top of page

ಹೆಣ್ಣಿನ ಒಡಲಾಳದ ಮೌನಗರ್ಭದ ಸಾಲುಗಳಿಗೆ ಡಾ. ದಿನಕರ ದೇಸಾಯಿ ಕಾವ್ಯ ಪ್ರಶಸ್ತಿಯ ಗರಿ

















ಮಾಧವಿ ಭಂಡಾರಿಯವರು ಬಹು ಮುಖ ಪ್ರತಿಭೆಯ, ಜನಪರ ನಿಲುವಿನ, ಪ್ರಗತಿ ಪರ ಸಂಘಟನೆಯ, ಹೆಣ್ಣಿನ ಮನದ ಕುದಿತವನ್ನು ಕಂಡುಂಡ ಬರಹಗಾರ್ತಿ. ಈಗಾಗಲೇ ಆರು ಪುಸ್ತಕ ಪ್ರಕಟಿಸಿರುವ ಇವರದು "ಮೌನ ಗರ್ಭದ ಒಡಲು" ಇದು ಮೂರನೇ ಕವನ ಸಂಕಲನ. ಇವರ ಕವನಗಳಲ್ಲಿ ದಾಸ್ಯ, ಬಡತನ, ಹಸಿವು, ಹೆಣ್ಣಿನ ಶೋಷಣೆ ಪ್ರಮುಖ ವಸ್ತುಗಳಾಗಿರುವದು. ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾದ ಇವರಿಗೆ ಅಭಿನಯವೆಂದರೂ ಜೀವಕ್ಕೆ ಜೀವ. ಇವರೊಂದು ಸಾಂಸ್ಕೃತಿಕ ಪ್ರತಿಭೆಗಳನ್ನು ತಯಾರಿಸುವ ಕಾರಖಾನೆಯ ಅಂಗವಿದ್ದಂತೆ.


ಹೊನ್ನಾವರದ ಅರೇ ಅಂಗಡಿಯ ಬಂಡಾಯ ಪ್ರಕಾಶನ ಪ್ರಕಟಿಸಿದ ಈ ಸಂಕಲನದಲ್ಲಿ 45 ಕವಿತೆಗಳಿದ್ದು, ಭಯ, ಅವಮಾನ, ಅಭದ್ರತೆಗಳ ಮೌನ ಗರ್ಭವಾಗಿಸಿಕೊಂಡು ಕುದಿವ ಗೆಳತಿಯರಿಗೆ, ಈ ನೋವು ತುಂಬಿದ ಬದುಕ ಸಾಂತ್ವನಿತ ನಿಂತ ಹೋರಾಟದ ಮನಸುಗಳಿಗೆ- ಲೇಖಕಿ ಈ ಪುಸ್ತಕವನ್ನು ಅರ್ಪಿಸಿರುವರು.


