top of page

ಹಿರಿಯನೆಂದರೆ

ಹಿರಿಯನೆಂದರೆ ಬರಿಯ ವಯಸ್ಸೇ ತನುವಿಗೆ

ಹರಸಿ ಎಳೆಯರ ಹೊಸ ದಾರಿ

ತೋರ್ಪ ದೀವಿಗೆ

ತನ್ನ ತಾನರೆದು ಗಂಧ ಬೀರುವ ಶ್ರೀಗಂಧದ ಮರ

ಹೊನ್ನ ಕಲಶದಿ ಶೋಭಿಪುದು

ಜವಾಬ್ದಾರಿಯರಿತರೆ ಶ್ರೀಧರ



ಹಿರಿಯರು ಎಂದರೆ ಯಾರು ? ಕೇವಲ ವಯಸ್ಸಿನ ಆಧಾರದ ಮೇಲೆ ಅವರನ್ನು ಅಳೆಯಬಹುದೆ? ವಯಸ್ಸಾದವರೆಲ್ಲ ಹಿರಿಯರಾಗಬಹುದೆ? ವಯಸ್ಸಿನಲ್ಲಿ ಹಿರಿಯರಾದರೂ ಯಾವುದೇ ಜವಾಬ್ದಾರಿ ವಹಿಸಿಕೊಳ್ಳದ ವ್ಯಕ್ತಿಗಳು ನಮ್ಮ ಸಮಾಜದಲ್ಲಿ ಕಾಣಸಿಗುತ್ತಾರೆ. ಎಲ್ಲ ಜವಾಬ್ದಾರಿ ವಹಿಸಿಕೊಂಡು ಕಿರಿಯರನ್ನು ಮುನ್ನಡೆಸುವವರೂ ಇಲ್ಲದಿಲ್ಲ.

ಕೇವಲ ಕಾಯಕ್ಕೆ ವಯಸ್ಸಾದರೆ ಅವರು ಹಿರಿಯರೆಂಬ ಅರ್ಹತೆಗೆ ಪಾತ್ರರಾಗಬಹುದೆ? ಕತ್ತೆಗೂ ವಯಸ್ಸಾಗುತ್ತದೆ ಎಂದು ಮೂದಲಿಸುವುದನ್ನು ಕಂಡಿದ್ದೇವೆ.

ತನಗಿಂತ ಕಿರಿಯರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಅವರು ಮಾಡಿದ ಕೆಲಸಗಳನ್ನು ಪರಾಮರ್ಶಿಸಿ, ಅವರನ್ನು ಹರಸಿ ಬೆಳೆಸಿದ ಅದೆಷ್ಟೋ ಹಿರಿಯರು ಕಿರಿಯರ ಮನಸ್ಸು ಮತ್ತು ಹೃದಯಗಳಲ್ಲಿ ಸದಾ ಅಮರರಾಗಿದ್ದಾರೆ. ಅವರು ಕಿರಿಯರಿಗೆ ಹೊಸದಾರಿ ತೋರಿಸುವ ದಾರಿದೀಪವಿದ್ದಂತೆ. ಶ್ರೀಗಂಧದ ಮರ ತನ್ನನ್ನು ತಾನು ತೇದುಕೊಂಡು ಪರಿಮಳ ದ್ರವ್ಯವನ್ನು ಕೊಡುತ್ತದೆ. ತನ್ನನ್ನು ತಾನು ಸುಟ್ಟುಕೊಂಡು ಸುವಾಸನೆಯನ್ನು ಪಸರಿಸುತ್ತದೆ. ಅಂತೆಯೇ ಹಿರಿಯರೂ ಕೂಡಾ.

ಆದರೆ ಕೆಲವು ಹಿರಿಯರು ಹಿರಿತನದ ಜವಾಬ್ದಾರಿಗಳನ್ನು ಇತರರಿಗೆ ವರ್ಗಾಯಿಸಿ ತಾವು 'ಸೇಫ್ ಜೋನ್‌ ' ನಲ್ಲಿ ಇರಬಯಸುತ್ತಾರೆ. ಯಾವುದೇ ಕೆಲಸ ಬಂದರೂ ನಯವಾಗಿ ಜಾರಿಸಿಕೊಂಡು ಹಾಯಾಗಿರುತ್ತಾರೆ. ಸುಲಭವಾಗಿ ಲಾಭವಾಗುವ ಸಂದರ್ಭವನ್ನು ಬಿಟ್ಟು ಉಳಿದ ವೇಳೆಯಲ್ಲಿ ಉದ್ದೇಶಪೂರ್ವಕವಾಗಿ ತಾವು ಹಿರಿಯರೆಂಬುದನ್ನು ಮರೆತುಬಿಡುತ್ತಾರೆ. ಜವಾಬ್ದಾರಿ ವಹಿಸಿಕೊಳ್ಳುವ ಸಂದರ್ಭ ಬಂದಾಗೆಲ್ಲ ಗಾವುದ ದೂರವೇ ಉಳಿದುಬಿಡುತ್ತಾರೆ. ಆದರೆ ಹಿರಿತನದ ಗೌರವದ ಸಂದರ್ಭ ಬಂದಾಗ, ಅದಕ್ಕೆ ಭಾಜನರಾಗಲು ಮುಂದಿರುವುದನ್ನು ಕಂಡಿದ್ದೇವೆ. ಇದು ಅದೆಷ್ಟೋ ಕುಟುಂಬ, ಕಚೇರಿಗಳಲ್ಲಿ ಕಂಡುಬರುವ ಸಂಗತಿ. ಇಂಥ ಹಿರಿಯರಿಗೆ ವ್ಯತಿರಿಕ್ತವಾಗಿ, ಎಳೆಯರನ್ನು ಕೈಹಿಡಿದು ಮುನ್ನಡೆಸಿ, ಕೆಲಸ ಕಲಿಸಿ, ಹಿರಿತನದ ಜವಾಬ್ದಾರಿಗಳನ್ನು ಚಾಚೂ ತಪ್ಪದೇ ವಹಿಸಿಕೊಂಡು ದಣಿದ ಹಿರಿಯರೆಂಬ ಅದಮ್ಯ ಚೇತನಗಳು ಚಿನ್ನದ ಕಲಶಗಳಂತೆ ಆ ಕುಟುಂಬ, ಕಚೇರಿ, ಸಂಘಟನೆಗಳ ಶಿಖರಗಳ ಮೇಲೆ ಶೋಭಿಸುತ್ತಿದ್ದಾರೆ,ವಿರಾಜಮಾನರಾಗಿ... ಯಜಮಾನರಾಗಿ

- ಶ್ರೀಧರ ಶೇಟ್ ಶಿರಾಲಿ

17 views0 comments
bottom of page