು ಮುಂದಿನವರ ಅಧ್ಯಯನಕ್ಕೆ ಬೇಕು. ಭಾಷೆ, ಸಂಸ್ಕೃತಿ, ಜನಪದ ಮತ್ತು ನಾಡಿಗೆ ಸಂಬಂಧಿಸಿದ ಅಮೂಲ್ಯ ಆಕರಗಳು ಹೆಸರುಗಳಲ್ಲಿ ಅಡಕವಾಗಿರುತ್ತವೆ. ಶಿವಸಂಬಂಧಿ, ವಿಷ್ಣುಸಂಬಂಧಿ, ದೇವಿಸಂಬಂಧಿ, ಆಚರಣೆ ಆರಾಧನೆ ಸಂಬಂಧಿ ಹೆಸರುಗಳು ತುಂಬ ಕುತೂಹಲಕರವಾಗಿದ್ದು ಅಂತಹ ಹೆಸರುಗಳನ್ನಿಡುವ ಪರಂಪರೆ ಇತ್ತಿತ್ತಲಾಗಿ ಕಣ್ಮರೆಯಾಗುತ್ತಿದೆ. ಉದಾಹರಣೆಗೆ ದೇವಸ್ಥಾನ ಪರಿಚಾರಿಕೆಯ ಸುತ್ತ ಇರುವ ಮೊಕ್ತೇಸರ, ಅಡಿಗ, ತಂತ್ರಿ, ಭಂಡಾರಿ, ಕೊಟ್ಟಾರಿ, ಪಾಟಾಳಿ, ಪಾತ್ರಿ ಮುಂತಾದ ಉಪನಾಮಗಳು ದೊಡ್ಡ ಪರಂಪರೆಯನ್ನು ಅನಾವರಣ ಮಾಡುತ್ತವೆ.

ಆಧುನಿಕ ನಾಗರಿಕತೆಯು ಸರ್ವಸಮಾನವಾದ, ಸಪಾಟಾದ ಪದ್ಧತಿಯೊಂದನ್ನು ಪ್ರತಿಪಾದಿಸುತ್ತಿದೆ. ಅಂದರೆ ಇದು ಅಗಲದ ಕಡೆಗೆ (width) ದೃಷ್ಟಿ ನೆಟ್ಟಿದೆಯೇ ಹೊರತು ಆಳದ ಕಡೆಗೆ (depth) ನೋಡುವುದಿಲ್ಲ. ಈ ಏಕರೂಪತೆಯು ಬಹುತ್ವವನ್ನು ನಾಶ ಮಾಡುತ್ತದೆ. ಹವಾಮಾನ ಮತ್ತು ಸ್ಥಳೀಯವಾದ ಭೂಭೌತಿಕ ವಿಶೇಷತೆ – ವೈವಿಧ್ಯಗಳು ಬಹುತ್ವವನ್ನು ಉಂಟುಮಾಡುವ ಪ್ರಮುಖ ಅಂಶಗಳಾಗಿವೆ. ಬಹುತ್ವವನ್ನು ನಿರಾಕರಿಸುವುದೆಂದರೆ ಪ್ರಕೃತಿಯನ್ನು ನಿರಾಕರಿಸಿದಂತೆ. ಇದು ಪ್ರಕೃತಿ ವಿರೋಧಿಯಾದ ನಡೆ.

ಪಾಶ್ಚಾತ್ಯರಿಂದ ಹುಟ್ಟಿಬಂದ ಆಧುನಿಕ ನಾಗರಿಕತೆಯು ಏಕರೂಪತೆಯನ್ನು ಹೇರುವ ಮೂಲಕ ನಮ್ಮ ಜನಪದ ಶ್ರೀಮಂತಿಕೆಯನ್ನೂ ವೈವಿಧ್ಯವನ್ನೂ ನಾಶ ಮಾಡಿದೆ. ಏಕರೂಪತೆಯನ್ನು ತರಲು ಎಷ್ಟೇ ಪ್ರಯತ್ನಿಸಿದರೂ ಹವಾಮಾನ ಮತ್ತು ಪ್ರಾಕೃತಿಕ ಅಂಶಗಳಿಂದ ಪ್ರಭಾವಿತವಾಗುವ ಮನುಷ್ಯನ ಚಹರೆ, ಭಾಷೆ, ಆಹಾರ, ಸಂಸ್ಕೃತಿ ಮುಂತಾದ ವಿಚಾರಗಳಲ್ಲಿರುವ ಭಿನ್ನತೆಗಳನ್ನು – ವೈಶಿಷ್ಟ್ಯಗಳನ್ನು ತೊಡೆದು ಹಾಕಲು ಸಾಧ್ಯವಾಗುವುದಿಲ್ಲ. ಸ್ನಾನ ಮಾಡದೆ ಪೌಡರ್ ಹಾಕಿಕೊಂಡರೆ ಹೇಗೋ ಹಾಗೆ ಬಾಹ್ಯದಲ್ಲಿ ಮಾತ್ರ ಏಕರೂಪದಂತೆ ಕಂಡರೂ ಆಂತರ್ಯದಲ್ಲಿ ಅಗಾಧವಾದ ಅಂತರ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಯಾವುದೋ ಉರುಬಿನಲ್ಲಿ ಏಕರೂಪತೆಯ ಕಡೆಗೆ ಹೊರಟರೂ ಬದುಕಿನ ಕೊನೆಗಾಲದಲ್ಲಿ ಬೇರಿನ ಸೆಳೆತವನ್ನು ಮತ್ತು ಆ ಮೂಲಕ ಅಸ್ಮಿತೆಯ ಹಪಹಪಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ಕಾಲ ಮೀರಿರುತ್ತದೆ.

ಬಹುತ್ವ ಮತ್ತು ವೈವಿಧ್ಯವನ್ನು ನಿರಾಕರಿಸಿ ಏಕರೂಪತೆ ತರುವುದರಿಂದ ಖಂಡಿತ ಉದ್ಧಾರ ಆಗುವುದಿಲ್ಲ. ಜಗಳಗಳು ಹೆಚ್ಚಾಗುತ್ತವೆ, ಅಷ್ಟೇ! ನಮ್ಮ ಜಾನಪದವು ನಮ್ಮ ಹೆಮ್ಮೆ.


ಡಾ.ವಸಂತಕುಮಾರ ಪೆರ್ಲ



60 views0 comments
bottom of page