‘ನಮ್ಮಲ್ಲಿ ಹಿರಿ ಕಿರಿದೆನ್ನುವ ಭೇದ ಭಾವವಿಲ್ಲ / ಆತಿಥ್ಯಕ್ಕೂ ಅತ್ಯಾಚಾರಕ್ಕೂ / ಇಲ್ಲವೇ ಇಲ್ಲ ಜಾತಿ ಧರ್ಮ ತರತಮ ಭಾವ / ಎಲ್ಲರೂ ಸಮಾನರೇ ರಕ್ಷಕರೂ ಭಕ್ಷಕರೂ / ಎಂದು "ಗಂಡಿಗೆ ಹೆಣ್ಣು ಮಾಯೆ’ ಕವಿತೆಯಲ್ಲಿ ಇಂದು ಹೆಣ್ಣಿನ ಸ್ಥಿತಿ ಗತಿಯನ್ನು ಹಸಿ ಹಸಿಯಾಗಿ ಬಿಸಿಯ ಮನದಲಿ ಬಿಂಬಿಸಿರುವರು. ಗಂಡಿಗೆ ಹೆಣ್ಣು ಮಾಯೆಯೇ. ಕಾಮದ ನಷೆ ತಲೆಗೇರಿದಾಗ ಗಂಡಿಗೆ ಏನೂ ಕಾಣದೇ ಕುರುಡನಾಗಿ ಬಿಡುವನು. ವಯಸ್ಸಿನ ಅಳತೆಯಂತೂ ಇಲ್ಲವೇ ಇಲ್ಲ. ಹಸಿಗೂಸಿನಿಂದ ಹಿಡಿದು ಮಸಣದ ದಾರಿಯ ವೃದ್ಧೆಯಾದರೂ ಸೈ. ಇದು ಕಾಲಾತೀತ, ದೇಶಾತೀತ ಮತ್ತು ಧರ್ಮಾತೀತ, ಎಲ್ಲ ಕಡೆಯ ಮನೋಭಾವವೂ ಒಂದೇ. ಈ ಗಂಡು ಎನ್ನುವ ಪ್ರಾಣಿ ಹೊರಗಿನಿಂದ ಆಮದಾಗುವ ಯಾವುದೇ ಪರಕೀಯ ವಸ್ತು ಅಲ್ಲ. ಇಲ್ಲಿಯದೇ. ನಮ್ಮ ನಮ್ಮೊಳಗಿನದೇ. ಮೊದ ಮೊದಲು 'ಮಗಳೇ' ಎಂದು ಕರೆದು ಸವಲತ್ತು ಸಿಕ್ಕಿದೊಡನೇ ಬೆನ್ನೆಯ ಮೇಲಿನ ಕೈ ಎದೆಗೆ ಬರುವದು. ಇಲ್ಲಿ ಗಂಡಿಗೆ ಹೆಣ್ಣು ಮಾಯೆ ಎನ್ನುತ್ತಾ ಕೊನೆಗೆ, ಗಂಡಿಗೆ ಗಂಡು ಸಾವೆ? ಎನ್ನುವ ಮಾರ್ಮಿಕವಾದ ಪ್ರಶ್ನೆ ಒಗೆದಿರುವರು /

"ಗುನ್ಹೇಗಾರ" ಕವಿತೆಯಲ್ಲಿ / ಅಯ್ಯೋ ಹುಡುಗಿ/ ಬಸಿರಾದಳಂತೆ / ಮನಸ್ಸ ಮುಷ್ಟಿಯಲ್ಲಿರಬೇಕಿತ್ತು / ಮಾನ ಗೆಟ್ಟ ಹೆಣ್ಣು/ ಆತ ಅತ್ಯಾಚಾರ ಮಾಡಿದನಂತೆ / ಒಂದಲ್ಲ ಎರಡಲ್ಲ ಮೂರಲ್ಲ / ಹೆದೆಗೆ ಬಂದ ಪೋರ / ಗಡುಮ್ಮಾಗಿ ಮದುವೆ ಮಾಡಬೇಕಿತ್ತು / ಎಂದು ಗಂಡು ಏನೇ ಮಾಡಿದರೂ "ಬಾರಾಖೂನ್ ಮಾಫ್" ಎಂಬಂತೆ ಸಮಾಜ ಪ್ರತಿ ಬಿಂಬಿಸುತ್ತದೆ. ಪ್ರೀತಿ ಪ್ರಣಯ, ಬಸಿರು ಮಾಡುವಿಕೆ, ಅತ್ಯಾಚಾರದಲ್ಲಿ ತಲ್ಲೀನ ಇವು ಗಂಡು ಎನ್ನಿಸಿ ಕೊಳ್ಳುವ ಪ್ರಾಣಿ ಹೆಣ್ಣನ್ನು ಕಾಲಕಾಲಕೆ ತಕ್ಕಂತೆ ವಿನಿಯೋಗಿಸಿಕೊಳ್ಳುವ ವಿವಿಧ ರೂಪಗಳು. ಕೊನೆಗೆ ಪ್ರತೀ ಹಂತದಲ್ಲೂ ಹೆಣ್ಣೇ ತಪ್ಪಿತಸ್ಥೆ ಎಂಬ ಸಂಗತಿಯನ್ನು ಇಂದಿನ ಪುರುಷ ಪ್ರಧಾನ ಹಾಗೂ ಹೆಂಗಸರೇ ಹೀಗೆಳೆಯುವರು, ಹೆಣ್ಣಿಗೆ ಹೆಣ್ಣೇ ವೈರಿ ಎಂಬಂತೆ. ಅತ್ಯಾಚಾರ ಮಾಡಿದರೂ ಅವನಿಗೂ ಸರ್ಟಿಫಿಕೇಟ್, ಪಾಪ ಅವನಿಗೆ ಗಡುಮ್ಮಾಗಿ ಮದುವೆ ಮಾಡಬೇಕಿತ್ತು ಎನ್ನುವ ಸಾಂತ್ವನದ ಮಾತುಗಳೇ. ಹೆಣ್ಣು ಮಾತ್ರ ನಾಯಿ ಮುಟ್ಟಿದ ಮಡಕೆ ಎಂದು ಕವಿ ಪರಿಸ್ಥಿತಿಯನ್ನು ಒಡಲೊಳಗೆ ಕುದಿಸಿ ಅಕ್ಷರ ರೂಪದಲ್ಲಿ ಹೊರ ಹಾಕಿರುವರು.


ಕನ್ನಡದ ಬಹುಮುಖ ಪ್ರತಿಭೆಯ ಬರಹಗಾರ್ತಿ, ಎಚ್.ಎಲ್.ಪುಷ್ಟ ಈ ಸಂಕಲನಕೆ 'ಮೊದಲ ಓದು'ವಿನಲ್ಲಿ ‘ಇದು ಮೂಗು ಮೊಲೆ ಕತ್ತರಿಸಿಕೊಂಡ ಭಗ್ನ ಮೂರ್ತಿಯ ಕಥನ' ಎನ್ನುತ್ತಾ, ಕಾವ್ಯ ಮತ್ತು ಸಂಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಮಾಧವಿ ಅವರ ಈ ಸಂಕಲನ ಹಲವು ಕಾರಣಗಳಿಂದಾಗಿ ಭಿನ್ನವಾಗಿದೆ. ದಂತ ಗೋಪುರದಲ್ಲಿ ಕುಳಿತು ಕಾವ್ಯ ಬರೆಯುವ ಘಟ್ಟವನ್ನು ದಾಟಿ ಎಷ್ಟೋ ಕಾಲವಾಗಿದೆ. ಇಂದಿನ ಪ್ರಕ್ಷುಬ್ಧ ಭಾರತದ ಚಿತ್ರಣವನ್ನು ಒಡಲಲ್ಲಿ ಇಟ್ಟಿಕೊಂಡ ಸಂಕಲನ ಇದಾಗಿದೆ. ಯಾವುದೇ ವಾದಗಳಿಗೆ ಅಂಟಿಕೊಳ್ಳದೆ ಮಹಿಳೆಯ ಬಿಡುಗಡೆಯನ್ನು ಕವಿತೆಯ ಮೂಲಕ ಯೋಚಿಸುವ ಕ್ರಮ ಕನ್ನಡ ಕಾವ್ಯಕ್ಕೆ ಹೊಸದಾಗಿದೆ. ಇಲ್ಲಿಯ ಕವಿತೆಗಳು ಮಾಧವಿಯು ಕಂಡ ಸಮಕಾಲೀನ ಜಗತ್ತನ್ನು ಅನಾವರಣಗೊಳಿಸುವದಲ್ಲದೇ ಮನೆಯೊಳಗಿನ, ಗರ್ಭಗುಡಿಯೊಳಗಿನ ದೇವತೆಗಳಿಗೆ ಸಿಗಬೇಕಾದ ಬಿಡುಗಡೆ ಹಾಗೂ ರಕ್ಷಣೆಯ ಬಗ್ಗೆ ಮತ್ತೆ ಮತ್ತೆ ಆಲೋಚಿಸುವಂತೆ ಮಾಡುತ್ತವೆ. ಮಾಧವಿಯ ನಡೆ - ನುಡಿಗಳು ಒಂದಾಗಿಯೇ ತೋರುವುದರಿಂದ ಇಲ್ಲಿನ ಕಾವ್ಯ ನಂಬಲು, ಓದಲು ಅರ್ಹವಾಗಿದೆ, ಎಂದಿರುವರು.


'ಅವತಾರ' ಕವಿತೆಯಲ್ಲಿ /ಅರೆ ! ಒಂದರೆ ಗಳಿಗೆಯ ಹಿಂದೆ / ಆರ್ಭಟಿಸಿ ನೆಲ ನಡುಗಿಸಿ / ಅವತಾರವೆತ್ತಿದ್ದು ಇದೆ ಏನು ? ಕವಿತೆಯಲ್ಲಿ ಗಂಡಿನ ಪೌರುಷ ಮತ್ತು ಅವತಾರವನ್ನು ಮಿಕ್ಸರಿಗೆ ಹೋಲಿಸಿ ಚೆಂದದ ಕವಿತೆ ಉಸುರಿರುವರು. ದಾಂಪತ್ಯ, ಗಂಡು ಹೆಣ್ಣಿನ ಸಂಬಂಧವೇ ಹೀಗೆ. ಕೆಲ ಹೊತ್ತು ಏನೇನೋ ಗೊಣಗಾಟ, ಮತ್ತೆ ಸುಧಾರಿಸಿಕೊಂಡು ಅದೇ ಸುಳಿದಾಟ, ಒಂದಾಗುವ ತವಕ. ಮಿಕ್ಸಿಯು ಹೇಗೆ ಮೆಣಸಿಗೆ, ಈರುಳ್ಳಿಗೆ, ಹಾಗಲ ಕಾಯಿಗೆ, ಅರಶಿನ ಕೊಂಬಿಗೆ ಯಥಾವತ್ತಾಗಿ ಕಾರ್ಯ ನಿರ್ವಹಿಸುವದೋ ಹೆಣ್ಣೂ ಹಾಗೆ ಬಂದಂತೆ ಎಲ್ಲವನೂ ಸ್ವೀಕರಿಸಿ ಅರೆದು, ನುರಿದು ನೀರಾಗಿಸಿ ಕ್ಷಣ ಮೌನ. ಮತ್ತೆ ನಾಳೆಯ ದಿನಕೆ ಅನುವು. ಆರ್ಭಟಿಸಿ ಥಕಥಕ ಕುಣಿದ ಗಂಡಿನ ಪೌರುಷವೂ ಹಾಗೇ ಕ್ಷಣ ಮಾತ್ರದಲ್ಲಿ ಕೆಲಸ ಕಾರ್ಯಗಳು ಮುಗಿದ ನಂತರ ಇಷ್ಟೆಲ್ಲಾ ಆರ್ಭಟಿಸಿದ್ದು ಇದೇನಾ ಎಂದು ಸಂದೇಹ, ಪುನಃ ಪುನರಾವರ್ತನೆ. ಗೊತ್ತಿದ್ದೂ ಗೊತ್ತಿದ್ದೂ ಮತ್ತೆ ಮತ್ತೆ ತರಕಾರಿ ಬರುತ್ತಲೇ ಇರುವದು ; ಮಿಕ್ಸಿಯೊಡನೆ ಗೊಣಗಾಡುತ್ತಾ, ಉಸಿರುಗಟ್ಟಿ ಗಿರಿಗಿರಿನೆ ತಿರುಗುವದು. ಒಗ್ಗಿಕೊಳ್ಳಲೇ ಬೇಕಾಗಿದೆ.


ತಿಂಗಳಿಗೊಮ್ಮೆ ಸಿಗುವ ಮುಷ್ಠಿ ಕಾಸ / ತಿಂಗಳ ಕೊನೆ ಮುಟ್ಟಿಸುವ / ಸರಿಗೆಯ ಮೇಲಿನ ನಡಿಗೆ / ಗಂಡನಿಗೆ ಗಂಜಿ ಬಸಿಯಲಾಗದು / ಮಕ್ಕಳ ಹಸಿವ ನೋಡಲಾಗದು / ಹೊತ್ತು ಗೊತ್ತಿಲ್ಲದೇ ಬರುವ ಅತಿಥಿಗಳಿಗೆ / ಮಾಡು ಸೋರಿದ ಸುಳಿವು ನೀಡಲಾಗದು / ನಿದ್ದೆಯಲ್ಲೂ ಬೆಚ್ಚಿ ಬೀಳಿಸುವ ಖಾಲಿ ಡಬ್ಬಗಳದೇ ಸದ್ದು / ಎನ್ನುತ್ತಾ ತಮ್ಮ ಕುಟುಂಬ ನೀರ ಮೇಲೆ ತೇಲುವಾಗ ತನ್ನ ಅಮ್ಮ ನಿರ್ವಹಿಸಿದ ಪಾತ್ರ ಮತ್ತು ದಡ ಸೇರಿಸಿದ ಪರಿಯನ್ನು ಕವಿ ಮನಸಾ ವಂದಿಸುತ್ತಾ ವರ್ಣಿಸಿರುವರು. ಅಮ್ಮ ಓದಿದಕಿಂತ ಬದುಕಿಂದ ಕಲಿತದ್ದೇ ಹೆಚ್ಚು. ನಿಜವಾಗಿಯೂ ಅಮ್ಮನೇ ಒಂದು ವಿಶ್ವವಿದ್ಯಾಲಯದಂತೆ. ಮನೆ ಜನರ ನಿರ್ವಹಣೆ ಅಷ್ಟೇ ಅಲ್ಲ, ಹೋಗಿ ಬರುವರದೂ ಲೆಕ್ಕವಿಲ್ಲ. ಬಂದ ಅತಿಥಿಗಳಿಗೆ ಮಾಡು ಸೋರಿದ ಸುಳಿವು ಕೊಡದೇ ಎಲ್ಲವನ್ನೂ ಅಮ್ಮ ಮುನ್ನೆಡೆಸಿ, ನಿಗಿ ನಿಗಿ ಕೆಂಡದ ಮೇಲೆ ಉಬ್ಬಿ ಬರುವ ರೊಟ್ಟಿಯಾದಳು ಎಂದು ಹೇಳುವಾಗ ಕಣ್ಣಂಚು ತಂಪಾಗುವದು. ಅಮ್ಮನೆಂದರೆ ಅಮ್ಮನೇ.


ನಾಡಿನ ಮತ್ತೊಬ್ಬ ಹಿರಿಯ ಬರಹಗಾರ ಡಾ. ಬಂಜಗೆರೆ ಜಯಪ್ರಕಾಶ, ಈ ಪುಸ್ತಕದ ಕುರಿತು ಬರೆಯುತ್ತಾ, ‘ಒಟ್ಟಾರೆಯಾಗಿ ಮೌನ ಗರ್ಭದ ಒಡಲು ನನ್ನ ಓದಿನಲ್ಲಿ ಒಂದು ಉತ್ತಮ ಕಾವ್ಯ ಕೃತಿಯಾಗಿ, ಅರ್ಥವಂತಿಕೆಯ ಸಾಧ್ಯತೆಯನ್ನು ಅರಹುವ ಅಭಿವ್ಯಕ್ತಿಯಾಗಿ, ತನ್ನ ಸ್ವಂತಿಕೆಯ ಛಾಪನ್ನು ಪಡೆದು ಕೊಂಡಿರುವ ಸಂವೇದನೆಯಾಗಿ ಕಂಡಿದೆ. ಪ್ರೇಮ ಹಾಗೂ ವಿರಹದ ಕೆಲವು ಕವಿತೆಗಳು ಈ ಸಂಕಲನದಲ್ಲಿದೆ. ಪ್ರತಿಯೊಬ್ಬರ ಭಾವದಲ್ಲೂ ಬಂದು ಹೋಗುವ ಬದುಕಿನ ಈ ನಿಜಗಳು ಮಾಧವಿಯವರಲ್ಲಿ ಕೂಡ ಕವಿತೆಗಳಾಗಿವೆ. ಇವುಗಳನ್ನು ವಿಶಿಷ್ಟವೆನ್ನಲಾಗದಿದ್ದರೂ ಬದುಕಿನ ಸಹಜ ಯಾನದ ಪ್ರತಿಸ್ಪಂದನಗಳಾಗಿ, ಸ್ವಂತ ವ್ಯಕ್ತಿತ್ವದ ಅನಾವರಣಗಳಾಗಿ ಓದಲು ಅರ್ಥಪೂರ್ಣವಾಗಿದೆ’ ಎಂದಿರುವರು.


ಅಪ್ಪ ಡಾ. ಆರ್.ವಿ. ಭಂಡಾರಿಯವರ ಬಗ್ಗೆ "ಯಾತ್ರೆ ಮುಗಿಸಿದ ಅಪ್ಪ" ದಲ್ಲಿ, ತುತ್ತು ಬಾಯ್ಗಿಕ್ಕುವಾಗಲೂ / ತುತ್ತಿಲ್ಲದವರ ಚಿಂತೆ / ಪುಸ್ತಕ ಮುಟ್ಟುವಾಗಲೂ / ಅಕ್ಷರವಿಲ್ಲದವರ ಬಿಕ್ಕು / ಮರೆವು ಬರುವವರೆಗೂ / ಜೀವ ತೇದಿ ಹಂಚಿದ್ದು / ನಿನ್ನೊಳಗಿನ ಬಯಲ ಬೆಳಕು / ಎಂದು ಅಪ್ಪನ ಬದುಕು, ಬರಹ, ವೈಚಾರಿಕತೆ, ಸಂಘಟನೆ, ಮಾನವೀಯತೆ, ಕಾಳಜಿ, ಮಾನವ ಪರ ಧೋರಣೆ.....ಎಲ್ಲವನ್ನೂ ನೆನಪಿಸಿ, ಎಲ್ಲವೂ ಆದ ಅಪ್ಪ ದೂರ ಸಾಗಿದ್ದಾನೆ, ಈ ದೇಹ ಉಳಿಸಿ ನನ್ನ ಜೀವದೊಂದಿಗೆ ಎಂದು ತನ್ನ ಅಪ್ಪ ದೀನ, ದಲಿತ, ದುರ್ಬಲರ ಅಪ್ಪನಾದ ಬಗೆಯನ್ನು ಅಕ್ಷರ ರೂಪಕ್ಕಿಳಿಸಿರುವರು.


ಸಂಕಲನದ ಲೇಖಕಿ ಮಾಧವಿ ಭಂಡಾರಿ ಕೆರೆಕೋಣಯವರು ತಮ್ಮ ಕವಿತೆ ಮತ್ತು ಬದುಕಲ್ಲಿ ನಡೆದು ಬಂದ ದಾರಿಯ ಕುರಿತು ಬರೆಯುತ್ತಾ.....ಅನುದಿನದ ಅಂತರಗಂಗೆಯಂತಿರುವ ಬದುಕಿನ ನೋವು ನುಲಿತ, ಸಹ ಸಂಗಾತಿಗಳ ಸಂಕಷ್ಟ ಸಂಪ್ರೀತಿಗಳೆಲ್ಲವೂ ಮನದಲ್ಲಿ ಮಥನಗೊಂಡು ಕೈಗೆ ಸಿಕ್ಕಿದ್ದು ಈ ಕವಿತೆಯ ತುಣುಕುಗಳು. ಒಬ್ಬ ಹೆಣ್ಣಿನ ಎದೆಯ ಭಾವ ಎಲ್ಲ ಹೆಣ್ಣಿನ ಭಾವವಾಗಿ, ಗಂಡಿನ ಭಾವವೂ ಆಗಿ ಕಾಡುವ ಕವಿತೆ ಎಲ್ಲರಲ್ಲಿ ನೆಲೆಗೊಳ್ಳುವ ಕವಿತೆ. ಕವಿತೆಯೇ ಇಲ್ಲದಿದ್ದರೆ ಬದುಕೆಷ್ಟು ದುಸ್ತರವಾಗುತಿತ್ತು! ಕಾವ್ಯ ಒಳಗನ್ನು ಹೊರ ಸೆಳೆವ ಅಸ್ತ್ರ ನನಗೆ. ನನ್ನೊಳಗನ್ನು ಜಗತ್ತಿಗೆ ದರ್ಶಿಸುವ ; ಜಗತ್ತನ್ನೇ ನನ್ನೊಳಗೆ ಇಳಿಸುವ, ಅಂತರಂಗವನ್ನು ಬಹಿರಂಗಗೊಳಿಸುವ ; ಬಹಿರಂಗವನ್ನು ಅಂತರಂಗಕ್ಕಿಳಿಸುವ ಪ್ರಕ್ರಿಯೆ...... ಎಂದಿರುವರು.

ತಂಪಿನ ಕೋಣೆಯಲಿ ಸೊಂಪಾಗಿ ಮಲಗಿದರು / ಬಡವನ ಸೂರಿಗೆ ತೆಳುತಗಡೆ ಸಾಕೆಂದರು / ಸಂತೃಪ್ತಿಯಲಿ ನಿಜವೆಲ್ಲ ಮರೆತೋಯ್ತೊ / ಸಂತ್ರಸ್ತರಿಗೆ ಪಾಪ ಉರಿ ಬಿಸಿಲೆ ಗತಿಯಾಯ್ತೊ / ಎಂದು ಸಂತ್ರಸ್ತರ ಬದುಕನ್ನು ‘ಸಂತೃಸ್ತರ ಪಾಡು' ಕವಿತೆಯಲ್ಲಿ ಹಾಡಾಗಿಸಿರುವರು. ತಮಗೆ ಮಾತ್ರ ಏಸಿ ರೂಂ ಬೇಕು ಬಡವರ ಮನೆಗೆ ತೆಳು ತಗಡೇ ಸಾಕು ಎನ್ನುವ ನೀಚರಿವರು. ಅವರಿಗೆ ಸಂತ್ರಪ್ತಿ, ಇವರಿಗೆ ಉರಿಬಿಸಿಲು. ಬಡವರ ಸಂತ್ರಸ್ತರ ಬವಣೆ ನೀಗಿಸಲು ಮೇಲಿನಿಂದ ಹಣ ಬಂದರೂ ಹೆಚ್ಚಿನ ಪಾಲು ಅಧಿಕಾರಿ ಶಾಹಿಗಳ ಜೇಬಿನ ಪಾಲಾಗುವದು. ನೆರೆ ಹಾವಳಿ, ಅತಿವೃಷ್ಟಿ ಅನಾವೃಷ್ಟಿ ಆದರೆ ಈ ಜನಕೆ ದೊಡ್ಡ ಹಬ್ಬವೇ ಸೈ. ಆ ದುಡ್ಡಿನಲೇ ಮಂದ ಬೆಳಕಿನಲಿ ದೊಡ್ಡವರೆನಿಸಿಕೊಂಡ ಜನ ಮೋಜು ಮಾಡುವದು ಸಾಮಾಜಿಕ ದುರಂತಕ್ಕೆ ಸಾಕ್ಷಿಯಾಗಿದೆ.


ಒಮ್ಮೆಯೂ ಹೇಳಲಿಲ್ಲ / ಈ ಹೆಣ್ಣ ಕಣ್ಣೀರು ಯಾಕೋ / ಒಗರು ಒಗರಾಗಿದೆ !.... ಎಂದು 'ಹೇಳದೇ ಹೋದದ್ದು' ಕವಿತೆಯಲ್ಲಿ ಈ ಗಂಡಿನ ದುರಹಂಕಾರವನ್ನೂ ಹೆಣ್ಣಿನ ದುರಂತವನ್ನೂ ಮಾಧವಿಯವರು ಸಂಕಟದಿಂದ ಹೇಳಿಕೊಂಡಿರುವರು. ಪ್ರತೀ ಗಂಡೂ ಹೆಣ್ಣಿನ ವರ್ಣನೆ ಗೈಯ್ಯುವವನೇ, ತನ್ನ ಸ್ವಾರ್ಥ ಸಾಧನೆಗಾಗಿ. ಆದರೆ ಒಮ್ಮೆಯೂ ಅವಳ ಕಣ್ಣೀರನ್ನು ಕಂಡೇ ಇಲ್ಲ, ಕಂಡಿಲ್ಲದ ಮೇಲೆ ವರೆಸುವದೆಲ್ಲಿ ಬಂತು ? ಬೇಕಾದಾಗ ಬೇಕಾದ ಹಾಗೆ ಬಳಸಿ ನಂತರ ಬೀಸಿ ಒಗೆಯುವದೇ ಈ ಮುಖವಾಡ ತೊಟ್ಟ ನಾಗರೀಕ ಸಮಾಜದ ದುರಂತವಾಗಿದೆ.


ಒಟ್ಟಾರೆಯಾಗಿ ಮಾಧವಿಯವರ ಕವಿತೆಯಲ್ಲಿ ಹೆಣ್ಣಿನ ಶೋಷಣೆಯ ವಿರುದ್ಧದ ಧ್ವನಿಯಿದೆ, ಸಾಂತ್ವನವಿದೆ. ಇಲ್ಲಿಯ ಭಾಷೆ ಹೆಣ್ಣು ಮನಸ್ಸೊಂದು ಕಟ್ಟಿ ಕೊಟ್ಟ ಭಾಷೆಯಾಗಿದೆ. ಪ್ರತೀ ಕವಿತೆಯಲ್ಲೂ ಮಾನವೀಯತೆಯ ಮುಖವಿದೆ. ನೆಮ್ಮದಿಯ ಬದುಕಿನ ಹುಡುಕಾಟವಿದೆ. ಇವು ಅಪ್ಪಟ ದೇಸೀ ಕವಿತೆಯಾಗಿದೆ. ಮಹಿಳೆಯ ಸಂವೇದನೆ ಸಲಹುವ ಶಕ್ತಿಯಿದೆ. ಮಾಧವಿಯವರೇ ನಿಮ್ಮೆಲ್ಲಾ ಮಾನವಪರ ಮನಸ್ಸಿಗೂ ಪ್ರಗತಿಪರ ವಿಚಾರಧಾರೆಗೂ ಶುಭಕೋರುವೆ. ತಮಗೆ ಈ ಸಾಲಿನ ಪ್ರತಿಷ್ಠಿತ ಡ. ದಿನಕರ ದೇಸಾಯಿ ರಾಷ್ಟ್ರೀಯ ಕಾವ್ಯ ಪ್ರಶಸ್ತಿಗೆ ಅಭಿನಂದನೆಗಳು.









-ಪ್ರಕಾಶ ಕಡಮೆ


283 views1 comment
bottom of page